Harish Poonja: ಹೈಡ್ರಾಮಾಕ್ಕೆ ತೆರೆ: ಬಂಧಿಸದೆ ವಾಪಸಾದ ಪೊಲೀಸರು, ಹರೀಶ್ ಪೂಂಜಾ ಹೇಳಿದ್ದಿಷ್ಟು
Harish Poonja: ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣದಲ್ಲಿ ಬಿಜೆಪಿ ಯುವ ಮುಖಂಡನ ಬಂಧನ ಖಂಡಿಸಿ ನಡೆದ ಪ್ರತಿಭಟನೆ ವೇಳೆ ಬೆಳ್ತಂಗಡಿ ಪಿಎಸ್‌ಐಗೆ ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ಬಿಜೆಪಿ ಶಾಸಕ ಹರೀಶ್ ಪೂಂಜಾ ನಿವಾಸದ ಮುಂದೆ ಇಂದು ಬೆಳಗ್ಗೆಯಿಂದ ನಡೆದ ದೊಡ್ಡ ಹೈಡ್ರಾಮಾಕ್ಕೆ ಕೊನೆಗೆ ತೆರೆ ಬಿದ್ದಿದೆ.
ಮಂಗಳೂರು, (ಮೇ 22): ಮಂಗಳೂರು, (ಮೇ 22): ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ನಿವಾಸದಲ್ಲಿಂದು ಬೆಳಗ್ಗೆಯಿಂದ ಹೈಡ್ರಾಮಾ ಕೊನೆಗೆ ಅಂತ್ಯವಾಗಿದೆ. ಪೊಲೀಸರಿಗೆ ಧಮ್ಕಿ, ಬೆದರಿಕೆ ಪ್ರಕರಣ ಸಂಬಂಧ ಹರೀಶ್ ಪೂಂಜಾ ಅವರನ್ನು ಬಂಧಿಸಲು ಬಂದಿದ್ದ ಪೊಲೀಸರು ಕೊನೆಗೆ ನೋಟಿಸ್ ನೀಡಿ ತೆರಳಿದ್ದಾರೆ. ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರನ್ನು ಬಂಧಿಸಬೇಕೆಂದು ಇಂದು (ಮೇ 22) ಬೆಳಗ್ಗೆಯಿಂದಲೇ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದಲ್ಲಿರುವ ನಿವಾಸದಲ್ಲಿ ಪೊಲೀಸರು ಠಿಕಾಣಿ ಹೂಡಿದ್ದರು. ಕೊನೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿ ವಾಪಸಾಗಿದ್ದಾರೆ. ಇದರೊಂದಿಗೆ ಬಂಧಿಸಲು ಪೊಲೀಸರು ನಡೆಸಿದ್ದ ಪ್ರಹಸನ ವಿಫಲವಾಗಿದೆ.
ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿದ ಹರೀಶ್ ಪೂಂಜಾ
ಇನ್ನು ಪೊಲೀಸರು ಮನೆಯಿಂದ ವಾಪಸ್ ತೆರಳಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಹರೀಶ್ ಪೂಂಜಾ, ಪ್ರಕರಣದಲ್ಲಿ ಇಲ್ಲದ ಒಬ್ಬ ಅಮಾಯಕನನ್ನು ಬಂಧನವಾಗಿದೆ. ಬಿಜೆಪಿಯಲ್ಲಿ ಮುಂಚೂಣಿಯಲ್ಲಿ ಇದ್ದಾನೆ ಎಂದು ಬಂಧನ ಮಾಡಿದ್ದಾರೆ. ಅದನ್ನು ನಾನು ಜನ ಪ್ರತಿನಿಧಿಯಾಗಿ ಖಂಡಿಸಿರುವುದು. ದ್ವೇಷದ ರಾಜಕಾರಣ ಮಾಡಿದ್ರೆ ಒಪ್ಪುದಿಲ್ಲ ಎಂದು ಪೊಲೀಸರ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿರುವುದು. ಅದನ್ನೇ ನೆಪವಾಗಿ ಇಟ್ಟು ಮೂರು ಕೇಸ್ ಹಾಕಿದ್ದಾರೆ. ಅಧಿಕಾರಕ್ಕೆ ನಾನು ಪೊಲೀಸರಿಗೆ ಬೈದಿಲ್ಲ. ಸಿದ್ದರಾಮಯ್ಯ ಅಧಿಕಾರಕ್ಕಾಗಿ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಕಾಲರ್ ಪಟ್ಟಿ ಹಿಡಿದಿಲ್ವಾ. ಕಾರ್ಯಕರ್ತರ ಶಕ್ತಿಗಾಗಿ ಪೊಲೀಸರಿಗೆ ಬೈದದ್ದು ಅಧಿಕಾರಕ್ಕಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಮತ್ತೊಂದು FIR
