AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧರ್ಮಸ್ಥಳ ಬುರುಡೆ ಪ್ರಕರಣ ತನಿಖೆ ಚುರುಕು: ಮಂತ್ರವಾದಿಗಳ ಬೆನ್ನತ್ತಿದ ಎಸ್​​ಐಟಿ ಅಧಿಕಾರಿಗಳು!

ಧರ್ಮಸ್ಥಳದ ‘ಬುರುಡೆ’ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಎಸ್ಐಟಿ ತಂಡ ಬಂಗ್ಲೆಗುಡ್ಡದಲ್ಲಿ ಶೋಧ ಕಾರ್ಯ ನಡೆಸಲು ಮುಂದಾಗಿದೆ. ವಿಠ್ಠಲ ಗೌಡರ ಆರೋಪಗಳು ಹಾಗೂ ಬಂಗ್ಲೆಗುಡ್ಡದಲ್ಲಿ ವಾಮಾಚಾರ ನಡೆದಿರಬಹುದು ಎಂಬ ಶಂಕೆಯ ಮೇಲೆ ತನಿಖೆ ನಡೆಯಲಿದೆ. ಮಂತ್ರವಾದಿಗಳನ್ನು ವಿಚಾರಣೆ ನಡೆಸುವುದು ಸೇರಿದಂತೆ ತನಿಖೆ ವಿವಿಧ ದಿಕ್ಕುಗಳಲ್ಲಿ ಮುಂದುವರಿಯಲಿದೆ.

ಧರ್ಮಸ್ಥಳ ಬುರುಡೆ ಪ್ರಕರಣ ತನಿಖೆ ಚುರುಕು: ಮಂತ್ರವಾದಿಗಳ ಬೆನ್ನತ್ತಿದ ಎಸ್​​ಐಟಿ ಅಧಿಕಾರಿಗಳು!
ಧರ್ಮಸ್ಥಳ ಬುರುಡೆ ಪ್ರಕರಣ ತನಿಖೆ ಚುರುಕು
ಪೃಥ್ವಿರಾಜ್​ ಬಿ.ಯು. ಮಂಗಳೂರು
| Edited By: |

Updated on: Sep 15, 2025 | 2:06 PM

Share

ಮಂಗಳೂರು, ಸೆಪ್ಟೆಂಬರ್ 15: ಧರ್ಮಸ್ಥಳ ‘ಬುರುಡೆ’ ಪ್ರಕರಣದ (Dharmasthala Case) ತನಿಖೆ ಚುರುಕುಗೊಂಡಿದೆ. ಎಸ್ಐಟಿ (SIT) ಕಚೇರಿಗೆ ಭೇಟಿ ನೀಡಿದ್ದ ಮುಖ್ಯಸ್ಥ ಪ್ರಣಬ್ ಮೊಹಂತಿ ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಬಂಗ್ಲೆಗುಡ್ಡದಿಂದ (Banglegudda) ಬುರುಡೆ ತಂದಿದ್ದಾಗಿ ಸೌಜನ್ಯ ಮಾವ ವಿಠ್ಠಲಗೌಡ ಹೇಳಿದ್ದು, ಬಂಗ್ಲೆಗುಡ್ಡದಲ್ಲಿ ಶೋಧ ನಡೆಸುವ ಸಾಧ್ಯತೆ ಇದೆ. ಮಂಗಳವಾರವೇ ಬಂಗ್ಲೆಗುಡ್ಡದ ಇಂಚಿಂಚೂ ಶೋಧ ನಡೆಸುವ ಸಾಧ್ಯತೆ ಇದೆ. ಈ ಮಧ್ಯೆ ಎಸ್ಐಟಿ ಅಧಿಕಾರಿಗಳು ಮಂತ್ರಿವಾದಿಗಳ ಬೆನ್ನಟ್ಟಿದ್ದಾರೆ!

