ಹಿಜಾಬ್ ವಿವಾದ: ಕಾಲೇಜು ಯೂನಿಯನ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ವಿನ್ಯಾಸ್
ಇತ್ತೀಚೆಗೆ ನಡೆದ ಕೆಲ ಬೆಳವಣಿಗೆಗಳಿಂದ ಬೇಸತ್ತು ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದರು.
ಮಂಗಳೂರು: ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಹಿಜಾಬ್ ವಿವಾದ ಕುರಿತು ಪ್ರತಿಕ್ರಿಯಿಸಿರುವ ಕಾಲೇಜು ಯೂನಿಯನ್ ಅಧ್ಯಕ್ಷ ವಿನ್ಯಾಸ್, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಈ ಕುರಿತು ಟಿವಿ9 ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ‘ಇತ್ತೀಚೆಗೆ ನಡೆದ ಕೆಲ ಬೆಳವಣಿಗೆಗಳಿಂದ ಬೇಸತ್ತು ರಾಜೀನಾಮೆ ನೀಡುತ್ತಿದ್ದೇನೆ. ನಾನು ಹಿಜಾಬ್ ಪರ ಇರಲಿಲ್ಲ, ಪ್ರತಿಭಟನೆ ಬೇಡ ಎಂದು ಹೇಳಿದ್ದೆ. ನನ್ನ ಬಗ್ಗೆ ತಪ್ಪು ಕಲ್ಪನೆಯಿಂದ ನನ್ನ ವಿರುದ್ಧ ಪ್ರತಿಭಟನೆ ನಡೆದಿದೆ. ಈ ವಿಚಾರದಲ್ಲಿ ನಾನು ಬಲಿಪಶು ಆಗಿದ್ದೇನೆ ಎನ್ನಿಸುತ್ತಿದೆ’ ಎಂದು ಹೇಳಿದರು.
ಇದು ನನ್ನ ವೈಯಕ್ತಿಕ ನಿರ್ಧಾರ. ನನ್ನ ಸ್ನೇಹಿತರು ಇದಕ್ಕೆ ಒಪ್ಪುತ್ತಾರೆ. ಯಾರು ನನ್ನ ರಾಜೀನಾಮೆ ವಿರೋಧಿಸಬೇಡಿ. ನಾನು ಹಿಜಾಬ್ ಪರ ಇಲ್ಲ. ಹೀಗಾಗಲೇ ಎರಡು ವರ್ಷದಿಂದ ಕಾಲೇಜು ನಡೆದಿಲ್ಲ. ಈಗಲೂ ಸಮಸ್ಯೆಯಾದರೆ ತರಗತಿಗಳು ಮಿಸ್ ಆಗುತ್ತವೆ. ವಿದ್ಯಾರ್ಥಿಗಳ ಪರ ಹೋರಾಟದಲ್ಲಿ ಸದಾ ಇರುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು
ಮತ್ತೊಮ್ಮೆ ವಿವಾದದ ಕಿಡಿ
ಮೇ 10ರಂದು ಮಂಗಳೂರಿನ ವಿವಿ ಘಟಕ ಡಿಗ್ರಿ ಕಾಲೇಜಿನಲ್ಲಿ ಮತ್ತೊಮ್ಮೆ ಹಿಜಾಬ್ ವಿವಾದದ ಕಿಡಿ ಹೊತ್ತಿಕೊಂಡಿತ್ತು. ಪೋಷಕರ ಸಭೆಯಲ್ಲಿ ಹಿಜಾಬ್ ಧರಿಸದಂತೆ ಮೌಖಿಕವಾಗಿ ಸೂಚಿಸಲಾಗಿತ್ತು. ಆದರೆ ಕಾಲೇಜು ಆಡಳಿತ ಮಂಡಳಿ ಯಾವುದೇ ಆದೇಶ ಜಾರಿ ಮಾಡಿರಲಿಲ್ಲ. ಹಿಂದೂ ವಿದ್ಯಾರ್ಥಿಗಳು ಹೋರಾಟ ಆರಂಭಿಸಿದ ನಂತರ ಹಲವು ಬೆಳವಣಿಗೆಗಳು ನಡೆದವು.
