ಮಂಗಳೂರು, ಉಡುಪಿ ಬಸ್​​ ದರ ಏರಿಕೆ ಜತೆಗೆ ಮತ್ತೊಂದು ಬಿಗ್​ ಶಾಕ್: ಈ ದೀಪಾವಳಿಗೆ ಎಲ್ಲವೂ ದುಬಾರಿ

ದೀಪಾವಳಿ ಹಬ್ಬದ ಸಿದ್ಧತೆಯ ನಡುವೆ, ಉಡುಪಿ ಮತ್ತು ಮಂಗಳೂರು ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ತರಕಾರಿ ಹಾಗೂ ಹಣ್ಣುಗಳ ಬೆಲೆ ಭಾರಿ ಏರಿಕೆ ಕಂಡಿದೆ. ಮಳೆ ಕೊರತೆ, ಕ್ರಿಮಿಕೀಟಗಳ ಬಾಧೆ, ಮತ್ತು ಬೆಳಗಾವಿ ರಸ್ತೆ ತಡೆ ಸೇರಿದಂತೆ ಪೂರೈಕೆ ವ್ಯತ್ಯಯದಿಂದಾಗಿ ಈ ದರ ಹೆಚ್ಚಳವಾಗಿದೆ. ಕೊತ್ತಂಬರಿ ಸೊಪ್ಪು, ನುಗ್ಗೆಕಾಯಿ, ಶುಂಠಿ ದರಗಳು ದುಪ್ಪಟ್ಟಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.

ಮಂಗಳೂರು, ಉಡುಪಿ ಬಸ್​​ ದರ ಏರಿಕೆ ಜತೆಗೆ ಮತ್ತೊಂದು ಬಿಗ್​ ಶಾಕ್: ಈ ದೀಪಾವಳಿಗೆ ಎಲ್ಲವೂ ದುಬಾರಿ
ಸಾಂದರ್ಭಿಕ ಚಿತ್ರ

Updated on: Nov 04, 2026 | 4:07 PM

ಮಂಗಳೂರು, ನ.4:  ಬಸ್​​​​​ ದರ ಏರಿಕೆ ಬೆನ್ನಲ್ಲೇ ಬೆಳಕಿನ ಹಬ್ಬ ದೀಪಾವಳಿಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಂತೆಯೇ, ಕರಾವಳಿ ಜಿಲ್ಲೆಗಳಾದ ಉಡುಪಿ ಹಾಗೂ ದಕ್ಷಿಣ ಕನ್ನಡದ ಪ್ರಮುಖ ಮಾರುಕಟ್ಟೆಗಳಲ್ಲಿ ತರಕಾರಿ ಮತ್ತು ಹಣ್ಣುಗಳ ಧಾರಣೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಹಬ್ಬಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ತರಕಾರಿಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ಗ್ರಾಹಕರಿಗೆ ದರ ಏರಿಕೆಯ ಬಿಸಿ ತಟ್ಟಿದೆ.

ಉಡುಪಿಯಲ್ಲಿ ಸರಿಯಾದ ಮಳೆಯಾಗದಿರುವುದು, ಕ್ರಿಮಿಕೀಟಗಳ ಬಾಧೆ ಮತ್ತು ಬೆಳಗಾವಿಯ ಹೆದ್ದಾರಿ ತಡೆಯಿಂದಾಗಿ ಪೂರೈಕೆ ಕಡಿತಗೊಂಡಿದ್ದರೆ, ಮಂಗಳೂರಿಗೆ ತರಕಾರಿ ಸರಬರಾಜು ಮಾಡುವ ಹಾಸನ, ಚಿಕ್ಕಮಗಳೂರು ಹಾಗೂ ಬೆಂಗಳೂರು ಭಾಗಗಳಲ್ಲಿ ಬೆಳೆ ಇಳುವರಿ ಕಡಿಮೆಯಾಗಿರುವುದು ಈ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

Loading...

