ಅಹಮದಾಬಾದ್ನಲ್ಲಿ ಕರ್ನಾಟಕ ಭವನ ನಿರ್ಮಾಣ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ರಾಜ್ಯದಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ ಸ್ಥಳ ನೀಡುವಂತೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮನವಿ ಮಾಡಿದ್ದಾರೆ.
ಅಹಮದಾಬಾದ್: ರಾಜ್ಯದಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ ಸ್ಥಳ ನೀಡುವಂತೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ (Bhupendra Patel) ಅವರಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಮನವಿ ಮಾಡಿದ್ದಾರೆ. ಗುಜರಾತ್ನ ಅಹಮದಾಬಾದ್ನಲ್ಲಿ ಕನ್ನಡ ಸಂಘದ 75 ನೇ ವಾರ್ಷಿಕೋತ್ಸವದಲ್ಲಿ ಅವರು ಪಾಲ್ಗೊಂಡಿದ್ದ ವೇಳೆ ಮನವಿ ಮಾಡಿದರು. ಅಲ್ಲದೆ ಕರ್ನಾಟಕ ಭವನ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ಸರ್ಕಾರ ಹಾಗಗೂ ತಮ್ಮ ವೈಯಕ್ತಿಕ ಸಹಕಾರ ನೀಡುವುದಾಗಿಯೂ ಗುಜರಾತ್ ಮುಖ್ಯಮಂತ್ರಿಯವರ ಬಳಿ ಹೇಳಿದರು. ನಂತರ ಮಾತನಾಡಡಿದ ಜೋಶಿ, ಗುಜರಾತ್ನ ಕನ್ನಡಿಗರೊಂದಿಗೆ ಎರಡು ರಾಜ್ಯಗಳು ಹೊಂದಿರುವ ವಿಶೇಷ ಬಾಂಧವ್ಯದ ಕುರಿತ ಹಲವು ವಿಚಾರಗಳನ್ನು ಹಂಚಿಕೊಂಡರು. ಒಂದೆಡೆ ದೇಶದ ಆಜಾದಿ ಕಾ ಅಮೃತ ಮಹೋತ್ಸವ ನಡೆಯುತ್ತಿದೆ. ಗುಜರಾತ್ನಲ್ಲಿ ಕನ್ನಡ ಸಂಘದ 75ನೇ ವರ್ಷದ ಸಂಭ್ರಮ ನಡೆಯುತ್ತಿದೆ ಎಂದರು.
ಅಂದಿನ ದಿನಗಳಲ್ಲಿಯೇ ಕನ್ನಡಿಗರು ಗುಜರಾತ್ ರಾಜ್ಯಕ್ಕೆ ಬಂದು ಇಲ್ಲಿನ ಜನರೊಂದಿಗೆ ಬೆರೆತು ವ್ಯಾಪಾರ-ವಹಿವಾಟು ನಡೆಸಿ ಗುಜರಾತನ ಏಳಿಗೆಗೆ ಕೊಡುಗೆಗಳನ್ನು ನೀಡಿದ್ದಾರೆ. ಇದು ಶ್ಲಾಘನೀಯ ಕಾರ್ಯವಾಗಿದೆ. ನರ್ಮದಾ ನದಿಯಿಂದ ಕಾವೇರಿವರೆಗೆ ಕನ್ನಡ ಹಾಗೂ ಗುಜರಾತಿ ಮಾತನಾಡುವವರಿದ್ದಾರೆ. ಈ ಬಾಂಧವ್ಯ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ ಎಂದು ಪ್ರಹ್ಲಾದ್ ಜೋಶಿ ಸಂತಸ ವ್ಯಕ್ತಪಡಿಸಿದರು. ಅಲ್ಲದೆ ಆರ್ಎಸ್ಎಸ್, ಜನ ಸಂಘ ಹಾಗೂ ಬಿಜೆಪಿಯನ್ನ ಕಟ್ಟುವಾಗ ಆರಂಭಿಕ ದಿನಗಳಲ್ಲಿ ನಮಗೆ ಸಹಕಾರ ನೀಡುತ್ತಿದ್ದವರು ಗುಜರಾತಿಗಳು. ಈ ದೃಷ್ಟಿಯಿಂದ ಈ ಸಮುದಾಯದೊಂದಿಗೆ ನನ್ನ ವಿಶೇಷ ಸಂಬಂಧವಿದೆ ಎಂದು ಜೋಶಿ ತಮ್ಮ ಹಳೆಯ ನೆನಪುಗಳನ್ನ ಸ್ಮರಿಸಿದರು.
ಇಂದು ಗುಜರಾತನ ಅಹಮದಾಬಾದ್ನಲ್ಲಿ ನಡೆದ ಕನ್ನಡ ಸಂಘದ 75ನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಅತ್ಯಂತ ಸಂತಸದಿಂದ ಪಾಲ್ಗೊಂಡು, ನೆರೆದಿದ್ದ ಗುಜರಾತನ ಕನ್ನಡಿಗರೊಂದಿಗೆ ಎರಡು ರಾಜ್ಯಗಳು ಹೊಂದಿರುವ ವಿಶೇಷ ಬಾಂಧವ್ಯದ ಕುರಿತು ನನ್ನ ವಿಚಾರಗಳನ್ನು ಹಂಚಿಕೊಂಡೆ. 1/12 pic.twitter.com/9N6hy6359y
— Pralhad Joshi (@JoshiPralhad) October 8, 2022
ಇಂದು ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ದೇಶ ಅಭೂತಪೂರ್ವ ಬೆಳವಣಿಗೆ ಕಾಣುತ್ತಿದೆ. 200 ವರ್ಷಗಳವರೆಗೆ ನಮ್ಮನ್ನು ಆಳಿ ದೇಶ ಬಿಟ್ಟು ಹೋಗುವಾಗ ಅಪಹಾಸ್ಯ ಮಾಡಿ ಈ ದೇಶದ ಏಳಿಗೆ ಸಾಧ್ಯವೇ ಇಲ್ಲ ಎಂಬ ರೀತಿಯಲ್ಲಿ ಮಾತನಾಡಿದ್ದ ಬ್ರಿಟಿಷರನ್ನು ಹಿಂದಿಕ್ಕಿ ನಾವು ಇಂದು ಐದನೇ ಅತ್ಯಂತ ಪ್ರಬಲ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದೇವೆ. ಈ ಸಾಧನೆಯಲ್ಲಿ ಕರ್ನಾಟಕ ಹಾಗೂ ಗುಜರಾತ್ ಅತ್ಯಂತ ಮಹತ್ವದ ಕೊಡುಗೆಗಳನ್ನು ನೀಡಿವೆ ಎಂದು ಹೇಳಿದರು.
ಕೇಂದ್ರ ಸರ್ಕಾರವು ಕೈಗೆತ್ತಿಕೊಂಡಿರುವ ಮತ್ತೊಂದು ಮಹತ್ವದ ಕಾರ್ಯ ನೂತನ ಶಿಕ್ಷಣ ನೀತಿಯು ರಾಷ್ಟ್ರದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಉತ್ತಮ ನೀತಿಯಾಗಿದೆ. ಆಯಾ ರಾಜ್ಯದಲ್ಲಿ ಅಲ್ಲಿನ ಮಾತೃ ಭಾಷೆಗೆ ಪ್ರಾಮುಖ್ಯತೆ ನೀಡಲಾಗಿದೆ. ಇಂಗ್ಲೀಷ್‌ಗಿಂತ ಪುರಾತನ ಇತಿಹಾಸ ಹೊಂದಿರುವ ಭಾಷೆಗಳು ನಮ್ಮ ದೇಶದಲ್ಲಿದ್ದು, ಅವುಗಳಿಗೆ ಪ್ರಾಮುಖ್ಯತೆ ನೀಡುವ ದೃಷ್ಟಿಯಿಂದ ಈ ನೀತಿ ಜಾರಿಗೊಳಿಸಲಾಗುತ್ತಿದೆ. 19 ಹಾಗೂ 20ನೇ ಶತಮಾನಗಳು ಪಾಶ್ಚಿಮಾತ್ಯರ ಪಾಲಾಗಿದ್ದರೇ 21ನೇ ಶತಮಾನ ಭಾರತದ್ದಾಗಿ ಮಾಡುವ ಸಂಕಲ್ಪದೊಂದಿಗೆ ಪ್ರಧಾನಿ ಮೋದಿ ಹಾಗೂ ಗೃಹಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ನಾವು ಶ್ರಮಿಸುತ್ತಿದ್ದೇವೆ ಎಂದರು.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:38 pm, Sat, 8 October 22