ಹಿಂದೂ ಯುವತಿಗೆ ಚಾಕು ತೋರಿಸಿ ಕಿರುಕುಳ ಆರೋಪ; ಬ್ರೆಡ್ ಚೀಸ್ ಕಥೆ ಹೇಳಿದ ಯುವಕರು: ಪುತ್ತೂರಿನಲ್ಲಿ ಎಫ್‌ಐಆರ್ ದಾಖಲು
ಪುತ್ತೂರಿನ ಪುರುಷರಕಟ್ಟೆಯಲ್ಲಿ ಹಿಂದೂ ಯುವತಿಗೆ ಚಾಕು ತೋರಿಸಿ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಯುವತಿ ದೂರಿನ ಮೇರೆಗೆ ಒಂದು FIR ದಾಖಲಾಗಿದೆ. ಆದರೆ, ಯುವಕರು ತಮಗೇ ಸುಳ್ಳು ಆರೋಪ ಮಾಡಲಾಗಿದೆ ಎಂದು ಪ್ರತಿ ದೂರು ನೀಡಿದ್ದು, ಎರಡನೇ FIR ದಾಖಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ತನಿಖೆ ನಡೆಸುತ್ತಿದ್ದು, ಸ್ಥಳದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿದ್ದಾರೆ.

ಮುಖ್ಯಾಂಶಗಳು
- ಹಿಂದೂ ಯುವತಿಗೆ ಅನ್ಯಕೋಮಿನ ಯುವಕರು ಚಾಕು ತೋರಿಸಿ ಕಿರುಕುಳ ಆರೋಪ
- ಪುತ್ತೂರು ಪೊಲೀಸರು ಎರಡು ಪ್ರತ್ಯೇಕ ದೂರುಗಳನ್ನು ದಾಖಲಿಸಿಕೊಂಡು ತನಿಖೆ
- ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ವೈರಲ್
ಮಂಗಳೂರು, ಜು.9: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರು ತಾಲೂಕಿನ ಪುರುಷರಕಟ್ಟೆ ಬಳಿ ಹಿಂದೂ ಯುವತಿಯೊಬ್ಬಳಿಗೆ ಅನ್ಯಕೋಮಿನ ಯುವಕರು ಚಾಕು ತೋರಿಸಿ ಕಿರುಕುಳ ನೀಡಿದ್ದಾರೆ ಎನ್ನಲಾದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಪುತ್ತೂರು ಪೊಲೀಸರು ಎರಡು ಪ್ರತ್ಯೇಕ ದೂರುಗಳನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಪುರುಷರಕಟ್ಟೆ ಬಸ್ಸು ನಿಲ್ದಾಣದ ಬಳಿ ನಡೆದಿದೆ ಎನ್ನಲಾದ ಈ ಘಟನೆಗೆ ಸಂಬಂಧಿಸಿದಂತೆ ಯುವತಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪುರುಷರಕಟ್ಟೆ ಬಳಿ ಸ್ಕೂಟಿ ನಿಲ್ಲಿಸಿ ಬಸ್ ಹತ್ತಲು ತೆರಳುತ್ತಿದ್ದಾಗ ತನಗೆ ಮುಂಚೆಯೇ ಪರಿಚಯವಿದ್ದ ಸುಹೈಲ್ ಹಾಗೂ ಆತನ ಜೊತೆಯಲ್ಲಿದ್ದ ಇನ್ನು ಮೂವರು ಯುವಕರು ತನಗೆ ಅಡ್ಡಗಟ್ಟಿ, ಚಾಕು ತೋರಿಸಿ ಕಿರುಕುಳ ನೀಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ.
