ಸೈಬರ್ ವಂಚಕರಿಗೆ ಭಾರತದಿಂದ 500ಕ್ಕೂ ಹೆಚ್ಚು ಸಿಮ್ ಪೂರೈಸಿದ್ದ ಆರೋಪಿ ಬಂಧನ

ಮಂಗಳೂರಿನ ಸೆನ್ ಕ್ರೈಂ ಪೊಲೀಸರು ದೆಹಲಿ ವಿಮಾನ ನಿಲ್ದಾಣದಲ್ಲಿ ಸೈಬರ್ ವಂಚಕರಿಗೆ ಸಿಮ್ ಕಾರ್ಡ್‌ಗಳನ್ನು ಪೂರೈಸುತ್ತಿದ್ದ ಕಣಾತಲ ವಾಸುದೇವ ರೆಡ್ಡಿ ಎಂಬಾತನನ್ನು ಬಂಧಿಸಿದ್ದಾರೆ. ಅವನು 500ಕ್ಕೂ ಹೆಚ್ಚು ಸಿಮ್ ಕಾರ್ಡ್‌ಗಳನ್ನು ಪೂರೈಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಂಧನವು ಒಂದು ದೊಡ್ಡ ಸೈಬರ್ ಕ್ರೈಂ ಜಾಲವನ್ನು ಬಯಲು ಮಾಡಿದೆ. ಪೊಲೀಸರು ಇನ್ನೂ ತನಿಖೆ ಮುಂದುವರಿಸಿದ್ದಾರೆ.

ಸೈಬರ್ ವಂಚಕರಿಗೆ ಭಾರತದಿಂದ 500ಕ್ಕೂ ಹೆಚ್ಚು ಸಿಮ್ ಪೂರೈಸಿದ್ದ ಆರೋಪಿ ಬಂಧನ
ಸಾಂದರ್ಭಿಕ ಚಿತ್ರ, ವಾಸುದೇವ ರೆಡ್ಡಿ
Edited By: ವಿವೇಕ ಬಿರಾದಾರ

Updated on: Dec 23, 2024 | 12:14 PM

ಮಂಗಳೂರು, ಡಿಸೆಂಬರ್​​ 23: ಸೈಬರ್​ ವಂಚಕರಿಗೆ (Cyber Crime) ಸಿಮ್​ ಕಾರ್ಡ್​​ ಪೂರೈಸುತ್ತಿದ್ದ ಆರೋಪಿಯನ್ನು ಮಂಗಳೂರಿನ (Mangaluru) ಸೆನ್ ಕ್ರೈಂ ಪೊಲೀಸರು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಕಣಾತಲ ವಾಸುದೇವ ರೆಡ್ಡಿ (25) ಬಂಧಿತ ಆರೋಪಿ. ಆರೋಪಿ ಸೈಬರ್ ವಂಚಕರಿಗೆ ಭಾರತದಿಂದ ವಿವಿಧ ಕಂಪನಿಗಳ 500ಕ್ಕೂ ಹೆಚ್ಚು ಸಿಮ್​ಗಳನ್ನು ಪೂರೈಕೆ ಮಾಡಿದ್ದನು.

ಆರೋಪಿ ಕಣಾತಲ ವಾಸುದೇವ ರೆಡ್ಡಿ ಓಡಿಶಾ ಮೂಲದವನು. ಸೈಬರ್ ವಂಚನೆ ಪ್ರಕರಣದ ತನಿಖೆ ನಡೆಸುತ್ತಿದ್ದ ವೇಳೆ ಆರೋಪಿ ಕಣಾತಲ ವಾಸುದೇವ ರೆಡ್ಡಿ ಸಿಮ್ ಪೂರೈಕೆ ಮಾಹಿತಿ ಮಂಗಳೂರಿನ ಸೆನ್ ಪೊಲೀಸರಿಗೆ ಗೊತ್ತಾಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಕಣಾತಲ ವಾಸುದೇವ ರೆಡ್ಡಿಯ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾದರು.

