
ಮಂಗಳೂರು, ಮೇ 14: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇಗುಲದ (Kukke Subrahmanya Temple) ವ್ಯವಸ್ಥಾಪನಾ ಆಡಳಿತ ಮಂಡಳಿ ಅಧ್ಯಕ್ಷನಾಗಿ ಮಾಜಿ ರೌಡಿಶೀಟರ್ ಹರೀಶ್ ಇಂಜಾಡಿ (harish injadi) ನೇಮಕವಾಗಿದ್ದಾರೆ. ಈ ಅಧ್ಯಕ್ಷ ಸ್ಥಾನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮತ್ತು MLC ಮಂಜುನಾಥ ಭಂಡಾರಿ ಕಾಂಗ್ರೆಸ್ ಮುಖಂಡ ಕಂ ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ಇಂಜಾಡಿ ಹೆಸರನ್ನು ಶಿಫಾರಸ್ಸು ಮಾಡಿದ್ದರು. ಆದರೆ ಹರೀಶ್ಗೆ ಅಧ್ಯಕ್ಷ ಸ್ಥಾನ ನೀಡಲು ಸುಬ್ರಹ್ಮಣ್ಯ ಗ್ರಾಮಸ್ಥರು ವಿರೋಧಿಸಿದ್ದರು.
ಕಾಂಗ್ರೆಸ್ ಮುಖಂಡ ಕಂ ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ಇಂಜಾಡಿ ಮೇಲೆ ಅನೇಕ ಆರೋಪಗಳು ಕೇಳಿಬಂದಿವೆ. ನಕಲಿ ಚೆಕ್ ನೀಡಿ ಹಣ್ಣು-ಕಾಯಿ ಟೆಂಡರ್ ಮಾಡಿ ದೇಗುಲ ಆಡಳಿತ ಮಂಡಳಿಗೆ ವಂಚನೆ ಮಾಡಿರುವ ಆರೋಪ ಇದೆ. ಇದೇ ಆರೋಪದಲ್ಲಿ ಅವರನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ NIAಗೆ ವಹಿಸುವಂತೆ ರಾಜ್ಯಪಾಲರಿಗೆ ಬಿಜೆಪಿ ಮನವಿ
ಅಲ್ಲದೇ ಮರಳು ಮಾಫಿಯಾ ಮತ್ತು ಮರ ಕಳ್ಳ ಸಾಗಾಣೆ ಆರೋಪಿಸಿ ದಾಖಲೆ ಸಮೇತ ಧಾರ್ಮಿಕ ದತ್ತಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿಗೆ ಸುಬ್ರಹ್ಮಣ್ಯ ಗ್ರಾಮಸ್ಥರು ಪತ್ರ ಬರೆದಿದ್ದರು. ಆದರೆ ಗ್ರಾಮಸ್ಥರ ಮನವಿಗೂ ಕ್ಯಾರೆ ಎನ್ನದೇ ಹರೀಶ್ ಇಂಜಾಡಿ ನೇಮಕ ಮಾಡಲಾಗಿದೆ. ಆಡಳಿತ ಮಂಡಳಿ ಸದ್ಯಸ್ಯರಾಗಲು ಸಂಸ್ಥೆಯ ಹಿತಾಸಕ್ತಿಗೆ ವಿರುದ್ಧ ಇದ್ದವರು ಆಗಬಾರದು ಎನ್ನುವ ನಿಯಮ ಮೀರಿ ಆಯ್ಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಅಧ್ಯಕ್ಷರಾಗಿ ಹರೀಶ್ ಇಂಜಾಡಿ ಆಯ್ಕೆ ಬೆನ್ನಲ್ಲೇ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ತಾಣಗಳಲ್ಲಿ ಕಾಂಗ್ರೆಸ್ ವಿರುದ್ದ ಬಿಜೆಪಿ ಆಕ್ರೋಶ ಹೊರಹಾಕಿದೆ. ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯಾದಾಗ ರೌಡಿ ಶೀಟರ್ ಎಂದಿದ್ದ ಕಾಂಗ್ರೆಸ್. ರೌಡಿಶೀಟರ್ ಆದ ಕಾರಣ ಸುಹಾಸ್ ಮನೆಗೆ ಭೇಟಿ ನೀಡಲ್ಲ ಎಂದು ಪರಮೇಶ್ವರ್, ದಿನೇಶ್ ಗುಂಡೂರಾವ್ ಹೇಳಿದ್ದರು. ಆದರೆ ಇದೀಗ ಗುಂಡೂರಾವ್ ಶಿಫಾರಸ್ಸಿನಂತೆ ಮಾಜಿ ರೌಡಿಶೀಟರ್ಗೆ ಕುಕ್ಕೆ ಅಧ್ಯಕ್ಷ ಪಟ್ಟ ನೀಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಮಂಗಳೂರು: ವಿದ್ಯಾರ್ಥಿನಿಯಿಂದ ದೇಶ ವಿರೋಧಿ ಪೋಸ್ಟ್, ‘ದಿಕ್ಕಾರ ಆಪರೇಷನ್ ಸಿಂದೂರ್’ ಪೋಸ್ಟ್ಗೆ ಧಿಕ್ಕಾರ
‘ರೌಡಿಶೀಟರ್ಗೆ ನಾಗ ಕ್ಷೇತ್ರ ರಾಜ್ಯದ ನಂ. 1 ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯ ಸಮಿತಿ ಅಧ್ಯಕ್ಷ ಸ್ಥಾನ. ರೌಡಿ ಭಾಗ್ಯ’. ‘ರೌಡಿಶೀಟರ್ ಮನೆಗೆ ಭೇಟಿ ನೀಡಲ್ಲ ಎಂದು ಹೇಳುತ್ತಿದ್ದ ಸರ್ಕಾರ ಇಂದು ರೌಡಿ ಶೀಟರ್ಗೆ ಅಧ್ಯಕ್ಷ ಸ್ಥಾನ ಕೊಟ್ಟಿದೆ’. ‘ಇದಕ್ಕೂ ಮೊದಲು ಕುಕ್ಕೆ ದೇವಸ್ಥಾನಕ್ಕೆ ವಚನೆ ಮೋಸ ಮಾಡಿರುವ ಪ್ರಕರಣಗಳು ಇವರ ಮೇಲಿದೆ. ಇದೀಗ ಅಧ್ಯಕ್ಷ ಸ್ಥಾನ ಕೊಟ್ಟು ದೇವಸ್ಥಾನವನ್ನು ಏನು ಮಾಡುತ್ತಾರೆ ನೋಡಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.
ಈ ಪ್ರಕರಣ ವಿಚಾರವಾಗಿ ಸ್ಥಳೀಯರು ಹೈಕೋರ್ಟ್ ಮೆಟ್ಟಿಲೇರಿದ್ದು, ಕರ್ನಾಟಕ ಸರ್ಕಾರದ ನಿರ್ಧಾರದ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಸಂಬಂಧಿಪಟ್ಟ ಅಧಿಕಾರಿಗಳ ಮೇಲೆ ಕ್ರಮ ತಗೆದುಕೊಳ್ಳವಂತೆ ಕೋರ್ಟ್ ಮೊರೆ ಹೊಗಲಾಗಿದೆ. ಸಚಿವರಿಂದ ಒತ್ತಡ ಹಾಕಿ ಅನರ್ಹ ವ್ಯಕ್ತಿಗೆ ಅಧ್ಯಕ್ಷ ಸ್ಥಾನ ಆರೋಪ ಮಾಡಲಾಗಿದೆ. ಅಧ್ಯಕ್ಷ ಸ್ಥಾನ ಹಾಗೂ ಸದಸ್ಯ ಸ್ಥಾನ ರದ್ದುಗೊಳಿಸುವವಂತೆ ದೂರು ಕೂಡ ನೀಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:31 am, Wed, 14 May 25