Mangalore Blast: ಮಂಗಳೂರು ಕುಕ್ಕರ್ ಬಾಂಬ್ ಪ್ರಕರಣ; ಮೈಸೂರಿನಲ್ಲಿ ತರಬೇತಿ ಪಡೆದಿದ್ದ ಶಾರಿಕ್​ನಿಂದ ಶಿವಮೊಗ್ಗದ ತುಂಗಾ ತೀರದಲ್ಲಿ ರಿಹರ್ಸಲ್

ಸ್ಫೋಟಕ್ಕೆ ಸಂಚು ರೂಪಿಸಿದ್ದ ಆರೋಪಿ ಮೊಬೈಲ್ ಬಗ್ಗೆ ತರಬೇತಿ ಪಡೆಯಲು ಮೈಸೂರಿಗೆ ಭೇಟಿ ನೀಡಿದ್ದ ಎಂಬ ಬಗ್ಗೆ ಮಂಗಳೂರು, ಮೈಸೂರು ಪೊಲೀಸರ ಜಂಟಿ ತನಿಖೆ ವೇಳೆ ಮಾಹಿತಿ ಸಿಕ್ಕಿದೆ.

Mangalore Blast: ಮಂಗಳೂರು ಕುಕ್ಕರ್ ಬಾಂಬ್ ಪ್ರಕರಣ; ಮೈಸೂರಿನಲ್ಲಿ ತರಬೇತಿ ಪಡೆದಿದ್ದ ಶಾರಿಕ್​ನಿಂದ ಶಿವಮೊಗ್ಗದ ತುಂಗಾ ತೀರದಲ್ಲಿ ರಿಹರ್ಸಲ್
ಮಂಗಳೂರು ಬಾಂಬ್ ಸ್ಪೋಟ ಪ್ರಕರಣ‌; ಬಾಂಬ್ ತಯಾರಿಸುವ ವೇಳೆ ಮೊಬೈಲ್ ಟ್ರೈನಿಂಗ್ ಪಡೆದ ಆರೋಪಿ
Follow us
TV9 Web
| Updated By: ಆಯೇಷಾ ಬಾನು

Updated on:Nov 21, 2022 | 1:12 PM

ಮಂಗಳೂರು: ಜಿಲ್ಲೆಯ ನಾಗುರಿ ಬಳಿ ಆಟೋದಲ್ಲಿ ಲಘು ಸ್ಫೋಟವಾಗಿದೆ. ಆಟೋ ಪ್ರಯಾಣಿಕನ ಕೈಯಲ್ಲಿದ್ದ ಕುಕ್ಕರ್‌ ಬ್ಲಾಸ್ಟ್ ಆಗಿದೆ. ಇದೊಂದು ಅವಘಡ ಅಂತಾ ಸುಮ್ಮನಿದ್ದ ಮಂಗಳೂರು ಮಂದಿಗೆ ಪೊಲೀಸ್ ತನಿಖೆ ಬೆಚ್ಚಿಬೀಳಿಸುವ ಮಾಹಿತಿ ನೀಡಿದೆ. ಘಟನೆಗೆ ದಿನಕ್ಕೊಂದು ತಿರುವು ಸಿಕ್ತಿದೆ. ಇದರ ನಡುವೆ ಈಗ ಸ್ಫೋಟ ಪ್ರಕರಣದ ಗಾಯಾಳು ಆರೋಪಿ ಮೊಹಮ್ಮದ್​ ಶಾರಿಕ್ ಎಂಬುದು ದೃಢಪಟ್ಟಿದೆ. ಜೊತೆಗೆ ಕೇಸ್​ ಸಂಬಂಧ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ. ಶಾರಿಕ್ ಜೊತೆಗೆ ನಿರಂತರ ಸಂಪರ್ಕ ಇದ್ದ ಮೂವರನ್ನು ವಶಕ್ಕೆ ಪಡೆದು ಏನೆಲ್ಲಾ ಮಾತನಾಡಿದ್ರು? ಶಾರಿಕ್ ಜೊತೆಗೆ ಯಾಕೆ ನಿರಂತರ ಸಂಪರ್ಕದಲ್ಲಿದ್ದರು? ಬೇರೆ ಬೇರೆ ಆಯಾಮದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

ಮಂಗಳೂರಿನಲ್ಲಿ ಗೋಡೆಬರಹ ಪ್ರಕರಣದಲ್ಲಿ ಆರೋಪಿಯಾಗಿರುವ ಶಾರಿಕ್​​, ಮಂಗಳೂರಿನಲ್ಲಿ ಬಾಂಬ್​​ ಸ್ಫೋಟಿಸಲು ಹೊರಟಿದ್ದ. ಈಗ ಘಟನೆಯಲ್ಲಿ ಗಾಯಗೊಂಡಿರುವ ಆರೋಪಿ ಶಾರಿಕ್ ಒಬ್ಬ ಆಟೋ ಬಾಂಬರ್ ಎಂಬುವುದನ್ನು ಪೊಲೀಸರು ದೃಢಪಡಿಸಿದ್ದಾರೆ.

