ಪಿಲಿಕುಳ ಝೂ ಅವ್ಯವಸ್ಥೆಗೆ ಹೈಕೋರ್ಟ್​​ ಗರಂ: ಆಗದಿದ್ರೆ ತಕ್ಷಣ ಬಂದ್ ಮಾಡಿ ಎಂದ ಪೀಠ

ಮಂಗಳೂರಿನಲ್ಲಿರುವ ಪಿಲಿಕುಳ ಝೂನ ಅವ್ಯವಸ್ಥೆ ಕುರಿತು ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಾಣಿಗಳನ್ನು ಸರಿಯಾಗಿ ನೋಡಿಕೊಳ್ಳಲು ಸಾಧ್ಯವಾಗದಿದ್ದರೆ ತಕ್ಷಣ ಬಂದ್ ಮಾಡುವಂತೆ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದೆ. ವನ್ಯಜೀವಿ ಸಂರಕ್ಷಕ ಭುವನ್ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಕೋರ್ಟ್​​ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಫೆಬ್ರವರಿ 5ಕ್ಕೆ ವಿಚಾರಣೆ ಮುಂದೂಡಿದೆ.

ಪಿಲಿಕುಳ ಝೂ ಅವ್ಯವಸ್ಥೆಗೆ ಹೈಕೋರ್ಟ್​​ ಗರಂ: ಆಗದಿದ್ರೆ ತಕ್ಷಣ ಬಂದ್ ಮಾಡಿ ಎಂದ ಪೀಠ
ಪಿಲಿಕುಳ ಜೈವಿಕ ಉದ್ಯಾನವನ
Image Credit source: Google
Edited By:

Updated on: Feb 02, 2026 | 7:10 PM

ಮಂಗಳೂರು, ಫೆಬ್ರವರಿ 02: ಕರಾವಳಿಗರ ಮೆಚ್ಚಿನ ತಾಣ ಪಿಲಿಕುಳ ಝೂ‌‌ ಕಳೆದ ಕೆಲ ವರ್ಷಗಳಿಂದ ಅವ್ಯವಸ್ಥೆಯ ಆಗರವಾಗಿದೆ. ಅದು ಎಷ್ಟರ ಮಟ್ಟಿಗೆ ಅಂದರೆ ಇಲ್ಲಿಯ ಸ್ಥಿತಿ ಕಂಡು ಸ್ವತಃ ಹೈಕೋರ್ಟ್ ನ್ಯಾಯಾಧೀಶರೇ ಶಾಕ್ ಆಗಿದ್ದಾರೆ. ವನ್ಯಜೀವಿ ಸಂರಕ್ಷಕ ಭುವನ್ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಪ್ರಾಣಿಗಳು ನರಳುತ್ತಿರೋ ಫೋಟೋಗಳನ್ನು ನೋಡಿ ನ್ಯಾಯಪೀಠ ಗರಂ ಆಗಿದೆ. ಅವುಗಳನ್ನು ಸರಿಯಾಗಿ ನೋಡಿಕೊಳ್ಳಲು ಆಗದಿದ್ರೆ ತಕ್ಷಣ ಬಂದ್ ಮಾಡಿ ಎಂದು ಸರ್ಕಾರಕ್ಕೆ ಖಡಕ್ ವಾರ್ನಿಂಗ್ ಕೊಟ್ಟಿದೆ.

