ಆರ್ಥಿಕ ಸಂಕಷ್ಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ; 50 ಮಂದಿಯ 21 ಕೋಟಿ ರೂ. ನಿವೃತ್ತಿ ವೇತನ ಬಾಕಿ
ಅದು ನಾಲ್ಕು ದಶಕಗಳ ಇತಿಹಾಸವಿರುವ ಕರ್ನಾಟಕದ ಪ್ರಖ್ಯಾತ ಯೂನಿವರ್ಸಿಟಿ. ಅಲ್ಲಿ ವಿದ್ಯಾರ್ಜನೆ ಮಾಡಿದ ಲಕ್ಷಾಂತರ ಮಂದಿಯಲ್ಲಿ ಇಂದು ಅದೆಷ್ಟೋ ಮಂದಿ ಉನ್ನತ ಹುದ್ದೆಯಲ್ಲಿದ್ದಾರೆ. ಆದ್ರೆ, ಇದೀಗ ಆ ವಿಶ್ವವಿದ್ಯಾನಿಲಯ ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದೆ. ವಿಪರ್ಯಾಸವೆಂದರೆ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಾಧ್ಯಾಪಕರಿಗೂ ನಿವೃತ್ತಿ ವೇತನ ಪಾವತಿಸಲು ಹಣವಿಲ್ಲದಂತಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ ಓದಿ.
ದಕ್ಷಿಣ ಕನ್ನಡ, ಆ.11: ಅದು ಕರ್ನಾಟಕದ ಪ್ರಸಿದ್ಧ ಮಂಗಳೂರು ವಿಶ್ವವಿದ್ಯಾನಿಲಯ(Mangalore University). ಮಂಗಳೂರು ಹೊರವಲಯದ ಕೊಣಾಜೆಯಲ್ಲಿ ಸಾವಿರಾರು ಎಕರೆ ಪ್ರದೇಶದ ಕ್ಯಾಂಪಸ್ ಹೊಂದಿರುವ ಈ ವಿ.ವಿ ಪ್ರಾರಂಭವಾಗಿ ಸುಮಾರು 44 ವರ್ಷವಾಗಿದೆ. ಪ್ರಾರಂಭದಲ್ಲಿ ಬಹಳಷ್ಟು ಪ್ರಸಿದ್ದಿ ಪಡೆದಿದ್ದ ಈ ಯೂನಿವರ್ಸಿಟಿ, ಇದೀಗ ಕಳೆದ ನಾಲ್ಕೈದು ವರ್ಷಗಳಲ್ಲಿ ಅಧೋಗತಿಗೆ ತಲುಪುತ್ತಿದೆ. ತೀವ್ರವಾದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಿವಿಯ ಆಂತರಿಕ ಸಂಪನ್ಮೂಲ ಸಂಪೂರ್ಣವಾಗಿ ಬರಿದಾಗಿದೆ. ಇದರ ಪರಿಣಾಮವಾಗಿ ಕಳೆದ ನಾಲ್ಕು ವರ್ಷಗಳಲ್ಲಿ ನಿವೃತ್ತಿಯಾಗಿರುವ ಸುಮಾರು 15 ಪ್ರಾಧ್ಯಾಪಕರು ಸಹಿತ 50 ಮಂದಿಗೆ ಇನ್ನೂ ನಿವೃತ್ತಿ ವೇತನ ಪಾವತಿ ಮಾಡಲು ಸಾಧ್ಯವಾಗಿಲ್ಲ. ಸುಮಾರು 21 ಕೋಟಿ ರೂಗಳಿಗೂ ಹೆಚ್ಚು ನಿವೃತ್ತಿ ವೇತನ ಬಾಕಿ ಉಳಿಸಿಕೊಂಡು, ಹಣವಿಲ್ಲವೆಂದು ಹೇಳಿ ಸುಮ್ಮನಾಗಿಬಿಟ್ಟಿದೆ.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಈ ಹಿಂದಿನ ಹಲವು ಹಗರಣಗಳಿಂದ ಆಂತರಿಕ ಸಂಪನ್ಮೂಲ ಖಾಲಿಯಾಗಿದೆ. ಈ ಬಗ್ಗೆ ಈಗಾಗಲೇ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯೂ ನಡೆಯುತ್ತಿದೆ. ಈ ನಡುವೆ ಕಳೆದ ಎರಡು ವರ್ಷದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಅನಗತ್ಯವಾಗಿ ಮಾಡಿದ 187 ಮಂದಿಯ ನೇಮಕವನ್ನು ಸರ್ಕಾರ ಅನಧಿಕೃತ ಎಂದು ರದ್ದು ಮಾಡಿದೆ. ಹೀಗಿದ್ದರೂ 30ರಿಂದ 35 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಾಧ್ಯಾಪಕರು, ಸಿಬ್ಬಂದಿಗಳು ನಿವೃತ್ತಿ ವೇತನ ಪಡೆಯಲು ನಿತ್ಯ ವಿ.ವಿ ಸಹಿತ ವಿವಿಧ ಕಚೇರಿಗಳಿಗೆ ಅಲೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ:ವೃತ್ತಿಪರ ಕಾಲೇಜುಗಳಾಗಿ ಪರಿವರ್ತನೆಗೊಳ್ಳಲಿವೆ ಸರ್ಕಾರಿ ಪದವಿ ಕಾಲೇಜುಗಳು! ಸಚಿವ ಎಂಸಿ ಸುಧಾಕರ್ ಮಹತ್ವದ ಸುಳಿವು
ನಾವು ಸಾಯುವ ಮೊದಲಾದರೂ ನಿವೃತ್ತಿ ನಂತರದ ಸೌಲಭ್ಯ ಸಿಗುತ್ತಾ?
ಕಳೆದ 44 ವರ್ಷದಲ್ಲಿ ಯಾವತ್ತು ಸಹ ಈ ರೀತಿ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ನಿವೃತ್ತ ಪ್ರಾಧ್ಯಾಪಕರು, ‘ನಾವು ಸಾಯುವ ಮೊದಲಾದರೂ ನಿವೃತ್ತಿ ನಂತರದ ಸೌಲಭ್ಯ ಸಿಗುತ್ತಾ ಎಂದು ಪ್ರಶ್ನಿಸುತ್ತಿದ್ದಾರೆ. ಈ ಸಮಸ್ಯೆ ಬಗ್ಗೆ ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ಸೇರಿದಂತೆ ಸರ್ಕಾರದ ಗಮನಕ್ಕೆ ಬಂದಿದೆ. ಆದ್ರೆ, ಸರ್ಕಾರ ಯುನಿವರ್ಸಿಟಿಯೇ ಇದನ್ನು ಭರಿಸಬೇಕೆಂದು ಹೇಳಿದೆ. ಒಟ್ಟಿನಲ್ಲಿ ಸರ್ಕಾರ ಈ ಬಗ್ಗೆ ಮಧ್ಯಪ್ರವೇಶಿಸಿ ಅದೆಷ್ಟೋ ಮಕ್ಕಳಿಗೆ ಶಿಕ್ಷಣ ನೀಡಿ ನಿವೃತರಾಗಿರುವ ಪ್ರಾಧ್ಯಾಪಕರು, ಸಿಬ್ಬಂದಿಗಳ ಕಣ್ಣೀರು ಒರೆಸುವ ಕೆಲಸ ಮಾಡಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