ಕೇರಳ ಮದರಸಾಗಳ ಮೇಲೆ ಹಿಡಿತ ಸಾಧಿಸಿದ್ದ ಪಿಎಫ್ಐ: ದೇಶಕ್ಕೆ ಇದೇ ತಂತ್ರ ವಿಸ್ತರಿಸಲು ಮುಂದಾಗಿದ್ದ ಸಂಘಟನೆ
ಕೇರಳದ ಬಹುತೇಕ ಮಸೀದಿಗಳನ್ನು ಪಿಎಫ್ಐ ತನ್ನ ಹಿಡಿತಕ್ಕೆ ತೆಗೆದುಕೊಂಡಿತ್ತು. ಈ ಪ್ರಯೋಗವನ್ನು ಇನ್ನಷ್ಟು ಜಿಲ್ಲೆ, ರಾಜ್ಯಗಳಿಗೆ ವಿಸ್ತರಿಸಲು ಪಿಎಫ್ಐ ಮುಂದಾಗಿತ್ತು ಎಂದು ಮೂಲಗಳು ಹೇಳಿವೆ.
ಮಂಗಳೂರು: ಕೇಂದ್ರ ಸರ್ಕಾರವು ನಿಷೇಧಿಸಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯು ದೇಶದ ಎಲ್ಲ ಮದರಸಾಗಳ ಮೇಲೆ ಹಿಡಿತ ಸಾಧಿಸಲು ಮುಂದಾಗಿತ್ತು ಎನ್ನುವ ಆಘಾತಕಾರಿ ವಿಚಾರ ಇದೀಗ ಬಯಲಾಗಿದೆ. ಕೇರಳದ ಬಹುತೇಕ ಮಸೀದಿಗಳನ್ನು ಪಿಎಫ್ಐ ತನ್ನ ಹಿಡಿತಕ್ಕೆ ತೆಗೆದುಕೊಂಡಿತ್ತು. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಮದರಸಗಳು ಸಹ ಪಿಎಫ್ಐ ಹಿಡಿತದಲ್ಲಿದ್ದವು. ಮೇಲ್ನೋಟಕ್ಕೆ ಜಮಾತ್ಗಳೇ ಈ ಮಸೀದಿಗಳನ್ನು ನಿರ್ವಹಿಸುತ್ತಿರುವಂತೆ ಕಂಡುಬಂದರೂ ಪಿಎಫ್ಐ ಸಂಘಟನೆಯು ಒಟ್ಟಾರೆ ಕಾರ್ಯವೈಖರಿಯನ್ನು ನಿಯಂತ್ರಿಸುತ್ತಿತ್ತು. ಈ ಪ್ರಯೋಗವನ್ನು ಇನ್ನಷ್ಟು ಜಿಲ್ಲೆ, ರಾಜ್ಯಗಳಿಗೆ ವಿಸ್ತರಿಸಲು ಪಿಎಫ್ಐ ಮುಂದಾಗಿತ್ತು ಎಂದು ಮೂಲಗಳು ಹೇಳಿವೆ.
ಮನವಿ ಮತ್ತು ಮನವೊಲಿಕೆ ಮೂಲಕ ಮದರಸಾಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪಿಎಫ್ಐ ಪ್ರಯತ್ನಿಸುತ್ತಿತ್ತು. ಮಣಿಯದಿದ್ದರೆ ಬೆದರಿಕೆ ಹಾಕಲಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ. ಇಂಥ ಮದರಸಾಗಳಲ್ಲಿ ಧರ್ಮಗುರುಗಳ ಜೊತೆಜೊತೆಗೆ ಪಿಎಫ್ಐ ಮುಖಂಡರೂ ಸಹ ತಮ್ಮ ಅಜೆಂಡಾಗಳ ಬಗ್ಗೆ ಬೋಧಿಸುತ್ತಿದ್ದರು ಎಂದು ಹೇಳಲಾಗಿದೆ. ಈ ಬೋಧನೆಗೆ ಜಮಾತ್ನಿಂದ ವಿರೋಧ ವ್ಯಕ್ತವಾದರೆ ಬೆದರಿಕೆ ಹಾಕಲಾಗುತ್ತಿತ್ತು ಎಂದು ಉನ್ನತ ಮೂಲಗಳು ಟಿವಿ9ಗೆ ಮಾಹಿತಿ ನೀಡಿವೆ.
110 ಕಾರ್ಯಕರ್ತರ ಬಂಧನ
ಕರ್ನಾಟಕದಲ್ಲಿ 110 ಪಿಎಫ್ಐ ಮುಖಂಡರನ್ನು ಬಂಧಿಸಲಾಗಿದ್ದು, 42 ಪಿಎಫ್ಐ ಕಚೇರಿಗಳಿಗೆ ಬೀಗಮುದ್ರೆ ಹಾಕಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಪಿಎಫ್ಐ ಕಚೇರಿಗಳಲ್ಲಿ ಇದ್ದ ಲ್ಯಾಪ್ಟಾಪ್ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಿಚಾರಣೆ-ತನಿಖೆ ಮುಂದುವರಿದಿದೆ ಎಂದು ತಿಳಿಸಿದರು. ಪಿಎಫ್ಐ ಮುಖಂಡರ ವೈಯಕ್ತಿಕ ಬ್ಯಾಂಕ್ ಅಕೌಂಟ್ಗಳ ಬಗ್ಗೆ ಇಡಿ ಮತ್ತು ಎನ್ಐಎ ಪರಿಶೀಲನೆ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.
ಸುಪ್ರೀಂಕೋರ್ಟ್ನಲ್ಲಿ ಪ್ರಶ್ನೆ
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಾಗೂ ಅದರ ಸಹವರ್ತಿ ಸಂಘಟನೆಗಳು ಅಥವಾ ಅಧೀನ ಸಂಘಟನೆಗಳನ್ನು ಕೇಂದ್ರ ಸರ್ಕಾರವು ಐದು ವರ್ಷಗಳ ಅವಧಿಗೆ ನಿಷೇಧಿಸಿದೆ. ನಿಷೇಧಕ್ಕೆ ಸಂಬಂಧಿಸಿದಂತೆ ಹೊರಡಿಸಿರುವ ಅಧಿಸೂಚನೆಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಪ್ರಸ್ತಾಪವಾಗಿದೆ. ಪಿಎಫ್ಐ ನಿಷೇಧಕ್ಕೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ತನ್ನ ಅಧಿಸೂಚನೆಯಲ್ಲಿ ನೀಡಿರುವ ವಿವರಣೆಯಲ್ಲಿ ಕರ್ನಾಟಕ ಸರ್ಕಾರದ ಶಿಫಾರಸನ್ನೂ ಉಲ್ಲೇಖಿಸಿದೆ. ಈ ನಿಷೇಧಾಜ್ಞೆಯನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಲಾಗುವುದು ಎಂದು ಪಿಎಫ್ಐನ ಅಂಗಸಂಸ್ಥೆ ಸಿಎಫ್ಐ ಹೇಳಿದೆ.
Published On - 8:59 am, Sun, 9 October 22