ಕಾಂಗ್ರೆಸ್‌ಗೆ ನೈತಿಕತೆ ಇಲ್ಲ. ಪೊಲೀಸರ ಮೇಲೆ ಹೆಚ್ಚಿನ ದೌಜನ್ಯ ಮಾಡಿರುವುದು ಕಾಂಗ್ರೆಸ್. ಬಿಜೆಪಿ ನಾಯಕರಿಗೆ ಬುದ್ದಿ ಹೇಳುವ ಅವಶ್ಯಕತೆ ಇಲ್ಲ. ತುರ್ತು ಪರಿಸ್ಥಿತಿಯಿಂದ ಹಿಡಿದು ಅವತಿನಿಂದ ಇವತ್ತಿನ ವರೆಗೆ ಪೊಲೀಸರನ್ನು ಹಿಡಿದುಕೊಂಡು ಕಾಂಗ್ರೆಸ್ ದೌಜನ್ಯ ಮಾಡುತ್ತಿದೆ. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕಾಂಗ್ರೆಸ್ ಪ್ರತಿಭಟನೆ ಮಾಡಿತ್ತಲ್ವಾ. ಆವಾಗ ಯಾವ ನ್ಯಾಯ ಕಾನೂನು ಇತ್ತು. ಬಿಜೆಪಿ ಕಾರ್ಯಕರ್ತನಿಗೆ ಅನ್ಯಾಯ ಆದಾಗ ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ ಇದು ಯಾವ ನ್ಯಾಯ. ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಬೆಳ್ತಂಗಡಿಗೆ ಬಂದ ಮೇಲೆ FIR ಮಾಡಿದ್ದಾರೆ. ತಾಕತ್ತು ಇದ್ರೆ ಬರುವುದಕ್ಕೆ ಮೊದಲು ಕೇಸ್ ಹಾಕಬಹುದಿತಲ್ವ. ಬಿಜೆಪಿ ಕಾರ್ಯಕರ್ತರನ್ನು ಮುಟ್ಟುವ ತಾಕತ್ತು ಇಲ್ಲ. ಬಿಸ್ಕೆತ್ ಅನ್ನು ಬಿರಿಯಾನಿ ರೀತಿ ತಿಂದು ನಮ್ಮ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ನಾನು ಹೈಕೋರ್ಟ್ ನಲ್ಲಿ ಕಾನೂನು ವೃತ್ತಿ ಮಾಡಿ ಬಂದವನು. ಕಾನೂನಿನ ಬಗ್ಗೆ ಪೊಲೀಸ್ ಇಲಾಖೆ ಪಾಠ ಮಾಡುವ ಅಗತ್ಯ ಇಲ್ಲ. ಮುಂದೆ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿದರು.
ನಳಿನ್ ಕುಮಾರ್ ಕಟೀಲ್ ಹೇಳಿದ್ದೇನು?
ಪೊಲೀಸರು ತೆರಳಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಂಸದ ನಳಿನ್ ಕುಮಾರ್ ಕಟೀಲ್, ದ್ವೇಷದ ರಾಜಕಾರಣದ ಹಿನ್ನೆಲೆಯಲ್ಲಿ ಬಂಧಿಸಬೇಕು ಎಂದು ಪೊಲೀಸರು ಪ್ರಯತ್ನ ಮಾಡಿದ್ದರು. ನೋಟಿಸ್ ನೀಡದ ಬಂಧನಾಡಬೇಕು ಅಂತ ಮಾಡಿದ್ದರು. ಸದ್ಯ ನೋಟಿಸ್ ಮಾತ್ರ ನೀಡಿದ್ದು, ಬಂಧನ ಮಾಡುದಿಲ್ಲ ಎಂದು ಹೇಳಿದ್ದಾರೆ. ಇದು ಮೊದಲ ಹಂತದ ಗೆಲುವು ಎಂದರು.
ಕಾನೂನಾತ್ಮಕ ಸಂವಿಧಾನ ಗೌರವಿಸುತ್ತಾರೆ. ಕೇಸು ಆಗುವುದು ಸಹಜ. ಮುಂದಿನ ದಿನಗಳಲ್ಲಿ ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ನೋಟಿಸ್ ಗೆ ಉತ್ತರ ಪೋಲಿಸ್ ಠಾಣೆಯಲ್ಲಿ ನೀಡುತ್ತೇವೆ. ಮುಂದಿನ ದಿನಗಳಲ್ಲಿ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇವೆ. ಕಾರ್ಯಕರ್ತರ ಹೋರಾಟದ ಕಾರಣ ನಮಗೆ ಗೆಲುವಾಗಿದೆ. ಪೊಳ್ಳು ಬೆದರಿಕೆ ನಾವು ಹೆಸರುದಿಲ್ಲ ಎಂದು ಗುಡುಗಿದರು.
