ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ: ಎಸ್ಐಟಿ ತಂಡದ ದಿನದ ಖರ್ಚು ಎಷ್ಟು ಗೊತ್ತಾ?
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ಅನಾಮಿಕನೊಬ್ಬ ದೂರು ನೀಡಿರುವುದು ಸದ್ಯ ದೇಶಾದ್ಯಂತ ಸಂಚಲನ ಮೂಡಿಸಿದೆ. ಅನಾಮಿಕನ ದೂರಿನ ಬೆನ್ನಲ್ಲೇ ತನಿಖೆಗಾಗಿ ಎಸ್ಐಟಿ ಕೂಡ ರಚನೆಯಾಗಿತ್ತು. ಕಳೆದ 13 ದಿನಗಳಿಂದ ಎಸ್ಐಟಿ ತಂಡ ಧರ್ಮಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ನೂರಾರು ಅಧಿಕಾರಿಗಳು ನಿತ್ಯ ಕೆಲಸ ಮಾಡುತ್ತಿದ್ದಾರೆ. ಹಾಗಾದರೆ, ಈ ತನಿಖಾ ಪ್ರಕ್ರಿಯೆಗೆ ತಗಲುವ ಖರ್ಚು-ವೆಚ್ಚ ಎಷ್ಟು? ಇಲ್ಲಿದೆ ಮಾಹಿತಿ.

ಮಂಗಳೂರು, ಆಗಸ್ಟ್ 13: ಧರ್ಮಸ್ಥಳದ ನಿಗೂಢ ಸಾವಿನ ಪ್ರಕರಣ (Dharmasthala Burials Case) – ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ಅನಾಮಿಕ ದೂರು ನೀಡಿರುವ ಪ್ರಕರಣ ತನಿಖೆ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ದೂರುದಾರ ತೋರಿಸಿದ ಜಾಗವನ್ನೆಲ್ಲಾ ಎಸ್ಐಟಿ (SIT) ತಂಡ ಅಗೆಯೋ ಕೆಲಸ ಮಾಡುತ್ತಿದೆ. ಕಳೆದ 13 ದಿನಗಳಿಂದ ಧರ್ಮಸ್ಥಳ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿರುವ ಎಸ್ಐಟಿ ತಂಡದ ದಿನದ ಖರ್ಚಿನ ಬಗ್ಗೆ ಕೇಳಿದರೆ ನಿಜಕ್ಕೂ ಶಾಕ್ ಆಗುತ್ತೀರಾ. ಎಸ್ಐಟಿ ತನಿಖೆಗೆ ನಿತ್ಯ ಅಂದಾಜು 4 ರಿಂದ 5 ಲಕ್ಷ ರೂ. ಖರ್ಚಾಗುತ್ತಿದೆ.
ಎಸ್ಐಟಿ ತನಿಖೆಗೆ ಲಕ್ಷಾಂತರ ರೂ ಖರ್ಚು
ಕಳೆದ 13 ದಿನಗಳಿಂದಲೂ ಅಸ್ಥಿಪಂಜರಕ್ಕಾಗಿ ಎಸ್ಐಟಿ ಶೋಧ ನಡೆಸಿದೆ. ನೇತ್ರಾವತಿ ನದಿ ತಟ, ಬಂಗ್ಲಗುಡ್ಡ, ಕಲ್ಲೇರಿ, ರತ್ನಗಿರಿ ಬೆಟ್ಟದಲ್ಲೂ ಶವ ಶೋಧ ಮಾಡಲಾಗಿದೆ. 6ನೇ ಪಾಯಿಂಟ್ ಬಿಟ್ಟು ಬೇರೆ ಯಾವ ಸ್ಪಾಟ್ನಲ್ಲೂ ಅಸ್ಥಿಪಂಜರ ಪತ್ತೆ ಆಗಿಲ್ಲ. ಆದರೆ ಈ ಮಧ್ಯೆ ತನಿಖೆಗೆ ಮಾತ್ರ ನಿತ್ಯ ಲಕ್ಷಾಂತರ ರೂ ಖರ್ಚಾಗುತ್ತಿದೆ.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣದ ಹಿಂದೆ ಮತಾಂತರ ಮಾಫಿಯಾ, ನಗರ ನಕ್ಸಲರು: ಸಿಟಿ ರವಿ ಆರೋಪ
ಅಧಿಕಾರಿಗಳ ಊಟ, ತಿಂಡಿ ಮತ್ತು ವಿಶ್ರಾಂತಿಗಾಗಿ ಲಾಡ್ಜ್ ವೆಚ್ಚ ದಿನಕ್ಕೆ 10 ಸಾವಿರ ರೂ., ಗುಂಡಿ ಅಗೆಯುವವರಿಗೆ ಒಬ್ಬೊಬ್ಬರಿಗೂ ದಿನಗೂಲಿ 2 ಸಾವಿರ ರೂ. ಒಟ್ಟು 15 ಜನರಿದ್ದು ದಿನಕ್ಕೆ 30 ಸಾವಿರ ರೂ. ಪೊಲೀಸ್, ವೈದ್ಯರ ಓಡಾಟಕ್ಕೆ ವಾಹನ, ಪೆಟ್ರೋಲ್ ಬಳಕೆ ಖರ್ಚು 20 ಸಾವಿರ ರೂ. ಜಿಪಿಆರ್ಗೆ 2 ಲಕ್ಷ ರೂ ಬಾಡಿಗೆ ನೀಡಲಾಗುತ್ತಿದೆ.
