ಕುಕ್ಕೆ ಸುಬ್ರಹ್ಮಣ್ಯ ದೇಗುಲ ಆಡಳಿತ ಮಂಡಳಿಗೆ ಮಾಜಿ ರೌಡಿಶೀಟರ್ ಹೆಸರು ಶಿಫಾರಸ್ಸು
ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ತಮ್ಮ ನಾಗದೋಷ ಪರಿಹಾರಕ್ಕೆ ಪೂಜೆ, ಸೇವೆ ಸಲ್ಲಿಸುತ್ತಾರೆ. ಈ ಸುಕ್ಷೇತ್ರಕ್ಕೆ ಇತ್ತೀಚಿಗೆ ಭೇಟಿ ನೀಡಿದ್ದ ಬಾಲಿವುಡ್ ನಟಿ ಕತ್ರೀನಾ ಕೈಫ್ ಸರ್ಪ ಸಂಸ್ಕಾರ ಪೂಜೆ ಮಾಡಿಸಿದ್ದರು. ವರ್ಷವಿಡೀ ವಿಐಪಿಗಳು, ಸಿನಿಮಾ ತಾರೆಯರು ಈ ದೇವಸ್ಥಾನಕ್ಕೆ ಬರುತ್ತಲೇ ಇರುತ್ತಾರೆ. ಈ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಸ್ಥಾನಕ್ಕೆ ಸಚಿವರೊಬ್ಬರು ಓರ್ವ ಮಾಜಿ ರೌಡಿಶೀಟರ್ ಹೆಸರು ಶಿಫಾರಸ್ಸು ಮಾಡಿದ್ದಾರೆ.

ಮಂಗಳೂರು, ಮಾರ್ಚ್ 26: ನಾಗಧೋಷ ಪರಿಹಾರ ಮಾಡುವ ಸುಪ್ರಸಿದ್ಧಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ (Kukke Subrahmanya Temple) ದಕ್ಷಿಣ ಕನ್ನಡ (Dakshina Kannada) ಜಿಲ್ಲೆ ಕಡಬ ತಾಲೂಕಿನಲ್ಲಿದೆ. ಕರ್ನಾಟಕದ ಶ್ರೀಮಂತ ದೇಗುಲಗಳ ಪೈಕಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಅಗ್ರಸ್ಥಾನದಲ್ಲಿದೆ. ದೇಶ-ವಿದೇಶಗಳಿಂದ ಜನರು ವರ್ಷಪೂರ್ತಿ ಈ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಈ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ಸದಸ್ಯ ಸ್ಥಾಣಕ್ಕೆ ಭಾರಿ ರಾಜಕೀಯ ಲಾಬಿ ಕಳೆದ ಒಂದೆರಡು ತಿಂಗಳಿಂದ ನಡೆದಿದೆ. ಇದೀಗ, ಆಡಳಿತ ಮಂಡಳಿ ಸದಸ್ಯ ಸ್ಥಾನಕ್ಕೆ ಸಚಿವರೊಬ್ಬರು ಓರ್ವ ಮಾಜಿ ರೌಡಿಶೀಟರ್ ಹಾಗೂ ದೇವಸ್ಥಾನಕ್ಕೆ ದ್ರೋಹ ಬಗೆದು ಜೈಲಿನಲ್ಲಿದ್ದವನ ಹೆಸರು ಶಿಫಾರಸ್ಸು ಮಾಡಿದ್ದಾರೆ.
ಗ್ರಾಮ ಪಂಚಾಯತಿ ಸದಸ್ಯ ಕಾಂಗ್ರೆಸ್ನ ಹರೀಶ್ ಇಂಜಾಡಿ ಎಂಬಾತ ತಮಗೆ ಸದಸ್ಯ ಸ್ಥಾನ ನೀಡಲಬೇಕು ಅಂತ ಪಟ್ಟು ಹಿಡಿದಿದ್ದಾರೆ. ಇವರು, ಓರ್ವ ಮಾಜಿ ರೌಡಿಶೀಟರ್ ಆಗಿದ್ದು, ದೇವಸ್ಥಾನದ ಆವರಣದಲ್ಲಿ ಇವರ ಒಡೆತನದ ಪೂಜಾ ಪರಿಕರಗಳ ಅಂಗಡಿ ಮಳಿಗೆಗಳು ಇವೆ. ದೇವಸ್ಥಾನದ ಹಣ್ಣುಕಾಯಿ ಮಳಿಗೆಗಳ ಟೆಂಡರ್ನಲ್ಲಿ ನಕಲಿ ಚೆಕ್ ನೀಡಿ ದೇವಸ್ಥಾನಕ್ಕೆ ವಂಚನೆ ಮಾಡಿದ್ದರು.
