ಬೇಸಿಗೆಯ ಬೇಗೆಗೆ ತಂಪು ಪಾನೀಯಗಳ ಮೊರೆ ಹೋದ ಮಂಗಳೂರು ಜನ; ಈ ಬಾರಿ ಹೆಚ್ಚಾದ ಮಾರಾಟ
ಕರಾವಳಿಯಲ್ಲಿ ತಾಪಮಾನವು ಹೆಚ್ಚಾದ ಕಾರಣ, ಮಂಗಳೂರು ಜನರು ತಮ್ಮ ಬಾಯಾರಿಕೆಯನ್ನು ನೀಗಿಸಲು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ.
ಮಂಗಳೂರು: ಮಾರ್ಚ್ ತಿಂಗಳ ಆರಂಭದಲ್ಲೇ ಬೇಸಿಗೆಯ(Summer) ಬೇಗೆ ವಿಪರೀತವಾಗಿದೆ. ಮಂಗಳೂರಿನಲ್ಲಿ ಬಿಸಿಲಿನ ತಾಪ ಮತ್ತು ಬಿಸಿಲಿನ ವಾತಾವರಣದಿಂದಾಗಿ ತಂಪು ಪಾನೀಯಗಳು ಮತ್ತು ಐಸ್ ಕ್ರೀಮ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಟ್‌ವೇವ್ ಪರಿಸ್ಥಿತಿಯಿಂದಾಗಿ ಕರಾವಳಿ ಪ್ರದೇಶಗಳಲ್ಲಿ ತಾಪಮಾನವು ಹೆಚ್ಚಾದ ಕಾರಣ, ಜನರು ತಮ್ಮ ಬಾಯಾರಿಕೆಯನ್ನು ನೀಗಿಸಲು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಸಾಮಾನ್ಯವಾಗಿ ಏಪ್ರಿಲ್ ನಂತರ ತಂಪು ಪಾನೀಯಗಳ ಮಾರಾಟ ಹೆಚ್ಚುತ್ತದೆ. ಆದಾಗ್ಯೂ, ಈ ವರ್ಷ ಮಾರ್ಚ್ ಆರಂಭದಲ್ಲೇ ಸುಡುಬಿಸಿಲ ತಾಪ ಹೆಚ್ಚಾಗಿದ್ದು ತಂಪು ಪಾನೀಯಗಳ ಮಾರಾಟ ಜೋರಾಗಿದೆ.
ಹಂಪನಕಟ್ಟೆ ಸರ್ವಿಸ್ ಬಸ್ ನಿಲ್ದಾಣದ ಬಳಿ ಹಾಲಿನ ಬೂತ್ ನಡೆಸುತ್ತಿರುವ ಸಲ್ಮಾನ್ ಮತ್ತು ಶಹೀದ್ ಎಂಬುವವರು ಮಾತನಾಡುತ್ತ, ಕೋವಿಡ್ -19 ನಂತರ ಇದೇ ಮೊದಲ ಬಾರಿಗೆ ಬೇಸಿಗೆಯಲ್ಲಿ ಒಳ್ಳೆಯ ವ್ಯಾಪಾರ ನಡೆಯುತ್ತಿದೆ. ಪ್ರತಿ ದಿನವೂ ನಮಗೆ ಉತ್ತಮ ಲಾಭ ಸಿಗುತ್ತಿದೆ ಎಂದರು. ಇವರು ಬಾದಾಮ್ ಹಾಲು, ಲೆಮೆನ್ ಜ್ಯೂಸ್, ಮಾವಿನ ಹಣ್ಣಿನ ರಸ, ಸೌತೆಕಾಯಿ, ಲಸ್ಸಿ ಮತ್ತು ಮಜ್ಜಿಗೆ ಸೇರಿದಂತೆ ವಿವಿಧ ಜ್ಯೂಸ್‌ಗಳನ್ನು ಮಾರಾಟ ಮಾಡುತ್ತಾರೆ.
