ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿ ಶಾಫಿ ಬೆಳ್ಳಾರೆಗೆ ಟಿಕೆಟ್ ಘೋಷಣೆ ವಿಚಾರ: ಸಮರ್ಥಿಸಿಕೊಂಡ SDPI
ಶಾಫಿ ಬೆಳ್ಳಾರೆಗೆ ಪುತ್ತೂರಿಂದ ವಿಧಾನಸಭಾ ಚನಾವಣೆಗೆ ಅಭ್ಯರ್ಥಿಯನ್ನಾಗಿ SDPI ಘೋಷಣೆ ಮಾಡಿದ್ದು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಿಯಾಜ್ ಪರಂಗಿಪೇಟೆ ಸಮರ್ಥಿಸಿಕೊಂಡಿದ್ದಾರೆ.
ಮಂಗಳೂರು: ಪ್ರವೀಣ್ ನೆಟ್ಟಾರು ಕೊಲೆ ಆರೋಪಿ ಶಾಫಿ ಬೆಳ್ಳಾರೆಗೆ (Shafi Bellare) ಪುತ್ತೂರಿಂದ ವಿಧಾನಸಭಾ ಚನಾವಣೆಗೆ ಅಭ್ಯರ್ಥಿಯನ್ನಾಗಿ ಇಂದು(ಫೆ. 13) ಟಿಕೇಟ್ ಘೋಷಣೆ ಮಾಡಿದೆ. ಸದ್ಯ ಇದು ವಿವಾದಕ್ಕೂ ಎಡೆ ಮಾಡಿಕೊಟ್ಟಿದೆ. ಈ ವಿಚಾರವಾಗಿ ಎಸ್ಡಿಪಿಐ ಸಮರ್ಥಿಸಿಕೊಂಡಿದೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಿಯಾಜ್ ಪರಂಗಿಪೇಟೆ ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದು, ನಮ್ಮದು ಸಂವಿಧಾನವನ್ನು ಒಪ್ಪಿಕೊಂಡ ಪಕ್ಷ. ಚುನಾವಣಾ ಆಯೋಗದ ಅಧಿನಿಯಮದಂತೆ ಅಭ್ಯರ್ಥಿ ಘೋಷಣೆ ಮಾಡಲಾಗಿದೆ. ಆರೋಪಿತ ವ್ಯಕ್ತಿ ಚುನಾವಣೆಗೆ ನಿಲ್ಲಬಾರದು ಎಂದು ಎಲ್ಲೂ ಹೇಳಿಲ್ಲ. ಈಗಾಗಲೇ ಹಲವಾರು ಜನ ಜೈಲಿನಲ್ಲಿ ಇದ್ದೇ ಚುನಾವಣೆಗೆ ಸ್ಪರ್ಧಿಸಿದ್ದಾರೆ ಎಂದು ಹೇಳಿದರು.
ಶಾಫಿ ಬೆಳ್ಳಾರೆಯನ್ನು ಕಾರ್ಯಕರ್ತರು ಆಯ್ಕೆ ಮಾಡಿದ್ದಾರೆ. ಅದನ್ನು ರಾಜ್ಯದ ಅಧ್ಯಕ್ಷರು ಘೋಷಣೆ ಮಾಡಿದ್ದಾರೆ. ಶಾಫಿ ಬೆಳ್ಳಾರೆಯ ಗೆಲುವಿಗೆ ಪ್ರತಿಯೊಬ್ಬ ಕಾರ್ಯಕರ್ತನೂ ಕೆಲಸ ಮಾಡ್ತಾನೆ. ಈ ವಿಚಾರದಲ್ಲಿ ಎಲ್ಲೂ ಗೊಂದಲ ಸೃಷ್ಟಿಯಾಗಿಲ್ಲ. ಕಾನೂನು ನೀಡಿರುವ ಅವಕಾಶವನ್ನು ಬಳಸಿ ಸ್ಪರ್ಧೆ ಮಾಡುತ್ತಾರೆ. ಚುನಾವಣೆಯ ವೇಳೆ ಅವರ ಜಾಮೀನಿಗೆ ಪ್ರಯತ್ನಿಸುತ್ತೇವೆ. ಜಾಮೀನು ಸಿಗದಿದ್ದರೆ ಪ್ರತಿಯೊಬ್ಬ ಕಾರ್ಯಕರ್ತ ಶಾಫಿ ಬೆಳ್ಳಾರೆ ಪರ ಕೆಲಸ ಮಾಡುತ್ತೇವೆ ಎಂದು ಸಮರ್ಥಿಸಿಕೊಂಡರು.
ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಶಾಫಿ ಬೆಳ್ಳಾರೆಗೆ ಟಿಕೆಟ್ ಘೋಷಿಸಿದ ಎಸ್ಡಿಪಿಐ
ವಿವಾದ ಸೃಷ್ಟಿಸಿದ SDPI
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರ ಮುಂದಿಟ್ಟು ಎನ್ಐಎ ಶಾಫಿ ಬೆಳ್ಳಾರೆಯನ್ನು ಬಂಧಿಸಿದೆ. ಸದ್ಯ ಕೇಂದ್ರ ತನಿಖಾ ಸಂಸ್ಥೆಗಳ ವಶದಲ್ಲಿದ್ದು, ಜೈಲಿನಿಂದಲೇ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಆರೋಪಿ ಶಾಫಿ ಬೆಳ್ಳಾರೆಯನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಮೂಲಕ SDPI ಭಾರಿ ವಿವಾದ ಸೃಷ್ಟಿಸಿದೆ.
ಉಗ್ರರನ್ನು ಕರೆತಂದು ಟಿಕೆಟ್ ಕೊಡ್ತಾರೆ: ಆರ್.ಅಶೋಕ್
ಈ ಕುರಿತಾಗಿ ಬೆಂಗಳೂರು ನಗರದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ದು, ದೇಶದಲ್ಲಿ ಈಗಾಗಲೇ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಲಾಗಿದೆ. ಪಿಎಫ್‌ಐ ರೀತಿ ಎಸ್ಡಿಪಿಐ ಸಂಘಟನೆ ಕೂಡ ಬ್ಯಾನ್ ಮಾಡಬೇಕು. ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸುತ್ತೇನೆ. SDPI ಸಂಘಟನೆಯವರು ಉಗ್ರರನ್ನು ಕರೆತಂದು ಟಿಕೆಟ್ ಕೊಡ್ತಾರೆ. ಆಗ ಅವರಿಗೂ ಭದ್ರತೆ ಕೊಡಬೇಕಾಗುತ್ತೆ. ಬಳಿಕ ಅವರನ್ನು ಬಿಡುಗಡೆ ಮಾಡುವಂತೆ ಕೋರ್ಟ್ಗೆ ಹೋಗ್ತಾರೆ. ಪ್ರವೀಣ್ ಹತ್ಯೆಯಲ್ಲಿ ಭಾಗಿಯಾದವನು ಚುನಾವಣೆಗೆ ಸ್ಪರ್ಧಿಸುತ್ತಿದ್ದಾನೆ. SDPI ಸಂಘಟನೆ ದೇಶವಿರೋಧಿ ಚಟುವಟಿಕೆಯ ಅಂಗ ಎಂದು ವಾಗ್ದಾಳಿ ಮಾಡಿದರು.
ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆಯ ಪ್ರತೀಕಾರಕ್ಕಾಗಿಯೇ ಫಾಜಿಲ್ ಹತ್ಯೆ: ಶರಣ್ ಪಂಪ್ವೆಲ್
20 ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ NIA
ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಬರ್ಬರ ಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಒಟ್ಟು 20 ಆರೋಪಿಗಳ ವಿರುದ್ಧ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. 240 ಸಾಕ್ಷಿಗಳ ಹೇಳಿಕೆಗಳು ಒಳಗೊಂಡಿರುವ ಒಟ್ಟು 1,500 ಪುಟಗಳ ಚಾರ್ಜ್ಶೀಟ್ ಅನ್ನು NIA ಅಧಿಕಾರಿಗಳು ಕೋರ್ಟ್ಗೆ ಸಲ್ಲಿಸಿದ್ದಾರೆ. ಕೊಲೆ ಪ್ರಕರಣ ಸಂಬಂಧ ಈವರೆಗೆ 14 ಆರೋಪಿಗಳನ್ನು ಬಂಧಿಸಿಲಾಗಿದ್ದು, 6 ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ರಾಷ್ಟ್ರೀಯ ತನಿಖಾ ದಳದಿಂದ ಟಿವಿ9ಗೆ ಅಧಿಕೃತ ಮಾಹಿತಿ ಲಭ್ಯವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:25 pm, Mon, 13 February 23