ಆರೋಪಿಗೆ ಮೈಸೂರಿನ ಲಿಂಕ್

ಸ್ಫೋಟಕ್ಕೆ ಸಂಚು ರೂಪಿಸಿದ್ದ ಆರೋಪಿ ಮೊಬೈಲ್ ಬಗ್ಗೆ ತರಬೇತಿ ಪಡೆಯಲು ಮೈಸೂರಿಗೆ ಭೇಟಿ ನೀಡಿದ್ದ ಎಂಬ ಬಗ್ಗೆ ಮಂಗಳೂರು, ಮೈಸೂರು ಪೊಲೀಸರ ಜಂಟಿ ತನಿಖೆ ವೇಳೆ ಮಾಹಿತಿ ಸಿಕ್ಕಿದೆ. ಆರೋಪಿ ಕುಕ್ಕರ್​ ಬಾಂಬ್ ತಯಾರಿಸುವ ಮುನ್ನ ಮೈಸೂರಿನಲ್ಲಿ ಮೊಬೈಲ್ ರಿಪೇರಿ ಸೆಂಟರ್​​ನಲ್ಲಿ ಕೆಲಸಕ್ಕೆ ಸೇರಿದ್ದ. ಮೊಬೈಲ್​ ಕಾರ್ಯನಿರ್ವಹಣೆ ಬಗ್ಗೆ ಅಧ್ಯಯನ ನಡೆಸಿದ್ದ. ಮೈಸೂರಿನ ಲೋಕನಾಯಕ ನಗರದಲ್ಲಿರುವ ತನ್ನ ಕೊಠಡಿಯಲ್ಲಿ ಕುಳಿತು ಕುಕ್ಕರ್ ಬಾಂಬ್​ ತಯಾರಿಸುವ ಬಗ್ಗೆ ಅಭ್ಯಾಸ ಮಾಡಿದ್ದ. ಯಾರಿಗೂ ಅನುಮಾನ ಬಾರದಂತೆ ಆರೋಪಿ ಪ್ಲ್ಯಾನ್​ ಮಾಡಿಕೊಂಡಿದ್ದ. ಮನೆಯ ಹಿಂಭಾಗದಲ್ಲೇ ರೂಂ ಬಾಡಿಗೆ ಪಡೆದಿದ್ದ ಎಂಬ ಬಗ್ಗೆ ತನಿಖೆ ವೇಳೆ ಬಯಲಾಗಿದೆ. ಸದ್ಯ ಆರೋಪಿ ಕುರಿತು ಮಂಗಳೂರು, ಮೈಸೂರು ಪೊಲೀಸರು ಮತ್ತಷ್ಟು ಮಾಹಿತಿ ಕಲೆ ಹಾಕಲು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಆಟೋದಲ್ಲಿ ನಿಗೂಢ ಸ್ಫೋಟ: ಗಾಯಗೊಂಡಿದ್ದ ಪ್ರಯಾಣಿಕನ ಸ್ಥಿತಿ ಗಂಭೀರ: ಪೊಲೀಸ್ ಆಯುಕ್ತ ಶಶಿಕುಮಾರ್

ಶಾರಿಕ್​​ ಮೈಸೂರಿನಿಂದಲೇ ಬಾಂಬ್​​ ತಂದಿದ್ನಾ ಎಂಬ ಅನುಮಾನ​

ಇನ್ನು ಶಾರಿಕ್​​ ಮೈಸೂರಿನಿಂದಲೇ ಬಾಂಬ್​​ ತಂದಿದ್ನಾ ಎಂಬ ಅನುಮಾನ ವ್ಯಕ್ತವಾಗಿದೆ. ಬಸ್​​ನಲ್ಲೇ ಶಾರಿಕ್​​ ಕುಕ್ಕರ್​ ಬಾಂಬ್​ ಸಾಗಿಸಿರಬಹುದು ಎನ್ನಲಾಗುತ್ತಿದೆ. ಮೈಸೂರು, ಕುಶಾಲನಗರ, ಮಡಿಕೇರಿ, ಸುಳ್ಯ, ಪುತ್ತೂರು ಮಾರ್ಗವಾಗಿ ಆರೋಪಿ ಶಾರಿಕ್ ಮಂಗಳೂರಿಗೆ ಬಂದಿದ್ದ. ಮಂಗಳೂರಿನ ಪಂಪ್​​ವೆಲ್​​ ಬಳಿ ಬಸ್​​ನಿಂದ​ ಇಳಿದಿದ್ದ ಎಂಬ ಬಗ್ಗೆ ಟಿವಿ9ಗೆ ಪೊಲೀಸ್​ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ.

