
ಮಂಗಳೂರು, ಡಿಸೆಂಬರ್ 22: ಬಂಟ್ವಾಳ (Bantwal) ತಾಲೂಕಿನ ಕೇಪು ಗ್ರಾಮದ ಉಳ್ಳಾಲ್ತಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜಾತ್ರೆ ಹಿನ್ನೆಲೆ ಕೋಳಿ ಅಂಕ ನಡೆಯುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು ಪುತ್ತೂರಿನ ಬಿಜೆಪಿ ಮಾಜಿ ಶಾಸಕ ಸಂಜೀವ ಮಠಂದೂರು, ಜಿಲ್ಲಾ ಬಿಜೆಪಿ (BJP) ಅಧ್ಯಕ್ಷ ಸತೀಶ್ ಕುಂಪಲ ಸೇರಿದಂತೆ 27 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಕ್ರಮವಾಗಿ ಕೋಳಿ ಅಂಕ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ, ಇನ್ಸ್‌ಪೆಕ್ಟರ್ ನೇತೃತ್ವದ ಪೊಲೀಸ್ ತಂಡ ಭಾನುವಾರ ದಾಳಿ ನಡೆಸಿದೆ. ದಾಳಿಯ ವೇಳೆ ಸುಮಾರು 20 ಕೋಳಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಕೋಳಿ ಅಂಕ ನಿಷೇಧದ ಬಗ್ಗೆ ಅಲ್ಲಿದ್ದವರಿಗೆ ಮಾಹಿತಿ ನೀಡಿದ್ದರೂ, ಸ್ಥಳದಲ್ಲಿದ್ದವರು ಅಲ್ಲಿಂದ ತೆರಳಲು ಹಿಂದೇಟು ಹಾಕಿದ್ದಾರೆ.
ಸ್ಥಳದಲ್ಲಿದ್ದ ಮಾಜಿ ಶಾಸಕ ಸಂಜೀವ ಮಠಂದೂರು, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಮುರಳೀಧರ ಪೈ, ದಯಾನಂದ ಉಜಿರೆಮಾರು, ಹರಿಪ್ರಸಾದ್ ಯಾದವ್, ವಿಟ್ಲದ ಅಶೋಕ್ ಶೆಟ್ಟಿ, ರಾಜೇಶ್ ಬಾಳೆಕಲ್ಲು ಹುಂಜ ಕಾದಾಟ ಮುಂದುವರಿಸುವಂತೆ ಜನರನ್ನು ಪ್ರಚೋದಿಸಿದ್ದಾರೆ ಎಂಬ ಆರೋಪವಿದೆ. ಇದರಂತೆ, ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್), 2023 ರ ಸೆಕ್ಷನ್ 189(2), 49, 221, 223, ಮತ್ತು 190 ಮತ್ತು ಪ್ರಾಣಿ ಹಿಂಸೆ ತಡೆ ಕಾಯ್ದೆಯ ಸೆಕ್ಷನ್ 3 ಮತ್ತು 11 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದೇ ಸ್ಥಳದಲ್ಲಿ ಕೋಳಿ ಅಂಕ ನಡೆಸಿದ್ದಕ್ಕಾಗಿ ಪುತ್ತೂರು ಶಾಸಕ ಅಶೋಕ್ ರೈ ಮತ್ತು ಇತರ 16 ಜನರ ವಿರುದ್ಧ ಶನಿವಾರ ಎಫ್ಐಆರ್ ದಾಖಲಿಸಲಾಗಿತ್ತು. ಕೇಪು ಉಳ್ಳಾಲ್ತಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜಾತ್ರೆ ಪ್ರಯುಕ್ತ ವರ್ಷಕ್ಕೊಮ್ಮೆ ಕೋಳಿ ಅಂಕ ನಡೆಯುತ್ತದೆ. ಕೇವಲ ಜಾತ್ರೆ ಸಂದರ್ಭದ ಸಂಪ್ರದಾಯ ಎಂಬ ಕಾರಣಕ್ಕೆ ಜೂಜು ಕಟ್ಟದೆ ಕೋಳಿ ಅಂಕ ನಡೆಸಲಾಗುತ್ತದೆ.
ಇದನ್ನೂ ಓದಿ: ಕೋಳಿ ಕಾಳಗಕ್ಕೆ ಪೊಲೀಸ ನಿರ್ಬಂಧ: ತಾವೇ ಮುಂದೆ ನಿಂತು ಕೋಳಿ ಅಂಕ ಮಾಡಿಸಿದ ಕಾಂಗ್ರೆಸ್ ಶಾಸಕ
ಸಂಪ್ರದಾಯಕ್ಕಾಗಿ ಕೋಳಿ ಅಂಕ ಮಾಡಲಾಗುತ್ತದೆ. ಜಾತ್ರೆ ಸಂದರ್ಭ ಮಾತ್ರ ಇದು ನಡೆಯುತ್ತದೆ ಬಿಟ್ಟರೆ ಉಳಿದಂತೆ ಇರುವುದಿಲ್ಲ ಎಂದು ಕಾಂಗ್ರೆಸ್ ಶಾಸಕ ಪೊಲೀಸರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಅಲ್ಲದೆ, ಸ್ಥಳೀಯರಿಗೆ ಕೋಳಿ ಅಂಕ ಮುಂದುವರಿಸುವಂತೆ ತಿಳಿಸಿದ್ದರು. ಅದರ ಬೆನ್ನಲ್ಲೇ ಪೊಲೀಸರು ಶಾಸಕರು ಸೇರಿದಂತೆ ಇತರರ ವಿರುದ್ಧ ಕೇದ್ ದಾಖಲಿಸಿದ್ದರು.
ಸದ್ಯ ಕೋಳಿ ಅಂಕ ವಿಚಾರ ರಾಜಕೀಯ ತಿರುವು ಪಡೆದುಕೊಳ್ಳುವ ಲಕ್ಷಣ ಕಾಣಿಸಿದೆ. ಹಿಂದೂಗಳ ಧಾರ್ಮಿಕ ಆಚರಣೆಗಳಿಗೆಲ್ಲ ಕಾಂಗ್ರೆಸ್ ಸರ್ಕಾರ ಕಾನೂನಿನ ನೆಪವೊಡ್ಡಿ ತಡೆಯೊಡ್ಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