ಮಂಗಳೂರಿನಲ್ಲಿ ಮಳೆಗೆ ಮತ್ತೊಂದು ಬಲಿ: 2 ದಿನದಲ್ಲಿ 7 ಜನರು ದುರ್ಮರಣ
ಕಡಲನಗರಿ ಮಂಗಳೂರಿನಲ್ಲಿ ಭಾರೀ ಮಳೆಗೆ ಮನೆ ಕುಸಿದು ನಾಲ್ವರು ಸಾವನ್ನಪ್ಪಿದರು. ಬಳಿಕ ಇಬ್ಬರು ಆಟೋ ಚಾಲಕರು ದುರ್ಮರಣಕ್ಕೀಡಾಗಿದ್ದರು. ಇವೆರೆಡು ಘಟನೆಗಳು ಮಾಸುವ ಮುನ್ನವೇ ಮತ್ತೊಂದು ದುರ್ಘಟನೆ ನಡೆದಿದೆ. ಭಾರೀ ಮಳೆಗೆ ನೀರಿನಲ್ಲಿ ವಿದ್ಯುತ್ ಪ್ರವಹಿಸಿ ಯುವತಿ ಸಾವನ್ನಪ್ಪಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆಯಿಂದ ಇಲ್ಲಿಯವರೆಗೆ ಮಳೆಗೆ 7 ಜನರು ಮೃತಪಟ್ಟಿದ್ದಾರೆ.
ಮಂಗಳೂರು, ಜೂನ್ 27: ಕರಾವಳಿಯಲ್ಲಿ ಮಳೆ (Rain) ಅಬ್ಬರಿಸುತ್ತಿದೆ. ಹೀಗಾಗಿ ಸಾವು-ನೋವು ಸಂಭವಿಸುತ್ತಿವೆ. ಇತ್ತೀಚೆಗೆ ರಾತ್ರಿ ಇಡೀ ಸುರಿದ ಭಾರೀ ಮಳೆಗೆ ಮನೆ ಗೋಡೆ ಕುಸಿದು ಬಿದ್ಧು ನಾಲ್ವರು ಸಾವನ್ನಪ್ಪಿದ್ದರು (death). ಇಂದು ಗಾಳಿ ಮಳೆಗೆ ನೆಲಕ್ಕುರಿಳಿದ ವಿದ್ಯುತ್ ತಂತಿ ಸ್ಪರ್ಶಿಸಿ ಆಟೋ ಚಾಲಕರಿಬ್ಬರು ಮೃತಪಟ್ಟಿದ್ದರು. ಇದೀಗ ಮನೆಯ ಬಳಿ ಕಂಬದಿಂದ ವಿದ್ಯುತ್ ಪ್ರವಹಿಸಿ ಯುವತಿ ಸಾವನ್ನಪ್ಪಿದ್ದಾರೆ. ಅಲ್ಲಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆಯಿಂದ ಇಲ್ಲಿಯವರೆಗೆ ಮಳೆಗೆ 7 ಜನರು ದುರ್ಮರಣ ಹೊಂದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಬರ್ಗುಲಾ ನಿವಾಸಿ ಪ್ರತೀಕ್ಷಾ ಶೆಟ್ಟಿ(20) ಮೃತ ಯುವತಿ. ಪಾರ್ಸೆಲ್ ತೆಗೆದುಕೊಳ್ಳಲು ಮನೆಯಿಂದ ಹೊರಗೆ ಬಂದಾಗ ಘಟನೆ ಸಂಭವಿಸಿದೆ. ಮಳೆ ನೀರಿನಲ್ಲಿ ವಿದ್ಯುತ್ ಪ್ರವಹಿಸಿ ಯುವತಿ ಪ್ರತೀಕ್ಷಾ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಮಂಗಳೂರು: ಉಳ್ಳಾಲ ಕುತ್ತಾರು ಮದನಿ ನಗರದಲ್ಲಿ ಮನೆ ಗೋಡೆ ಕುಸಿದು ಬಿದ್ದು ನಾಲ್ವರು ಸಾವು
