ಕುದ್ಮುಲ್ ರಂಗರಾವ್ ಕನಸಿಗೆ ತೊಡಕು: ಯೋಜನೆಗಳಿದ್ದರೂ ನೆರವೇರದ ಕೊರಗ ಸಮುದಾಯದ ‘ಸೂರು’ ಕಲ್ಪನೆ

ಕರಾವಳಿಯ ಕೊರಗ ಸಮುದಾಯಕ್ಕೆ ವಸತಿ ದೊಡ್ಡ ಸವಾಲಾಗಿದೆ. ಸರ್ಕಾರದ PM Janman, ರಾಜೀವ್ ಗಾಂಧಿ ವಸತಿ ಯೋಜನೆಗಳಿದ್ದರೂ, ಮನೆ ನಿರ್ಮಾಣಕ್ಕೆ ಲಭ್ಯವಿರುವ 4.5 ಲಕ್ಷ ರೂ. ಅಸಮರ್ಪಕ. ನಿರಕ್ಷರತೆ, ಆನ್‌ಲೈನ್ ನಿಯಮಗಳು, CIBIL ಸಮಸ್ಯೆಗಳು, ಹಳೆಯ ಜಮೀನು ದಾಖಲೆಗಳು, ಕಟ್ಟಡ ಸಾಮಗ್ರಿಗಳ ಬೆಲೆ ಏರಿಕೆ ಮನೆಗಳನ್ನು ಪೂರ್ಣಗೊಳಿಸಲು ಅಡ್ಡಿಯಾಗಿವೆ. ಉಡುಪಿಯಲ್ಲಿ ಹೆಗ್ಗುಂಜೆ ರಾಜು ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಉಚಿತ ಮನೆಗಳ ನಿರ್ಮಾಣ ಮಾದರಿ ಭರವಸೆ ಮೂಡಿಸಿದೆ.

ಕುದ್ಮುಲ್ ರಂಗರಾವ್ ಕನಸಿಗೆ ತೊಡಕು: ಯೋಜನೆಗಳಿದ್ದರೂ ನೆರವೇರದ ಕೊರಗ ಸಮುದಾಯದ ಸೂರು ಕಲ್ಪನೆ
ಬುಡಕಟ್ಟು ಅಭಿವೃದ್ಧಿ, ಕೊರಗರಿಗೆ ಮನೆ
Edited By:

Updated on: Sep 14, 2026 | 12:25 PM

ಮಂಗಳೂರು, ಸೆ.14: ಅಸ್ಪೃಶ್ಯತೆ ಹಾಗೂ ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಡಿದ್ದ ಮಹಾನ್ ಸಮಾಜ ಸುಧಾರಕ ಕುದ್ಮುಲ್ ರಂಗರಾವ್ ಅಂದಿನ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಅತ್ಯಂತ ಹಿಂದುಳಿದ ಕೊರಗ ಸಮುದಾಯಕ್ಕೆ ಸೂರು ಮತ್ತು ಶಿಕ್ಷಣ ನೀಡಲು ನೂರು ವರ್ಷಗಳ ಹಿಂದೆಯೇ ಜಮೀನು ಖರೀದಿಸಿ ಕ್ರಾಂತಿ ಮಾಡಿದ್ದರು. ಆದರೆ, ಶತಾಬ್ದಿಯ ನಂತರವೂ ‘ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪು’ (PVTG) ವ್ಯಾಪ್ತಿಗೆ ಸೇರುವ ಕೊರಗ ಕುಟುಂಬಗಳು ಸ್ವಂತ ಸೂರನ್ನು ಹೊಂದುವ ಮೂಲಭೂತ ಹಕ್ಕಿಗಾಗಿ ಇಂದಿಗೂ ಹೋರಾಡುತ್ತಿರುವುದು ಕರಾವಳಿಯ ಕಟು ವಾಸ್ತವದ ಬಗ್ಗೆ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯನ್ನು ಮಾಡಿದೆ.

ಸರ್ಕಾರಿ ದಾಖಲೆಗಳಲ್ಲಿ ವಸತಿ ಯೋಜನೆಗಳು ಕೊರಗರ ಮನೆಬಾಗಿಲಿಗೆ ತಲುಪಿದ್ದರೂ, ಕಾರ್ಯರೂಪದಲ್ಲಿ ಫಲಾನುಭವಿಗಳಿಗೆ ಪೂರ್ಣ ಪ್ರಮಾಣದ ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಿರಕ್ಷರತೆ, ಜಾಗೃತಿಯ ಕೊರತೆ, ಹಣದುಬ್ಬರ ಹಾಗೂ ಕಟ್ಟಡ ಸಾಮಗ್ರಿಗಳ ಬೆಲೆ ಏರಿಕೆಯಿಂದಾಗಿ ಇಂದಿಗೂ ಅನೇಕರ ಮನೆಗಳು ತಳಪಾಯಕ್ಕೆ ಸೀಮಿತವಾಗಿ ಅರ್ಧಕ್ಕೆ ನಿಂತಿವೆ.

