ಮಂಗಳೂರಿನಲ್ಲಿ ಮುಂದುವರೆದ ನೈತಿಕ ಪೊಲೀಸ್ಗಿರಿ: ಅನ್ಯ ಕೋಮಿನ ಯುವತಿಯೊಂದಿಗೆ ತಿರುಗಾಡುತ್ತಿದ್ದ ಯುವಕನಿಗೆ ಥಳಿತ
ದಕ್ಷಿಣಕನ್ನಡ ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಗಳು ಹೆಚ್ಚಾಗುತ್ತಿದೆ. ಕಳೆದ ಕೆಲ ವಾರಗಳಲ್ಲಿ ಈ ರೀತಿ ಆರುಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಈಗ ಅಂತಹದೇ ಒಂದು ಘಟನೆ ಬೆಳಕಿಗೆ ಬಂದಿದೆ.
ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿ (Moral Policing) ಪ್ರಕರಣಗಳು ಹೆಚ್ಚಾಗುತ್ತಿದೆ. ಕಳೆದ ಕೆಲ ವಾರಗಳಲ್ಲಿ ಈ ರೀತಿ ಆರುಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಈಗ ಅಂತಹದೇ ಒಂದು ಘಟನೆ ಬೆಳಕಿಗೆ ಬಂದಿದೆ. ಹಿಂದೂ ಹುಡುಗಿಯೊಂದಿಗೆ ತಿರುಗಾಡುತ್ತಿದ್ದ ಮುಸ್ಲಿಂ ಯುವಕನಿಗೆ ಥಳಿಸಿ ನೈತಿಕ ಪೊಲೀಸ್ ಗಿರಿ ಮೇರೆದಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದಿದೆ. ಹಲ್ಲೆಗೊಳಗಾದ ಯುವಕ ಕಲ್ಲುಗುಂಡಿಯ ಅಫೀದ್ ಎಂದು ತಿಳಿದು ಬಂದಿದ್ದು, ಸದ್ಯ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ವಿದ್ಯಾರ್ಥಿನಿಯೊಂದಿಗೆ ತಿರುಗಾಡುತ್ತಿದ್ದ ಬಗ್ಗೆ ಮಾಹಿತಿಯಿದ್ದು, ಕುಕ್ಕೆ ಸುಬ್ರಹ್ಮಣ್ಯ ಬಸ್ಸ್ಟ್ಯಾಂಡ್ನಲ್ಲಿ ಈ ಜೋಡಿ ಕಂಡು ಬಂದಿದೆ. ಬಳಿಕ ಕುಮಾರಧಾರ ಬಳಿ ಬಂದಾಗ ಗುಂಪೊಂದು ಯುವಕನಿಗೆ ಥಳಿಸಿದ್ದಾರೆ. ಯುವಕನ ದೂರಿನಂತೆ ಸುಬ್ರಹ್ಮಣ್ಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವಿದ್ಯಾರ್ಥಿನಿ ಅಪ್ರಾಪ್ತೆಯಾಗಿದ್ದು, ಆಕೆಯ ತಂದೆಯಿಂದಲೂ ಪೊಲೀಸ್ ದೂರು ನೀಡಲಾಗಿದ್ದು, ಯುವಕನ ವಿರುದ್ದ ಸುಬ್ರಹ್ಮಣ್ಯ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜ್ಯುವೆಲರಿ ಶಾಪ್ನಲ್ಲಿ ನೈತಿಕ ಪೊಲೀಸ್ಗಿರಿ
ಲವ್ ಜಿಹಾದ್ ಆರೋಪದ ಮೇಲೆ ಸುಲ್ತಾನ್ ಜ್ಯುವೆಲರಿ ಶಾಪ್ನಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣ ಸಂಬಂಧ ಪೊಲೀಸರು ನಾಲ್ವರು ಬಜರಂಗದಳದ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಶಿಬಿನ್, ಗಣೇಶ್, ಪ್ರಕಾಶ್, ಚೇತನ್ ಎಂಬವರನ್ನು ಕದ್ರಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು: ಭಿನ್ನ ಕೋಮಿನ ಜೋಡಿಯ ಮೇಲೆ ಹಲ್ಲೆಗೆ ಯತ್ನ; ನೈತಿಕ ಪೊಲೀಸ್ಗಿರಿ ಆರೋಪದಡಿ ಇಬ್ಬರ ಬಂಧನ
ಲವ್ ಜಿಹಾದ್ ಆರೋಪದಡಿ ಡಿ.6ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಕಂಕನಾಡಿಯ ಜ್ಯುವೆಲರಿ ಶಾಪ್ಗೆ ನುಗ್ಗಿದ ಬಜರಂಗದಳದ ಕಾರ್ಯಕರ್ತರು ಯುವನ ಮೇಲೆ ಹಲ್ಲೆ ನಡೆಸಿದ್ದರು. ಪ್ರಕರಣ ಸಂಬಂಧ ಸುಲ್ತಾನ್ ಗೋಲ್ಡ್ ಸೇಲ್ಸ್ ಆಫೀಸರ್ ಫೈಝಲ್ ನೀಡಿದ ದೂರಿನ ಅನ್ವಯ ಕದ್ರಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 323, 448, 504, 143, 147, 149ರಡಿ ಎಫ್ಐಆರ್ ದಾಖಲಾಗಿತ್ತು.
ಇದನ್ನೂ ಓದಿ: ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ಗಿರಿ: ಜ್ಯುವೆಲರಿ ಶಾಪ್ನಲ್ಲಿ ಅನ್ಯಕೋಮಿನ ಜೋಡಿಗೆ ಥಳಿತ, ಮೂರು ಪ್ರಕರಣ ದಾಖಲು
ಚಿಕ್ಕಮಗಳೂರಿನಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ
ಚಿಕ್ಕಮಗಳೂರು: ಚಲಿಸುತ್ತಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿರುವಂತಹ ಘಟನೆ ಚಿಕ್ಕಮಗಳೂರು ನಗರದ ಬೈಪಾಸ್ ರಸ್ತೆ ಮಧ್ಯೆ ನಡೆದಿದೆ. ಕೆಎ 05, ಬೆಂಗಳೂರು ನೋಂದಣಿಯ ಕಾರು ಇದಾಗಿದ್ದು, ಕಾರಿನಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.