ಹಿಂದೂ ಯುವಕರು ಅನ್ಯ ಧರ್ಮದ ಯುವತಿಯರನ್ನು ಮದ್ವೆಯಾಗ್ಬೇಕೆಂದ ಸೂಲಿಬೆಲೆಗೆ ಸಂಕಷ್ಟ
ಹಿಂದೂ ಯುವಕರು ಅನ್ಯ ಧರ್ಮದ ಯುವತಿಯರನ್ನು ಮದುವೆಯಾಗಬೇಕೆಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮಂಗಳೂರಿನಲ್ಲಿ ಕರೆ ನೀಡಿದ್ದು, ವಿವಾದಕ್ಕೆ ಕಾರಣವಾಗಿದೆ. ಸಾಮಾಜಿ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ ಸೂಲಿಬೆಲೆ ಹೇಳಿಕೆಗೆ ಡಿವೈಎಫ್ಐ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿತ್ತು. ಇದರ ಬೆನ್ನಲ್ಲೇ ಚಕ್ರವರ್ತಿ ಸೂಲಿಬೆಲೆಗೆ ಸಂಕಷ್ಟ ಎದುರಾಗಿದೆ.

ಮಂಗಳೂರು, (ಮಾರ್ಚ್ 17): ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ವಿರುದ್ಧ ಎಫ್‌ಐಆರ್ ದಾಖಲಾಗಿದೆ. ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಉಳ್ಳಾಲ (Ullala) ಪೊಲೀಸ್ ಠಾಣೆಯಲ್ಲಿ ಧರ್ಮ-ಧರ್ಮಗಳ ನಡುವೆ ದ್ವೇಷ ಪ್ರಚೋದನೆ ಅಡಿಯಲ್ಲಿ ಸೂಲಿಬೆಲೆ ವಿರುದ್ಧ ದೂರು ದಾಖಲಾಗಿದೆ. ಮಾರ್ಚ್ 9ರಂದು ವಿ.ಎಚ್.ಪಿ ಹಮ್ಮಿಕೊಂಡಿದ್ದ ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮನಡೆ ಪಾದಯಾತ್ರೆಯ ಸಮಾರೋಪ ಕಾರ್ಯಕ್ರಮದಲ್ಲಿ ಸೂಲಿಬೆಲೆ ಮಾತನಾಡಿ, ಅನ್ಯ ಸಮಾಜದವರನ್ನು ಪ್ರೀತಿಸಿ ಮದುವೆಯಾಗಿ ಎಂದು ಕರೆ ನೀಡಿದ್ದರು. ಇದು ಭಾರೀ ವಿವಾದ ಸೃಷ್ಟಿಸಿತ್ತು. ಈ ಸಂಬಂಧ ಇದೀಗ ಪ್ರಚೋದನಕಾರಿ ಭಾಷಣ ಮಾಡಿ, ಕೋಮು ದ್ವೇಷಕ್ಕೆ ಕಾರಣರಾಗಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡ ರಶೀದ್ ಉಳ್ಳಾಲ ಠಾಣೆಗೆ ದೂರು ನೀಡಿದ್ದು, ಈ ದೂರಿನ ಮೇರೆಗೆ ಉಳ್ಳಾಲ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಅಷ್ಟಕ್ಕೂ ಸೂಲಿಬೆಲೆ ಹೇಳಿದ್ದೇನು?
ಮತಾಂತರ ಎಂದು ಬಡಿದಾಡಿದ್ದು ಸಾಕು. ಈಗ ಹಿಂದೂ ಧರ್ಮಕ್ಕೆ ಘರ್ ವಾಪ್ಸಿ ಮಾಡೋ ಬಗ್ಗೆ ಮಾತಾಡಿ. ಎಲ್ಲಿವರೆಗೆ ಲವ್ ಜಿಹಾದ್, ಮತಾಂತರ ಬಗ್ಗೆ ಮಾತನಾಡೋದು? ಎಷ್ಟು ದಿನ ನಮ್ಮ ಹುಡುಗಿಯರನ್ನೇ ನೋಡ್ತಿಯಪ್ಪ ಅಂತ ನಮ್ಮ ಗಂಡು ಮಕ್ಕಳಿಗೆ ಕೇಳೋಣ. ಬೇರೆ ಧರ್ಮದ ಹುಡುಗಿಯರನ್ನೂ ನೋಡು ಅಂತ ಹೇಳಬೇಕು. ಅನ್ಯಧರ್ಮದ ಯುವತಿಯರನ್ನು ಪ್ರೀತಿಸಿ ಮದುವೆಯಾಗಿ ಎಂದು ಹಿಂದೂ ಯುವಕರಿಗೆ ಕರೆ ನೀಡಿದ್ದರು.
