ಮಂಗಳೂರು: ಬಂಟ್ವಾಳ ಮತ್ತು ಪಣಂಬೂರು ಸಿಗ್ನಲ್ ಬಳಿ ಭೀಕರ ರಸ್ತೆ ದುರಂತಗಳು; ಪ್ರತ್ಯೇಕ ಅಪಘಾತದಲ್ಲಿ ಆರು ಜನ ಸಾವು
ದಕ್ಷಿಣ ಕನ್ನಡದ ಬಂಟ್ವಾಳದ ಬಿಸಿರೋಡ್ ವೃತ್ತದಲ್ಲಿ ಮತ್ತು ಪಣಂಬೂರು ಸಿಗ್ನಲ್ ಬಳಿ ಪ್ರತ್ಯೇ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಒಟ್ಟೂ ಆರು ಜನ ಸಾವನ್ನಪ್ಪಿದ್ದಾರೆ. ಬಂಟ್ವಾಳದ ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಬೆಂಗಳೂರಿನಿಂದ ಉಡುಪಿ ಮಠಕ್ಕೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.

ಮಂಗಳೂರು, ನವೆಂಬರ್ 15: ದಕ್ಷಿಣಕನ್ನಡ (Dakshina kannada) ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಸಿರೋಡಿನ ಸರ್ಕಲ್ನಲ್ಲಿ ಮತ್ತು ಮಂಗಳೂರಿನ ಪಣಂಬೂರು ಸಿಗ್ನಲ್ನಲ್ಲಿ ನಡೆದ ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟೂ ಆರು ಜನ ಸಾವನ್ನಪ್ಪಿದ್ದಾರೆ. ಈ ಕುರಿತು ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಮತ್ತು ಮಂಗಳೂರು ಉತ್ತರ ಸಂಚಾರ ಪ್ರಕರಣ ದಾಖಲಾಗಿದೆ.
ಅಪಘಾತದಲ್ಲಿ ಮೂವರ ಸಾವು, ನಾಲ್ವರಿಗೆ ಗಂಭೀರ ಗಾಯ
ಬಿ ಸಿ ರೋಡಿನ ಸರ್ಕಲ್ನಲ್ಲಿ ಇನ್ನೋವಾ ಕಾರೊಂದು ಎನ್.ಜಿ ಸರ್ಕಲ್ಗೆ ಗುದ್ದಿದ ರಭಸಕ್ಕೆ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಕಾರಿನಲ್ಲಿದ್ದ ರಮ್ಯ(23), ರವಿ(64), ನಂಜಮ್ಮ(75) ಮೃತ ದುರ್ದೈವಿಗಳು. ಮೃತರು ಬೆಂಗಳೂರಿನ ಪೀಣ್ಯದವರಾಗಿದ್ದು, ಉಡುಪಿ ಶ್ರೀಕೃಷ್ಣ ಮಠಕ್ಕೆ ಕೃಷ್ಣನ ದರ್ಶನಕ್ಕೆಂದು ಹೊರಟಿದ್ದರು. ಕಾರಿನಲ್ಲಿ ಇದ್ದ ಪ್ರಯಾಣಿಕರಲ್ಲಿ ರವಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮತ್ತಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಕೀರ್ತಿ, ಸುಶೀಲಾ, ಬಿಂದು ಹಾಗೂ ಪ್ರಶಾಂತ್ ಎಂಬ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿರೋಡು – ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ನಿರ್ಮಾಣವಾದ ನೂತನ ಸರ್ಕಲ್ ಅವೈಜ್ಞಾನಿಕವಾಗಿರುವುದರಿಂದಲೇ ಈ ಅಪಘಾತ ಸಂಭವಿಸಿದೆ ಎಂಬ ಆರೋಪ ಕೇಳಿ ಬಂದಿದೆ. ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಣಂಬೂರು ಸಿಗ್ನಲ್ ಬಳಿ ಸರಣಿ ಅಪಘಾತ
ಮಂಗಳೂರಿನ ಪಣಂಬೂರು ಸಿಗ್ನಲ್ ಬಳಿ ಎರಡು ಟ್ಯಾಂಕರ್, ಕಾರು ಮತ್ತು ಆಟೋ ರಿಕ್ಷಾ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಮೂವರು ದುರ್ಮರಣಕ್ಕೀಡಾದ ಘಟನೆ ನಡೆದಿದೆ. ಸಿಗ್ನಲ್ ಬಳಿ ಒಂದು ಟ್ಯಾಂಕರ್ ಹಿಂದೇ ನಿಂತಿದ್ದ ಕಾರು ಮತ್ತು ಆಟೋ ರಿಕ್ಷಾಗೆ ಮತ್ತೊಂದು ಟ್ಯಾಂಕರ್ ಹಿಂಬದಿಯಿಂದ ಭಾರೀ ವೇಗದಲ್ಲಿ ಬಂದು ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಆಟೋ ರಿಕ್ಷಾ ಕಾರಿಗೆ ಗುದ್ದಿ, ನಂತರ ಅದರ ಎದುರಿನ ಟ್ಯಾಂಕರ್ ನಡುವೆ ಸಿಲುಕಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಪರಿಣಾಮವಾಗಿ ಆಟೋ ಚಾಲಕ ಸೇರಿ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಂಗಳೂರು ಉತ್ತರ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:18 am, Sat, 15 November 25