ಕೊಕ್ಕಡದಲ್ಲಿ ಮೆಡಿಕಲ್ ಶಾಪ್‌ನಲ್ಲಿ ಪ್ರತೀಕ್ಷಾ ಕೆಲಸ ಮಾಡುತ್ತಿದ್ದರು. ಸದ್ಯ ಯುವತಿಯ ಮೃತದೇಹ ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮಂಗಳೂರಿನಲ್ಲಿ ಕಳೆದೆರಡು ದಿನಗಳಿಂದ ವರುಣಾರ್ಭಟ ಜೋರಾಗಿದೆ. ಒಂದಲ್ಲ ಒಂದು ಅವಾಂತರ ಸೃಷ್ಟಿಸುತ್ತಿರುವ ವರುಣ ಉಳ್ಳಾಲದಲ್ಲಿ ಒಂದೇ ಕುಟುಂಬದ ನಾಲ್ವರ ಬಲಿ ಪಡೆದಿತ್ತು. ಆ ಘಟನೆ ಮಾಸುವ ಮುನ್ನ ಆಟೋ ಚಾಲಕರಿಬ್ಬರು ಘೋರ ದುರಂತಕ್ಕೆ ಬಲಿಯಾಗಿದ್ದರು. ಮೂಲತ ಹಾಸನ ಜಿಲ್ಲೆಯ ಅಲೂರಿನವಾರದ ರಾಜು ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಉಪ್ಪಿನಂಗಡಿ ಮೂಲದ ದೇವರಾಜು ಮಂಗಳೂರು ನಗರದ ರೋಸಾರಿಯೊ ಶಾಲೆಯ ಹಿಂಭಾಗದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.
ಇದನ್ನೂ ಓದಿ: ಚಿಕ್ಕಮ್ಮನ ಮೇಲೆಯೇ ಅತ್ಯಾಚಾರಕ್ಕೆ ಯತ್ನ; ಒಪ್ಪದಿದ್ದಕ್ಕೆ ಕತ್ತು ಹಿಸುಕಿ ಕೊಂದ ಬಾಲಕ
ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದ ಇವರು ರಾತ್ರಿ ಎಂದಿನಂತೆ ರೂಂ ಗೆ ಬಂದಿದ್ರು. ರಾತ್ರಿ ಒಂಬತ್ತು ಗಂಟೆ ವೇಳೆಗೆ ರಾಜು ತಮ್ಮ ಆಟೋವನ್ನು ತೊಳೆಯೊದಕ್ಕೆ ರೂಂನಿಂದ ಹೊರ ಬಂದಿದ್ರು. ಆದರೆ ಆ ಸಂದರ್ಭ ಜೋರಾದ ಗಾಳಿಗೆ ಆಟೋ ನಿಲ್ಲಿಸಿದ್ದ ರಸ್ತೆಯ ಬದಿಯಲ್ಲಿ ವಿದ್ಯುತ್ ತಂತಿಯೊಂದು ಕೆಳಕ್ಕೆ ಬಿದ್ದಿತ್ತು. ಇದನ್ನು ಗಮನಿಸದ ರಾಜು ಅವರಿಗೆ ವಿದ್ಯುತ್ ತಂತಿ ತಗುಲಿ ವಿದ್ಯುತ್ ಶಾಕ್‌ಗ ಒಳಗಾಗಿದ್ದರು. ರಾಜು ಕಿರುಚಾಟದ ಬೊಬ್ಬೆ ಕೇಳಿ ಹೊರಬಂದ ದೇವರಾಜು ತನ್ನ ಸ್ನೇಹಿತನ ರಕ್ಷಣೆಗೆ ಮುಂದಾಗಿದ್ದಾರೆ. ಈ ಸಂದರ್ಭ ದೇವರಾಜು ಅವರಿಗೂ ವಿದ್ಯುತ್ ತಗುಲಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.