
ಮಂಗಳೂರು, (ಮಾರ್ಚ್ 18): ಮಂಗಳೂರಿನ ದೈವಸ್ಥಾನವೊಂದರಲ್ಲಿ ನಡೆದ ದೈವ ನರ್ತನ ಸೇವೆ ಇದೀಗ ದೊಡ್ಡ ವಿವಾದಕ್ಕೆ (Mangaluru Daivaradhane Row) ಕಾರಣವಾಗಿದೆ. ಪಂಬದ ಸಮಾಜದ ಸಂಶೋಧಕಿ ಡಾ. ರತಿ ಕೆಲ ದಿನಗಳ ಹಿಂದೆ ಗಂಭೀರ ಆರೋಪ ಮಾಡಿದ್ದರು. ಬಂಟ ದೈವದ ನರ್ತನ ಸೇವೆ ವೇಳೆ ಕ್ರೈಸ್ತ ಧರ್ಮದ ವ್ಯಕ್ತಿಯಿಂದ ದೈವ ನರ್ತನ ಮಾಡಿಸಲಾಗಿದೆ ಎಂದು ಅವರು ಹೇಳಿಕೆ ನೀಡಿದ್ದರು. ಶ್ರೀ ಜಾರಂದಾಯ ದೈವಕ್ಕೆ ನಿಯಮಾನುಸಾರ ಪಂಬದ ಸಮುದಾಯದವರೇ ನರ್ತನ ಮಾಡಿದ್ದರೂ, ಬಂಟ ದೈವಕ್ಕೆ ಮಾತ್ರ ಅನ್ಯಧರ್ಮದ ವ್ಯಕ್ತಿಗೆ ಅವಕಾಶ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಆರೋಪ ಕೇಳಿ ಬಂದ ಕೂಡಲೇ ತುಳುನಾಡಿನ ದೈವಾರಾಧನೆ ವಲಯದಲ್ಲಿ ತೀವ್ರ ಚರ್ಚೆ,ವಿರೋಧ,ಸಂಶಯಗಳ ವಾತಾವರಣ ನಿರ್ಮಾಣವಾಯಿತು. ಆದ್ರೆ ಈ ಎಲ್ಲಾ ಆರೋಪಗಳನ್ನು ಈಗ ದೈವ ನರ್ತಕರು ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ. ದೈವಸ್ಥಾನದ ಆಡಳಿತ ಮಂಡಳಿ ದೈವ ನರ್ತಕ ಗಣೇಶ್ ಪಂಬದರಿಗೆ ನೇಮ ಕಟ್ಟುವ ಜವಾಬ್ದಾರಿ ವಹಿಸಿಕೊಟ್ಟಿದ್ದರು. ಹೀಗಾಗಿ ಅವರೇ ಸ್ಪಷ್ಟನೆ ನೀಡಿದ್ದು ಬಂಟ ದೈವಕ್ಕೆ ನರ್ತನ ಸೇವೆ ಮಾಡಿದ ಸುಶಾಂತ್ ನಮ್ಮದೇ ಪಂಬದ ಸಮುದಾಯದವನು ಎಂದು ಸ್ಪಷ್ಟಪಡಿಸಿದ್ದಾರೆ.
ಸುಶಾಂತ್ ಕ್ರೈಸ್ತನಲ್ಲ, ಅವನ ತಾಯಿ ನಮ್ಮ ಜಾತಿಗೆ ಸೇರಿದವರು. ಮದುವೆಯಾದ ಬಳಿಕ ಹಿಂದೂ ಧರ್ಮ ಪಾಲನೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇನ್ನೂ ಇವನು ಮೊದಲ ಬಾರಿಗೆ ನರ್ತನ ಮಾಡ್ತಿರುವವನಲ್ಲ ಹಲವು ಕ್ಷೇತ್ರಗಳಲ್ಲಿ ಸೇವೆ ಮಾಡಿದ್ದಾನೆ ಎಂದು ಹೇಳಿದ್ದಾರೆ. ಆರೋಪ ಮಾಡಿದವರ ಮೇಲೆಯೇ ಪ್ರಶ್ನೆ ಎತ್ತಿರುವ ಗಣೇಶ್ ಪಂಬದ ರತಿಯವರ ಕುಟುಂಬವೇ ಇವನ ಸಹೋದರನಿಂದ ಬೇರೆಡೆ ನರ್ತನ ಮಾಡಿಸಿಕೊಂಡಿದೆ ಆಗ ಸಮಸ್ಯೆ ಇರಲಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ. ಕ್ಷೇತ್ರಕ್ಕೆ ಯಾವುದೇ ಅಪಚಾರವಾಗಿಲ್ಲ ಎಂದು ಅವರು ಖಡಕ್ ಆಗಿ ಹೇಳಿದ್ದಾರೆ.