ಮಂಗಳೂರು ಹೊರ ವಲಯದ ಪಿಲಿಕುಳ ಝೂ, ಸುಮಾರು 370 ಎಕರೆಗಳಷ್ಟು ವಿಶಾಲವಾಗಿರುವ ಪ್ರದೇಶದಲ್ಲಿರುವ ನಿಸರ್ಗಧಾಮ. ಪಶ್ಚಿಮ ಘಟ್ಟಗಳಲ್ಲಿ ಅಳಿವಿನಂಚಿನಲ್ಲಿರೋ ವನ್ಯಜೀವಿಗಳಿಗೆ ಆಶ್ರಯ ತಾಣವಾಗಿರೋ ಪಿಲಿಕುಳ ವಿದ್ಯಾರ್ಥಿಗಳ, ಪ್ರವಾಸಿಗರ ನೆಚ್ಚಿನ ತಾಣ. ಅಂತಹ ಸುಂದರ ತಾಣ ಇಂದು ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ. ತುಕ್ಕು ಹಿಡಿದ ಪಂಜರ, ಕಲುಷಿತ ನೀರು, ಮೇಲಿಂದ ಮೇಲೆ ಮೃತಪಡುತ್ತಿರುವ ಪ್ರಾಣಿಗಳು, ಅಶುಚಿ ವಾತಾವರಣ ಪಿಲಿಕುಳ ಮೃಗಾಲಯದ ಸದ್ಯದ ಸ್ಥಿತಿ. ಮತ್ತೊಂದು ದುರಂತ ಅಂದ್ರೆ ಜನಮನ್ನಣೆ ಪಡೆದ ಈ ಪಾರ್ಕ್‌ ಲೈಸೆನ್ಸ್ ಅವಧಿ 2025ರ ಡಿಸೆಂಬರ್ 1ಕ್ಕೇ ಮುಕ್ತಾಯವಾಗಿದೆ. ಆದರೂ ಯಾವುದೇ ಪರವಾನಗಿ ಇಲ್ಲದೆ ಪಿಲಿಕುಳ ಮೃಗಾಲಯ ನಡೀತಿದೆ. ಇಲ್ಲಿನ ಅವ್ಯವಸ್ಥೆ ಬಗ್ಗೆ ಕೇಂದ್ರ ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರ 2023 ಮತ್ತು 2025ರಲ್ಲಿ ಶೋಕಾಸ್ ನೋಟಿಸ್ ನೀಡಿದ್ದರೂ ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಂಡಿಲ್ಲ. ಮಲಿನಗೊಂಡ ನೀರು ಕುಡಿದು, ಸರಿಯಾದ ಚಿಕಿತ್ಸೆ ಸಿಗದೆ ಮೂಕ ಪ್ರಾಣಿಗಳು ಸಾವು-ಬದುಕಿನ ನಡುವೆ ಹೋರಾಟ ಮಾಡ್ತಿವೆ ಅನ್ನೋದು ಅರ್ಜಿದಾರರ ಗಂಭೀರ ಆರೋಪ.

ಇದನ್ನೂ ಓದಿ: ಪಿಲಿಕುಳ ಮೃಗಾಲಯದಲ್ಲಿ ಭಾರಿ ಅವ್ಯವಹಾರ ಆರೋಪ, ತಾತ್ಕಾಲಿಕವಾಗಿ ಮುಚ್ಚಲು ಪಿಐಎಲ್

ಇನ್ನುಪರವಾನಗಿ ನವೀಕರಣಕ್ಕೆ ಅರ್ಜಿ ಸಲ್ಲಿಸಲಾಗಿದ್ದು, ಅದು ಪರಿಶೀಲನೆಯಲ್ಲಿದೆ‌ ಎಂದು ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ತಿಳಿಸಿದ್ದಾರೆ. ಅಲ್ಲದೆ ಆರೋಪಗಳ ಕುರಿತು ಉತ್ತರಿಸಲು ಸಮಯಾವಕಾಶ ಕೇಳಿದ್ದಾರೆ. ಆದರೆ ನ್ಯಾಯಾಲಯ ಮಾತ್ರ ಪ್ರಾಣಿಗಳಿಗೆ ರಕ್ಷಣೆ ನೀಡಲು ಸಾಧ್ಯವಾಗದಿದ್ರೆ ಅದನ್ನು ಮುಚ್ಚಿಬಿಡಿ ಎಂದು ಸರ್ಕಾರಕ್ಕೆ ಎಚ್ಚರಿಸಿ, ಫೆಬ್ರವರಿ 5ಕ್ಕೆ ವಿಚಾರಣೆ ಮುಂದೂಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.