ಹೆಚ್ಚಿದ ನೆರವು, ಬದಲಾಗದ ವಾಸ್ತವ: ಅರ್ಧಕ್ಕೆ ನಿಂತ ಮನೆಗಳು

ಕೇಂದ್ರ ಸರ್ಕಾರದ ಪಿಎಂ ಜನ್‌ಮನ್ ಹಾಗೂ ರಾಜ್ಯದ ರಾಜೀವ್ ಗಾಂಧಿ ವಸತಿ ನಿಗಮದ ಜಂಟಿ ಸಹಯೋಗದೊಂದಿಗೆ ಕೊರಗ ಕುಟುಂಬಗಳಿಗೆ ನೀಡಲಾಗುತ್ತಿದ್ದ ವಸತಿ ಸಹಾಯಧನವನ್ನು 2.10 ಲಕ್ಷ ರೂ.ಗಳಿಂದ 4.50 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಆದರೆ ಜಮೀನಿನಲ್ಲಿ ಮನೆಗಳ ನಿರ್ಮಾಣ ಪ್ರಕ್ರಿಯೆ ವೇಗ ಪಡೆದುಕೊಂಡಿಲ್ಲ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಮಲವೂರು ಗ್ರಾಮದ ಗುಂಡಪದವಿನಲ್ಲಿ 50 ವರ್ಷದ ಸುಂದರಿ ಎಂಬುವವರ ಕುಟುಂಬಕ್ಕೆ ದಶಕದ ಹಿಂದೆ ಆರ್‍ಜಿಹೆಚ್‌ಸಿಎಲ್ ಅಡಿಯಲ್ಲಿ ಮನೆ ಮಂಜೂರಾಗಿತ್ತು. ತಳಪಾಯ ಹಾಗೂ ಗೋಡೆ ಎಬ್ಬಿಸಿದ ನಂತರ ಅವರ ಪತಿಗೆ ಅಪಘಾತವಾಗಿ ಕಸಬು ಸ್ಥಗಿತಗೊಂಡಿತು. ಬಂದ 1.50 ಲಕ್ಷ ರೂ. ಕಂತಿನ ಹಣ ಸಾಲದೆ, ಇಂದಿಗೂ ಆ ಮನೆ ಪಾಚಿ ಹಿಡಿದು ಅರ್ಧಕ್ಕೆ ನಿಂತಿದೆ. ಸನ್ನದು (ಹಕ್ಕುಪತ್ರ) ಇಲ್ಲದ ಕಾರಣಕ್ಕೆ ದಿನಗೂಲಿ ನೌಕರ ಅಣ್ಣು ಎಂಬುವವರು ಸರ್ಕಾರಿ ಯೋಜನೆಯಿಂದ ವಂಚಿತರಾಗಿದ್ದಾರೆ. ತಂದೆ ಬುಡಾ ಅವರ ಹೆಸರಿನಲ್ಲಿದ್ದ ಜಮೀನಿನಲ್ಲಿ ಸ್ವಂತ ಹಣ ಹಾಕಿ ತಳಪಾಯ ಹಾಕಿದ ತಂಗಿಯಂದಿರಾದ ರಾಗಿಣಿ ಮತ್ತು ಸೌಮ್ಯ, ಸರ್ಕಾರದ ಸಬ್ಸಿಡಿ ಹಣ ಪೂರ್ಣ ಮನೆಗೆ ಸಾಲದೇನೋ ಎಂಬ ಆತಂಕದಲ್ಲಿದ್ದಾರೆ.

ಅಡಚಣೆಗಳ ಸರಮಾಲೆ: ‘ಆನ್‌ಲೈನ್ ನಿಯಮ ಮತ್ತು CIBIL ಸಮಸ್ಯೆ’

ಕೊರಗ ಸಮುದಾಯದ ಬಜಪೆ ಪಟ್ಟಣ ಪಂಚಾಯತ್ ಪ್ರತಿನಿಧಿ ಕಿರಣ್ ರಾಜ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೊರಗರ ಸಂಘದ ಅಧ್ಯಕ್ಷ ಎಂ. ಸುಂದರ ಬೆಳ್ವಾಯಿ ಅವರು ಕೊರಗರ ಮನೆ ನಿರ್ಮಾಣಕ್ಕೆ ಇರುವ ತೊಡಕುಗಳನ್ನು ವಿವರಿಸಿದ್ದಾರೆ. ಆನ್‌ಲೈನ್ ಅರ್ಜಿ, ಜಿಯೋ-ಟ್ಯಾಗಿಂಗ್ ನಿಯಮಗಳು ಅಕ್ಷರಸ್ಥರಲ್ಲದ ಕೊರಗರಿಗೆ ಕಷ್ಟಕರವಾಗಿವೆ. ಮೊಬೈಲ್ ಅಥವಾ ಸಣ್ಣಪುಟ್ಟ ಸಾಲಗಳ ಬಾಕಿಯಿಂದಾಗಿ ಬ್ಯಾಂಕುಗಳು ಇವರಿಗೆ ಗೃಹ ಸಾಲ ನೀಡಲು ನಿರಾಕರಿಸುತ್ತಿವೆ.

