ಮೆಕ್ಕೆಜೋಳ, ಹೆಸರು ಕಾಳಿಗೆ ಬೆಲೆ ನಿಗದಿಗೆ ಆಗ್ರಹಿಸಿ ಪ್ರಧಾನಿಗೆ ಕರ್ನಾಟಕದಿಂದ ಮನವಿ
ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡುವ ಹಿನ್ನಲೆ ಮಂಗಳೂರು ಏರ್ಪೋರ್ಟ್ಗೆ ಆಗಮಿಸಿದ್ದ ಪ್ರಧಾನಿಗೆ ಸಚಿವ ದಿನೇಶ್ ಗುಂಡೂರಾವ್ ಮನವಿಯೊಂದನ್ನು ಸಲ್ಲಿಕೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಬದಲಿಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಪ್ರಧಾನಿಗೆ ಪತ್ರ ನೀಡಿದ್ದಾರೆ. ಅಷ್ಟಕ್ಕೂ ಪ್ರಧಾನಿಗೆ ಸಚಿವರು ನೀಡಿರುವ ಆ ಮನವಿಯಲ್ಲಿ ಏನಿದೆ? ಎಂಬ ಮಾಹಿತಿ ಇಲ್ಲಿದೆ.

ಮಂಗಳೂರು/ಬೆಂಗಳೂರು, ನವೆಂಬರ್ 28: ಕರ್ನಾಟಕದಲ್ಲಿ ಮೆಕ್ಕೆಜೋಳ, ಹೆಸರು ಕಾಳು ಮತ್ತು ಬೇಳೆಗಳ ದರ ನಿಗದಿಗೆ ಆಗ್ರಹಿಸಿ ಕರ್ನಾಟಕದಿಂದ ಪ್ರಧಾನಿ ಮೋದಿಗೆ ಮನವಿ ಸಲ್ಲಿಸಲಾಗಿದೆ. ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡುವ ಹಿನ್ನಲೆ ಮಂಗಳೂರು ಏರ್ಪೋರ್ಟ್ಗೆ ಆಗಮಿಸಿದ್ದ ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ಪರವಾಗಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮನವಿ ಸಲ್ಲಿಸಿದ್ದಾರೆ.
ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ ಪ್ರತಿ ಮೆಟ್ರಿಕ್ ಟನ್‌ಗೆ 2,400 ರೂ. ಮತ್ತು ಹೆಸರು ಕಾಳಿಗೆ ಪ್ರತಿ ಮೆಟ್ರಿಕ್ ಟನ್‌ಗೆ 8,768 ರೂ. ರಂತೆ ಎಂಎಸ್ಪಿ ಘೋಷಿಸಿದೆ. ಆದರೆ ಕರ್ನಾಟಕದಲ್ಲಿ ಪ್ರಸ್ತುತವಾಗಿ ಮೆಕ್ಕೆಜೋಳಕ್ಕೆ ಪ್ರತಿ ಮೆಟ್ರಿಕ್ ಟನ್‌ಗೆ 1600-1800 ರೂ. ಮತ್ತು ಹೆಸರು ಕಾಳಿಗೆ ಪ್ರತಿ ಮೆಟ್ರಿಕ್ ಟನ್‌ಗೆ 5,400 ರೂ. ಬೆಲೆ ಇದೆ. ಕರ್ನಾಟಕದಲ್ಲಿ ಪ್ರಸ್ತುತ ಮಾರಾಟವಾಗಲು ಅಂದಾಜು 32 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಮೆಕ್ಕೆಜೋಳ ಲಭ್ಯವಿದ್ದು, ಈ ವಿಚಾರದಲ್ಲಿ ಭಾರತ ಸರ್ಕಾರದ ತಕ್ಷಣವೇ ಮಧ್ಯಪ್ರವೇಶ ಮಾಡಿ ದರ ನಿಗದಿ ಮಾಡಬೇಕು ಎಂದು ಆಗ್ರಹಿಸಲಾಗಿದೆ.
ಇದನ್ನೂ ಓದಿ: ರಾಮ ಮಂದಿರ ಆಂದೋಲನದಲ್ಲಿ ಉಡುಪಿ ಪಾತ್ರ ಸ್ಮರಿಸಿದ ಮೋದಿ
ಪ್ರಧಾನಿ ಬಳಿ ಏನೆಲ್ಲ ಆಗ್ರಹ?
