ಬೀದಿನಾಯಿ ದಾಳಿಗೆ ವ್ಯಕ್ತಿ ಬಲಿ: ಕಣ್ಣುಗುಡ್ಡೆಯನ್ನೇ ಕಿತ್ತು ಹಾಕಿದ ಡೆಡ್ಲಿ ಶ್ವಾನ
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕುಂಪಲ ಎಂಬಲ್ಲಿ ಬೀದಿನಾಯಿ ದಾಳಿಗೆ ವ್ಯಕ್ತಿ ಬಲಿಯಾಗಿರುವಂತಹ ಘಟನೆ ನಡೆದಿದೆ. ಜನವಸತಿ ಪ್ರದೇಶದಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಈ ಆಘಾತಕಾರಿ ಘಟನೆ ಜನರಲ್ಲಿ ತೀವ್ರ ಆತಂಕ ಮೂಡಿಸಿದೆ. ಸ್ಥಳೀಯರು ಬೀದಿ ನಾಯಿಗಳ ನಿಯಂತ್ರಣಕ್ಕೆ ತಕ್ಷಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಮಂಗಳೂರು, ನವೆಂಬರ್ 14: ಬೀದಿನಾಯಿಗಳ (Street Dog) ಹಾವಳಿ ತಡೆಗಟ್ಟಲು ಎಷ್ಟೇ ಕ್ರಮಕೈಗೊಂಡರು ಕೂಡ ಶ್ವಾನ ದಾಳಿ ಮುಂದುವರಿಯುತ್ತಲೇ ಇದೆ. ಇದೀಗ ಕಡಲನಗರಿ ಮಂಗಳೂರಿನಲ್ಲಿ ಬೀದಿನಾಯಿ ದಾಳಿಗೆ ವ್ಯಕ್ತಿಯೊಬ್ಬರು ಸಾವಿಗೀಡಾದ (death) ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಬೆಳ್ಳಂ ಬೆಳಿಗ್ಗೆ ಅಟ್ಟಾಡಿಸಿ ದಾಳಿ ಮಾಡಿರುವ ಡೆಡ್ಲಿ ನಾಯಿ ಮೃತ ವ್ಯಕ್ತಿಯ ಕಣ್ಣುಗುಡ್ಡೆಯನ್ನೇ ತಿಂದು ಹಾಕಿದೆ. ದಯಾನಂದ (60) ಮೃತ ವ್ಯಕ್ತಿ. ಜನ ವಸತಿ ಪ್ರದೇಶದಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸದ್ಯ ಬೀದಿ ನಾಯಿಯನ್ನು ಪುರಸಭೆ ಸಿಬ್ಬಂದಿಗಳು ಸೆರೆ ಹಿಡಿದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕುಂಪಲ ಬೈಪಾಸ್ ಸಮೀಪದ ಜನವಸತಿ ಪ್ರದೇಶದಲ್ಲಿ ಘಟನೆ ನಡೆದಿದೆ. ಬೀದಿ ನಾಯಿ ದಾಳಿಗೆ ಕುಂಪಲ ಗ್ರಾಮದ ನಿವಾಸಿ ದಯಾನಂದ ಅವರು ಮೃತಪಟ್ಟಿದ್ದಾರೆ. ಅವಿವಾಹಿತರಾಗಿದ್ದ ದಯಾನಂದ, ಕುಡಿತದ ಚಟ ಹೊಂದಿದ್ದು ರಾತ್ರಿ ವೇಳೆ ಸ್ಥಳೀಯವಾಗಿ ನೇಮ, ಕೋಲ, ಜಾತ್ರೆಗಳಿಗೆ ತೆರಳಿ ಕುಂಪಲದ ಅಂಗಡಿ ಮುಂಭಾಗ ಮಲಗಿ ಬೆಳಗ್ಗಿನ ವೇಳೆ ಮನೆ ಸೇರುತ್ತಿದ್ದರು.