ಮಂಗಳೂರಿನ ಹಂಪನಕಟ್ಟೆ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಂದರೆ ಕಾಲೇಜಿಗೆ ಸೇರಿಸುವುದಿಲ್ಲ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ. ಹಿಜಾಬ್ ವಿವಾದದ ಹಿಂದೆ ಹಲವು ಪಕ್ಷಗಳ ಕೈವಾಡ ಇದೆ. ಎಸ್ಡಿಪಿಐ, ಕಾಂಗ್ರೆಸ್, ಕಮ್ಯೂನಿಸ್ಟ್ ಪಕ್ಷಗಳ ಕೈವಾಡ ಇದೆ. ಹಿಜಾಬ್ ಮೂಲಕ ರಾಜ್ಯ ಸರ್ಕಾರಕ್ಕೆ ಮುಜುಗರ ತರುವ ಯತ್ನ ನಡೆಯುತ್ತಿದೆ. ಕಾನೂನು ಪಾಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇವೆ ಎಂದು ಹೇಳಿದ್ದರು. ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವ ಕುರಿತು ಪ್ರತಿಕ್ರಿಯಿಸಿದ್ದ ಅವರು, ಇದಕ್ಕೆ ಯಾರೂ ಅವಕಾಶ ಕೊಡಲು ಸಾಧ್ಯವಿಲ್ಲ ಎಂದಿದ್ದರು. ಹಿಜಾಬ್ ಧರಿಸಲು ಕೆಲ ಅಧ್ಯಾಪಕರ ಕುಮ್ಮಕ್ಕು ಇರುವ ಆರೋಪವಿದೆ. ಅಂಥವರ ವಿರುದ್ಧ ಕ್ರಮಕೈಗೊಳ್ಳುವಂತೆ ಇಲಾಖೆಗೆ ಸೂಚಿಸಿದ್ದೇವೆ. ಮಂಗಳೂರು ವಿವಿಯನ್ನು ಜೆಎನ್ಯು ರೀತಿ ಮಾಡಲು ಬಿಡಲ್ಲ. ನ್ಯಾಯಾಲಯ, ಕಾನೂನಿಗೆ ಗೌರವ ನೀಡಿ ಕಾಲೇಜಿಗೆ ಬನ್ನಿ. ಉಳಿದ ವಿಚಾರಗಳು ವಿದ್ಯಾರ್ಥಿಗಳ ಪೋಷಕರಿಗೆ ಬಿಟ್ಟಿದ್ದು ಎಂದು ಹೇಳಿದ್ದರು.
ತರಗತಿಗಳಲ್ಲಿ ಮಾತ್ರವಲ್ಲ, ಕ್ಯಾಂಪಸ್ನಲ್ಲೂ ಹಿಜಾಬ್ಗೆ ಅವಕಾಶ ಕೊಡುವುದಿಲ್ಲ ಎಂದು ಟಿವಿ9ಗೆ ಮಂಗಳೂರು ವಿವಿ ಕಾಲೇಜು ಪ್ರಾಂಶುಪಾಲರಾದ ಅನುಸೂಯ ರೈ ಸ್ಪಷ್ಟಪಡಿಸಿದರು. ನಮ್ಮಲ್ಲಿ 44 ಜನ ಮುಸ್ಲಿಂ ವಿದ್ಯಾರ್ಥಿನಿಯರಿದ್ದಾರೆ. ಕೆಲ ವಿದ್ಯಾರ್ಥಿಗಳಿಗೆ ಮಾತ್ರ ಈ ಆದೇಶದ ಬಗ್ಗೆ ಸಮಸ್ಯೆ ಇದೆ. ಅವರನ್ನು ಅವರ ಪೋಷಕರ ಮನವೊಲಿಸಲು ನಮಗೆ ಸಮಯ ಬೇಕು. ಅವರು ನ್ಯಾಯಾಲಯದ ಆದೇಶ ಆಡಳಿತ ಮಂಡಳಿಯಿಂದ ನಿಯಮವನ್ನು ಪಾಲಿಸಲೇ ಬೇಕು. ಆಡಳಿತ ಮಂಡಳಿ ಆದೇಶ ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ. ಅನೇಕ ಶಾಸಕರು ಕರೆ ಮಾಡಿದ್ದಾರೆ ನನಗೆ ಯಾರು ಒತ್ತಡ ಹಾಕಿಲ್ಲ. ಕೇವಲ ನಮ್ಮ ಆದೇಶದ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದು ಪ್ರಾಂಶುಪಾಲರಾದ ಅನುಸೂಯ ರೈ ತಿಳಿಸಿದರು.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:36 pm, Fri, 27 May 22