AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರಿನಲ್ಲಿ ಮತ್ತೆ ಝಳಪಿಸಿದ ತಲ್ವಾರ್, ಯುವಕನ ಮೇಲೆ ದಾಳಿ: ಶಾಂತಿಭಂಗದ ಆತಂಕ

ಕರಾವಳಿಯಲ್ಲಿ ಸದ್ಯ ಶಾಂತಿ ನೆಲೆಸಿದೆ. ಸದಾ ಕೋಮು ಸಂಘರ್ಷ ಹಾಗೂ ಘರ್ಷಣೆಗಳಿಂದ ಸುದ್ದಿಯಾಗುತ್ತಿದ್ದ ಮಂಗಳೂರಿನಲ್ಲಿ ಕಳೆದ ಹಲವಾರು ತಿಂಗಳಿಂದ ಶಾಂತಿ ನೆಲೆಸಿದೆ. ಆದರೆ, ದುಷ್ಕರ್ಮಿಗಳು ಮತ್ತೆ ತಲ್ವಾರ್ ಬೀಸಿರುವ ಘಟನೆ ನಡೆದಿದ್ದು, ಎಲ್ಲಿ ಅಶಾಂತಿ ಸೃಷ್ಟಿಯಾಗುತ್ತದೆಯೇ ಎಂಬ ಆತಂಕ ಮತ್ತೆ ಶುರುವಾಗಿದೆ. ಮಂಗಳೂರಿನ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲ್ವಾರ್ ದಾಳಿ ನಡೆದಿದ್ದು, ಆ ಕುರಿತ ವಿವರ ಇಲ್ಲಿದೆ.

ಮಂಗಳೂರಿನಲ್ಲಿ ಮತ್ತೆ ಝಳಪಿಸಿದ ತಲ್ವಾರ್, ಯುವಕನ ಮೇಲೆ ದಾಳಿ: ಶಾಂತಿಭಂಗದ ಆತಂಕ
ಆರೋಪಿಯನ್ನು ಸ್ಥಳೀಯರು ಹಿಡಿಯುತ್ತಿರುವುದು
ಪೃಥ್ವಿರಾಜ್​ ಬಿ.ಯು. ಮಂಗಳೂರು
| Edited By: |

Updated on: Nov 25, 2025 | 9:20 AM

Share

ಮಂಗಳೂರು, ನವೆಂಬರ್ 25: ಮಂಗಳೂರಿನಲ್ಲಿ (Mangalore) ಆಗುವ ಸಣ್ಣ ಪುಟ್ಟ ಅಪರಾಧ ಕೃತ್ಯಗಳನ್ನು ಕೂಡ ಪೊಲೀಸರು ತುಂಬಾ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಇದಕ್ಕೆ ಕಾರಣವೆಂದರೆ, ಇಲ್ಲಿ ನಡೆಯುವ ಘಟನೆಗಳಿಂದ ಶಾಂತಿ ಭಂಗ ಆಗುವ ಎಲ್ಲಾ ಸಾದ್ಯತೆಗಳು ಹೆಚ್ಚಿರುತ್ತವೆ. ಕಳೆದ ಐದಾರು ತಿಂಗಳಿಂದ ಕರಾವಳಿಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (Dakshina Kannada) ಶಾಂತಿ ನೆಲೆಸಿತ್ತು. ಈ ನಡುವೆ ಮತ್ತೊಂದು ದಾಳಿ ಆತಂಕ ಉಂಟು ಮಾಡಿದೆ. ಸೋಮವಾರ ಸಂಜೆ ಮಂಗಳೂರು ಹೊರವಲಯದ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಖಿಲೇಶ್ ಎಂಬ ಯುವಕನ ಮೇಲೆ ನಾಲ್ಕು ಜನರ ತಂಡವೊಂದು ತಲ್ವಾರ್​​ನಿಂದ ದಾಳಿ ಮಾಡಿದೆ. ಬೈಕ್​ನಲ್ಲಿ ಬಂದ ತಂಡ ದಾಳಿ ಮಾಡಿದ್ದು ತಲ್ವಾರ್​​ನಿಂದ ಮೊಣಕೈಗೆ ಗಾಯಗೊಳಿಸಿದೆ. ಗಾಯಾಳು ಅಖಿಲೇಶ್​ಗೆ ಮೂಡಬಿದಿರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಒಬ್ಬ ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು

