ಬಿಗಡಾಯಿಸುತ್ತಿದೆ ಕೊರೊನಾ ಪರಿಸ್ಥಿತಿ, ದಾವಣಗೆರೆಯ ಕೆಲ ಶಾಲೆಗಳಿಗೆ ರಜೆ, ಸಚಿವ ಸುನಿಲ್​ಕುಮಾರ್​ಗೂ ಸೋಂಕು

ಮಂಡ್ಯ ಜಿಲ್ಲೆಯಲ್ಲಿ ಒಂದೇ ದಿನ 554 ಜನರಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಒಟ್ಟು ಸಂಖ್ಯೆ 76,290ಕ್ಕೆ ಏರಿಕೆಯಾಗಿದೆ.

ಬಿಗಡಾಯಿಸುತ್ತಿದೆ ಕೊರೊನಾ ಪರಿಸ್ಥಿತಿ, ದಾವಣಗೆರೆಯ ಕೆಲ ಶಾಲೆಗಳಿಗೆ ರಜೆ, ಸಚಿವ ಸುನಿಲ್​ಕುಮಾರ್​ಗೂ ಸೋಂಕು
ಸಚಿವ ಸುನಿಲ್ ಕುಮಾರ್


ಮಂಡ್ಯ: ಸಕ್ಕರೆನಾಡು ಮಂಡ್ಯ ಮಾರುಕಟ್ಟೆಯಲ್ಲಿ ಕೊರೊನಾ ಮರೆತು ಜನರು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದರು. ಜಿಲ್ಲಾಡಳಿತದ ಕಠಿಣ ನಿರ್ಬಂಧಗಳ ನಡುವೆಯೂ ಮಂಡ್ಯದಲ್ಲಿ ಜನರು ಕೊರೊನಾ ಸೋಂಕು ಲೆಕ್ಕಿಸದ ವರ್ತನೆ ಮುಂದುವರಿಸಿದ್ದಾರೆ. ಸಂಕ್ರಾಂತಿ ಮುನ್ನಾದಿನವಾದ ಶುಕ್ರವಾರ ಮಂಡ್ಯದ ಮಾರುಕಟ್ಟೆಯಲ್ಲಿ ಜನಜಂಗುಳಿ ನೆರೆದಿತ್ತು. ಮಾಸ್ಕ್ ಮತ್ತು ಸಾಮಾಜಿಕ ಅಂತರದ ಬಗ್ಗೆ ಯಾರೊಬ್ಬರೂ ಲಕ್ಷ್ಯ ನೀಡಲಿಲ್ಲ. ಜನಜಂಗುಳಿ ಹೆಚ್ಚಾಗಿದ್ದರೂ ಅಧಿಕಾರಿಗಳು ಗಮನಹರಿಸಲಿಲ್ಲ ಎಂದು ದೂರಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಒಂದೇ ದಿನ 554 ಜನರಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಒಟ್ಟು ಸಂಖ್ಯೆ 76,290ಕ್ಕೆ ಏರಿಕೆಯಾಗಿದೆ.

ಸಚಿವ ಸುನಿಲ್ ಕುಮಾರ್​ಗೆ ಕೊರೊನಾ
ಬೆಂಗಳೂರು: ಇಂಧನ ಹಾಗೂ ಕನ್ನಡ ಸಂಸ್ಕೃತಿ ಖಾತೆ ಸಚಿವ ವಿ.ಸುನಿಲ್ ಕುಮಾರ್​ಗೆ 2ನೇ ಬಾರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ತಮ್ಮ ಸಂಪರ್ಕಕ್ಕೆ ಬಂದಿರುವವರು ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.

ಮೇಕೆದಾಟು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಜಯಚಂದ್ರಗೆ ಕೊರೊನಾ
ತುಮಕೂರು:
ಕಾಂಗ್ರೆಸ್ ನಾಯಕ, ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಮೇಕೆದಾಟು ಪಾದಯಾತ್ರೆಯಲ್ಲಿ ಜಯಚಂದ್ರ ಭಾಗವಹಿಸಿದ್ದರು. ಸದ್ಯ ಜಯಚಂದ್ರ ಬೆಂಗಳೂರಿನಲ್ಲಿ ಹೋಮ್ ಕ್ವಾರಂಟೈನ್​ನಲ್ಲಿದ್ದಾರೆ. ತುಮಕೂರು ಜಿಲ್ಲೆ ಶಿರಾ ಕ್ಷೇತ್ರದಿಂದ ಈ ಹಿಂದೆ ಶಾಸಕರಾಗಿ ಆಯ್ಕೆಯಾಗಿದ್ದರು.

ದಾವಣಗೆರೆ ಜಿಲ್ಲೆಯಲ್ಲಿ ಹಲವು ಶಾಲೆಗಳಿಗೆ ರಜೆ
ದಾವಣಗೆರೆ:
ಜಿಲ್ಲೆಯ ಮಕ್ಕಳಲ್ಲಿ ಕೊರೊನಾ ಸೋಂಕು ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಲವು ಶಿಕ್ಷಣ ಸಂಸ್ಥೆಗಳಿಗೆ ಏಳು ದಿನ ರಜೆ ಘೋಷಿಸಿದ್ದಾರೆ. ಜಿಲ್ಲೆಯಲ್ಲಿ ಒಂದೇ ದಿನ ಒಟ್ಟು 187 ಮಕ್ಕಳಲ್ಲಿ ಸೋಂಕು ದೃಢಪಟ್ಟಿದೆ. ಮೂರಕ್ಕಿಂತ ಹೆಚ್ಚು ಸೋಂಕು ಪ್ರಕರಣಗಳು ಕಂಡುಬಂದ ಶಾಲೆಗಳಿಗೆ ಜಿಲ್ಲಾಧಿಕಾರಿ ಏಳು ದಿನ ರಜೆ ಘೋಷಿಸಿದ್ದಾರೆ.

ಇದನ್ನೂ ಓದಿ: ಕೊರೊನಾವೈರಸ್ ಗಾಳಿಗೆ ಬಂದ 5 ನಿಮಿಷದಲ್ಲೇ ತೀವ್ರ ಹಾನಿ ಮಾಡುತ್ತದೆ; ಅಧ್ಯಯನದಲ್ಲಿ ಬಯಲು
ಇದನ್ನೂ ಓದಿ: Covid 19: ದೇಶದಲ್ಲಿ ಏರಿಕೆಯಾಗುತ್ತಿದೆ ಕೊರೊನಾ; ಒಂದೇ ದಿನ 2,64,202 ಪ್ರಕರಣ ಪತ್ತೆ, 315 ಮಂದಿ ಸಾವು

Click on your DTH Provider to Add TV9 Kannada