‘ಟಿ-ಶರ್ಟ್ ಖರೀದಿಸಿದರೆ ಐಫೋನ್ ಉಚಿತ’: ವಂಚಕರ ಮಾತು ನಂಬಿ 1.6 ಲಕ್ಷ ಕಳೆದುಕೊಂಡ ಮಂಗಳೂರಿನ ಯುವಕ

ಟಿ-ಶರ್ಟ್ ಖರೀದಿಸಿದರೆ ಉಚಿತವಾಗಿ ಐಫೋನ್ ನೀಡುವುದಾಗಿ ನಂಬಿಸಿದ ಸೈಬರ್ ವಂಚಕರು ಮಂಗಳೂರಿನ 25 ವರ್ಷದ ಯುವಕನಿಗೆ ಬರೋಬ್ಬರಿ 1.6 ಲಕ್ಷ ರೂಪಾಯಿ ವಂಚಿಸಿದ್ದಾರೆ. ಹಂತ ಹಂತವಾಗಿ ಯುವಕ ಹಣ ಪಾವತಿಸಿದ್ದ. ಆದರೆ ಅದ್ಯಾವುದೂ ಖಾತೆಗೆ ಮರಳದ ಕಾರಣ ಮೋಸ ಹೋದ ಬಗ್ಗೆ ಅರಿವಾಗುತ್ತಿದ್ದಂತೆ ಆತ ದೂರು ನೀಡಿದ್ದಾನೆ. ಈ ಸಂಬಂಧ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಿ-ಶರ್ಟ್ ಖರೀದಿಸಿದರೆ ಐಫೋನ್ ಉಚಿತ: ವಂಚಕರ ಮಾತು ನಂಬಿ 1.6 ಲಕ್ಷ ಕಳೆದುಕೊಂಡ ಮಂಗಳೂರಿನ ಯುವಕ
ಸಾಂದರ್ಭಿಕ ಚಿತ್ರ
Image Credit source: PTI

Updated on: Nov 27, 2026 | 8:01 AM

ಮಂಗಳೂರು, ನವೆಂಬರ್​​ 27: ‘ನೀವು ಟಿ-ಶರ್ಟ್​​ ಖರೀದಿಸಿದರೆ ಸಾಕು ಐಫೋನ್​​ ಉಚಿತವಾಗಿ ನೀಡ್ತೇವೆ’, ಇಂಥಹದ್ದೊಂದು ಆಫರ್​​ ಕೊಟ್ರೆ ಯಾರಾದರೂ ಅವಕಾಶ ಬಿಡ್ತಾರಾ ಹೇಳಿ!. ಹೌದು, ಹೀಗೆ ಯೋಚಿಸಿದ 25 ವರ್ಷದ ಯುವಕನೋರ್ವ ಬರೋಬ್ಬರಿ 1.6 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಈ ಸಂಬಂಧ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಕ್ಟೋಬರ್ 31ರಂದು ಯುವಕನಿಗೆ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ನಲ್ಲಿ ಟಿ-ಶರ್ಟ್ ಖರೀದಿಸಿದರೆ ಉಡುಗೊರೆಯಾಗಿ ಐಫೋನ್ ನೀಡುವ ಜಾಹೀರಾತು ಕಾಣಿಸಿಕೊಂಡಿತ್ತು. ಈ ಆಮಿಷಕ್ಕೆ ಒಳಗಾದ ಯುವಕ ಆನ್‌ಲೈನ್‌ನಲ್ಲಿ ಟಿ-ಶರ್ಟ್ ಆರ್ಡರ್ ಮಾಡಿ ಡಿಜಿಟಲ್ ಪಾವತಿ ಆ್ಯಪ್ ಮೂಲಕ 734 ರೂಪಾಯಿ ಪಾವತಿಸಿದ್ದ ಎನ್ನಲಾಗಿದೆ.

