AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಏರಿಯಾದಲ್ಲಿ ಗಣೇಶ ವಿಸರ್ಜನೆ ಎಲ್ಲಿ ಮಾಡಬೇಕು?: 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕ್ ಹಾಗೂ 122 ಏಕಗವಾಕ್ಷಿ ಕೇಂದ್ರಗಳ ಸ್ಥಾಪನೆ

ಬೆಂಗಳೂರು ಗಣೇಶ ಚತುರ್ಥಿ ಆಚರಣೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಸಿದ್ಧವಾಗಿದೆ. ಪರಿಸರ ಸ್ನೇಹಿ ಗಣೇಶ ವಿಸರ್ಜನೆಗೆ 42 ತಾತ್ಕಾಲಿಕ ಕಲ್ಯಾಣಿಗಳು, 659 ಸಂಚಾರಿ ಟ್ಯಾಂಕ್‌ಗಳನ್ನು ಒದಗಿಸಲಾಗಿದೆ. ಸಾರ್ವಜನಿಕ ಮಂಡಳಿಗಳಿಗೆ 122 ಏಕಗವಾಕ್ಷಿ ಅನುಮತಿ ಕೇಂದ್ರಗಳಿವೆ. ವಿಸರ್ಜನಾ ಸ್ಥಳಗಳ ಮಾಹಿತಿಗಾಗಿ ಡಿಜಿಟಲ್ ಪ್ಲಾಟ್‌ಫಾರ್ಮ್ ಲಭ್ಯವಿದ್ದು, PoP ಮೂರ್ತಿಗಳಿಗೆ ಸಂಪೂರ್ಣ ನಿಷೇಧವಿದೆ.

ನಿಮ್ಮ ಏರಿಯಾದಲ್ಲಿ ಗಣೇಶ ವಿಸರ್ಜನೆ ಎಲ್ಲಿ ಮಾಡಬೇಕು?: 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕ್ ಹಾಗೂ 122 ಏಕಗವಾಕ್ಷಿ ಕೇಂದ್ರಗಳ ಸ್ಥಾಪನೆ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Sep 14, 2026 | 9:22 AM

Share

ಬೆಂಗಳೂರು, ಸೆ.14: ರಾಜಧಾನಿಯಲ್ಲಿ ಗಣೇಶ ಚತುರ್ಥಿ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಯನ್ನು ಅತ್ಯಂತ ಸುಸೂತ್ರವಾಗಿ ನಿರ್ವಹಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ನಗರ ಪಾಲಿಕೆಗಳು ಬೃಹತ್ ಪೂರ್ವಸಿದ್ಧತೆಗಳನ್ನು ಮಾಡಿಕೊಂಡಿವೆ. ನಗರದಲ್ಲಿ ನೈರ್ಮಲ್ಯ ಮತ್ತು ಸುಗಮ ಸಾರಿಗೆ ನಿರ್ವಹಣೆಗೆ ಆದ್ಯತೆ ನೀಡಿರುವ ಪ್ರಾಧಿಕಾರವು, ಪರಿಸರ ಸ್ನೇಹಿ ಆಚರಣೆಗೆ ಸಾರ್ವಜನಿಕರಿಂದ ಪೂರ್ಣ ಸಹಕಾರವನ್ನು ಕೋರಿದೆ. ಬೆಂಗಳೂರಿನ ಮನೆ ಮನೆಗಳಲ್ಲಿ ಹಾಗೂ ಗಲ್ಲಿಗಳಲ್ಲಿ ಗಣೇಶನ್ನು ಇಡಲಾಗುತ್ತದೆ. ಈ ಸಂದರ್ಭದಲ್ಲಿ ಗಣಪತಿ ವಿಸರ್ಜನೆಗೆ ಕೆಲವೊಂದು ನಿಯಮಗಳನ್ನು ಹಾಗೂ ಬೇಕಾದ ವ್ಯವಸ್ಥೆಗಳನ್ನು ಮಾಡಲಾಗಿದೆ. ನಿಮ್ಮ ಏರಿಯಾದಲ್ಲಿ ಎಲ್ಲಿ ಗಣೇಶ ವಿಸರ್ಜನೆ ಮಾಡಬಹುದು ಎಂಬ ಮಾಹಿತಿ ಇಲ್ಲಿದೆ ನೋಡಿ.