ವಂಚಕ ನಡವೂಲು ವೀರವೆಂಕಟ ಸತ್ಯನಾರಾಯಣ ರಾಜು ಎಂಬುವನು ಹಣ ವಿನಿಯೋಗಿಸಲು ವಾಟ್ಸಾಪ್​ ಮೂಲಕ ನಕಲಿ ಲಿಂಕ್ ಕಳುಹಿಸಿ ಅದರ ಮೂಲಕ ಲಕ್ಷಾಂತರ ರೂ. ದೋಚಿದ್ದನು. ಹೀಗೆ, ಹಂತ ಹಂತವಾಗಿ 10,84,017 ರೂಪಾಯಿ ಪಡೆದು ವಂಚನೆ ಎಸಗಿದ್ದಾನೆ. ಪ್ರಕರಣ ಸಂಬಂಧ ಪೊಲೀಸರು ಈಗಾಗಲೇ ಸೈಬರ್​ ವಂಚಕ ನಡವೂಲು ವೀರವೆಂಕಟ ಸತ್ಯನಾರಾಯಣ ರಾಜುನನ್ನು ಬಂಧಿಸಿದ್ದಾರೆ.

ಆರೋಪಿ ನಡವೂಲು ವೀರವೆಂಕಟ ಸತ್ಯನಾರಾಯಣ ರಾಜುನನ್ನು ವಿಚಾರಣೆಗೆ ಒಳಪಡಿಸಿದಾಗ ಸಿಮ್ ಮಾರಾಟ ದಂಧೆಯ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಕೂಡಲೇ ಪೊಲೀಸರು ಕಣಾತಲ ವಿರುದ್ಧ ಲುಕ್ಔಟ್ ನೋಟಿಸ್ ಹೊರಡಿಸಿದ್ದರು. ಆರೋಪಿ ಕಣಾತಲ ದುಬೈಗೆ ತೆರಳು ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ, ಇಲ್ಲಿನ ಇಮಿಗ್ರೇಶನ್ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದರು. ಇನ್ನುಳಿದ ಆರೋಪಿಗಳ ಪತ್ತೆಗೆ ಮಂಗಳೂರು ಪೊಲೀಸರಿಂದ ತನಿಖೆ ಮುಂದುವರೆದಿದೆ.

ದುಬೈಗೆ ತೆರಳುವಾಗ ಬಂಧನ

ಪ್ರಕರಣ ಸಂಬಂಧ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅರ್ಗವಾಲ್ ಮಾತನಾಡಿ, ಮೂಡಬಿದಿರೆ ನಿವಾಸಿಯೊಬ್ಬರು‌ ಸೈಬರ್ ವಂಚನೆ ಬಗ್ಗೆ ದೂರು ನೀಡಿದ್ದರು. ತನಿಖೆ ಕೈಗೊಂಡು ಹಣ ವರ್ಗಾವಣೆಯಾದ ಖಾತೆಯನ್ನು ಫ್ರೀಝ್ ಮಾಡಿದ್ದೇವೆ. 9,50,000 ಹಣವನ್ನು ನಾವು ಪ್ರೀಝ್ ಮಾಡಿದ್ದೇವೆ ಎಂದು ಹೇಳಿದರು.

ಕೇರಳ ಮತ್ತು‌ ಗುಜರಾತ್ ಮೂಲದ ಎರಡು ಖಾತೆಗಳಿಗೆ ಹಣ ವರ್ಗಾವಣೆಯಾಗಿತ್ತು. ಟೆಕ್ನಿಕಲ್ ವಿಚಾರಣೆ ಸಂದರ್ಭದಲ್ಲಿ ಸಿಮ್ ಕಾರ್ಡ್ ಬಗ್ಗೆ ಮಾಹಿತಿ ಗೊತ್ತಾಯಿತು. ವಿಶಾಖಪಟ್ಟಣ ಮತ್ತು ಗೋಧಾವರಿ ಪ್ರದೇಶದಿಂದ‌ ಸಿಮ್ ಕಾರ್ಡ್ ನೀಡಿರುವುದು ತಿಳಿಯಿತು. ನಮ್ಮ ಒಂದು ತಂಡ ಆಂಧ್ರಪ್ರದೇಶದ ಗೋಧಾವರಿಗೆ ತೆರಳಿ‌ ಸತ್ಯನಾರಾಯಣ ರಾಜು ಎಂಬಾತನನ್ನು ಬಂಧಿಸಿದೆ. ಆತನಿಂದ 300ಕ್ಕೂ ಹೆಚ್ಚು ಸಿಮ್​ಗಳನ್ನು ವಶಕ್ಕೆ ಪಡೆದಿದ್ದೇವೆ ಎಂದು ತಿಳಸಿದ್ದಾರೆ.