ಇದನ್ನೂ ಓದಿ: ಅನ್ಯ ಧರ್ಮದ ಯುವತಿಯರನ್ನ ಪ್ರೀತಿಸಿ ಮದುವೆಯಾಗಿ: ನನ್ನ ಹೇಳಿಕೆಗೆ ನಾನು ಬದ್ಧ ಎಂದ ಸೂಲಿಬೆಲೆ
ನಮ್ಮ ಸಮಾಜದಲ್ಲಿ ಹೆಣ್ಣು ಮಕ್ಕಳಿಲ್ಲ ಅನ್ನೋವಾಗ ಪಕ್ಕದ ಸಮಾಜದಲ್ಲೂ ಸಮಸ್ಯೆಯಿದೆ ಎಂದು ಧೈರ್ಯ ತುಂಬಿ. ನಾವು ಆಕ್ರಮಣಕಾರಿಯಾಗಿ ಆಡಬೇಕು, ರಕ್ಷಣಾತ್ಮಕವಾಗಿ ಆಡಿದ್ದು ಸಾಕು. ಟೆಸ್ಟ್ ಮ್ಯಾಚ್‌ಗಳು ನಿಂತು ಹೋಯ್ತು. ಈಗ ಟ್ವೆಂಟಿ ಟ್ವೆಂಟಿ ಮ್ಯಾಚ್ ಆಡೋ ಸಮಯ ಬಂದಾಗಿದೆ. ಇರುವ ಇಪ್ಪತ್ತು ಓವರ್‌ನಲ್ಲಿ ಬಡಿಬೇಕು ಅಷ್ಟೇ. ಘರ್ ವಾಪ್ಸಿ ಹೇಗೆ ಮಾಡೋದು ಅನ್ನೋದರ ಬಗ್ಗೆ ರೀಲ್ಸ್ ಮಾಡಿ. ಹಿಂದೂ ಧರ್ಮದಿಂದ ಹೋಗಿರುವವರನ್ನ ಮೊದಲು ವಾಪಸ್ ತರೋಣ ಎಂದು ಕರೆ ನೀಡಿದ್ದರು.
ಸೂಲಿಬೆಲೆ ಹೇಳಿಕೆಗೆ ವ್ಯಾಪಕ ವಿರೋಧ
ಇನ್ನು ಚಕ್ರವರ್ತಿ ಸೂಲಿಬೆಲೆ ಹೇಳಿಕೆಗೆ ಭಾರೀ ವಿರೋಧಗಳು ವ್ಯಕ್ತವಾಗಿವೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆ ಜೋರಾಗಿದೆ. ಅದರಲ್ಲೂ ಎಸ್ಡಿಪಿಎಸ್ ತೀವ್ರವಾಗಿ ವಿರೋಧಿಸಿದ್ದು, ನಿಮ್ಮ ಕುಟುಂಬದ ಎಷ್ಟು ಜನ ಅನ್ಯಧರ್ಮೀಯರನ್ನು ವಿವಾಹವಾಗಿದ್ದಾರೆ? ಹಿಂದೂ ಧರ್ಮದ ಯುವತಿಯರನ್ನು ಮದುವೆಯಾಗಲು ಯಾವ ಧರ್ಮದವರಿಗೆ ಕಾಂಟ್ರ್ಯಾಕ್ಟ್ ಕೊಟ್ಟಿದ್ದೀಯಾ ಎಂದು ಪ್ರಶ್ನೆ ಮಾಡಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.