ಬೆಂಗಳೂರು, ಡಿಸೆಂಬರ್ 7: ಬಿಜೆಪಿ ವಿರುದ್ಧ ಕೊರೊನಾ ಹಗರಣದ ಆರೋಪವನ್ನೇ ಪ್ರಮುಖ ಅಸ್ತ್ರವನ್ನಾಗಿಸಿಕೊಂಡಿರುವ ಕಾಂಗ್ರೆಸ್, ಅದನ್ನು ಮತ್ತಷ್ಟು ಬಲಗೊಳಿಸಿದೆ. ಕೋವಿಡ್ ಸಂಪುಟ ಉಪ ಸಮಿತಿಯ ಎರಡನೇ ಸಭೆಯನ್ನು ಶನಿವಾರ ನಡೆಸಿದ ಸಮಿತಿಯ ಅಧ್ಯಕ್ಷ ಡಿಸಿಎಂ ಡಿಕೆ ಶಿವಕುಮಾರ್, ವರದಿಯನ್ನ ಪರಿಶೀಲಿಸಿದ್ದಾರೆ. ನಿವೃತ್ತ ನ್ಯಾಯಮೂರ್ತಿ ಕುನ್ಹಾ ನೇತೃತ್ವದ ಕಮಿಟಿ ನೀಡಿರುವ ತನಿಖೆಯ ಮಧ್ಯಂತರ ವರದಿ ಬಗ್ಗೆ ಚರ್ಚೆ ನಡೆಸಿದ್ದಾರೆ.
ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಕೆ ಶಿವಕುಮಾರ್, ಬೆಂಗಳೂರಿನಲ್ಲಿ 84 ಲಕ್ಷ ಜನರಿಗೆ ಆರ್‌ಟಿಪಿಸಿಆರ್ ಟೆಸ್ಟ್ ಮಾಡಿದ್ದಾರೆ. ಇದಕ್ಕಾಗಿ 500 ಕೋಟಿ ರೂಪಾಯಿ ಬಿಲ್ ಮಾಡಿ 400 ಕೋಟಿ ರೂ. ಪಾವತಿಸಿದ್ದಾರೆ ಎಂದು ಹೇಳಿದ್ದಾರೆ. ಜೊತೆಗೆ ಕಿದ್ವಾಯಿ ಒಂದೇ ಸಂಸ್ಥೆಯಲ್ಲಿ 24 ಲಕ್ಷ ಟೆಸ್ಟ್ ಮಾಡಿಸಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಕುನ್ಹಾ ವರದಿ ಆಧರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದ ಡಿಕೆ ಶಿವಕುಮಾರ್, ವರದಿಯಲ್ಲಿ ಕ್ರಿಮಿನಲ್ ಕೇಸ್ ಹಾಕುವಂತೆ ಶಿಫಾರಸು ಮಾಡಲಾಗಿದೆ. ಅದೇನಿದೆಯೋ ವರದಿಯಂತೆಯೇ ಕ್ರಮ ಆಗಲಿದೆ ಎಂದಿದ್ದಾರೆ.
ಕೋವಿಡ್ ಉಪ ಸಮಿತಿ ಸಭೆ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ಒಂದೂವರೆ ವರ್ಷ ನಿದ್ದೆ ಮಾಡಿ, ಈಗ ಎದ್ದು ಬಂದಿದ್ದಾರೆ. ಯಾವ ತನಿಖೆಗೂ ಬಿಜೆಪಿ ಹೆದರುವುದಿಲ್ಲ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್, ಬಿಜೆಪಿಯವರಿಗೆ ಉತ್ತರ ಕೊಡಲ್ಲ ಎಂದಿದ್ದಾರೆ.
ಇದನ್ನೂ ಓದಿ: ನಾನು ರಾಜಕೀಯದ ಕೊನೆಗಾಲದಲ್ಲಿದ್ದೇನೆ: ಸಿಎಂ ಸಿದ್ದರಾಮಯ್ಯ ಚಾಮರಾಜನಗರದಲ್ಲಿ ಅಚ್ಚರಿಯ ಹೇಳಿಕೆ
ಕೊರೊನಾ ಹಗರಣ ತನಿಖೆಗೆ ಮುಂದಾಗಿರುವ ಸರ್ಕಾರದ ವಿರುದ್ಧ ಗುಡುಗಿರುವ ಮಾಜಿ ಆರೋಗ್ಯ ಸಚಿವ ಶ್ರೀರಾಮುಲು, ಬಾಣಂತಿಯರ ಸಾವು ಪ್ರಕರಣದ ಗಮನವನ್ನು ಬೇರೆಡೆ ತಿರುಗಿಸುವ ಯತ್ನ ಎಂದು ಕಿಡಿಕಾರಿದ್ದಾರೆ.
ಒಟ್ಟಿನಲ್ಲಿ ಮುಡಾ, ವಾಲ್ಮೀಕಿ, ವಕ್ಫ್ ವಿಚಾರ ಮುಂದಿಟ್ಟುಕೊಂಡು ಹೋರಾಡುತ್ತಿರುವ ಬಿಜೆಪಿ ಮೇಲೆ ಕಾಂಗ್ರೆಸ್ ಕೊರೊನಾ ಬಾಣ ಬಿಟ್ಟಿದೆ. ಮತ್ತೊಂದೆಡೆ, ಯಾವ ತನಿಖೆಗೂ ಹೆದರಲ್ಲ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:00 pm, Sat, 7 December 24