- ನಾಫೆಡ್, ಎಫ್ಸಿಐ ಮತ್ತು ಎನ್ಸಿಸಿಎಫ್ಗಳಿಗೆ ಎಂಎಸ್ಪಿಯಲ್ಲಿ ವಿಳಂಬವಿಲ್ಲದೇ ಸಂಗ್ರಹಣೆ ಪ್ರಾರಂಭಿಸಲು ನಿರ್ದೇಶಿಸಬೇಕು
- ಎಥನಾಲ್ ಪೂರೈಕೆ ಸರಪಳಿಯಲ್ಲಿ ಕರ್ನಾಟಕದ ರೈತರ ನ್ಯಾಯಯುತ ಭಾಗವಹಿಸುವಿಕೆಯನ್ನು ಖಚಿತಪಡಿಸಬೇಕು
- ಮೆಕ್ಕೆಜೋಳದಿಂದ ಉತ್ಪಾದಿಸುವ ಎಥನಾಲ್‌ಗೆ ಪ್ರೋತ್ಸಾಹಧನ ಪಾವತಿಸಬೇಕು
- ಕೇಂದ್ರ ಸರ್ಕಾರವು ಎಥನಾಲ್ ಘಟಕಗಳಿಗೆ ರೈತರಿಂದ ಅಥವಾ ರೈತ ಉತ್ಪಾದಕ ಸಂಸ್ಥೆಗಳಿಂದ ನೇರವಾಗಿ ಮೆಕ್ಕೆಜೋಳವನ್ನು ಸಂಗ್ರಹಿಸಲು ನಿರ್ದೇಶಿಸಬೇಕು
- ನೇರ ಸಂಗ್ರಹಣೆಯನ್ನು ಖಚಿತಪಡಿಸದಿದ್ದರೆ ಎಥನಾಲ್ ಉತ್ಪಾದಕರಿಗೆ ನೀಡುವ ಪ್ರೋತ್ಸಾಹಕವನ್ನು ಮರು ಪರಿಶೀಲಿಸಬೇಕು
- ಕರ್ನಾಟಕದ ಎಥನಾಲ್ ಹಂಚಿಕೆಯನ್ನು ಹೆಚ್ಚಿಸಬೇಕು
- ಮೆಕ್ಕೆಜೋಳದ ಆಮದು ತಕ್ಷಣ ತಡೆಹಿಡಿಯಬೇಕು
- ಹೆಸರು ಕಾಳು ಸಂಗ್ರಹಣೆಗಾಗಿ ಗುಣಮಟ್ಟದ ಮಾನದಂಡಗಳನ್ನು ಸಡಿಲಿಕೆ ಮಾಡಬೇಕು
- ಶೇ. 10ರಷ್ಟು ಬಣ್ಣಗುಂದಿದ ಹೆಸರು ಕಾಳನ್ನು ಎಂಎಸ್ಪಿ ಅಡಿಯಲ್ಲಿ ಸಂಗ್ರಹಿಸಲು ಅವಕಾಶ ನೀಡುವಂತೆ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರಿಗೆ ನಿರ್ದೇಶನ ನೀಡಬೇಕು
ಎಮ್ಮೆಗೆ ಸಿಎಂ ಫೋಟೋ ಕಟ್ಟಿ ಆಕ್ರೋಶ
ಮೆಕ್ಕೆ ಜೋಳ ಖರೀದಿ ಕೇಂದ್ರ ಒಪನ್ ಮಾಡದ ಸರ್ಕಾರದ ವಿರುದ್ಧ ಗದಗ ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ಧರಣಿ ಸತ್ಯಾಗ್ರಹ ನಡೆಸಲಾಗಿದೆ. ಮಹಾತ್ಮಾ ಗಾಂಧಿ ವೃತ್ತದ ಬಳಿ ಎಮ್ಮೆಗೆ ಸಿಎಂ ಫೋಟೋ ಕಟ್ಟಿ , ಕೃಷಿ ಸಚಿವ ಚಲುವರಾಯಸ್ವಾಮಿ ಭಾವಚಿತ್ರ ಸುಟ್ಟು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರ ಹಂಚಿಕೆಯಲ್ಲಿ ಮುಳುಗಿರುವ ಸರ್ಕಾರದಿಂದ ರೈತರ ಕಡೆಗಣನೆ ಮಾಡಲಾಗುತ್ತಿದೆ. ಭರವಸೆ ನೀಡಿದಂತೆ ಖರೀದಿ ಕೇಂದ್ರ ಒಪನ್ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:58 pm, Fri, 28 November 25