ಬಂಗ್ಲೆಗುಡ್ಡದಲ್ಲಿ ವಾಮಾಚಾರ ಮಾಡಿರುವ ಆರೋಪ

ಬಂಗ್ಲೆಗುಡ್ಡದಲ್ಲಿ ಹೆಣಗಳ ರಾಶಿಯೇ ಇದೆ ಎಂದಿದ್ದ ವಿಠ್ಠಲಗೌಡ ವಿಡಿಯೋ ಮಾಡಿ ಆರೋಪಿಸಿದ್ದರು. ಅಲ್ಲದೇ, ಬಂಗ್ಲೆಗುಡ್ಡದಲ್ಲಿ ವಾಮಾಚಾರ ಮಾಡಲಾಗಿದೆ ಎಂದೂ ಆರೋಪ ಮಾಡಿದ್ದರು. ಈ ವಿಚಾರವನ್ನು ಪ್ರಣಬ್ ಮೊಹಂತಿಯವರಿಗೂ ತಿಳಿಸಿದ್ದರು. ಹೀಗಾಗಿ ಎಸ್ಐಟಿ ಅಧಿಕಾರಿಗಳು, ಬೆಳ್ತಂಗಡಿ ಸುತ್ತಮುತ್ತ ವಾಮಾಚಾರ ಮಾಡುವವರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಧರ್ಮಸ್ಥಳ ಪೊಲೀಸರಿಗೆ ಹಾಗೂ ಬೆಳ್ತಂಗಡಿ ಪೊಲೀಸರಿಗೆ ಜವಾಬ್ದಾರಿ ವಹಿಸಲಾಗಿದ್ದು, ತಲೆಬುರುಡೆ ಇಟ್ಟುಕೊಂಡು ವಾಮಾಚಾರ ಮಾಡುವವರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಅಂಥವರು ಯಾರಾದರೂ ಸಿಕ್ಕಿದರೆ ಎಸ್ಐಟಿ ಠಾಣೆಗೆ ಕರೆಸಲು ಸೂಚನೆ ನೀಡಲಾಗಿದೆ.

ಬಂಗ್ಲೆಗುಡ್ಡದಲ್ಲಿ ಮಂಗಳವಾರ ಶೋಧ ಕಾರ್ಯ ನಡೆಯುವ ಸಾಧ್ಯತೆ ಇದೆ. ಇದಕ್ಕಾಗಿ ಗುಡ್ಡದಲ್ಲಿರುವ ಮರಗಳ ಸರ್ವೆ ಕಾರ್ಯ ನಡೆಸಲಿದ್ದು, ಎಷ್ಟು ಮರಗಳಿವೆ, ಮರದ ಅಂದಾಜು ವಯಸ್ಸೆಷ್ಟು ಎಂಬ ವರದಿ ಸಿದ್ಧಪಡಿಸಲು ಎಸ್ಐಟಿ ಅಧಿಕಾರಿಗಳು ಸೂಚಿಸಿದ್ದಾರೆ. ಹೀಗಾಗಿ ಇವತ್ತು ಬಂಗ್ಲೆಗುಡ್ಡ ಸುತ್ತ ಮುತ್ತಾ ಭದ್ರತೆ ಒದಗಿಸಲಾಗಿದೆ.

ಬಂಗ್ಲೆಗುಡ್ಡದಲ್ಲಿ ಉತ್ಖನನ ನಡೆಸಲು ವಿಠ್ಠಲಗೌಡ ತೋರಿಸುವ ಪಾಯಿಂಟ್ ಗುರುತು ಮಾಡಿ ಶೋಧ ಕಾರ್ಯ ನಡೆಸುವ ಸಾಧ್ಯತೆ ಇದೆ. ಇದರೊಂದಿಗೆ, ಧರ್ಮಸ್ಥಳ ಆಸುಪಾಸಿನಲ್ಲಿ ಮತ್ತೆ ಉತ್ಖನನ ನಡೆಯುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಮತ್ತೊಂದು ತಿರುವು: ಸ್ಫೋಟಕ ಅಂಶ ಬಿಚ್ಚಿಟ್ಟ ವಿಠಲ ಗೌಡ

ಮತ್ತೊಂದೆಡೆ, ಧರ್ಮಸ್ಥಳ ಗ್ರಾಮ ಪಂಚಾಯತ್‌ನ ಶವ ದಫನ ದಾಖಲೆಗಳ ಬಗ್ಗೆ ಎಸ್​ಐಟಿ ಈಗಾಗಲೇ ಮಾಹಿತಿ ಕಲೆ ಹಾಕಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶವಗಳ ದಫನದಲ್ಲೇ ಅಕ್ರಮ ಎಸಗಲಾಗಿದೆ ಎಂಬ ಆರೋಪ ಸಂಬಂಧವೂ ತನಿಖೆ ನಡೆಸುತ್ತಿದೆ. ಇದೀಗ ಮಾಟ-ಮಂತ್ರದ ದೃಷ್ಟಿಕೋನದಲ್ಲೂ ತನಿಖೆಗೆ ಮುಂದಾಗಿದೆ. ಒಟ್ಟಿನಲ್ಲಿ, ಬಂಗ್ಲೆಗುಡ್ಡ ಪ್ರದೇಶದಲ್ಲಿ ಮತ್ತೆ ಉತ್ಖನನ ಶುರು ಮಾಡಲಾಗುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ. ಸದ್ಯ ಎಸ್​​ಐಟಿ ಅಧಿಕಾರಿಗಳಿಗೆ ಯಾವ ರೀತಿ ತನಿಖೆ ಮುಂದುವರಿಸಬೇಕೆಂದು ಸೂಚನೆ ನೀಡಿರುವ ಪ್ರಣಬ್ ಮೊಹಂತಿ ಬೆಂಗಳೂರಿಗೆ ವಾಪಸಾಗಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