
ಬೆಂಗಳೂರು, (ಸೆಪ್ಟೆಂಬರ್ 25): ವಿಶ್ವವಿಖ್ಯಾತ ಮೈಸೂರು ದಸರಾಗಾಗಿ ಭರ್ಜರಿ ಸಿದ್ಧತೆಗಳು ನಡೆದಿದ್ದು, ಸಾಂಸ್ಕೃತಿ ನಗರಿ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ. ಮತ್ತೊಂದೆಡೆ ಶೈಕ್ಷಣಿಕ ವರ್ಷದ ದಸರಾ ರಜೆಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ. ಹೌದು….ರಾಜ್ಯದ ಶಾಲೆಗಳಿಗೆ ಅಕ್ಟೋಬರ್ 3 ರಿಂದ 21 ರವರೆಗೆ 19 ದಿನಗಳ ಕಾಲ ದಸರಾ ರಜೆ ಘೋಷಿಸಲಾಗಿದೆ. ಅ. 2ರ ಗಾಂಧಿ ಜಯಂತಿಯ ಬಳಿಕ ರಜೆ ಆರಂಭವಾಗಲಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಒಟ್ಟು 119 ರಜೆ ಹಾಗೂ 245 ಕರ್ತವ್ಯ ದಿನಗಳಿರಲಿವೆ. ಇನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಕಟಿಸಿರುವ ವಾರ್ಷಿಕ ಶೈಕ್ಷಣಿಕ ವೇಳಾಪಟ್ಟಿಯ ಪ್ರಕಾರ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಈ ಬಂಪರ್ ರಜೆ ಅನ್ವಯವಾಗುತ್ತದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಶೈಕ್ಷಣಿಕ ಕ್ಯಾಲೆಂಡರ್ ಪ್ರಕಾರ, ಅಕ್ಟೋಬರ್ 3, 2026 ಶನಿವಾರ ರಜೆ ಆರಂಭವಾಗುತ್ತದೆ. ಇನ್ನು ಅಕ್ಟೋಬರ್ 21ರ ಬುಧವಾರದ ವಿಜಯದಶಮಿಯಂದು ರಜೆ ಮುಕ್ತಾಯವಾಗುವುದರೊಂದಿಗೆ, ಅಕ್ಟೋಬರ್ 22ರ ಗುರುವಾರದಂದು ಶಾಲೆಗಳು ಪುನರಾರಂಭಗೊಳ್ಳುತ್ತದೆ. ಅದರಲ್ಲೂ ಅಕ್ಟೋಬರ್ 2ರಂದು ಗಾಂಧಿ ಜಯಂತಿಯ ಸಾರ್ವತ್ರಿಕ ರಜೆ ಇರಲಿದ್ದು, ಅದರ ಮರುದಿನದಿಂದಲೇ (ಅಕ್ಟೋಬರ್ 3) ಅಧಿಕೃತವಾಗಿ ದಸರಾ ರಜೆಗಳು ಆರಂಭವಾಗಲಿದೆ. ಮುಂದುವರೆದು, ಈ ಶೈಕ್ಷಣಿಕ ವರ್ಷದ 2 ನೇ ಅವಧಿಯು ಅಕ್ಟೋಬರ್ 22, 2026 ರಿಂದ ಏಪ್ರಿಲ್ 10, 2027 ರವರೆಗೆ ಇರಳಿದ್ದು, ಏಪ್ರಿಲ್ 11, 2027 ರಿಂದ ಬೇಸಿಗೆ ರಜೆ ