Onion Price: ಹಠಾತ್ತಾಗಿ ಕುಸಿದ ಈರುಳ್ಳಿ ದರ: ಬೆಲೆ ಇಳಿಕೆಯಿಂದ ವ್ಯಾಪಾರಕ್ಕೆ ಮುಗಿಬಿದ್ದ ಗ್ರಾಹಕರು

Onion Price: ಹಠಾತ್ತಾಗಿ ಕುಸಿದ ಈರುಳ್ಳಿ ದರ: ಬೆಲೆ ಇಳಿಕೆಯಿಂದ ವ್ಯಾಪಾರಕ್ಕೆ ಮುಗಿಬಿದ್ದ ಗ್ರಾಹಕರು
ಸಾಂದರ್ಭಿಕ ಚಿತ್ರ

Onion Rate Today: ಮುಂದಿನ ವಾರ ಈರುಳ್ಳಿ ದರ ಮತ್ತೂ ಸ್ವಲ್ಪ ಇಳಿಯುವ ಸಾಧ್ಯತೆ ಇದೆ. ಹೊಸ ಈರುಳ್ಳಿ ಹಾಗೂ ದಾಸ್ತಾನು ಇಟ್ಟ ಈರುಳ್ಳಿ ಮಾರುಕಟ್ಟೆಗೆ ಬಂದಿದೆ ಎಂದು ತರಕಾರಿ ಮಾರಾಟಗಾರರು ತಿಳಿಸಿದ್ದಾರೆ.

preethi shettigar

| Edited By: Apurva Kumar Balegere

Apr 19, 2021 | 9:16 AM


ಹುಬ್ಬಳ್ಳಿ : ಕೆಲವೇ ಕೆಲ ತಿಂಗಳ ಹಿಂದೆ ಶತಕದ ಹೊಸ್ತಿಲಿನಲ್ಲಿ ಉಯ್ಯಾಲೆಯಾಡುತ್ತಿದ್ದ ಈರುಳ್ಳಿ ದರ 40 ರಿಂದ 50 ರೂಪಾಯಿಗೆ ಕುಸಿದಿತ್ತು. ಆದರೆ ಇದೀಗ ಮತ್ತೆ ಈರುಳ್ಳಿ ಬೆಲೆ ಹಠಾತ್ತಾಗಿ ಕುಸಿದಿದ್ದು, ಪ್ರತಿ ಕೆಜಿಗೆ 10 ರಿಂದ 15 ರೂಪಾಯಿಗೆ ಇಳಿದಿದೆ. ನಗರದ ಸಂತೆಯಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಪ್ರತಿ ಕೆಜಿಗೆ 10 ರಿಂದ 15 ರೂಪಾಯಿಗೆ ಮಾರಾಟವಾಗುತ್ತಿದೆ. ಎರಡನೇ ದರ್ಜೆಯ ಈರುಳ್ಳಿ ಕೇವಲ 10 ರೂಪಾಯಿಗೆ ಮಾರಾಟವಾಗಿದೆ. ಈರುಳ್ಳಿ ದರದಲ್ಲಿ ಇನ್ನೂ ಇಳಿಮುಖವಾಗುವ ಸಾಧ್ಯತೆ ಇದೆ ಎಂದು ಮಾರಾಟಗಾರರು ಅಭಿಪ್ರಾಯಪಡುತ್ತಿದ್ದಾರೆ.

ಹೆಚ್ಚಿನ ದರದಿಂದಾಗಿ ಈರುಳ್ಳಿ ಸಮೀಪ ಹೋಗದ ಗ್ರಾಹಕರು ಈಗ ಸಂತೆಗಳಲ್ಲಿ ಮುಗಿಬಿದ್ದು ಖರೀದಿಸುತ್ತಿದ್ದಾರೆ. ಉತ್ತರ ಕರ್ನಾಟಕದ ವಿವಿಧೆಡೆಯ ವ್ಯಾಪಾರಸ್ಥರು ಈರುಳ್ಳಿಯನ್ನು ಭಾರಿ ಪ್ರಮಾಣದಲ್ಲಿ ಮಾರಾಟಕ್ಕೆ ತಂದಿದ್ದು, ಈರುಳ್ಳಿ ದರ ಇಳಿಮುಖವಾಗಿರುವ ಬಗ್ಗೆ ಗ್ರಾಹಕರು ಸಂತಸ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಈರುಳ್ಳಿ ಖರೀದಿ ಜೋರಾಗಿಯೇ ನಡೆದಿದೆ.

ಕಳೆದ 15 ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ಪ್ರತಿ ಕೆಜಿ ಈರುಳ್ಳಿ 40 ರೂಪಾಯಿಗೆ ಮಾರಾಟವಾಗುತ್ತಿತ್ತು. ತಿಂಗಳ ಹಿಂದೆ ಸುಮಾರು 100 ದರ ಇತ್ತು. ಈಗ ಮಹಾರಾಷ್ಟ್ರದಿಂದ ಹೊಸದಾಗಿ ಬೆಳೆದ ಈರುಳ್ಳಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಹೊಸ ಈರುಳ್ಳಿ ಮಾರುಕಟ್ಟೆಗೆ ಬರುತ್ತಿದ್ದಂತೆ ದಾಸ್ತಾನು ಇಟ್ಟ ಈರುಳ್ಳಿಯನ್ನೂ ಮಾರುಕಟ್ಟೆಗೆ ಬಿಡಲಾಗುತ್ತಿದೆ. ಇದೆ ಕಾರಣಕ್ಕೆ ಬೆಲೆಯಲ್ಲಿ ವಾರದಿಂದ ವಾರಕ್ಕೆ ಇಳಿಕೆಯಾಗುತ್ತಿದೆ.

ಮುಂದಿನ ವಾರ ಈರುಳ್ಳಿ ದರ ಮತ್ತೂ ಸ್ವಲ್ಪ ಇಳಿಯುವ ಸಾಧ್ಯತೆ ಇದೆ. ಹೊಸ ಈರುಳ್ಳಿ ಹಾಗೂ ದಾಸ್ತಾನು ಇಟ್ಟ ಈರುಳ್ಳಿ ಮಾರುಕಟ್ಟೆಗೆ ಬಂದಿದೆ ಎಂದು ತರಕಾರಿ ಮಾರಾಟಗಾರರು ತಿಳಿಸಿದ್ದಾರೆ.

ಗ್ರಾಹಕರಿಗೆ ಇದು ಖುಷಿಯ ವಿಚಾರವಾಗಿದ್ದರೂ, ರೈತರಿಗೆ ಇದು ಅಘಾತ ತಂದಿದೆ. ಕಳೆದ ಎರಡು ತಿಂಗಳಿನಿಂದ ನಡೆಸುತ್ತಿರುವ ಈರುಳ್ಳಿ ಬೆಳೆ ಹರಾಜಿನಲ್ಲಿ ಅತಿ ಕಡಿಮೆ ಬೆಲೆಗೆ ಹರಾಜಾಗಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಈರುಳ್ಳಿ ಬೆಳೆದಿದ್ದ ರೈತರು ಇದೀಗ ಸರಿಯಾದ ಬೆಲೆ ಸಿಗದೇ ಕೈಚೆಲ್ಲಿ ಕುಳಿತುಕೊಳ್ಳುವಂತಾಗಿದೆ.

ಈರುಳ್ಳಿ ದರ ಮತ್ತೆ ಕೈಕೋಡುವ ಲಕ್ಷಣ ಕಾಣುತ್ತಿದೆ. ಸರ್ಕಾರ ತರಕಾರಿ ಬೆಳೆಗಳ ಬೆಲೆಗಳನ್ನು ನಿಯಂತ್ರಣದಲ್ಲಿ ಇಡಬೇಕು. ಏಕಾಏಕಿ ಹೀಗೆ ದರಗಳು ಪಾತಾಳಕ್ಕೆ ಕುಸಿತ ಕಂಡರೆ ರೈತರ ಪರಿಸ್ಥಿತಿ ಆತ್ಮಹತ್ಯೆ ಬಿಟ್ಟು ಬೇರೆ ಮಾರ್ಗಯಿಲ್ಲ. ಹೀಗಾಗಿ ಸರ್ಕಾರ ಬೆಲೆ ನಿಯಂತ್ರಣದ ಮೇಲೆ ನಿಘಾವಹಿಸಲಿ ಎಂದು ಈರುಳ್ಳಿ ಬೆಳೆಗಾರರಾದ ಮುತ್ತಪ್ಪ ಹೇಳಿದ್ದಾರೆ.

ಇದನ್ನೂ ಓದಿ:

ಈರುಳ್ಳಿ ಕೊಳ್ಳುವ ಮುಂಚೆಯೇ ಕಣ್ಣಲ್ಲಿ ನೀರು!

ಹೂವುಗಳ ಬೆಲೆ ಕುಸಿತ; ತಿಪ್ಪೆಗೆ ಸುರಿದು ಆಕ್ರೋಶಗೊಂಡ ಚಿಕ್ಕಬಳ್ಳಾಪುರ ರೈತರು

(Consumers are happy because of Onion price drop in hubli)

Follow us on

Related Stories

Most Read Stories

Click on your DTH Provider to Add TV9 Kannada