ಸುಳ್ಯ: ಪತ್ನಿಯ ಗುಂಡಿಕ್ಕಿ ಹತ್ಯೆ ಮಾಡಿ ಆ್ಯಸಿಡ್ ಸೇವಿಸಿ ಪತಿ ಆತ್ಮಹತ್ಯೆ
ಮದ್ಯಪಾನದ ಅಮಲಿನಲ್ಲಿ ವ್ಯಕ್ತಿಯೊಬ್ಬ ಪತ್ನಿಯನ್ನು ಗುಂಡಿಕ್ಕಿ ಕೊಲೆ ಮಾಡಿದ್ದಲ್ಲದೆ, ಬಳಿಕ ತಾನೂ ಆ್ಯಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ. ಮತ್ತೊಂದೆಡೆ, ಉಳ್ಳಾಲದ ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ ಸಂಬಂಧ ಚಿನ್ನ ಕಳೆದುಕೊಂಡ ಗ್ರಾಹಕರ ಅಳಲು ಮುಗಿಲುಮುಟ್ಟಿದೆ. ವಿವರಗಳಿಗೆ ಮುಂದೆ ಓದಿ.
ಮಂಗಳೂರು, ಜನವರಿ 18: ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಪತ್ನಿಯ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದಲ್ಲದೆ, ಮನನೊಂದು ಆ್ಯಸಿಡ್ ಸೇವಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ನೆಲ್ಲೂರು ಕೆಮ್ರಾಜೆ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಮೃತರನ್ನು ರಾಮಚಂದ್ರಗೌಡ ಮತ್ತು ಅವರ ಪತ್ನಿ ವಿನೋದಾ ಕುಮಾರಿ ಎಂದು ಗುರುತಿಸಲಾಗಿದೆ.
ರಾಮಚಂದ್ರ ನಿತ್ಯ ಕುಡಿದು ಬಂದು ಪತ್ನಿ ಜೊತೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಅದೇ ರೀತಿ ಶುಕ್ರವಾರ ರಾತ್ರಿ ಕೂಡ ಪತ್ನಿ ವಿನೋದಾ, ಪತಿ ರಾಮಚಂದ್ರ ನಡುವೆ ಗಲಾಟೆ ಆಗಿದೆ. ಜಗಳ ಬಿಡಿಸಲು ಬಂದ ಮಗ ಪ್ರಶಾಂತ್ನಿಗೆ ಫೈರಿಂಗ್ ಮಾಡಲು ರಾಮಚಂದ್ರ ಯತ್ನಿಸಿದ್ದಾನೆ. ಮಗನಿಗೆ ಶೂಟ್ ಮಾಡುವಾಗ ತಾಯಿ ವಿನೋದಾ ಅಡ್ಡ ಬಂದಿದ್ದಾರೆ. ಈ ವೇಳೆ ಗುಂಡು ತಗುಲಿ ವಿನೋದಾ ಕುಮಾರಿ ಮೃತಪಟ್ಟಿದ್ದಾರೆ.
ಇದಾದ ನಂತರ ಪತ್ನಿಯ ಸಾವಿನಿಂದ ಮನನೊಂದ ರಾಮಚಂದ್ರ ಆ್ಯಸಿಡ್ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಕಾಯ್ದೆ 2023ರ ಕಲಂ 103 ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25 ಮತ್ತು 27 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕೋಟೆಕಾರು ದರೋಡೆ: ಬ್ಯಾಂಕ್ನತ್ತ ಗ್ರಾಹಕರ ದೌಡು
ಮಂಗಳೂರಿನ ಉಳ್ಳಾಲದ ಕೋಟೆಕಾರ್‌ನಲ್ಲಿ ಬ್ಯಾಂಕ್ ದರೋಡೆ ಹಿನ್ನೆಲೆಯಲ್ಲಿ, ಚಿನ್ನ ಅಡವಿಟ್ಟಿರುವ ಮಹಿಳೆಯರು ಹಾಗೂ ಗ್ರಾಹಕರು ಶನಿವಾರ ಬ್ಯಾಂಕ್ನತ್ತ ದೌಡಾಯಿಸುತ್ತಿದ್ದಾರೆ. ಬ್ಯಾಂಕ್ ಎದುರಲ್ಲಿ ಗ್ರಾಹಕರ ಮಧ್ಯೆ ಹೊಯ್ ಕೈ ಗಲಾಟೆಯೂ ನಡೆದಿದೆ. ಪರಸ್ಪರ ಕೆಲ ಗ್ರಾಹಕರ ಗುಂಪುಗಳ ಮಧ್ಯೆ ವಾಗ್ವಾದ ನಡೆದಿದೆ. ಪೊಲೀಸರು ಮಧ್ಯಪ್ರವೇಶ ಮಾಡಿದರೂ ಗ್ರಾಹಕರ ಆಕ್ರೋಶ ತಣ್ಣಗಾಗಿಲ್ಲ.
ಇದನ್ನೂ ಓದಿ: ಕೋಟೆಕಾರು ಬ್ಯಾಂಕಿನಲ್ಲಿ 10ರಿಂದ 12 ಕೋಟಿ ದರೋಡೆ ಆಗಿದ್ಹೇಗೆ? ಖದೀಮರ ಪಕ್ಕಾ ಪ್ಲ್ಯಾನ್ ಹೇಗಿತ್ತು ಗೊತ್ತಾ?
ನಮ್ಮ ಚಿನ್ನ ನಮಗೆ ವಾಪಾಸು ಕೊಡಿ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಕ್ಕಳನ್ನು ವಿದೇಶಕ್ಕೆ ಕಳುಹಿಸಲು, ಮನೆ ಖರೀದಿ ಹೀಗೆ ವಿವಿಧ ಕಾರಣಗಳಿಗಾಗಿ ಚಿನ್ನ ಅಡವಿಟ್ಟು ಹಣ ಪಡೆದಿರುವ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ಬಾರಿ ನೀಡಿಲ್ಲ ಪರಿಹಾರ: ಮಹಿಳೆಯರ ಆರೋಪ
ಕಳೆದ ಬಾರಿ ಇದೇ ಬ್ಯಾಂಕಿನಲ್ಲಿ ಚಿನ್ನ ಕಳೆದುಕೊಂಡಾಗ ಬ್ಯಾಂಕ್ ಪರಿಹಾರ ನೀಡಿಲ್ಲ. ಈ ಬಾರಿ ಅದೇ ರೀತಿ ಆಗಬಾರದು, ನಮ್ಮ ಚಿನ್ನ ಹಿಂದಿರುಗಿಸಿ ಕೊಡಿ ಎಂದು ಗ್ರಾಹಕರು ಅಳಲು ತೋಡಿಕೊಂಡಿದ್ದಾರೆ. ಬ್ಯಾಂಕ್‌ನಲ್ಲಿ ಏಕೆ ಭದ್ರತೆ ಕೈಗೊಂಡಿಲ್ಲ ಎಂದು ಚಿನ್ನ ಕಳೆದುಕೊಂಡ ಬ್ಯಾಂಕ್ ಗ್ರಾಹಕ ಮಹಿಳೆಯರು ಪ್ರಶ್ನಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