ಮನೆ ಮುಂದೆ ಹೈಡ್ರಾಮಾ
ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಮಿತ್ತಿಲದಲ್ಲಿರುವ ಶಾಸಕ ಹರೀಶ್ ಪೂಂಜಾ ಮನೆಗೆ ಬುಧವಾರ (ಮೇ 22) ಮಧ್ಯಾಹ್ನದ ವೇಳೆಗೆ ಪೊಲೀಸರು ಆಗಮಿಸಿದ್ದರು. ಸರ್ಕಲ್ ಇನ್ಸ್‌ಪೆಕ್ಟರ್ ಸುಬ್ಬಪೂರ್ ಮಠ್ ಮತ್ತು ಪಿಎಸ್ಐ ಚಂದ್ರಶೇಖರ್ ನೇತೃತ್ವದ ಪೊಲೀಸರ ತಂಡ ಆಗಮಿಸಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಧಾವಿಸಿ, ಆಕ್ರೋಶವನ್ನು ಹೊರಹಾಕಿದರು. ಹರೀಶ್ ಪೂಂಜ ಬಂಧನಕ್ಕೆ ಪೊಲೀಸರು ಬಂದಿದ್ದರಿಂದ ಗರ್ಡಡಿ ಹರೀಶ್ ಪೂಂಜ ನಿವಾಸಕ್ಕೆ ವಕೀಲರ ತಂಡ ಭೇಟಿ ನೀಡಿತು. ಪೊಲೀಸರ ಜತೆ ವಕೀಲರ ತಂಡದಿಂದ ಮಾತುಕತೆ ನಡೆಸಲಾಯಿತು. ಈ ವೇಳೆ ನಿರಂತರವಾಗಿ ಚರ್ಚೆ ನಡೆದಿದ್ದು, ಪೊಲೀಸ್ ಕ್ರಮ ತಪ್ಪು ಎಂದು ವಕೀಲರು ವಾದಿಸಿದರು. ಈ ವೇಳೆ ಮನೆಯ ಹೊರಗಡೆ ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು, ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಿದರು. ಅಲ್ಲದೆ, ಪೊಲೀಸರು ಹಾಗೂ ಕಾರ್ಯಕರ್ತರ ನಡುವಿನ ಹೈ ಡ್ರಾಮಾಕ್ಕೆ ಪೂಂಜ ನಿವಾಸವು ಸಾಕ್ಷಿಯಾಯಿತು.
ಇನ್ನು ಪೂಂಜಾ ನಿವಾಸಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್, ಬ್ರಿಜೇಶ್ ಚೌಟ ದೌಡಾಯಿಸಿ ರಾಜ್ಯ ಸರ್ಕಾರದ ನಡೆಯನ್ನು ಅವರು ತೀವ್ರವಾಗಿ ಖಂಡಿಸಿದ್ದರು. ಒಂದು ವೇಳೆ ಬಂಧನ ಮಾಡಿದ್ದೇ ಆದಲ್ಲಿ ಮಂಗಳೂರು ಬಂದ್ ಮಾಡುವ ಎಚ್ಚರಿಕೆಯನ್ನು ನೀಡಿದ್ದರು. ಒಂದು ವೇಳೆ ಬಂಧನ ಮಾಡಿದ್ದರೆ ದೊಡ್ಡ ಪ್ರತಿಭಟನೆಯಾಗುವ ಎಲ್ಲಾ ಸಾಧ್ಯತೆಗಳು ಇದ್ದವು. ಇದನ್ನು ಅರಿತ ಪೊಲೀಸರು ಅಂತಿಮವಾಗಿ ವಿಚಾರಣೆಗೆ ಹಾಜರಾಗಲು ಮೂರು ದಿನ ಕಾಲಾವಕಾಶ ನೀಡಿ ಅಲ್ಲಿಂದ ತೆರಳಿದ್ದಾರೆ. ಈ ಮೂಲಕ ಬಿಜೆಪಿ ಶಾಸಕ ಹರೀಶ್ ಪೂಂಜಾ ನಿವಾಸದ ಮುಂದೆ ಇಂದು ಬೆಳಗ್ಗೆಯಿಂದ ನಡೆದ ದೊಡ್ಡ ಹೈಡ್ರಾಮಾಕ್ಕೆ ಕೊನೆಗೆ ತೆರೆ ಬಿದ್ದಿದೆ
ಹರೀಶ್ ಪೂಂಜಾ ವಿರುದ್ಧದ ಒಂದನೇ ಪ್ರಕರಣ
