AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧರ್ಮಸ್ಥಳದಲ್ಲಿ ಮಹಾ ವಿಸ್ಮಯ: 26 ವರ್ಷ ಹಿಂದೆ ಓಡಿಹೋಗಿದ್ದ ಹುಡುಗ ಕೊನೆಗೂ ವಾಪಸ್, ಸತೀಶ್ ಈಗ ಮಹಾರಾಷ್ಟ್ರದ ಸಲೀಂ!

ಇದು ಯಾವ ಸಿನಿಮಾ ಕಥೆಗೂ ಕಡಿಮೆಯಿಲ್ಲದ ನೈಜ ಘಟನೆ. ಧರ್ಮಸ್ಥಳದಲ್ಲಿ 26 ವರ್ಷಗಳ ಹಿಂದೆ ಸರ್ಕಸ್ ತಂಡದೊಂದಿಗೆ ಓಡಿಹೋಗಿ ಮಹಾರಾಷ್ಟ್ರದಲ್ಲಿ ‘ಸಲೀಂ ಅಬ್ದುಲ್ ಅನ್ಸಾರಿ’ ಆಗಿ ಬದಲಾಗಿದ್ದ ಸತೀಶ್ ಎಂಬ ಯುವಕ, ಪ್ರವಾಸಕ್ಕೆ ಬಂದಾಗ ಹಳೆಯ ನೆನಪು ಮರುಕಳಿಸಿ ಇದೀಗ ಮನೆಗೆ ಮರಳಿದ್ದಾನೆ! ತಾಯಿಯನ್ನು ಭೇಟಿಯಾಗಿದ್ದಾನೆ. ಧರ್ಮಸ್ಥಳದಲ್ಲಿ ನಡೆದ ವಿಸ್ಮಯಕಾರಿ ಘಟನೆಯ ಪೂರ್ಣ ಮಾಹಿತಿ ಇಲ್ಲಿದೆ.

ಧರ್ಮಸ್ಥಳದಲ್ಲಿ ಮಹಾ ವಿಸ್ಮಯ: 26 ವರ್ಷ ಹಿಂದೆ ಓಡಿಹೋಗಿದ್ದ ಹುಡುಗ ಕೊನೆಗೂ ವಾಪಸ್, ಸತೀಶ್ ಈಗ ಮಹಾರಾಷ್ಟ್ರದ ಸಲೀಂ!
ತಾಯಿ ಜತೆ ಸತೀಶ್ ಅಲಿಯಾಸ್ ಸಲೀಂImage Credit source: tv9
ಪೃಥ್ವಿರಾಜ್​ ಬಿ.ಯು. ಮಂಗಳೂರು
| Edited By: |

Updated on:Jun 11, 2026 | 10:51 AM

Share

ಮಂಗಳೂರು, ಜೂನ್ 11: ದಕ್ಷಿಣ ಕನ್ನಡ (Dakashina Kannada) ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದಲ್ಲಿ ವಿಸ್ಮಯಕಾರಿ ಘಟನೆಯೊಂದು ನಡೆದಿದೆ. ಬರೋಬ್ಬರಿ 26 ವರ್ಷಗಳ ಹಿಂದೆ 12 ವರ್ಷದ ಬಾಲಕನಾಗಿದ್ದಾಗ ಮನೆ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ, ಇದೀಗ ಮನೆಗೆ ಮರಳಿದ್ದಾನೆ. ಧರ್ಮಸ್ಥಳದ ಅಶೋಕನಗರದ ನಿವಾಸಿಯಾಗಿದ್ದ ಸತೀಶ್ ಎಂಬಾತನೇ ಈಗ ಸಲೀಂ ಆಗಿ ಮರಳಿ ಮನೆಗೆ ಬಂದು ತಾಯಿಯನ್ನು ಸೇರಿದ ಅಪರೂಪದ ವ್ಯಕ್ತಿ. 2000ನೇ ಇಸವಿಯಲ್ಲಿ ಧರ್ಮಸ್ಥಳಕ್ಕೆ ಬಂದಿದ್ದ ಸರ್ಕಸ್ ತಂಡದೊಂದಿಗೆ ಆಕರ್ಷಿತನಾಗಿ ಓಡಿಹೋಗಿದ್ದ ಈತ, ಇಷ್ಟು ವರ್ಷಗಳ ಕಾಲ ಮಹಾರಾಷ್ಟ್ರದಲ್ಲಿ ನೆಲೆಸಿದ್ದ.