ಎಸ್ಐಟಿ ತಂಡಕ್ಕೆ 5 ಹೊಸ ಕಂಪ್ಯೂಟರ್, 20 ಕುರ್ಚಿ, 3 ಪ್ರಿಂಟರ್ ಸೇರಿ ಇತ್ಯಾದಿಗಳಿಗೆ 40 ಸಾವಿರ ರೂ. ಫೊರೆನ್ಸಿಕ್ ವೈದ್ಯರ ತಂಡಕ್ಕಾಗಿ ವಿಶೇಷ ಉಪಕರಣಗಳ ಬಳಕೆ ವೆಚ್ಚ ದಿನಕ್ಕೆ 3 ರಿಂದ 4 ಸಾವಿರ ರೂ. ಎಸ್ಐಟಿಯೊಂದಿಗೆ ಇರುವ ಒಟ್ಟಾರೆ ತಂಡಕ್ಕೆ 3 ಹೊತ್ತು ಊಟ, ತಿಂಡಿಗೆ 10 ಸಾವಿರ ರೂ. ತಾತ್ಕಾಲಿಕ ಟೆಂಟ್ಗಳ ವೆಚ್ಚ ದಿನಕ್ಕೆ 3 ರಿಂದ 4 ಸಾವಿರ ರೂ., ಒಟ್ಟಾರೆ ಅಂದಾಜು ದಿನದ ಖರ್ಚು ಒಂದು ಲಕ್ಷದ ಐವತ್ತು ಸಾವಿರ ರೂ. ಎನ್ನಲಾಗುತ್ತಿದೆ.
ಇದನ್ನೂ ಓದಿ: Fact Check: ಇವು ಧರ್ಮಸ್ಥಳದಲ್ಲಿ ಸಿಕ್ಕ ಅಸ್ತಿಪಂಜರಗಳೇ?: ವೈರಲ್ ಫೋಟೋದ ಸತ್ಯ ಇಲ್ಲಿದೆ ನೋಡಿ
ಎಸ್ಐಟಿ ತಂಡದ ಜೊತೆ ಧರ್ಮಸ್ಥಳ ಕೇಸ್ ತನಿಖೆಗೆ 260 ಅಧಿಕಾರಿಗಳು, ಸಿಬ್ಬಂದಿ ಬಳಕೆ ಮಾಡಲಾಗುತ್ತಿದೆ. ಎಸ್ಐಟಿ ತಂಡದಲ್ಲಿ 26 ಜನ, ಎಫ್ಎಸ್ಎಲ್ನಲ್ಲಿ 5 ಜನ, ಎಸ್ಓಸಿಓನಲ್ಲಿ 5 ಜನ, ಪೌರ ಕಾರ್ಮಿಕರು- 15, ಪೊಲೀಸ್ ಸಿಬ್ಬಂದಿ 200, ಎಸಿ ಮತ್ತು ತಹಶೀಲ್ದಾರ್ ತಲಾ ಒಬ್ಬರು, ಸ್ಥಳೀಯಾಡಳಿತ ಅಧಿಕಾರಿಗಳು ಐವರು ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:58 am, Wed, 13 August 25