ಇದನ್ನೂ ಓದಿ: ಸೈಬರ್​ ವಂಚನೆಗೆ ಹೊಸ ದಾರಿ: ಮನೆಗೆ ಬರುತ್ತೆ ಕೂಪನ್​​​, ಸ್ಕ್ಯಾನ್​ ಮಾಡಿದರೆ ನಿಮ್ಮ ಖಾತೆಯಲ್ಲಿನ ಹಣ ಮಾಯ

ಸತ್ಯನಾರಾಯಣ ರಾಜು ಬೇರೆ ಬೇರೆಯವರ ಹೆಸರಿನಲ್ಲಿ ಸಿಮ್ ಕಾರ್ಡ್ ಪಡೆಯುತ್ತಿದ್ದನು. ದುಬೈನಲ್ಲಿದ್ದ ವಿನ್ಸೆಕ್ಟ್ ಎಂಬ ಕಂಪನಿಗೆ ಈ ಸಿಮ್​ಗಳನ್ನು ಪೂರೈಸುತ್ತಿದ್ದನು. ಪ್ರಾಥಮಿಕ ಮಾಹಿತಿ ಪ್ರಕಾರ ಇದು ಚೀನಾ ಮೂಲದ ಕಂಪನಿ ಅಂತ ಗೊತ್ತಾಗಿದೆ. ದುಬೈನಲ್ಲಿ ಕಾಲ್ ಸೆಂಟರ್ ತೆರೆದು ಜನರಿಗೆ ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಎಂದು ಹೇಳಿ ವಂಚನೆ ಮಾಡುತ್ತಿತ್ತು ಎಂದು ಪೊಲೀಸ್​ ಆಯುಕ್ತರು ತಿಳಿಸಿದರು.

ಸತ್ಯನಾರಾಯಣ ರಾಜು ವಿಚಾರಣೆ ವೇಳೆ ಮುತ್ತು ಶಿವ ಮತ್ತು ಕಣಾತಲ ವಾಸುದೇವ ರೆಡ್ಡಿ ಎಂಬ ಇಬ್ಬರ ಹೆಸರು‌ ಬಾಯಿಬಿಟ್ಟಿದ್ದನು. ಇವರಿಬ್ಬರು ದುಬೈನಲ್ಲಿದ್ದು ಆಪರೇಟ್​ ಮಾಡುತ್ತಿದ್ದರು. ಇಬ್ಬರ ಸಂಪೂರ್ಣ ಮಾಹಿತಿ ಪಡೆದು ಲುಕ್ ಔಟ್ ನೋಟೀಸ್ ಜಾರಿ ಮಾಡಿದ್ದೇವು. ಲುಕ್​ಔಟ್​ ಜಾರಿ ಬಳಿಕ‌ ಮುತ್ತು ಶಿವನನ್ನು ಮೂರು ತಿಂಗಳ ಹಿಂದೆ ಬಂಧಿಸಿದೇವು. ಎರಡು‌ ದಿನಗಳ ಹಿಂದೆ ದೆಹಲಿಯಿಂದ ದುಬೈಗೆ ಹೋಗುವಾಗ ವಾಸುದೇವ ರೆಡ್ಡಿಯನ್ನು ಬಂಧಿಸಿದ್ದೇವೆ ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:02 am, Mon, 23 December 24

ಅಶೋಕ್​ ಪೂಜಾರಿ

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಿವಾಸಿಯಾದ ಅಶೋಕ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪೂರೈಸಿರುತ್ತಾರೆ. ಸ್ಥಳೀಯ ದಿನಪತ್ರಿಕೆಯ ಮೂಲಕ ವೃತ್ತಿರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಬಳಿಕ ಖಾಸಗಿ ಸುದ್ದಿ ವಾಹಿನಿಯಲ್ಲಿ ಉಡುಪಿ ಜಿಲ್ಲಾ ವರದಿಗಾರರಾಗಿ ಕೆಲಕಾಲ ಸೇವೆ ಸಲ್ಲಿಸಿರುತ್ತಾರೆ. ನಂತರ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರು ವರ್ಷಗಳ ಕಾಲ ದಿಗ್ವಿಜಯ ನ್ಯೂಸ್ ನ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿ ನಂತರ ಟಿವಿ9 ಸುದ್ದಿ ವಾಹಿನಿಯಲ್ಲಿ ಉತ್ತರ ಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ರಂಗದಲ್ಲಿ ಇವರು ನೀಡಿದ ಸೇವೆಗೆ indiatelevision.com 2020ರಲ್ಲಿ ಅತ್ಯುತ್ತಮ ವರದಿಗಾರ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

Read More
Loading...
Unable to load recommendations.
Follow Us