ಮುಖ್ಯಾಂಶಗಳು

  • 26 ವರ್ಷಗಳ ಬಳಿಕ ತಾಯಿ-ಮಗನ ಸಮ್ಮಿಲನ.
  • ಸರ್ಕಸ್ ತಂಡದ ಜೊತೆ ಓಡಿಹೋಗಿದ್ದ ಬಾಲಕ ಸತೀಶ್.
  • ಮಹಾರಾಷ್ಟ್ರದಲ್ಲಿ ‘ಸಲೀಂ’ ಆದ ಕರಾವಳಿ ಯುವಕ.

ಊರನ್ನೇ ಮರೆತು ಮಹಾರಾಷ್ಟ್ರದಲ್ಲಿ ‘ಸಲೀಂ ಅಬ್ದುಲ್ ಅನ್ಸಾರಿ’ ಆಗಿದ್ದ ಸತೀಶ್!

ಮನೆ ಬಿಟ್ಟು ಹೋದ ಬಳಿಕ ಸರ್ಕಸ್ ತಂಡದ ಜೊತೆ ದೇಶದ ವಿವಿಧೆಡೆ ಸುತ್ತಾಡಿದ ಸತೀಶ್, ಕಳೆದ 26 ವರ್ಷಗಳಿಂದ ಮಹಾರಾಷ್ಟ್ರದಲ್ಲೇ ನೆಲೆ ನಿಂತು ಕೆಲಸ ಮಾಡಿಕೊಂಡಿದ್ದ. ನಿರಂತರ ದುಡಿಮೆಯ ನಡುವೆ ಆತ ತನ್ನ ಸ್ವಂತ ಊರು, ಭಾಷೆ ಹಾಗೂ ಹೆತ್ತವರನ್ನೇ ಸಂಪೂರ್ಣವಾಗಿ ಮರೆತುಹೋಗಿದ್ದ. ಅಲ್ಲಿಯೇ ಇಸ್ಲಾಂಗೆ ಮತಾಂತರಗೊಂಡು ತನ್ನ ಹೆಸರನ್ನು ‘ಸಲೀಂ ಅಬ್ದುಲ್ ಅನ್ಸಾರಿ’ ಎಂದು ಬದಲಾಯಿಸಿಕೊಂಡಿದ್ದ. ಅಲ್ಲದೆ, ತಾಲೀಮಾ ಎಂಬಾಕೆಯನ್ನು ವಿವಾಹವಾಗಿರುವ ಈತನಿಗೆ ಈಗ ಖುಷಿ ಮತ್ತು ಅಝಂ ಎಂಬ ಇಬ್ಬರು ಮಕ್ಕಳಿದ್ದಾರೆ. ಇಷ್ಟು ವರ್ಷಗಳ ಕಾಲ ಹೊರ ರಾಜ್ಯದಲ್ಲೇ ಕಳೆದಿದ್ದರಿಂದ ಸತೀಶ್‌ಗೆ ತನ್ನ ಮಾತೃಭಾಷೆಯಾದ ತುಳು ಹಾಗೂ ಕನ್ನಡ ಸಂಪೂರ್ಣವಾಗಿ ಮರೆತುಹೋಗಿದ್ದು, ಈಗ ಕೇವಲ ಹಿಂದಿ ಭಾಷೆಯಲ್ಲಿ ಮಾತ್ರ ಮಾತನಾಡುತ್ತಿದ್ದಾನೆ.