ಹಂತ ಹಂತವಾಗಿ ಹಣ ವರ್ಗಾವಣೆ

ಇನ್ನು ಅದೇ ದಿನ ಅಪರಿಚಿತ ವ್ಯಕ್ತಿಯೊಬ್ಬ ಯುವಕನಿಗೆ ಕರೆ ಮಾಡಿ, ಟಿ-ಶರ್ಟ್ ಜೊತೆಗೆ ಐಫೋನ್ ಕೂಡ ರವಾನೆಯಾಗಲಿದೆ ಎಂದು ತಿಳಿಸಿದ್ದಾನೆ. ಆದರೆ, ಐಫೋನ್‌ಗೆ ವಿಮಾ ಮೊತ್ತ ಪಾವತಿಸಬೇಕು. ಬಳಿಕ ಆ ಹಣವನ್ನು ಹಿಂದಿರುಗಿಸಲಾಗುವುದು ಎಂದು ಹೇಳಿದ್ದಾನೆ. ಕರೆ ಮಾಡಿದ ವ್ಯಕ್ತಿಯ ಮಾತನ್ನು ನಂಬಿದ ಯುವಕ, ಎರಡು ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಡಿಜಿಟಲ್ ಪಾವತಿ ಆ್ಯಪ್ ಮೂಲಕ 72,640 ರೂಪಾಯಿ ವರ್ಗಾಯಿಸಿದ್ದಾನೆ. ನವೆಂಬರ್ 22ರಂದು ಮತ್ತೊಬ್ಬ ವ್ಯಕ್ತಿ ಕರೆ ಮಾಡಿ, 71,906 ರೂಪಾಯಿ ವರ್ಗಾಯಿಸುವಂತೆ ಸೂಚಿಸಿದ್ದಾನೆ. ಈ ಹಣವನ್ನೂ ಖಾತೆಗೆ ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದಾನೆ. ಇದನ್ನು ನಂಬಿದ ಯುವಕ ಹಣ ವರ್ಗಾಯಿಸಿದ್ದಾನೆ.

Loading...

ಇದನ್ನೂ ಓದಿ: ಉಡುಪಿಯಲ್ಲಿ ಸೈಬರ್ ವಂಚನೆ ಪ್ರಕರಣ ಹೆಚ್ಚಳ: ಹಿರಿಯ ನಾಗರಿಕರೇ ಟಾರ್ಗೆಟ್, ಲಕ್ಷಾಂತರ ಹಣ ಲೂಟಿ!

ಬಳಿಕ ಹಣ ಮರುಪಾವತಿ ಪ್ರಕ್ರಿಯೆಗಾಗಿ IMPS ಮೂಲಕ ಕಮಿಷನ್ ಶುಲ್ಕವಾಗಿ ಮತ್ತೆ 20,856 ರೂಪಾಯಿ ಪಾವತಿಸುವಂತೆ ವಂಚಕರು ಬೇಡಿಕೆ ಇಟ್ಟಿದ್ದಾರೆ. ಅದರಂತೆ ಯುವಕ UPI ಐಡಿಗೆ ಹಣ ವರ್ಗಾಯಿಸಿದ್ದಾನೆ. ಆದರೆ, ಯಾವುದೇ ಹಣ ಆತನ ಖಾತೆಗೆ ಮರಳಿರಲಿಲ್ಲ. ಈ ಬಗ್ಗೆ ಕರೆ ಮಾಡಿದವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ಸಮರ್ಪಕವಾಗಿ ಪ್ರತಿಕ್ರಿಯಿಸಿರಲಿಲ್ಲ. ಹೀಗಾಗಿ ತಾನು ವಂಚನೆಗೆ ಒಳಗಾಗಿರುವುದನ್ನು ಅರಿತ ಯುವಕ ಸೈಬರ್ ಅಪರಾಧ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ದಾಖಲಿಸಿದ್ದಾನೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದಾರೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us