ಬೆಳಗಾವಿ ಪ್ರತಿಭಟನೆ ಎಫೆಕ್ಟ್

ಕಳೆದ ವಾರಕ್ಕೆ ಹೋಲಿಸಿದರೆ ಕೊತ್ತಂಬರಿ ಸೊಪ್ಪು, ನುಗ್ಗೆಕಾಯಿ, ಹಾಗಲಕಾಯಿ, ಬೀನ್ಸ್, ಹೀರೇಕಾಯಿ, ಹಸಿಮೆಣಸಿನಕಾಯಿ ಹಾಗೂ ಅಳಸಂದಿ ದರಗಳು ಭಾರಿ ಜಿಗಿತ ಕಂಡಿವೆ. ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರು ನಡೆಸಿದ ರಸ್ತೆ ತಡೆ ವೇಳೆ ಕೊತ್ತಂಬರಿ ಸೊಪ್ಪು ಸಾಗಿಸುತ್ತಿದ್ದ ವಾಹನಗಳನ್ನು ತಡೆದು, ಸೊಪ್ಪನ್ನು ರಸ್ತೆಗೆ ಎಸೆದು ನಾಶಪಡಿಸಲಾಗಿತ್ತು. ಈ ಘಟನೆಯಿಂದಾಗಿ ಕರಾವಳಿಗೆ ಕೊತ್ತಂಬರಿ ಪೂರೈಕೆ ಸಂಪೂರ್ಣ ಸ್ಥಗಿತಗೊಂಡು, ದಿಢೀರನೆ ಕೆಜಿಗೆ 100 ರೂ.ರಷ್ಟು ದರ ಏರಿಕೆಯಾಗಿದೆ. ಪ್ರಸ್ತುತ ಕೊತ್ತಂಬರಿ ಸೊಪ್ಪು ಕೆಜಿಗೆ 200 ರೂ.ಗೆ ಮಾರಾಟವಾಗುತ್ತಿದೆ. ಕಳೆದ ವಾರ ಕೆಜಿಗೆ ₹80 ಇದ್ದ ಶುಂಠಿ ಮತ್ತು ನುಗ್ಗೆಕಾಯಿ ದರ ಈ ವಾರ ನೇರವಾಗಿ 160 ರೂ. ಏರಿಕೆಯಾಗಿದೆ. ಬೀನ್ಸ್ ದರ 80 ರಿಂದ 120 ರೂ.ಗೆ ಹಾಗೂ ಹೀರೇಕಾಯಿ 50 ರಿಂದ 80 ರೂ.ಗೆ ಜಿಗಿದಿದೆ.

ಇದನ್ನೂ ಓದಿ: ರಾಜ್ಯದ ಪ್ರಯಾಣಿಕರಿಗೆ ಬಸ್​​​ ದರ ಏರಿಕೆ ಶಾಕ್: ಇಂದು ಮಧ್ಯರಾತ್ರಿಯಿಂದಲೇ ಕೆಎಸ್​​ಆರ್​​ಟಿಸಿ 9 ರೂ. ಏರಿಕೆ

ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆಯಲ್ಲಿ ತರಕಾರಿ ಧಾರಣೆ

ನುಗ್ಗೆಕಾಯಿ 160 ರೂ., ಸ್ಥಳೀಯ ಹೀರೆಕಾಯಿ/ಸೌತೆ 160 ರೂ., ಮುಳ್ಳು ಸೌತೆ 240 ರೂ., ಬೀನ್ಸ್ 120 ರೂ., ಅಳಸಂದಿ 120 ರೂ., ಕ್ಯಾಪ್ಸಿಕಂ 120 ರೂ., ಹಸಿಮೆಣಸಿನಕಾಯಿ 80-120 ರೂ., ಬೆಂಡೆಕಾಯಿ 160 ರೂ., ಹೀರೇಕಾಯಿ 100 ರೂ., ಹಾಗಲಕಾಯಿ 80 ರೂ., ಬದನೆಕಾಯಿ 60-80 ರೂ., ಕ್ಯಾರೆಟ್ 80 ರೂ., ಟೊಮೆಟೊ 30 ರೂ., ಗಡ್ಡೆಕೋಸು 40 ರೂ., ಕ್ಯಾರೆಟ್ 80 ರೂ.. ಉತ್ತಮ ಗುಣಮಟ್ಟದ ಈರುಳ್ಳಿ 60-70 ರೂ, ಬೆಳ್ಳುಳ್ಳಿ 200-240 ರೂ (ಚಿಲ್ಲರೆ ಮಾರುಕಟ್ಟೆಯಲ್ಲಿ ಇನ್ನೂ ಹೆಚ್ಚು), ಆಲೂಗಡ್ಡೆ 2 ಕೆಜಿಗೆ 50 ರೂ.

ಹಬ್ಬದ ಪೂಜೆಗೆ ಅಗತ್ಯವಿರುವ ಹಣ್ಣುಗಳ ಬೆಲೆಯೂ ಗಗನಕ್ಕೇರಿದೆ. ಸೇಬು 150 ರೂ., ಮಾವು 200 ರೂ., ದಾಳಿಂಬೆ 220 ರೂ., ಡ್ರ್ಯಾಗನ್ ಫ್ರೂಟ್ 160 ರೂ., ಮೂಸಂಬಿ 50 ರೂ., ಕಿತ್ತಳೆ 60 ರೂ., ಸೀತಾಫಲ 180 ರೂ., ಪೇರಲ 100 ರೂ., ದ್ರಾಕ್ಷಿ (ಕಪ್ಪು) 100 ರೂ., ಅನಾನಸ್ 70 ರೂ., ಲಿಚಿ 300 ರೂ.. ಮೈಸೂರು ಬಾಳೆ 80 ರೂ., ಕಡಲಿ 120 ರೂ., ರೋಬಸ್ಟಾ 60 ರೂ., ಸಣ್ಣ ಏಲಕ್ಕಿ 80 ರೂ., ದೊಡ್ಡ ಏಲಕ್ಕಿ 100 ರೂ., ಕಾರ್ಡಮಮ್ ಬಾಳೆ 130 ರೂ..

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us