ಕುಕ್ಕೆ ಸುಬ್ರಹ್ಮಣ್ಯ ಠಾಣೆಗೆ ಟಾರ್ಪಲ್ ಹೊದಿಕೆ: ಎಂಜಿನಿಯರ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ತರಾಟೆ
ಈ ವೇಳೆ ಸೋರುತ್ತಿದ್ದ ಠಾಣೆಗೆ ಟಾರ್ಪಾಲ್ ಹೊದಿಕೆ ಇದ್ದುದು ಕಂಡು ಗೃಹ ಸಚಿವ ಆರಗ ಜ್ಞಾನೇಂದ್ರ ಅವಾಕ್ಕಾದರು.
ಮಂಗಳೂರು: ಕಡಬ ತಾಲ್ಲೂಕಿನ ಕುಕ್ಕೆ ಸುಬ್ರಹ್ಮಣ್ಯ ಠಾಣೆಗೆ ಸಚಿವ ಆರಗ ಜ್ಞಾನೇಂದ್ರ (Araga Jnanendra) ಸೋಮವಾರ ಭೇಟಿ ನೀಡಿದರು. ಈ ವೇಳೆ ಸೋರುತ್ತಿದ್ದ ಠಾಣೆಗೆ ಟಾರ್ಪಾಲ್ ಹೊದಿಕೆ ಇದ್ದುದು ಕಂಡು ಅವಾಕ್ಕಾದರು. ಕಟ್ಟಡ ನಿರ್ಮಾಣ ಕಾಮಗಾರಿ ವಿಳಂಬವಾಗಿರುವುದು ಗಮನಿಸಿ ಸಚಿವರು ಕಿಡಿಕಾರಿದರು. ಕಟ್ಟಡ ನಿರ್ಮಾಣ ಎಂಜಿನಿಯರ್ಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. ತಕ್ಷಣ ಸ್ಥಳಕ್ಕೆ ಬಂದು ಅಂದಾಜು ಪಟ್ಟಿ ತಯಾರಿಸಿ ಎಂದು ಸೂಚಿಸಿದರು. ಠಾಣೆಗೆ ಹೊಸ ಕಟ್ಟಡ ನಿರ್ಮಿಸಲು 2017ರಲ್ಲೇ ₹ 1.23 ಕೋಟಿ ಮೊತ್ತವನ್ನು ಸರ್ಕಾರ ಮೀಸಲಿಟ್ಟಿತ್ತು. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ನಂತರವೂ ಹಣ ಸಾಲದ ನೆಪವೊಡ್ಡಿ ಕಾಮಗಾರಿ ವಿಳಂಬ ಮಾಡಲಾಗುತ್ತಿತ್ತು. ಠಾಣೆಗೆ ಟಾರ್ಪಾಲ್ ಹೊದಿಸಿದ್ದು ಗಮನಿಸಿದ ನಂತರ ‘ನನಗೆ ನಾಚಿಕೆಯಾಗುತ್ತಿದೆ’ ಎಂದು ಹೇಳಿದ ಸಚಿವರು, ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಆರಂಭಿಸಬೇಕು ಎಂದು ತಾಕೀತು ಮಾಡಿದರು. ಇರುವ ಕಟ್ಟಡ ಕೆಡವಿ ಹೊಸ ಕಟ್ಟಡ ಕಟ್ಟುತ್ತೀರೋ, ಹೊಸ ಜಾಗದಲ್ಲಿಯೇ ಕಟ್ಟಡ ಕಟ್ಟುತ್ತೀರೋ ಏನು ಮಾಡ್ತೀರೋ ಮಾಡಿ ಎಂದು ತಾಕೀತು ಮಾಡಿದರು.
ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಅವರು, ಆಶ್ಲೇಷ ಬಲಿ ಪೂಜೆಯಲ್ಲಿ ಪಾಲ್ಗೊಂಡಿದ್ದರು. ತೀರ್ಥಹಳ್ಳಿಯ ಪುರುಷೋತ್ತಮ ಕೃಷಿ ಸಂಶೋಧನಾ ಪ್ರತಿಷ್ಠಾನ ವತಿಯಿಂದ ಆಶ್ಲೇಷ ಬಲಿ ಪೂಜೆ ನಡೆಯಿತು. ಗೃಹ ಸಚಿವ ಆರಗ ಜ್ಞಾನೇಂದ್ರ ಈ ಪ್ರತಿಷ್ಠಾನದ ಉಪಾಧ್ಯಕ್ಷರಾಗಿದ್ದಾರೆ. ಕ್ಷೇತ್ರಕ್ಕೆ ಆಗಮಿಸಿದ ಗೃಹ ಸಚಿವರಿಗೆ ಆಡಳಿತ ಮಂಡಳಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ ಸ್ವಾಗತಿಸಿದರು.
ಉದ್ಧವ್ ಉದ್ಧಟತನ
ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಉದ್ಧಟತನದಿಂದ ಎಂವಿಎ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಅದು ಅಲ್ಪಾಯುಷಿ ಮಗು ಎನ್ನುವುದು ಗೊತ್ತಿತ್ತು. ಈಗ ಹಾಗೆಯೇ ಆಗುತ್ತಿದೆ ಎಂದು ಹೇಳಿದರು. ಪ್ರತ್ಯೇಕ ರಾಜ್ಯದ ಕುರಿತು ಉಮೇಶ್ ಕತ್ತಿ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಉಮೇಶ್ ಕತ್ತಿ ಏಕೆ ಹೀಗೆ ಹೇಳಿದ್ದಾರೋ ಗೊತ್ತಿಲ್ಲ. ಇಂಥ ಹೇಳಿಕೆಗಳನ್ನು ಕೊಡಬಾರದು. ಉತ್ತರ ಕರ್ನಾಟಕ ಭಾಗದ ಸಚಿವರು ಬಿ.ಎಸ್.ಯಡಿಯೂರಪ್ಪ, ಬೊಮ್ಮಾಯಿ ಅವಧಿಯಲ್ಲಿ ಸಾಕಷ್ಟು ಅನುದಾನ ಪಡೆದಿದ್ದಾರೆ. ಎಲ್ಲರೂ ಆಶ್ವರ್ಯ ಅಭಿವೃದ್ಧಿ ಕಾಮಗಾರಿಗಳು ಆ ಭಾಗದಲ್ಲಿ ಆಗಿದೆ. ಹೀಗಾಗಿ ಉಮೇಶ್ ಕತ್ತಿ ತಮ್ಮ ಮಾತು ಮರುಪರಿಶೀಲಿಸಲಿ ಎಂದು ಹೇಳಿದರು.
ಅಗ್ನಿಪಥ್ ಯೋಜನೆಗೆ ಈಗಾಗಲೇ 50 ಲಕ್ಷ ಅರ್ಜಿ ಸಲ್ಲಿಕೆ ಆಗಿದೆ. ಯುವಕರು ಯಾರ ಹೇಳಿಕೆಗಳನ್ನೂ ಕೇಳದೆ ಯುವಕರು ಬರುತ್ತಿದ್ದಾರೆ. ಪಿಎಸ್ಐ ಅಕ್ರಮದಲ್ಲಿ ಪಾರದರ್ಶಕ ತನಿಖೆ ಆಗ್ತಿದೆ, ಬೇಗ ಮುಗಿಯುತ್ತದೆ. ಎಫ್ಎಸ್ಎಲ್ ವರದಿ ಬರುತ್ತದೆ, ಜೊತೆಗೆ ಬ್ಲೂಟೂತ್ ವಿಚಾರ ಪತ್ತೆ ಸ್ವಲ್ಪ ತಡವಾಗುತ್ತಿದೆ. ಅನ್ನು ಪತ್ತೆ ಮಾಡುವುದು ಕಷ್ಟ. ಟವರ್ ಲೊಕೇಶನ್ ಪರಿಶೀಲಿಸಬೇಕಿದೆ. 54 ಸಾವಿರ ಜನರಿಗೆ ಹೊಸದಾಗಿ ಪರೀಕ್ಷೆ ಮಾಡುತ್ತೇವೆ. ತಪ್ಪು ಮಾಡಿದ ಡಿವೈಎಸ್ಪಿ ಯೂನಿಫಾರಂ ಕಳಚಿ ಲಾಕಪ್ಗೆ ತಳ್ಳಿದ್ದೇವೆ ಎಂದರು.