ಬಾಲಕನ ಎದೆಯಾಳಕ್ಕೆ ಹೊಕ್ಕಿದ್ದ ತೆಂಗಿನ ಗರಿ, ಚೈನ್ ಯಶಸ್ವಿಯಾಗಿ ಹೊರ ತೆಗೆದ ಸರ್ಕಾರಿ ವೈದ್ಯರು
ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ವೈದ್ಯರು 12 ವರ್ಷದ ಬಾಲಕನ ಎದೆಯಲ್ಲಿ ಸಿಲುಕಿದ್ದ ತೆಂಗಿನ ಗರಿ ಮತ್ತು ಸರವನ್ನು ನಡೆದ ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಹೊರ ತೆಗೆದಿದ್ದಾರೆ. ಶಸ್ತ್ರಚಿಕಿತ್ಸೆಯಿಂದ ಬಾಲಕನ ಜೀವ ಉಳಿದಿದೆ. ಬಾಲಕ ಈಗ ಚೇತರಿಸಿಕೊಳ್ಳುತ್ತಿದ್ದಾನೆ. ವೈದ್ಯರ ಕೌಶಲ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ಮಂಗಳೂರು, ಫೆಬ್ರವರಿ 10: ಅವಘಡವೊಂದರಲ್ಲಿ 12 ವರ್ಷದ ಬಾಲಕನ ಎದೆಯಲ್ಲಿ ಹೊಕ್ಕಿದ್ದ ತೆಂಗಿನ ಗರಿ ಹಾಗೂ ಸರವನ್ನು ಸುದೀರ್ಘ ಅವಧಿಯ ಶಸ್ತ್ರಚಿಕಿತ್ಸೆಯ ಮೂಲಕ ಹೊರ ತೆಗೆಯುವ ಮೂಲಕ ಮಂಗಳೂರಿನ (Mangaluru) ವೆನ್ಲಾಕ್ ಆಸ್ಪತ್ರೆಯ ಡಾ. ಸುರೇಶ್ ಪೈ ನೇತೃತ್ವದ ತಂಡ ಬಾಲಕನ ಜೀವ ಉಳಿಸಿದೆ. ಇಂತಹ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿದ ವೈದ್ಯರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಅಸ್ಸಾಂ ಮೂಲದ ಕಾರ್ಮಿಕ ಕುಟುಂಬ ಮಡಿಕೇರಿಯಲ್ಲಿ ವಾಸವಿಗಿದೆ. ಶನಿವಾರ ಸಂಜೆ ಬಾಲಕ ಕಮಲ್ ಹಸನ್ ಆಟವಾಡುತ್ತಿದ್ದಾಗ ತೆಂಗಿನ ಗರಿಯ ಭಾಗವೊಂದು ಆತನ ಮೇಲೆ ಬಿದ್ದಿತು. ಬಾಲಕನ ಕುತ್ತಿಗೆಯಲ್ಲಿದ್ದ ಸರದ ಜೊತೆಗೆ ತೆಂಗಿನ ಗರಿಯೂ ಎದೆಯ ಭಾಗದಲ್ಲಿ ಸಿಲುಕಿಕೊಂಡಿತ್ತು. ಕೂಡಲೇ ಪೋಷಕರು ಬಾಲಕನನ್ನು ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದರು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರಿಂದ ಬಾಲಕನನ್ನು ಮಡಿಕೇರಿಯಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ರವಾನೆ ಮಾಡಲಾಯಿತು.
ಕೂಡಲೇ ಸಿದ್ದವಾದ ಆಸ್ಪತ್ರೆ ಕಾರ್ಡಿಯೋಥೋರಾಸಿಕ್ ಮತ್ತು ವ್ಯಾಸ್ಕ್ಯುಲರ್ ಸರ್ಜರಿ ವಿಭಾಗದ ಸಂಪೂರ್ಣ ತಂಡವು ಡಾ. ಸುರೇಶ್ ಪೂ ನೇತೃತ್ವದಲ್ಲಿ ಮಧ್ಯರಾತ್ರಿ 1:30 ರಿಂದ 3:30 ರ ನಡುವೆ ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ತೆಂಗಿನ ಗರಿ ಮತ್ತು ಸರವನ್ನು ಯಶಸ್ವಿಯಾಗಿ ಹೊರತೆಗೆದಿದೆ.
ಇದನ್ನೂ ಓದಿ: ಕುರಿ ಸಾಕಣೆ ಹೆಸ್ರಲ್ಲಿ ಅಕ್ರಮ ಕಸಾಯಿಖಾನೆ: ಮೇಯರ್ ದಾಳಿ ವೇಳೆ ಗೋವಿನ ರುಂಡ-ಮುಂಡ ಪತ್ತೆ
ಬಾಲಕ ಈಗ ಚೇತರಿಸಿಕೊಳ್ಳುತ್ತಿದ್ದು, ಆತನ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಮಂಗಳೂರಿನ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಈ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ. ಸರ್ಕಾರಿ ವೈದ್ಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ವೈದ್ಯರ ಕಾರ್ಯಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿನಂದನೆ ಸಲ್ಲಿಸಿದ್ದಾರೆ. ಶಸ್ತ್ರಚಿಕಿತ್ಸೆಗೆ ಒಳಗಾದ ಅಸ್ಸಾಂ ಮೂಲದ ಬಾಲಕ ಕಮಲ್ ಹುಸೇನ್ ಚೇತರಿಸಿಕೊಳ್ಳುತ್ತಿದ್ದಾನೆ. ಇಂತಹ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಡೆಸಿದ ಡಾ. ಸುರೇಶ್ ಪೈ ನೇತೃತ್ವದ ವೈದ್ಯರ ತಂಡದ ಕಾರ್ಯ ಅಭಿನಂದನಾರ್ಹ. ಸಾರ್ವಜನಿಕರ ಸೇವೆಗೆ ಇರುವ ಸರ್ಕಾರಿ ಆಸ್ಪತ್ರೆಗಳನ್ನು ಮತ್ತಷ್ಟು ಅನುಕೂಲಕರವಾಗಿಸಲು ಮತ್ತು ಅತ್ಯುತ್ತಮ ಸೇವೆಗಳು ದೊರೆಯುವಂತೆ ಮೇಲ್ದರ್ಜೆಗೆ ಏರಿಸುವಲ್ಲಿ ನಮ್ಮ ಸರ್ಕಾರ ಸದಾ ಬದ್ಧವಾಗಿದೆ ಎಂದು ಸಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ಅತ್ಯುತ್ತಮ ದರ್ಜೆಯ ಹಾಗೂ ಗುಣಮಟ್ಟದ ವೈದ್ಯಕೀಯ ಸಾಧನಗಳು ಇರುವುದು ಹಾಗೂ ಶ್ರೇಷ್ಠ ತಜ್ಞ ವೈದ್ಯರ ತಂಡದಿಂದ ಇಂತಹ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಡೆಸಲು ಸಾಧ್ಯವಾಗಿದೆ. ಸಾರ್ವಜನಿಕರಿಗೆ ಸದಾ ಉತ್ತಮ ಸೇವೆ ನೀಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:57 am, Mon, 10 February 25




