ನಾನು ರಾಜಕೀಯದ ಕೊನೆಗಾಲದಲ್ಲಿದ್ದೇನೆ: ಸಿಎಂ ಸಿದ್ದರಾಮಯ್ಯ ಚಾಮರಾಜನಗರದಲ್ಲಿ ಅಚ್ಚರಿಯ ಹೇಳಿಕೆ
ಚಾಮರಾಜನಗರ ಜಿಲ್ಲೆಯ ಸತ್ತೇಗಾಲದಲ್ಲಿ ಹಳೆ ವಿದ್ಯಾರ್ಥಿಗಳೇ ನಿರ್ಮಿಸಿಕೊಟ್ಟ ಸುಸಜ್ಜಿತ ಸರ್ಕಾರಿ ಶಾಲಾ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ನಾನು ರಾಜಕೀಯದ ಕೊನೆಗಾಲದಲ್ಲಿದ್ದೇನೆ ಎಂದು ಹೇಳಿದ್ದಾರೆ. ಮುಡಾ ಹಗರಣದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಹಾಗೂ ಅಧಿಕಾರ ಹಂಚಿಕೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಅವರು ಈ ಹೇಳಿಕೆ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಚಾಮರಾಜನಗರ, ಡಿಸೆಂಬರ್ 7: ಮುಡಾ ಹಗರಣದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಸಿಎಂ ಸಿದ್ದರಾಮಯ್ಯ ಚಾಮರಾಜನಗರದಲ್ಲಿ ಅಚ್ಚರಿಯ ಹೇಳಿಕೆ ನೀಡಿದರು. ನಾನು ರಾಜಕೀಯದ ಕೊನೆಗಾಲದಲ್ಲಿದ್ದೇನೆ ಎನ್ನುವ ಮೂಲಕ ಅಭಿಮಾನಿಗಳಿಗೆ ಕುತೂಹಲ ಮೂಡಿಸಿದರು. ಕೊಳ್ಳೇಗಾಲ ತಾಲೂಕಿನ ಸತ್ತೇಗಾಲದಲ್ಲಿ ಸರ್ಕಾರಿ ಶಾಲಾ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನೀಗ ರಾಜಕೀಯದ ಕೊನೆಗಾಲದಲ್ಲಿದ್ದೇನೆ. ಜನರ ಪ್ರೀತಿ, ಅಭಿಮಾನ ಗಳಿಸದಿದ್ದರೆ ರಾಜಕೀಯದಲ್ಲಿ ಉಳಿಗಾಲವಿಲ್ಲ ಎಂದರು.
ಚಾಮರಾಜನಗರಕ್ಕೆ ಹೋದರೆ ಅಧಿಕಾರ ಕಳೆದುಕೊಳ್ಳುತ್ತೀರಿ ಎಂದಿದ್ದರು. ಜೆ.ಹೆಚ್.ಪಟೇಲರಿಗೆ ಆಗಿನ ಕೆಲ ಶಾಸಕರು ಹೇಳಿದ್ದರು. ಪಾಪ ಆಗಿನಿಂದ ಆ ಕಳಂಕ ಚಾಮರಾಜನಗರ ಮೇಲಿದೆ. ನಾನು 2ನೇ ಬಾರಿ ಮುಖ್ಯಮಂತ್ರಿಯಾಗಿ ಚಾಮರಾಜನಗರಕ್ಕೆ ಬಂದಿದ್ದೇನೆ. ಈ ಮೂಢನಂಬಿಕೆಯನ್ನು ಅವರು ನಂಬಿರಲಿಲ್ಲ, ನಾನೂ ನಂಬಲಿಲ್ಲ ಎಂದರು.
