
ಮಂಗಳೂರು, ಏಪ್ರಿಲ್ 19: ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ರೈ (Ashok Rai) ಸ್ವತಃ ಜೆಸಿಬಿ ಚಲಾಯಿಸಿ ಖಾಸಗಿ ಕಟ್ಟಡವನ್ನು ಅನಧಿಕೃತವಾಗಿ ನೆಲಸಮಗೊಳಿಸಿರುವ (Demolition) ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸುಪ್ರಸಿದ್ಧ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಇರುವ ಖಾಸಗಿ ಜಾಗದಲ್ಲಿ ನಡೆದಿದೆ. ಸದ್ಯ ಶಾಸಕರ ಈ ನಡೆ ಕಾನೂನು ಸಂಘರ್ಷಕ್ಕೆ ನಾಂದಿ ಹಾಡಿದೆ. ಪುತ್ತೂರು ಠಾಣೆಗೆ ದೇಗುಲ ಆಡಳಿತ ಮಂಡಳಿ ಹಾಗೂ ಶಾಸಕರ ವಿರುದ್ಧ ಕೋರ್ಟ್ ರಿಸೀವರ್ ದೂರು ನೀಡಿದ್ದಾರೆ.
ಜಿಲ್ಲೆಯ ಪುತ್ತೂರಿನ ಸುಪ್ರಸಿದ್ಧ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಖಾಸಗಿ ಜಾಗವಿದೆ. ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ದೈವ-ದೇವರ ಸಮಾಗಮದ ಆಚರಣೆಗೆ ಸುಮಾರು 30 ಸಾವಿರಕ್ಕೂ ಹೆಚ್ಚು ಭಕ್ತರು ಸೇರುತ್ತಾರೆ. ಈ ಆಚರಣೆಗೆ ಜಾಗದ ಅಭಾವವಿದೆ ಎಂಬ ಕಾರಣ ನೀಡಿ, ಶಾಸಕ ಅಶೋಕ್ ರೈ ಅವರು ಜೆಸಿಬಿ ಮೂಲಕ ಅಲ್ಲಿನ ಖಾಸಗಿ ಕಟ್ಟಡಗಳನ್ನು ನೆಲಸಮಗೊಳಿಸಿದ್ದಾರೆ.
ಇದನ್ನೂ ಓದಿ: ಕೋಳಿ ಕಾಳಗಕ್ಕೆ ಪೊಲೀಸ ನಿರ್ಬಂಧ: ತಾವೇ ಮುಂದೆ ನಿಂತು ಕೋಳಿ ಅಂಕ ಮಾಡಿಸಿದ ಕಾಂಗ್ರೆಸ್ ಶಾಸಕ
ಇನ್ನು ಕಟ್ಟಡ ನೆಲಸಮ ಮಾಡಲು ಕೋರ್ಟ್ ಅನುಮತಿ ಇದೆ ಎಂದು ಹೇಳಿದ್ದಾರೆ. ಆದರೆ ಕಟ್ಟಡ ನೆಲಸಮ ಮಾಡಲು ಕೋರ್ಟ್ನಿಂದ ಯಾವುದೇ ಆದೇಶ ಮಾಡಿರಲಿಲ್ಲ. ಹೀಗಾಗಿ ಇದು ಸದ್ಯ ವಿವಾದಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.
ಖಾಸಗಿ ಜಾಗದ ಮಾಲೀಕರ ನಡುವೆ ಆಸ್ತಿಯ ವಿಭಜನೆಗೆ ಸಂಬಂಧಿಸಿದಂತೆ ಕೋರ್ಟ್‌ನಲ್ಲಿ ವ್ಯಾಜ್ಯ ನಡೆಯುತ್ತಿದೆ. ಈ ಕಾರಣದಿಂದ ನ್ಯಾಯಾಲಯವು ಡಾ. ಕೇದಿಗೆ ಅರವಿಂದ ರಾವ್ ಅವರನ್ನು ಕೋರ್ಟ್ ರಿಸೀವರ್ ಆಗಿ ನೇಮಿಸಿ, ಜಾಗವನ್ನು ಅವರ ಸುಪರ್ದಿಗೆ ನೀಡಿತ್ತು. ಕೋರ್ಟ್ ಸುಪರ್ದಿಯಲ್ಲಿರುವ ಜಾಗದಲ್ಲಿ ಕಾನೂನು ಬಾಹಿರವಾಗಿ ಪ್ರವೇಶಿಸಿ ಕಟ್ಟಡ ಧ್ವಂಸಗೊಳಿಸಿರುವುದು ಇದೀಗ ವಿವಾದಕ್ಕೆ ಎಡೆಮಾಡಿ ಕೊಟ್ಟಿದೆ.
ಇದನ್ನೂ ಓದಿ: ರಸ್ತೆ ಗುಂಡಿ ಕಂಡು ಶಾಸಕ ಅಶೋಕ್ ಕುಮಾರ್ ರೈ ಗರಂ: ನಗರಸಭೆ ಕಮಿಷನರ್ಗೆ ಖಡಕ್ ಎಚ್ಚರಿಕೆ
ಈ ಘಟನೆಗೆ ಸಂಬಂಧಿಸಿದಂತೆ ಕೋರ್ಟ್ ರಿಸೀವರ್ ಡಾ. ಕೇದಿಗೆ ಅರವಿಂದ ರಾವ್ ಪುತ್ತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೇವಸ್ಥಾನದ ಆಡಳಿತ ಮಂಡಳಿಯ ಮೋಕ್ತೇಸರಾದ ಈಶ್ವರ ಭಟ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಇನ್ನು ಘಟನಾ ಸ್ಥಳದಲ್ಲಿ ಸ್ವತಃ ಶಾಸಕರೇ ಭಾಗಿಯಾಗಿರುವುದರಿಂದ, ಎಫ್‌ಐಆರ್‌ನಲ್ಲಿ ಶಾಸಕ ಅಶೋಕ್ ರೈ ಅವರ ಹೆಸರನ್ನು ಸೇರಿಸಿಕೊಳ್ಳಲು ಪೊಲೀಸ್ ಇಲಾಖೆಯು ನ್ಯಾಯಾಲಯಕ್ಕೆ ಮನವಿ ಮಾಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:22 pm, Sun, 19 April 26