ಯುವತಿಯ ದೂರಿನನ್ವಯ ಪುತ್ತೂರು ಮಹಿಳಾ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 78(1) (ಮಹಿಳೆಯ ಘನತೆಗೆ ಧಕ್ಕೆ/ಕಿರುಕುಳ) ಹಾಗೂ ಸೆಕ್ಷನ್ 3(5) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಹಿಂದೂ ಪರ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪುತ್ತೂರು ಪೊಲೀಸರು ತಕ್ಷಣವೇ ಪ್ರಾಥಮಿಕ ತನಿಖೆ ನಡೆಸಿ, ದೂರಿನಲ್ಲಿದ್ದ ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪ್ರಕರಣಕ್ಕೆ ಬೇರೆಯದೇ ಆದ ಆಯಾಮ ಸಿಕ್ಕಿದೆ. ಯುವಕರ ಹೇಳಿಕೆಯ ಪ್ರಕಾರ, ತಾವು ಯಾವುದೇ ಅಪರಾಧಿಕ ಕೃತ್ಯ ಎಸಗಿಲ್ಲ. ತಾವು ಸ್ಥಳೀಯ ಬೇಕರಿಯೊಂದರಲ್ಲಿ ಬ್ರೆಡ್ ಖರೀದಿಸಿ, ಅದಕ್ಕೆ ಚೀಸ್ ಹಾಕಲು ಬೇಕರಿ ಮಾಲೀಕರಿಂದ ಚಾಕು ಪಡೆದುಕೊಂಡಿದ್ದೆವು. ಚೀಸ್ ಕಟ್ ಮಾಡಿದ ನಂತರ ಆ ಚಾಕುವನ್ನು ವಾಪಸ್ ಬೇಕರಿಗೆ ನೀಡಲು ಹೋಗುತ್ತಿದ್ದಾಗ ಅಲ್ಲಿ ಯುವತಿ ಎದುರಾಗಿದ್ದಾಳೆ. ಆದರೆ, ಸ್ಥಳೀಯ ಹಿಂದೂ ಸಂಘಟನೆಯ ಮುಖಂಡ ಮುರಳಿ ಕೃಷ್ಣ ಹಂಸತಡ್ಕ ಹಾಗೂ ಇತರರು ಹಳೆಯ ದ್ವೇಷದ ಹಿನ್ನೆಲೆಯಲ್ಲಿ, ದುರುದ್ದೇಶಪೂರ್ವಕವಾಗಿ ಯುವತಿಯನ್ನು ಮುಂದೆ ಬಿಟ್ಟು ನಮ್ಮ ಮೇಲೆ ಸುಳ್ಳು ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ಯುವಕರು ಪ್ರತಿಯಾಗಿ ದೂರು ನೀಡಿದ್ದಾರೆ.
ಇದನ್ನೂ ಓದಿ: ಯಾದಗಿರಿ: ಮಳೆ ಬಂದರೆ ಕುರಿಗಳಂತೆ ಒಂದೇ ರೂಮಲ್ಲಿ 5 ತರಗತಿಯ ವಿದ್ಯಾರ್ಥಿಗಳು; ಶಿಕ್ಷಣ ಇಲಾಖೆಯ ವಿರುದ್ಧ ಪೋಷಕರ ಆಕ್ರೋಶ
ಯುವಕರು ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲೂ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ಸದ್ಯ ಪುರುಷರಕಟ್ಟೆ ಜಂಕ್ಷನ್ ಮತ್ತು ಬೇಕರಿ ಆಸುಪಾಸಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಚುರುಕುಗೊಳಿಸಿದ್ದಾರೆ. ಯುವತಿ ಹೇಳಿದಂತೆ ಚಾಕು ತೋರಿಸಿ ಬೆದರಿಕೆ ಹಾಕಲಾಗಿದೆಯೇ ಅಥವಾ ಯುವಕರು ಹೇಳುತ್ತಿರುವ ಚೀಸ್ ಕತ್ತರಿಸುವ ಚಾಕುವಿನ ಕಥೆ ನಿಜವೇ ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಸಾಕ್ಷ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಸ್ಥಳದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:00 am, Thu, 9 July 26