ಪೋಷಕರ ಮರಣದ ನಂತರ ತಲೆಮಾರಿನ ಜಮೀನು ದಾಖಲೆಗಳು ಮೃತರ ಹೆಸರಲ್ಲೇ ಉಳಿದಿರುವುದು ಇನ್ನೊಂದು ತೊಡಕು. ಇಲಾಖೆಯ ವರದಿ ಪ್ರಕಾರ ಪ್ರಸ್ತುತ 300 ಚದರಡಿಯ ಸಣ್ಣ ಮನೆ ನಿರ್ಮಿಸಲು ಕನಿಷ್ಠ 8 ಲಕ್ಷ ರೂ. ವೆಚ್ಚವಾಗುತ್ತದೆ. ಆದರೆ ಸಿಗುವ 4.50 ಲಕ್ಷ ರೂ. ಸಬ್ಸಿಡಿ ಇದಕ್ಕೆ ತೀರಾ ಅಪೂರ್ಣವಾಗಿದೆ. ಪ್ರಸ್ತುತ ದಕ್ಷಿಣ ಕನ್ನಡ ಐಟಿಡಿಪಿ ಇಲಾಖೆಗೆ ಸಲ್ಲಿಕೆಯಾಗಿದ್ದ 170 ಅರ್ಜಿಗಳಲ್ಲಿ ಶೇ. 30ರಷ್ಟು ಮನೆಗಳ ಕಾಮಗಾರಿ ಮಾತ್ರ ಪ್ರಾರಂಭವಾಗಿದ್ದು, ಕೇವಲ ಶೇ. 5ರಷ್ಟು ಮನೆಗಳು ಪೂರ್ಣಗೊಂಡಿವೆ.

ಇದನ್ನೂ ಓದಿ: ನಿಮ್ಮ ಏರಿಯಾದಲ್ಲಿ ಗಣೇಶ ವಿಸರ್ಜನೆ ಎಲ್ಲಿ ಮಾಡಬೇಕು?: 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕ್ ಹಾಗೂ 122 ಏಕಗವಾಕ್ಷಿ ಕೇಂದ್ರಗಳ ಸ್ಥಾಪನೆ

ಅಧಿಕಾರಿಗಳ ನಡೆ ಹಾಗೂ ‘ಉಡುಪಿ ಮಾಡೆಲ್’ ಭರವಸೆ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿಇಒ ನಾರ್ವಡೆ ವಿನಾಯಕ್ ಕರ್ಭಾರಿ ಅವರು ಮಾತನಾಡಿ, ಫಲಾನುಭವಿಗಳ ನೇರ ನಗದು ವರ್ಗಾವಣೆ ನಿಯಮವಿರುವುದರಿಂದ ಖಾಸಗಿ ಬಿಲ್ಡರ್‌ಗಳಿಗೆ ನೇರ ಹಣ ನೀಡಲು ಬರುವುದಿಲ್ಲ, ಹೀಗಾಗಿ ಸರ್ಕಾರೇತರ ಸಂಸ್ಥೆಗಳ ಸಹಯೋಗ ಪಡೆಯುವ ಕುರಿತು ಚಿಂತಿಸಲಾಗುತ್ತಿದೆ ಎಂದರು. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ದೀಶಾ ಸಭೆಯಲ್ಲಿ ಕೊರಗರ ಸಂಖ್ಯೆ ಕ್ಷೀಣಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ, ಪಿಎಂ ಜನ್‌ಮನ್ ಸಬ್ಸಿಡಿ ಹೆಚ್ಚಿಸಲು ಕೇಂದ್ರಕ್ಕೆ ಮನವಿ ಮಾಡುವುದಾಗಿ ತಿಳಿಸಿದರು.

ಉಡುಪಿಯಲ್ಲಿ ಹೆಗ್ಗುಂಜೆ ರಾಜು ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ತನ್ನ ಸ್ವಂತ ವೆಚ್ಚದಲ್ಲಿ ಕೊರಗರಿಗೆ 30ಕ್ಕೂ ಹೆಚ್ಚು ಉಚಿತ ಮನೆಗಳನ್ನು ನಿರ್ಮಿಸಿಕೊಟ್ಟಿದ್ದು, ಕೋಟ ಗ್ರಾಮೀಣ ಪಂಚಾಯತ್ ಸಿಎಸ್ಆರ್ ಅನುದಾನ ಬಳಸಿ ನೆರವಾಗಿದೆ. ಉಡುಪಿಯಲ್ಲಿ ಇದೇ ಮಾದರಿಯಲ್ಲಿ ಇನ್ನೂ 150 ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 11:32 am, Mon, 14 September 26

Loading...
Unable to load recommendations.
Follow Us