ಜಿಹಾದ್ ಕಾರ್ಯಕ್ಕೆ ಮುಂದಾಗಿದ್ದ ಶಾರಿಕ್

ಶಿವಮೊಗ್ಗ ಹೊರವಲಯದ ತುಂಗಾ ತೀರದಲ್ಲಿ ಸ್ಫೋಟದ ಶಂಕಿತ ಉಗ್ರರು ರಿಹರ್ಸಲ್ ಮಾಡುತ್ತಿದ್ದರು. ಯಾಸೀನ್ ಮತ್ತು ಶಾರಿಕ್ ಟ್ರಯಲ್ ಬ್ಲಾಸ್ಟ್ ಕೂಡಾ ಮಾಡಿದ್ದರು. ಈ ಮೂಲಕ ಮಂಗಳೂರು, ಮಲೆನಾಡು ಮತ್ತು ರಾಜ್ಯದಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದರು ಎಂಬ ಬಗ್ಗೆ ಪೊಲೀಸರಿಗೆ ಉಳಿವು ಸಿಕ್ಕಿದೆ. ಇನ್ನು ಶಿವಮೊಗ್ಗ ಮಾಜ್ ಮತ್ತು ಯಾಸೀನ್ ಬಂಧನ ಬಳಿಕ ನಾಪತ್ತೆಯಾಗಿದ್ದು ಈ ಇಬ್ಬರ ಬಂಧನದ ಬಳಿಕವೂ ಶಾರಿಕ್ ಭಯ ಪಟ್ಟಿರಲಿಲ್ಲ. ಜಿಹಾದ್ ಕಾರ್ಯಕ್ಕೆ ಮುಂದಾಗಿದ್ದ. ಶಿವಮೊಗ್ಗದಿಂದ ಎಸ್ಕೇಪ್ ಆಗಿ ಶಾರಿಕ್ ಮತ್ತೆ ಸ್ಫೋಟಕಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದ. ಶಾರಿಕ್​ಗೆ ಉಗ್ರ ಸಂಘಟನೆಯ ಸಂಪರ್ಕ ಇತ್ತು ಎಂಬ ಬಗ್ಗೆ ತಿಳಿದು ಬಂದಿದೆ. ಇದರ ನಡುವೆ ತುಂಗಾ ತೀರದಲ್ಲಿ ಪತ್ತೆಯಾದ ಸ್ಫೋಟಕ ವಸ್ತುಗಳೇ ಆಟೋ ಬ್ಲಾಸ್ಟ್​ನಲ್ಲೂ ಪತ್ತೆಯಾಗಿದೆ. ಶಂಕಿತ ಉಗ್ರ ಶಾರಿಕ್ ಇನ್ನೇನು ಸಂಚು ರೂಪಿಸಿದ್ದ ಎಂಬ ಬಗ್ಗೆ ಪೊಲೀಸರಿಗೆ ಆತಂಕ ಹೆಚ್ಚಾಗಿದೆ.

ಆಸ್ಪತ್ರೆಗೆ ಆರೋಪಿ ಶಾರಿಕ್​ ಕುಟುಂಬಸ್ಥರನ್ನು ಕರೆತಂದ ಪೊಲೀಸರು

ಮಂಗಳೂರಿನ ಕಂಕನಾಡಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿ ಶಾರಿಕ್​ನ ಚಿಕ್ಕಮ್ಮ, ಸಹೋದರಿಯನ್ನ ಪೊಲೀಸರು ಆಸ್ಪತ್ರೆಗೆ ಕರೆತಂದಿದ್ದಾರೆ. ಈ ವೇಳೆ ಗಾಯಾಳು ಶಾರಿಕ್​ ಎಂಬುದನ್ನು ಕುಟುಂಬಸ್ಥರು ಖಚಿತಪಡಿಸಿದ್ದಾರೆ. ಖಾಕಿ ಸಮ್ಮುಖದಲ್ಲೇ ಪೋಷಕರು ಶಾರಿಕ್​ ಗುರುತು ಪತ್ತೆಹಚ್ಚಿದ್ದಾರೆ.