ಶಾಸಕ ಹರೀಶ್ ಪೂಂಜಾ ಬೆಂಬಲಿಗರು ಮೆಲಂತಬೆಟ್ಟುವಿನಲ್ಲಿ ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಸುತ್ತಿದ್ದರು ಎಂದು ಆರೋಪಿಸಿ ಬೆಳ್ತಂಗಡಿ ತಹಶಿಲ್ದಾರ್ ದಾಳಿ ಮಾಡಿದ್ದರು. ಸ್ಫೋಟಕ ಬಳಸಿ ಅಕ್ರಮ ಗಣಿಗಾರಿಕೆ ಮಾಡಲಾಗುತ್ತಿದೆ ಎಂದು ಮೇ 18 ರಂದು ದೂರು ನೀಡಿದ್ದರು. ಇದರ ಪ್ರಕರ ಶಾಸಕರ ಆಪ್ತರಾದ ಪ್ರಮೋದ್ ಉಜಿರೆ ಮತ್ತು ಶಶಿರಾಜ್ ಶೆಟ್ಟಿ ಮೇಲೆ ದೂರು ದಾಖಲಾಗಿತ್ತು. ಬಿಜೆಪಿ ತಾಲೂಕು ಯುವಮೋರ್ಚಾದ ಅಧ್ಯಕ್ಷ, ರೌಡಿಶೀಟರ್ ಆಗಿದ್ದ ಶಶಿರಾಜ್ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದರು. ಈ ವಿಚಾರ ತಿಳಿದ ಪೂಂಜಾ ಪೊಲೀಸರ ವಿರುದ್ಧ ಕೆಂಡಮಂಡಲರಾಗಿದ್ದರು. ಅಲ್ಲದೇ ಮೇ 18 ರ ರಾತ್ರಿ ತಮ್ಮ ಬೆಂಬಲಿಗರ ಪರ ಪೊಲೀಸ್ ಠಾಣೆಯಲ್ಲಿ ಧರಣಿ ನಡೆಸಿದ್ದರು. ಈ ವೇಳೆ ಪೊಲೀಸ್ ಠಾಣೆ ನಿಮ್ಮಪ್ಪಂದಾ ಎಂದು ಹರೀಶ್ ಪೂಂಜಾ ಬೆಳ್ತಂಗಡಿ ಠಾಣೆ PSI ಮುರಳೀಧರ್ ನಾಯ್ಕ್‌ಗೆ ಅವಾಜ್ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಈಗ ಕರ್ತವ್ಯಕ್ಕೆ ಅಡ್ಡಿ ಮತ್ತು ಅವಾಚ್ಯ ಶಬ್ದಗಳಿಂದ ನಿಂಧನೆ ಆರೋಪದ ಮೇಲೆ ದೂರು ದಾಖಲಾಗಿತ್ತು. ಮೇ 19 ರಂದು ಬೆಳ್ತಂಗಡಿ ಠಾಣೆಯಲ್ಲಿ ಐಪಿಸಿ ಸೆಕ್ಷನ್ 353, 504ರಡಿ ಹರೀಶ್ ಪೂಂಜಾ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು
ಎರಡನೇ ಪ್ರಕರಣ
ಇನ್ನು ಎಫ್‌ಐಆರ್ ಖಂಡಿಸಿ ಶಾಸಕ ಹರೀಶ್ ಪೂಂಜಾ ಬೆಂಬಲಿಗರ ಜೊತೆ ಮೊನ್ನೆ ಬೆಳ್ತಂಗಡಿಯಲ್ಲಿ ಬೃಹತ್ ಪ್ರತಿಭಟನೆಯನ್ನು ಮಾಡಿದ್ದರು. ಅಲ್ಲಿ ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಷ್ಯಂತ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಶಾಸಕ ಹರೀಸ್ ಪೂಂಜಾ ಮೇಲೆ ನಿನ್ನೆ(ಮೇ 21) ಮತ್ತೊಂದು ಪ್ರಕರಣ ದಾಖಲಾಗಿತ್ತು. ಪೊಲೀಸರಿಗೆ ಜೀವ ಬೆದರಿಕೆ ಒಡ್ಡಿದ ಹಾಗೂ ತಾಲೂಕು ಕಚೇರಿಗೆ ಬರುವ ಸಾರ್ವಜನಿಕರಿಗೂ ತಡೆ ಆರೋಪ ಮಾಡಿ ಐಪಿಸಿ 143, 147, 341, 504, 506 ಜೊತೆಗೆ 149 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