ತಂಪು ಪಾನೀಯಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು
ಇತ್ತೀಚಿನವರೆಗೂ ಜ್ಯೂಸ್ ಮತ್ತು ಇತರ ಹಾಲು ಆಧಾರಿತ ಪಾನೀಯಗಳನ್ನು ಕೆಲವರು ಮಾತ್ರ ಖರೀದಿಸುತ್ತಿದ್ದರು. ಆದ್ರೆ ಇದೀಗ ಇದಕ್ಕಿದ್ದಂತೆ ಇದರ ಮಾರಾಟ ಹೆಚ್ಚಾಗಿದೆ. ಈ ಬೇಸಿಗೆಯಲ್ಲಿ ನಮ್ಮ ಮಾರಾಟ ಹೆಚ್ಚಾಗಿದೆ. ಏಪ್ರಿಲ್‌ನಿಂದ ಮಾರಾಟ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು. ಮಜ್ಜಿಗೆ ಅತ್ಯಂತ ಜನಪ್ರಿಯ ಬೇಸಿಗೆ ಪಾನೀಯವಾಗಿದೆ, ನಂತರ ಲಸ್ಸಿಯನ್ನು ಜನ ಚೆನ್ನಾಗಿ ಖರೀದಿಸುತ್ತಾರೆ ಎಂದು ಸಲ್ಮಾನ್ ತಿಳಿಸಿದರು.
ಇದನ್ನೂ ಓದಿ:India Weather Updates: ಕರ್ನಾಟಕ,ಕೇರಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಉಷ್ಣಗಾಳಿ, ಈ ರಾಜ್ಯಗಳಲ್ಲಿ ಮಳೆ
ಸೆಂಟ್ರಲ್ ಮಾರ್ಕೆಟ್ ಬಳಿ ಕಳೆದ 18 ವರ್ಷಗಳಿಂದ ಕಬ್ಬಿನ ಜ್ಯೂಸ್ ಅಂಗಡಿ ನಡೆಸುತ್ತಿರುವ ರಾಧಾಕೃಷ್ಣ ಅವರು ಕೂಡ ಬೇಸಿಗೆಯಲ್ಲಿ ತಮ್ಮ ವ್ಯಾಪಾರ ಯಾವ ರೀತಿ ನಡೆಯುತ್ತಿದೆ ಎಂಬ ಬಗ್ಗೆ ಮಾಹಿತಿ ನೀಡಿದರು. ಬಿಸಿಲಿನ ತಾಪ ತಾಳಲಾರದೆ ದಾಹ ನೀಗಿಸಿಕೊಳ್ಳಲು ಹಲವರು ಕಬ್ಬಿನ ಜ್ಯೂಸ್ ಮೊರೆ ಹೋಗುತ್ತಿದ್ದಾರೆ. ನನ್ನ ಅನುಭವದ ಪ್ರಕಾರ, ಹಿಂದಿನ ಎರಡು ವರ್ಷಗಳಿಗಿಂತ ಈ ವರ್ಷ ಮಾರಾಟವು ಉತ್ತಮವಾಗಿದೆ. ದಿನವಿಡೀ ಮನೆಯೊಳಗಿರುವ, ಕಚೇರಿಗಳಲ್ಲಿರುವ ಜನರು ಹೊರಗೆ ಬರುವುದರಿಂದ ಸಂಜೆ 4 ಗಂಟೆಯ ನಂತರ ನಮ್ಮ ಮಾರಾಟವು ಹೆಚ್ಚಾಗುತ್ತೆ ಎಂದು ರಾಧಾಕೃಷ್ಣ ಅವರು ತಿಳಿಸಿದರು.
ಕೂಲ್ ಡ್ರಿಂಕ್ಸ್ ಜೊತೆಗೆ ಎಳನೀರು, ಕಲ್ಲಂಗಡಿ, ಕಿತ್ತಳೆ ಹಣ್ಣಿನ ಜ್ಯೂಸ್ ಸೇರಿದಂತೆ ವಿವಿಧ ಹಣ್ಣುಗಳಿಗೆ ಬೇಡಿಕೆ ಹೆಚ್ಚಿದೆ. ಮಂಗಳೂರಿನಲ್ಲಿ ಈ ಬಾರಿ ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣುಗಳು ಭರ್ಜರಿಯಾಗಿ ಮಾರಾಟವಾಗುತ್ತಿವೆ ಎಂದು ಬೊಂದೇಲ್ ಸರ್ಕಲ್ ಬಳಿಯ ಮಾರಾಟಗಾರರೊಬ್ಬರು ತಿಳಿಸಿದರು. ಇನ್ನು ಮತ್ತೊಂದೆಡೆ ಹ್ಯಾಂಗ್ಯೋ ಐಸ್ ಕ್ರೀಮ್ಸ್ ಪ್ರೈವೇಟ್ ಲಿಮಿಟೆಡ್‌ನ ಉಪಾಧ್ಯಕ್ಷ ದೀಪಾ ಪೈ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ನಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಎಂಟು ರಾಜ್ಯಗಳಲ್ಲಿ ಐಸ್ ಕ್ಯಾಂಡಿಗಳು ಮತ್ತು ಬಾರ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ ಎಂದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:07 am, Sun, 12 March 23