ಒಟ್ಟು ನಾಲ್ಕು ಜನ ದುಷ್ಕರ್ಮಿಗಳು ಘಟನೆ ಬಳಿಕ ಪರಾರಿಯಾಗಲು ಯತ್ನಿಸಿದ್ದಾರೆ. ಮೂವರು ಒಂದೇ ಬೈಕ್​ನಲ್ಲಿ ಪರಾರಿಯಾಗಿದ್ದಾರೆ. ಮತ್ತೋರ್ವ ಆರೋಪಿ ಸಿನಾನ್ ಪರಾರಿಯಾಗಲು ಯತ್ನಿಸಿದ್ದಾನೆ. ಸಿಕ್ಕ ಸಿಕ್ಕ ವಾಹನಗಳನ್ನು ಬಲವಂತವಾಗಿ ಅಡ್ಡಹಾಕಿದ್ದಾನೆ. ಆದರೆ ಯಾರು ಕೂಡ ನಿಲ್ಲಿಸಿಲ್ಲ. ಓರ್ವ ಬೈಕ್ ಸವಾರ ಈತನ ಪುಂಡಾಟದಿಂದ ಗಾಬರಿಯಾಗಿ ಬೈಕ್​ನಿಂದ ಬಿದ್ದಿದ್ದಾನೆ. ಇನ್ನು ಸಿನಾನ್​ನನ್ನು ಸ್ಥಳೀಯರು ಹಿಡಿದು ಧರ್ಮದೇಟು ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಂಗಳೂರು ತಲ್ವಾರ್ ದಾಳಿ ಬಗ್ಗೆ ಪೊಲೀಸರು ಹೇಳಿದ್ದೇನು?

ನಾಲ್ವರು ಒಂದೇ ಬೈಕ್​ನಲ್ಲಿ ಚಾಕು ಹಿಡಿದು ಹೋಗುತ್ತಿದ್ದರು. ಅದನ್ನು ನೋಡಿದ ಅಖಿಲೇಶ್ ಅವರ ಫೋಟೊ ತೆಗೆಗಿದ್ದಾರೆ. ಆ ಕಾರಣ ಅವರು ಈತನ ಮೇಲೆ ದಾಳಿ ಮಾಡಿದ್ದಾರೆ. ಅಖಿಲೇಶ್​​​ಗೆ ಸಣ್ಣಪುಟ್ಟ ಗಾಯವಾಗಿದೆ. ನಾಲ್ವರು ಬಾರ್​ನಿಂದ ಕುಡಿದು ಬರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದು ಕುಡಿದ ಮತ್ತಿನಲ್ಲಿ ಆಗಿರುವ ಗಲಾಟೆಯೇ ಅಥವಾ ಬೇರೆ ಏನಾದರೂ ಕಾರಣ ಇದೆಯೇ ಎಂಬ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಯುವಕನ‌ ಮೇಲೆ ತಲ್ವಾರ್‌ನಿಂದ ದಾಳಿ: ವಿಡಿಯೋ ನೋಡಿ

ಬಜ್ಪೆ ಮತ್ತು ಮೂಡಬಿದಿರೆ ಪೊಲೀಸರು ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಉಳಿದ ಮೂವರು ಯಾರು ಎಂಬುದು ಕೂಡ ಗೊತ್ತಾಗಿದೆ. ಆರೋಪಿಗಳ ಬಂಧನದ ಬಳಿಕವೇ ಈ ಕೃತ್ಯಕ್ಕೆ ಕಾರಣ ಏನು ಎಂಬುದು ಗೊತ್ತಾಗಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