
ಮಂಗಳೂರು, ಆಗಸ್ಟ್ 20: ದೇವರ ಹುಂಡಿಗೆ ಕನ್ನ (Theft) ಹಾಕಿ ಪರಾರಿಯಾಗಲು ಹೊಂಚು ಹಾಕಿದ್ದ ಚಾಲಾಕಿ ಕಳ್ಳನೊಬ್ಬ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಪೊಲೀಸರ ಮಿಂಚಿನ ಕಾರ್ಯಾಚರಣೆಯಿಂದ ಸಿಕ್ಕಿಬಿದ್ದಿದ್ದಾನೆ. ದಕ್ಷಿಣ ಕನ್ನಡ (dakshina kannada) ಜಿಲ್ಲೆಯ ಮುಲ್ಕಿ ತಾಲೂಕಿನ ಬೆಳ್ಳಾಯರಿನಲ್ಲಿ ಘಟನೆ ನಡೆದಿದ್ದು, ಕಳ್ಳತನಕ್ಕೆ ಯತ್ನಿಸಿದ ಆರೋಪಿಯನ್ನು ಪೊಲೀಸರು ರೆಡ್‌ಹ್ಯಾಂಡ್ ಆಗಿ ಹೆಡೆಮುರಿ ಕಟ್ಟಿದ್ದಾರೆ.
ಮುಲ್ಕಿ ತಾಲೂಕಿನ ಬೆಳ್ಳಾಯರು ಗ್ರಾಮದ ಐತಿಹಾಸಿಕ ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ಮಧ್ಯರಾತ್ರಿ ಈ ಘಟನೆ ನಡೆದಿದೆ. ಮಡಿಕೇರಿಯ ವಿರಾಜಪೇಟೆ ಮೂಲದ ರವಿ (28) ಎಂಬಾತ ಯಾರೂ ಇಲ್ಲದ ಸಮಯ ನೋಡಿ ದೇವಸ್ಥಾನದ ಮುಂಭಾಗದಿಂದ ಹಗ್ಗದ ಸಹಾಯದಿಂದ ಮೇಲೇರಿದ್ದಾನೆ. ಬಳಿಕ ಮೇಲ್ಛಾವಣಿಯ ಕಬ್ಬಿಣದ ಜಾಲಿಯನ್ನು ಕತ್ತರಿಸಿ ಗರ್ಭಗುಡಿಯ ಆವರಣಕ್ಕೆ ನುಗ್ಗಿದ್ದಾನೆ.
ದೇವಸ್ಥಾನದ ಒಳನುಗ್ಗಿದ ಆರೋಪಿ ನೇರವಾಗಿ ಕಾಣಿಕೆ ಡಬ್ಬಿಯನ್ನು ಜಾಲಾಡಿದ್ದಾನೆ. ತನ್ನ ಕೃತ್ಯ ಬಯಲಾಗಬಾರದೆಂದು ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾವನ್ನು ಧ್ವಂಸಗೊಳಿಸಲು ಮುಂದಾಗಿದ್ದಾನೆ. ಆದರೆ, ಆತ ಕ್ಯಾಮೆರಾ ಮುಟ್ಟುತ್ತಿದ್ದಂತೆಯೇ ದೇವಸ್ಥಾನದ ಭದ್ರತಾ ವ್ಯವಸ್ಥೆ ಕಾರ್ಯಪ್ರವೃತ್ತವಾಗಿದೆ. ಸಿಸಿಟಿವಿ ಅಳವಡಿಸಿದ್ದ ಕುಂದಾಪುರ ಮೂಲದ ‘ಸೈನ್ ಇನ್ ಸೆಕ್ಯೂರಿಟಿ’ ಕಂಪನಿಯ ಕಂಟ್ರೋಲ್ ರೂಮ್‌ಗೆ ತಕ್ಷಣವೇ ತುರ್ತು ಅಲರ್ಟ್ ಸಂದೇಶ ರವಾನೆಯಾಗಿದೆ.
ಇನ್ನು ಅಲರ್ಟ್ ಸಂದೇಶ ಬರುತ್ತಿದ್ದಂತೆ ಸೆಕ್ಯೂರಿಟಿ ಕಂಪನಿಯ ಸಿಬ್ಬಂದಿ ತಕ್ಷಣ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಮುಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಮುಲ್ಕಿ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ರಾಘವೇಂದ್ರ ನಾಯಕ್ ಮತ್ತು ಸ್ಥಳೀಯ ಗ್ರಾಮಸ್ಥರು ಕ್ಷಣಮಾತ್ರದಲ್ಲಿ ದೇವಸ್ಥಾನವನ್ನು ಸುತ್ತುವರೆದಿದ್ದಾರೆ.
ಪೊಲೀಸರ ಸದ್ದು ಕೇಳಿ ದೇವಸ್ಥಾನದ ಒಳಭಾಗದಲ್ಲಿದ್ದ ಸುಬ್ರಹ್ಮಣ್ಯ ಸ್ವಾಮಿ ಗುಡಿಯೊಳಗೆ ಅಡಗಿ ಕುಳಿತಿದ್ದ ರವಿಯನ್ನು ಬಂಧಿಸಲಾಗಿದೆ. ಸದ್ಯ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.