ಈ ಬಗ್ಗೆ ಆಡಳಿತ ಮಂಡಳಿ ನೀಡಿದ ದೂರಿನಿಂದ ಹರೀಶ್ ಜೈಲುವಾಸ ಕೂಡ ಅನುಭವಿಸಿದ್ದರು. ಇಂತಹ ಸದಸ್ಯ ನಮಗೆ ಬೇಡ ಅಂತ ಧಾರ್ಮಿಕ ದತ್ತಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಗ್ರಾಮಸ್ಥರು ಪತ್ರ ಬರೆದಿದ್ದಾರೆ. ರಾಮಲಿಂಗಾರೆಡ್ಡಿ ಇವರಿಗೆ ಶಿಫಾರಸ್ಸು ಮಾಡಲಿಲ್ಲ. ಬಳಿಕ ಹರೀಶ್ ಇಂಜಾಡಿ ತಾನು ಕಾಂಗ್ರೆಸ್ ಮುಖಂಡ ಅಂತ ಮಾಜಿ ಸಚಿವರೊಬ್ಬರ ಬಳಿ ಹೋಗಿ ತನ್ನ ಹೆಸರನ್ನು ಶಿಫಾರಸ್ಸು ಪಟ್ಟಿಗೆ ಸೇರಿಸಿಕೊಂಡಿದ್ದಾರೆ. ಆದರೆ, ಇದಕ್ಕೆ ತೀರ್ವ ವಿರೋಧ ವ್ಯಕ್ತವಾಗಿದೆ.
ದೇವಸ್ಥಾನದ ಇತಿಹಾಸದ ಪ್ರಕಾರ ಇಲ್ಲಿನ ಆದಿವಾಸಿ ಮಲೆಕುಡಿಯ ಜನಾಂಗದವರು ಇಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಕುಕ್ಕೆಯಲ್ಲಿನ ರಥೋತ್ಸವಗಳಲ್ಲಿ ಮಲೆಕುಡಿಯ ಜನಾಂಗದವರದ್ದು ಅತೀ ಮುಖ್ಯ ಪಾತ್ರವಿರುತ್ತದೆ. ಹೀಗಾಗಿ, ಪ್ರತಿ ಬಾರಿ ಒಂದು ಸದಸ್ಯ ಸ್ಥಾನವನ್ನು ಮಲೆಕುಡಿಯ ಜನಾಂಗಕ್ಕೆ ಮೀಸಲಾಗಿದೆ. ಆದರೆ, ಈ ಬಾರಿ ಸಚಿವರು ಮಲೆಕುಡಿಯ ಜನಾಂಗವನ್ನು ಬಿಟ್ಟು ಬೇರೆಯವರಿಗೆಲ್ಲ ಶಿಫಾರಸ್ಸು ಮಾಡಿದ್ದಾರೆ. ಇದರಿಂದ ಮಲೆಕುಡಿಯ ಜನಾಂಗ ಕೆರಳಿದೆ.
ಇದನ್ನೂ ಓದಿ: ಸೈಬರ್ ವಂಚನೆಗಾಗಿ ಬಡ ಜನರ ಬ್ಯಾಂಕ್ ಖಾತೆ ಬಳಕೆ, ಇಬ್ಬರ ಬಂಧನ
ಶ್ರೀಮಂತ ದೇಗುಲದ ಬೊಕ್ಕಸ ಹಾಗೂ ಇಲ್ಲಿನ ಪ್ರತಿಷ್ಠೆಗಾಗಿ ಈ ಲಾಭಿ ಮುಂದುವರೆದಿದೆ. ಆದ್ರೆ ಕ್ರಿಮಿನಲ್ ಹಿನ್ನೆಲೆಯಿರುವವರಿಗೆ ಅಧ್ಯಕ್ಷ ಹಾಗೂ ಸದಸ್ಯ ಸ್ಥಾನ ನೀಡದಂತೆ ಎಚ್ಚರ ವಹಿಸುವುದು ಸರ್ಕಾರ ಹಾಗೂ ಇಲಾಖೆಗಳ ಜವಾಬ್ದಾರಿಯಾಗಿದೆ.