ಇತ್ತ ಆರೋಪದ ಸಂಕಷ್ಟಕ್ಕೆ ಸಿಲುಕಿರುವ ದೈವ ನರ್ತಕ ಸುಶಾಂತ್ ಪಂಬದ ಭಾವನಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಈಗ ಯಾರಿಗೂ ಮುಖ ತೋರಿಸಲು ಆಗುತ್ತಿಲ್ಲ. ಈ ಆರೋಪ ಬಂದ ನಂತರ ಜೀವನವೇ ಬದಲಾಗಿದೆ. ಏಪ್ರಿಲ್ ತಿಂಗಳಲ್ಲಿ ಹಲವಾರು ಕಡೆ ದೈವ ನರ್ತನ ಸೇವೆಗೆ ಕರೆ ಬಂದಿದ್ದರೂ ಈಗ ಎಲ್ಲರೂ ಕರೆ ಮಾಡಿ ಏನು ಮಾಡೋದು. ತಮ್ಮ ಬಳಿ ಜಾತಿ ಪ್ರಮಾಣಪತ್ರವಿದ್ದು ತಾವು ಪಂಬದ ಸಮುದಾಯದವರೇ ಎಂದು ಸ್ಪಷ್ಟಪಡಿಸಿದ್ದಾರೆ. ನನಗೆ ನ್ಯಾಯ ಸಿಗಬೇಕು ಎಂಬುದು ಅವರ ಬೇಡಿಕೆ.
ಇನ್ನೂ ಸುಶಾಂತ್ ತಾಯಿ ಸವಿತಾ ಕೂಡ ಸ್ಪಷ್ಟನೆ ನೀಡಿ ನಾನು ಮೊದಲು ಕ್ರಿಶ್ಚಿಯನ್ ಆಗಿದ್ದರೂ ಮದುವೆಯ ಬಳಿಕ ಹಿಂದೂ ಧರ್ಮಕ್ಕೆ ಸೇರಿದ್ದೇನೆ. ನಾವು ಚರ್ಚ್‌ಗೆ ಹೋಗೋದಿಲ್ಲ, ಮಕ್ಕಳು ಸಹ ಹಿಂದೂ ಧರ್ಮ ಪಾಲನೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ನನ್ನ ಮಗ ಕ್ರಿಶ್ಚಿಯನ್ ಎಂದು ಸಾಬೀತು ಮಾಡಿದ್ರೆ ದೈವ ನರ್ತನಕ್ಕೆ ಕಳಿಸಲ್ಲ. ಮಂಗಳೂರಿನ ಎಲ್ಲಾ ಚರ್ಚ್‌ಗಳಿಂದ ದಾಖಲೆ ತರಲಿ ಎಂದು ಸವಾಲು ಹಾಕಿದ್ದಾರೆ.
ಒಟ್ಟಿನಲ್ಲಿ ತಮ್ಮ ಮೇಲಿನ ಆರೋಪಗಳಿಗೆ ಸ್ಪಷ್ಟನೆ ನೀಡುವ ಕೆಲಸವನ್ನು ದೈವ ನರ್ತಕರು ಮಾಡಿದ್ದಾರೆ. ಆದ್ರೆ ಇದನ್ನು ದೈವರಾಧಕರು, ಭಕ್ತರು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ.
Published On - 6:53 pm, Wed, 18 March 26