ಇದನ್ನೂ ಓದಿ: ಮಂಗಳೂರು ಸ್ಫೋಟ: ಉಗ್ರ ಕೃತ್ಯ ಎಂದ ಸಿಎಂ, ತುಮಕೂರಿನಲ್ಲಿ ರೈಲ್ವೆ ಗ್ಯಾಂಗ್​ಮನ್ ವಿಚಾರಣೆ

ಶಾರಿಕ್​, ಮಾಜ್​ ಮನೆ ಮೇಲೆ ತೀರ್ಥಹಳ್ಳಿ ಪೊಲೀಸರ ದಾಳಿ

ಮಂಗಳೂರು ಬಾಂಬ್​ ಸ್ಫೋಟದಲ್ಲಿ ಶಾರಿಕ್​ ಪಾತ್ರ ಹಿನ್ನೆಲೆ ತೀರ್ಥಹಳ್ಳಿ ಪಟ್ಟಣದ ಟಾಕೀಸ್ ರಸ್ತೆಯ 4 ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ತೀರ್ಥಹಳ್ಳಿ ಇನ್ಸ್​ಪೆಕ್ಟರ್ ಅಶ್ವತ್ಥ್ ಗೌಡ, ಮಾಳೂರು ಸಿಪಿಐ ಪ್ರವೀಣ್, ಆಗುಂಬೆ PSI ಶಿವಕುಮಾರ್​, ಮಾಳೂರು PSI ನೇತೃತ್ವದಲ್ಲಿ ಸರ್ಚ್​ ವಾರಂಟ್​ ಪಡೆದು ಮನೆಗಳ ಮೇಲೆ ಪೊಲೀಸರು ರೇಡ್ ಮಾಡಿದ್ದಾರೆ.

ತಮಿಳುನಾಡಿಗೆ ಭೇಟಿ ನೀಡಿದ್ದ ಶಂಕಿತ ಉಗ್ರ ಶಾರಿಕ್​

ಖಾಸಗಿ ಶಾಲಾ ಶಿಕ್ಷಕನೊಬ್ಬನ ಹೆಸರಲ್ಲಿ ಸಿಮ್​ ಪಡೆದಿದ್ದ ಶಾರಿಕ್​, ಕೊಯಮತ್ತೂರು ಬಾಂಬ್ ಸ್ಫೋಟಕ್ಕೂ ಮುನ್ನ ತಮಿಳುನಾಡು ಭೇಟಿ ನೀಡಿದ್ದ. ಶಾರಿಕ್ ಸೆಪ್ಟೆಂಬರ್​ನಲ್ಲಿ ಕೊಯಮತ್ತೂರು ಬಳಿಯ ಸಿಂಗನಲ್ಲೂರಿಗೆ ಭೇಟಿ ನೀಡಿದ್ದ. ಅ.23ರಂದು ಕೊಯಮತ್ತೂರು ಸಂಗಮೇಶ್ವರ ದೇಗುಲ ಬಳಿ ಸ್ಫೋಟ ಸಂಭವಿಸಿತ್ತು. ಸ್ಫೋಟದಲ್ಲಿ ಐಸಿಸ್ ನಂಟಿದ್ದ ಉಗ್ರ ಮುಬೀನ್ ಮೃತಪಟ್ಟಿದ್ದ. ಬಳಿಕ ಸೆಪ್ಟೆಂಬರ್​ನಲ್ಲೇ ತೀರ್ಥಹಳ್ಳಿಯಿಂದ ಶಾರಿಕ್ ನಾಪತ್ತೆಯಾಗಿದ್ದ. ​

ಗೋಡೆ ಬರಹ ಪ್ರಕರಣದಲ್ಲಿ ಜಾಮೀನು ಪಡೆದಿದ್ದ ಶಾರಿಕ್​, ಮಾಜ್​ ಜತೆ ಸೇರಿ ಶಿವಮೊಗ್ಗ, ಬಂಟ್ವಾಳದಲ್ಲಿ ಟ್ರಯಲ್ ಬ್ಲಾಸ್ಟ್​ ಮಾಡಿದ್ದ. ಆನ್​​ಲೈನ್​ನಲ್ಲಿ ವಸ್ತುಗಳನ್ನು ಖರೀದಿಸಿ ಬಾಂಬ್​ ತಯಾರಿಸುತ್ತಿದ್ದ ಎನ್ನಲಾಗಿದೆ.

​​​

Published On - 11:14 am, Mon, 21 November 22