
ಮಂಗಳೂರು, ಮೇ 17: ದಕ್ಷಿಣ ಕನ್ನಡ ಜಿಲ್ಲೆಯ ಸ್ವಪಕ್ಷದ ಸಂಸದನ ವಿರುದ್ಧವೇ ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಸಂಸದ ಕ್ಯಾ.ಬ್ರಿಜೇಶ್ ಚೌಟ ವಿರುದ್ಧ ಬಿಜೆಪಿ ಮಂಡಲ ಉಪಾಧ್ಯಕ್ಷನಿಂದಲೇ ಅಸಮಾಧಾನ ವ್ಯಕ್ತವಾಗಿದ್ದು, ರಸ್ತೆ ಸಮಸ್ಯೆಗೆ ಪರಿಹಾರ ಕೇಳಲು ಹೋದವರಿಗೆ ಅವಮಾನ ಆರೋಪ ಕೇಳಿಬಂದಿದೆ. ಸಂಸದರು ಬೇಜವಾಬ್ದಾರಿ ವರ್ತನೆ ತೋರಿದ್ದಾರೆ ಎಂದೂ ದೂರಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಪೋಸ್ಟ್ ಹಾಕಿ ಮೂಲ್ಕಿ-ಮೂಡಬಿದ್ರೆ ಬಿಜೆಪಿ ಉಪಾಧ್ಯಕ್ಷ ಸೂರಜ್ ಜೈನ್ ಕಿಡಿ ಕಾರಿದ್ದಾರೆ.
ಮೂಡಬಿದಿರೆಯ ಬನ್ನಡ್ಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಲು ಸಾಲು ಅಪಘಾತಗಳು ನಡೆಯುತ್ತಿದ್ದು, ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯಿಂದ ಮೂರು ವರ್ಷಗಳಲ್ಲಿ 8ಕ್ಕೂ ಹೆಚ್ಚು ಜೀವಗಳು ಬಲಿಯಾಗಿವೆ. ಮಂಗಳೂರಿನಿಂದ ಕಾರ್ಕಳಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಸರ್ವಿಸ್ ರಸ್ತೆ ಇಲ್ಲದ ಕಾರ ಭೀಕರ ಅಪಘಾತಗಳು ನಡೆಯುತ್ತಿದ್ದು, ಕೇವಲ ಮೂರು ದಿನಗಳಲ್ಲಿ 4 ಅಪಘಾತ ನಡೆದು ಓರ್ವ ಮಹಿಳೆ ಮೃತಪಟ್ಟಿದ್ದರು. ಈ ವಿಚಾರವಾಗಿ ಸಂಸದರನ್ನ ಭೇಟಿಯಾಗಲು ಬಿಜೆಪಿ ಮುಖಂಡ ಸೂರಜ್ ಜೈನ್ ತಂಡ ತೆರಳಿತ್ತು. ಆ ವೇಳೆ ಸಂಸದ ಬ್ರಿಜೇಶ್ ಚೌಟ ಉಡಾಫೆ ಉತ್ತರ ನೀಡಿದ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ಫಲನಾಭವಿಗಳು ಮೃತಪಟ್ಟ ಬಳಿಕವೂ ಖಾತೆಗೆ ಗೃಹಲಕ್ಷ್ಮಿ ಹಣ; ದಕ್ಷಿಣ ಕನ್ನಡದಲ್ಲಿ 22 ಕೋಟಿ ಜಮೆ ಬೆಳಕಿಗೆ
ಅವಘಡಗಳಿಗೆ ಹೆದ್ದಾರಿ ಇಲಾಖೆಯ ಕಾಮಗಾರಿಯೇ ಕಾರಣ ಎಂದು ನೀವು ಹೇಗೆ ಹೇಳುತ್ತೀರಿ? ಈ ಕಾಮಗಾರಿ ಪೂರ್ಣ ಆಗುವವರೆಗೆ ಸರ್ವಿಸ್ ರಸ್ತೆ ಮಾಡಲು ಸಾಧ್ಯವಿಲ್ಲ. 2023ರಲ್ಲಿ ಮನವಿ ಕೊಟ್ಟಿದ್ದರೆ ಕೊಟ್ಟಿರುವವರ ಬಳಿ ಹೋಗಿ ಕೇಳಿ. ನೀವು ಹೇಳಿದಂತೆ ಕಾಮಗಾರಿ ಮಾಡಲು ಆಗಲ್ಲ. ಜನರ ಪ್ರತಿಭಟನೆಗೆ ನಾನು ಹೆದರೋದಿಲ್ಲ. ಸ್ಥಳಕ್ಕೆ ಭೇಟಿ ನೀಡಲು ಕೇಳಿಕೊಂಡರೆ ಸದ್ಯಕ್ಕೆ ಸಾಧ್ಯವಿಲ್ಲ. ಆ ಕಡೆ ಬಂದಾಗ ಸ್ಥಳಕ್ಕೆ ಬರುತ್ತೇನೆ ಎಂದು ಸಂಸದರು ಹೇಳಿರೋದಾಗಿ ದೂರಲಾಗಿದೆ. ಬನ್ನಡ್ಕ ಸರಣಿ ಅಪಘಾತಗಳನ್ನ ಕಂಡು ಧೃತಿಗೆಟ್ಟಿರುವ ಸಾರ್ವಜನಿಕರಿಂದ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.