AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಕ್ಷಿಣ ಕನ್ನಡದಲ್ಲಿ ವರುಣಾರ್ಭಟಕ್ಕೆ ನಲುಗಿದ ಜನ: ಎಲ್ಲೆಲ್ಲಿ ಏನಾಗಿದೆ?

ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಕಳೆದೆರಡು‌ ದಿನಗಳಿಂದ ಮಳೆರಾಯ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಈಗಾಗಲೇ ಮಳೆಯಿಂದ ಸಾಕಷ್ಟು ಅವಾಂತರ ಸೃಷ್ಟಿಯಾಗಿದ್ದು, ಜಿಲ್ಲೆಯ ನದಿಗಳು ತುಂಬಿ ಹರಿಯುತ್ತಿದೆ. ಇದರ ಜೊತೆಗೆ ಅಲ್ಲಲ್ಲಿ ಧರೆ ಕುಸಿತ, ಮನೆ ಹಾನಿ, ಜಲಾವೃತ ಘಟನೆಯು ವರದಿಯಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ.

ದಕ್ಷಿಣ ಕನ್ನಡದಲ್ಲಿ ವರುಣಾರ್ಭಟಕ್ಕೆ ನಲುಗಿದ ಜನ: ಎಲ್ಲೆಲ್ಲಿ ಏನಾಗಿದೆ?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರುಣಾರ್ಭಟ
ಅಶೋಕ್​ ಪೂಜಾರಿ, ಮಂಗಳೂರು
| Edited By: |

Updated on: Jun 27, 2024 | 9:16 PM

Share

ದಕ್ಷಿಣ ಕನ್ನಡ, ಜೂ.27: ಜಿಲ್ಲೆಯಲ್ಲಿ ಕಳೆದರೆಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ(Rain) ಹಲವು ಅವಾಂತರ ಸೃಷ್ಟಿಸಿದೆ. ಪುತ್ತೂರು(Puttur) ತಾಲೂಕಿನ ಬನ್ನೂರು ಜೈನರಗುರಿ ಎಂಬಲ್ಲಿ ಮಳೆಗೆ ಧರೆ ಕುಸಿದು ಮನೆಗೆ ಹಾನಿಯಾಗಿದೆ. ನಸುಕಿನ ಜಾವ ನಿದ್ರೆಯಲ್ಲಿದ್ದ ಸಂಧರ್ಭ ಮನೆ ಮೇಲೆ ಧರೆ ಕುಸಿದಿದ್ದು, ಮನೆಯ ಯಜಮಾನ ಮಜೀದ್, ಅವರ ಪತ್ನಿ, ಇಬ್ಬರು ಮಕ್ಕಳು ಸಹಿತ ಮನೆಯಲ್ಲಿ ಮಲಗಿದ್ದರು. ಮುಂಜಾನೆ ವೇಳೆ ಮನೆ ಪಕ್ಕದ ಧರೆಯೊಂದು ಸಡಿಲಗೊಂಡು ಮನೆ ಮೇಲೆ ಬಿದ್ದು ಹಾನಿಯಾಗಿದೆ. ಈ ಸಂದರ್ಭ ಮಣ್ಣಿನಡಿ ಮಜೀದ್ ಅವರ ಇಬ್ಬರು ಮಕ್ಕಳು ಸಿಲುಕಿಕೊಂಡಿದ್ದಾರೆ.‌ ತಕ್ಷಣ ಮಜೀದ್ ಅವರ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಮಕ್ಕಳು ಸಣ್ಣ ಪುಟ್ಟ ಗಾಯಗೊಂಡಿದ್ದು, ಅಪಾಯದಿಂದ ಪಾರಾಗಿದ್ದಾರೆ.

ಕಾಪೌಂಡ್ ಕುಸಿದು ಎರಡು ಮನೆಗಳು ಅಪಾಯದ ಸ್ಥಿತಿ

ಇನ್ನು ಬಂಟ್ವಾಳ ತಾಲೂಕಿನ ಕಸಬಾ ಗ್ರಾಮದ ಹೊಸ್ಮಾರು ಎಂಬಲ್ಲಿ ಕಾಪೌಂಡ್ ಕುಸಿದು ಎರಡು ಮನೆಗಳು ಅಪಾಯದ ಸ್ಥಿತಿಯಲ್ಲಿದೆ. ಅಶೋಕ್ ಪೂಜಾರಿ ಮತ್ತು ಗಣೇಶ್ ಪೂಜಾರಿ ಎಂಬವರ ಮನೆ ಅಪಾಯದಲ್ಲಿದ್ದು, ಮನೆ ಮಂದಿಯನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ.‌ ಇನ್ನು ಕಾಂಪೌಂಡ್ ಕುಸಿದು ಬೀಳುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ:ಮಂಗಳೂರಿನಲ್ಲಿ ಮಳೆಗೆ ಮತ್ತೊಂದು ಬಲಿ: 2 ದಿನದಲ್ಲಿ 7 ಜನರು ದುರ್ಮರಣ

ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಮುಳುಗಡೆ

ಜಿಲ್ಲೆ ಮಾತ್ರವಲ್ಲದೆ ಘಟ್ಟ ಪ್ರದೇಶದಲ್ಲೂ ಭಾರಿ ಮಳೆಯಾಗುತ್ತಿರುವುದರಿಂದ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಮುಳುಗಡೆಯಾಗಿದೆ. ಹೀಗಾಗಿ ಕುಮಾರಧಾರ ನದಿಗೆ ಇಳಿಯದಂತೆ ಭಕ್ತಾದಿಗಳಿಗೆ ಸೂಚನೆ ನೀಡಲಾಗಿದೆ. ನದಿ ತೀರದಲ್ಲಿ ದೇವಳದ ಭದ್ರತಾ ಸಿಬ್ಬಂದಿ, ಹೋಂ ಗಾರ್ಡ್ ಗಳನ್ನು ನಿಯೋಜನೆ ಮಾಡಲಾಗಿದೆ. ಇನ್ನು ಭಾರಿ ಮಳೆಯಿಂದ ಜಿಲ್ಲೆಯ ಜೀವ ನದಿ ನೇತ್ರಾವತಿ ಮೈದುಂಬಿ ಹರಿಯುತ್ತಿದೆ. ನದಿಪಾತ್ರದ ಜನ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಮಂಗಳೂರಿನ ಬಿಕರ್ಣಕಟ್ಟೆಯಿಂದ ಸಾಣೂರುವರೆಗೆ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮನೆಗಳಿಗೆ ನೆರೆ ನೀರು ನುಗ್ಗಿದೆ. ಎಡಪದವಿನಲ್ಲಿ ಶ್ರೀನಿವಾಸ್ ಭಟ್ ಎಂಬವರ ಮನೆ ಜಲಾವೃತವಾಗಿದೆ. ಹೆದ್ದಾರಿಯಲ್ಲಿ ನೀರು ಹರಿದುಹೋಗಲು ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಈ ಅವಾಂತರ ಸೃಷ್ಟಿಯಾಗಿದೆ.

ಇನ್ನು ಜಿಲ್ಲೆ ಮಾತ್ರವಲ್ಲದೆ ಮಂಗಳೂರಿನ ಗಡಿಭಾಗ ಕೇರಳದ ಕಾಸರಗೋಡು ಜಿಲ್ಲೆಯಲ್ಲಿಯೂ ವರುಣನ ಆರ್ಭಟ ಜೋರಾಗಿದೆ. ಮಳೆಯ ಅಬ್ಬರಕ್ಕೆ ಕಾಸರಗೋಡಿನ ಇತಿಹಾಸ ಪ್ರಸಿದ್ಧ ಮಧೂರು ಮಧನಂತೇಶ್ವರ ಸಿದ್ದಿವಿನಾಯಕ ದೇವಸ್ಥಾನ ಜಲಾವೃತವಾಗಿದೆ‌. ದೇವಸ್ಥಾನದ ಮುಂಭಾಗದಲ್ಲೇ ಹರಿಯುವ ಮಧುವಾಹಿನಿ ನದಿ ತುಂಬಿ ತುಳುಕುತ್ತಿದ್ದು, ದೇವಸ್ಥಾನದ ಸುತ್ತಮುತ್ತಲ ಪ್ರದೇಶ ಜಲಾವೃತವಾಗಿ ದ್ವೀಪದಂತೆ ಗೋಚರವಾಗುತ್ತಿದೆ. ಒಟ್ಟಿನಲ್ಲಿ ಅಬ್ಬರಿಸಿ ಬೊಬ್ಬಿರುಯುತ್ತಿರುವ ಮಳೆಯಿಂದ ಸಾಕಷ್ಟು ಅವಾಂತರವಾಗಿದ್ದು, ಮುಂದೆ ಜನ ಇನ್ನಷ್ಟು ಎಚ್ಚರಿಕೆಯಿಂದ ಇರಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