ಸ್ನೇಹಿತರೊಂದಿಗೆ ಧರ್ಮಸ್ಥಳಕ್ಕೆ ಬಂದಾಗ ಮರುಕಳಿಸಿದ ನೆನಪು

ಜೂನ್ 9 ರಂದು ಸತೀಶ್ (ಸಲೀಂ) ತನ್ನ ಮಹಾರಾಷ್ಟ್ರದ ಸ್ನೇಹಿತರ ತಂಡದೊಂದಿಗೆ ಪ್ರವಾಸಕ್ಕಾಗಿ ಧರ್ಮಸ್ಥಳ ದೇವಸ್ಥಾನಕ್ಕೆ ಬಂದಿದ್ದ. ಈ ವೇಳೆ ಈ ಹಿಂದೆ ಸರ್ಕಸ್ ನಡೆಯುತ್ತಿದ್ದ ಜಾಗಕ್ಕೆ ಬಂದಾಗ ಆತನಿಗೆ ಹಳೆಯ ನೆನಪುಗಳು ಹಠಾತ್ತಾಗಿ ಮರುಕಳಿಸಿವೆ. ‘ಇದೇ ನನ್ನ ಸ್ವಂತ ಊರು’ ಎಂಬ ಸತ್ಯ ಮನವರಿಕೆಯಾಗಿದೆ. ತಮ್ಮಂದಿರ ಹೆಸರುಗಳು ನೆನಪಿದ್ದ ಕಾರಣ, ಸ್ಥಳೀಯ ಅಂಗಡಿಯವರ ಬಳಿ ವಿಚಾರಿಸಿ ಕೊನೆಗೂ ತನ್ನ ಹಳೆಯ ಮನೆಯನ್ನು ಹುಡುಕಿಕೊಂಡು ಹೋಗಿದ್ದಾನೆ. ಮನೆಯ ಬಾಗಿಲಿಗೆ ಬಂದು ನಿಂತ ಹಿರಿಯ ಮಗನನ್ನು ಕಂಡ ತಾಯಿಯ ಕಣ್ಣಲ್ಲಿ ಆನಂದಬಾಷ್ಪ ಹರಿದಿದೆ. ಮನೆಯವರೆಲ್ಲರೂ ಸೇರಿ ಮಗನನ್ನು ಅತ್ಯಂತ ಸಂತಸದಿಂದ ಬರಮಾಡಿಕೊಂಡಿದ್ದಾರೆ.

Msathish Alias Saleem In Dharmasthala With Family

ಕುಟುಂಬದವರ ಜತೆ ಸತೀಶ್ ಅಲಿಯಾಸ್ ಸಲೀಂ

ಭಾಷೆಯ ಮಿತಿ ಮೀರಿದ ತಾಯಿಯ ಪ್ರೀತಿ, ಫಲಿಸಿದ ಹರಕೆ

ಸತೀಶ್‌ಗೆ ಕೇವಲ ಹಿಂದಿ ಮಾತ್ರ ಬರುತ್ತಿದ್ದು, ಇತ್ತ ತಾಯಿಗೆ ಹಿಂದಿ ಗೊತ್ತಿಲ್ಲದ ಕಾರಣ ಇಬ್ಬರ ನಡುವೆ ಭಾಷೆಯ ಸಮಸ್ಯೆ ಎದುರಾಗಿತ್ತು. ಆದರೂ ಭಾಷೆಯ ಹಂಗಿಲ್ಲದೆ ತಾಯಿ ಮತ್ತು ಸಹೋದರರನ್ನು ಸತೀಶ್ ಗುರುತಿಸಿ ಅಪ್ಪಿಕೊಂಡಿದ್ದಾನೆ. ಮಗ ಸಿಗಲಿ ಎಂದು ಧರ್ಮಸ್ಥಳ, ಕಟೀಲು ದುರ್ಗಾಪರಮೇಶ್ವರಿ ಹಾಗೂ ಪಣೋಲಿಬೈಲ್ ದೈವಸ್ಥಾನಕ್ಕೆ ತಾಯಿ ವರ್ಷಗಳಿಂದ ಹೊತ್ತಿದ್ದ ಹರಕೆ ಕೊನೆಗೂ ಫಲಿಸಿದೆ. ‘ನಾನು ಸಾಯುವ ಮುನ್ನ ನನ್ನ ಹಿರಿಯ ಮಗನನ್ನು ಒಮ್ಮೆಯಾದರೂ ನೋಡಬೇಕು, ಅವನನ್ನು ಹೇಗಾದರೂ ಕರೆತನ್ನಿ’ ಎಂದು ಇತ್ತೀಚೆಗಷ್ಟೇ ತಾಯಿ ತನ್ನ ಉಳಿದ ಮಕ್ಕಳ ಬಳಿ ಕಣ್ಣೀರಿಟ್ಟಿದ್ದರು. ಹೆತ್ತ ಕರುಳಿನ ಹಂಬಲಕ್ಕೆ ಓಗೊಟ್ಟಂತೆ ಮಗ ಮರಳಿ ಬಂದಿದ್ದು, ಕುಟುಂಬದೊಂದಿಗೆ ಕೆಲವು ದಿನಗಳ ಕಾಲ ಸಂತಸದಿಂದ ಕಾಲ ಕಳೆದ ಸತೀಶ್, ಸದ್ಯ ಮಹಾರಾಷ್ಟ್ರಕ್ಕೆ ಮರಳಿದ್ದಾನೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:28 am, Thu, 11 June 26

Follow Us
ಪೃಥ್ವಿರಾಜ್​ ಬಿ.ಯು. ಮಂಗಳೂರು
ಪೃಥ್ವಿರಾಜ್​ ಬಿ.ಯು. ಮಂಗಳೂರು

ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.

Read More