ಚಾಮರಾಜನಗರಕ್ಕೆ ಬಂದಾಗಲೆಲ್ಲ ಸಿಎಂ ಕುರ್ಚಿ ಗಟ್ಟಿಯಾಗಿದೆ: ಸಿದ್ದರಾಮಯ್ಯ
ಚಾಮರಾಜನಗರಕ್ಕೆ ಬಂದು ಹೊಸ ಜಿಲ್ಲೆ ಗೋಷಣೆ ಮಾಡಿದ್ದೆವು. ಆಗ ನಾನು ಉಪ ಮುಖ್ಯಮಂತ್ರಿಯಾಗಿದ್ದೆ. ನಾವು ಚಾಮರಾಜನಗರಕ್ಕೆ ಬಂದು ಜಿಲ್ಲೆಯನ್ನು ಘೋಷಣೆ ಮಾಡಿದ್ದು. ನಾನು ಏನಿಲ್ಲ ಅಂದರೂ 20 ಬಾರಿ ಚಾಮರಾಜನಗರಕ್ಕೆ ಬಂದಿದ್ದೇನೆ. ನಾನು ಚಾಮರಾಜನಗರಕ್ಕೆ ಬಂದಾಗಲೆಲ್ಲ ಅಧಿಕಾರ ಕಳೆದುಕೊಳ್ಳುವ ಬದಲು ಸಿಎಂ ಕುರ್ಚಿ ಗಟ್ಟಿಯಾಗಿದೆ ಎಂದರು. ಅತ್ಯಂತ ಉತ್ಸಾಹದಿಂದ ನಾನು ಶಾಲೆಯನ್ನು ಉದ್ಘಾಟನೆ ಮಾಡಿದ್ದೇನೆ. ಜಾನಪದ ಕಲೆಗಳ ತವರೂರು ಹಾಗೂ ದಕ್ಷಿಣದ ಗಡಿ ಈ ಚಾಮರಾಜನಗರ ಎಂದು ಸಿಎಂ ಬಣ್ಣಿಸಿದರು.
ಹಳೆ ವಿದ್ಯಾರ್ಥಿಗಳೇ ನಿರ್ಮಿಸಿರುವ ಸುಸಜ್ಜಿತ ಶಾಲಾ ಕಟ್ಟಡ
ಸತ್ತೇಗಾಲ ಸರ್ಕಾರಿ ಶಾಲೆಯ ಹಳೆ ವಿದ್ಯಾರ್ಥಿಯೂ ಆಗಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿದ್ದ ಮರಿಸ್ವಾಮಿ ನೇತೃತ್ವದಲ್ಲಿ ಹಳೆ ವಿದ್ಯಾರ್ಥಿಗಳೆಲ್ಲ ಸೇರಿಕೊಂಡು ಶಾಲಾ ಕಟ್ಟಡ ನಿರ್ಮಾಣ ಮಾಡಿಸಿದ್ದಾರೆ. ಬರೋಬ್ಬರಿ 2 ಕೋಟಿ ರೂಪಾಯಿ ವೆಚ್ಚದಲ್ಲಿ ಹೈಟೆಕ್ ಸರ್ಕಾರಿ ಶಾಲೆ ಕಟ್ಟಡ ನಿರ್ಮಾಣವಾಗಿದ್ದು, ಇದೀಗ ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ: ಖಾಸಗಿ ಶಾಲೆಗಳನ್ನೂ ಮೀರಿಸಿದೆ ಸುಸಜ್ಜಿತ ಸರ್ಕಾರಿ ಶಾಲೆ! ಹಳೆ ವಿದ್ಯಾರ್ಥಿಗಳೇ ಕಟ್ಟಿದ್ರು ಹೈಟೆಕ್ ಸ್ಕೂಲ್
79 ವರ್ಷಗಳಷ್ಟು ಹಳೆಯದಾದ ಸತ್ತೇಗಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೀಗ ಖಾಸಗಿ ಶಾಲೆಗಳನ್ನೂ ಮೀರಿಸುವಂತೆ ಆಗಿದ್ದು, ಗಮನ ಸೆಳೆಯುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:36 pm, Sat, 7 December 24