ನಗರದ ಜಲಮೂಲಗಳು ಕಲುಷಿತಗೊಳ್ಳುವುದನ್ನು ತಡೆಯಲು ಹಾಗೂ ಸಾರ್ವಜನಿಕರಿಗೆ ಮನೆಯ ಹತ್ತಿರದಲ್ಲೇ ವಿಸರ್ಜನೆಗೆ ಅನುಕೂಲವಾಗುವಂತೆ ಜಿಬಿಎ (GBA) ವ್ಯಾಪ್ತಿಯಲ್ಲಿ ಈ ಕೆಳಗಿನ ವ್ಯವಸ್ಥೆಗಳನ್ನು ಮಾಡಲಾಗಿದೆ: ನಗರದ ಪ್ರಮುಖ ಕೆರೆಗಳ ಅಂಗಳದಲ್ಲಿ ಹಾಗೂ ಆಯ್ದ ಸ್ಥಳಗಳಲ್ಲಿ 42 ತಾತ್ಕಾಲಿಕ ಕಲ್ಯಾಣಿಗಳನ್ನು ನಿರ್ಮಿಸಲಾಗಿದೆ. ಪ್ರತೀ ವಾರ್ಡ್ ಹಾಗೂ ಬಡಾವಣೆಗಳನ್ನು ತಲುಪುವಂತೆ ಒಟ್ಟು 659 ಸಂಚಾರಿ (ಮೊಬೈಲ್) ಟ್ಯಾಂಕ್‌ಗಳನ್ನು ನಿಯೋಜಿಸಲಾಗಿದೆ.

ಅನುಮತಿಗಾಗಿ 122 ಏಕಗವಾಕ್ಷಿ

ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ಪ್ರತಿಷ್ಠಾಪನೆಗೆ ಅಗತ್ಯವಿರುವ ಪೊಲೀಸ್, ಬೆಸ್ಕಾಂ (BESCOM), ಅಗ್ನಿಶಾಮಕ ಹಾಗೂ ಪಾಲಿಕೆ ಇಲಾಖೆಗಳ ಅನುಮತಿಯನ್ನು ಒಂದೇ ಸೂರಿನಡಿ ಪಡೆಯಲು 122 ಏಕಗವಾಕ್ಷಿ ಕೇಂದ್ರಗಳನ್ನು ತೆರೆಯಲಾಗಿದೆ:

ಪಶ್ಚಿಮ ವಲಯ: 22 ಕೇಂದ್ರಗಳು

ಕೇಂದ್ರ ವಲಯ: 24 ಕೇಂದ್ರಗಳು

ಪೂರ್ವ ವಲಯ: 17 ಕೇಂದ್ರಗಳು

ಉತ್ತರ ವಲಯ: 30 ಕೇಂದ್ರಗಳು

ದಕ್ಷಿಣ ವಲಯ: 29 ಕೇಂದ್ರಗಳು

ಡಿಜಿಟಲ್ ಮಾಹಿತಿ ಹಾಗೂ ಕ್ಯೂಆರ್ ಕೋಡ್ (QR Code) ಸೌಲಭ್ಯ

ಸಾರ್ವಜನಿಕರು ತಮ್ಮ ಹತ್ತಿರದ ಗಣೇಶ ವಿಸರ್ಜನಾ ಸ್ಥಳಗಳು, ಮೊಬೈಲ್ ಟ್ಯಾಂಕ್‌ಗಳ ಮಾರ್ಗಸೂಚಿ ಹಾಗೂ ಏಕಗವಾಕ್ಷಿ ಕೇಂದ್ರಗಳ ವಿಳಾಸವನ್ನು ಸುಲಭವಾಗಿ ತಿಳಿಯಲು ಜಿಬಿಎ ಡಿಜಿಟಲ್ ಪ್ಲಾಟ್‌ಫಾರ್ಮ್ ಸಿದ್ಧಪಡಿಸಿದೆ. https://apps.bbmp.gov.in/ganesha2026 ಗೆ ಭೇಟಿ ನೀಡಿ ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಸಂಪೂರ್ಣ ಮಾಹಿತಿ ಪಡೆಯಬಹುದು.ಪಿಒಪಿ (PoP) ಗಣೇಶ ಮೂರ್ತಿಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಪರಿಸರ ಸ್ನೇಹಿ ಜೇಡಿಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಜವಾಬ್ದಾರಿಯುತವಾಗಿ ಹಬ್ಬ ಆಚರಿಸಲು ಪ್ರಾಧಿಕಾರ ಮನವಿ ಮಾಡಿದೆ.