ಇದನ್ನೂ ಓದಿ: Viral: ಬೆಂಗಳೂರಿನಲ್ಲಿ ವಿದೇಶಿ ಉದ್ಯಮಿ ಮೇಲೆ ನಾಯಿ ದಾಳಿ, ಬೆಡ್ ಮೇಲೆ ಮಲಗಿ ಶ್ವಾನಗಳನ್ನು ಪ್ರೀತಿಸುವೆ ಎಂದು ವ್ಯಂಗ್ಯ ಪೋಸ್ಟ್
ಇಂದು ಮುಂಜಾನೆ 3:30ರ ವೇಳೆಗೆ ಅಂಗಡಿಯೊಂದರ ಮುಂಭಾಗ ದಯಾನಂದ ಇದ್ದಿದ್ದನ್ನು ಅಂಗಡಿ ಮಾಲೀಕ ವಿನೋದ್ ಎಂಬುವವರು ನೋಡಿದ್ದಾರೆ. ಆದಾದ ಬಳಿಕ ಬೆಳಗ್ಗೆ 7:30ರ ಸುಮಾರಿಗೆ ಪಕ್ಕದ ಅಂಗಡಿಯೊಂದರ ಮುಂಭಾಗ ವ್ಯಕ್ತಿಯೊಬ್ಬರ ಕಣ್ಣು ಗುಡ್ಡೆಯೊಂದು ಬಿದ್ದಿರೋದು, ರಕ್ತಸಿಕ್ತವಾಗಿರೋದು ಕಂಡು ಬಂದಿದೆ. ಇನ್ನಷ್ಟು ಪರಿಶೀಲನೆ ಮಾಡಿದಾಗ ಅಂಗಡಿ ಸಮೀಪದ ಮನೆಯೊಂದರ ಮುಂಭಾಗ ದಯಾನಂದ ಮೃತದೇಹ ಪತ್ತೆಯಾಗಿದೆ. ಇನ್ನು ಈ ವೇಳೆ ಮೃತದೇಹ ಪಕ್ಕದಲ್ಲೇ ನಾಯಿ ಕೂಡ ಕಂಡುಬಂದಿದ್ದು, ದಾಳಿ ಮಾಡಿರುವ ಅನುಮಾನ ಇನ್ನಷ್ಟು ಬಲವಾಗಿತ್ತು.
ಸೋಮೇಶ್ವರ ಪುರಸಭಾ ವ್ಯಾಪ್ತಿಯ ಕುಂಪಲದಲ್ಲಿ ಬೀದಿನಾಯಿಗಳ ಹಾವಳಿ ವಿಪರೀತವಾಗಿರುವ ಬಗ್ಗೆ ಸ್ಥಳೀಯರು ದೂರಿದ್ದಾರೆ. ಘಟನಾ ಸ್ಥಳಕ್ಕೆ ಉಳ್ಳಾಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಫ್ಎಸ್ಎಲ್, ಸೋಕೋ ತಂಡ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಬೀದಿನಾಯಿಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳುವುದಾಗಿ ಸೋಮೇಶ್ವರ ಪುರಸಭಾ ಉಪಾಧ್ಯಕ್ಷ ರವಿಶಂಕರ್ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಬಿಬಿಎಂಪಿ ಬಾಡೂಟ ಹಾಕುವುದಕ್ಕೂ ಮೊದಲೇ ಬೀದಿನಾಯಿಗಳ ಅಟ್ಟಹಾಸ; ಡೆಡ್ಲಿ ದಾಳಿಗೆ ವ್ಯಕ್ತಿ ಬಲಿ
ಬೀದಿನಾಯಿ ದಾಳಿಗೆ ವ್ಯಕ್ತಿ ಮೃತಪಟ್ಟಿರುವ ಬಗ್ಗೆ ಜನ ಆಘಾತ ವ್ಯಕ್ತಪಡಿಸಿದ್ದಾರೆ. ದೊಡ್ಡವರನ್ನೇ ಬಿಡದ ಬೀದಿನಾಯಿಗಳು ಮಕ್ಕಳನ್ನು ಜೀವಂತ ಬಿಡಬಹುದಾ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಇನ್ನೊಂದು ಪ್ರಾಣ ಹೋಗುವ ಮೊದಲು ಬೀದಿನಾಯಿಗಳ ಹಾವಳಿಯನ್ನು ನಿಯಂತ್ರಿಸಲು ಆಡಳಿತ ವ್ಯವಸ್ಥೆ ಕ್ರಮಕೈಗೊಳ್ಳಬೇಕಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:51 pm, Fri, 14 November 25