3 ಸಾವಿರ ಹೆಚ್ಚುವರಿ ಸಿಸಿಟಿವಿ, ಡ್ರೋನ್ ಕಣ್ಣಾವಲು ಹಾಗೂ ಬಿಗಿ ಬಂದೋಬಸ್ತ್

ರಾಜಧಾನಿ ಬೆಂಗಳೂರಿನಲ್ಲಿ ಗೌರಿ-ಗಣೇಶ ಚತುರ್ಥಿಯ ಸಂಭ್ರಮದ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಬೆಂಗಳೂರು ನಗರ ಪೊಲೀಸ್ ಇಲಾಖೆ ಅತ್ಯಂತ ಬಿಗಿ ಹಾಗೂ ಅಭೇದ್ಯ ಭದ್ರತಾ ಸೌಧವನ್ನು ನಿರ್ಮಿಸಿದೆ. ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೇರಿದಂತೆ ಇಲಾಖೆಯ ಉನ್ನತಾಧಿಕಾರಿಗಳು ಭದ್ರತೆಯ ಮೇಲ್ವಿಚಾರಣೆಯನ್ನು ವಹಿಸಿಕೊಂಡಿದ್ದು, ಶಾಂತಿ ಹಾಗೂ ಸೌಹಾರ್ದತೆಯಿಂದ ಹಬ್ಬ ಆಚರಿಸಲು ಸಾರ್ವಜನಿಕರಿಗೆ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ನಗರದಾದ್ಯಂತ ಅಪರಾಧ ಕೃತ್ಯಗಳು ಹಾಗೂ ಕಿಡಿಗೇಡಿಗಳ ಚಟುವಟಿಕೆಗಳಿಗೆ ತಡೆ ಒಡ್ಡಲು ತಂತ್ರಜ್ಞಾನಾಧಾರಿತ ಭದ್ರತೆಗೆ ಒತ್ತು ನೀಡಲಾಗಿದೆ. ಗಣೇಶ ಮೂರ್ತಿ ಪ್ರತಿಷ್ಠಾಪನೆ ಸ್ಥಳಗಳು, ವಿಸರ್ಜನಾ ಕಲ್ಯಾಣಿಗಳು ಹಾಗೂ ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ಹೆಚ್ಚುವರಿಯಾಗಿ 3,000ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ನಗರದ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಡ್ರೋನ್ ಕ್ಯಾಮರಾಗಳ ಮೂಲಕ ವೈಮಾನಿಕ ನಿಗಾ ವಹಿಸಲಾಗುತ್ತಿದೆ. ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಫ್ತಿ ಉಡುಪಿನಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ‘ಹೊಯ್ಸಳ’ ಗಸ್ತು ವಾಹನಗಳು 24 ಗಂಟೆಯೂ ನಗರದಲ್ಲಿ ನಿರಂತರ ರೌಂಡ್ಸ್ ನಡೆಸಲಿವೆ.

ಇದನ್ನೂ ಓದಿ: ಗಣೇಶ ಹಬ್ಬಕ್ಕೆ ಷೇರು ಮಾರುಕಟ್ಟೆ ಕ್ಲೋಸ್: ಬೆಂಗಳೂರು ಸೇರಿ ಹಲವೆಡೆ ಬ್ಯಾಂಕ್​ಗಳು ಬಂದ್, ಎಟಿಎಂ-ಯುಪಿಐ ಎಂದಿನಂತೆ ಲಭ್ಯ

ಧ್ವನಿವರ್ಧಕ ಹಾಗೂ ಆಯೋಜಕರಿಗೆ ಕಟ್ಟುನಿಟ್ಟಿನ ನಿಯಮಗಳು

ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಆಯೋಜಕರಿಗೆ ಪೊಲೀಸರು ಹಲವು ಕಟ್ಟುನಿಟ್ಟಿನ ಮಾರ್ಗದರ್ಶಿ ಸೂತ್ರಗಳನ್ನು ನೀಡಿದ್ದಾರೆ. ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಮಾರ್ಗದರ್ಶನದಂತೆ ನಿಗದಿತ ಡೆಸಿಬಲ್ (Decibel) ಮಿತಿಯಲ್ಲಿ ಮಾತ್ರವೇ ಧ್ವನಿವರ್ಧಕಗಳನ್ನು (Loudspeakers) ಬಳಸಲು ಅವಕಾಶ ನೀಡಲಾಗಿದೆ. ಮೆರವಣಿಗೆಯ ಸಂದರ್ಭದಲ್ಲಿ ಮದ್ಯಪಾನ ಮಾಡಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವ ಅಥವಾ ಕೋಮು ಸೌಹಾರ್ದತೆಗೆ ಧಕ್ಕೆ ತರಲು ಯತ್ನಿಸುವ ಪುಂಡ-ಕಿಡಿಗೇಡಿಗಳ ವಿರುದ್ಧ ತಕ್ಷಣವೇ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us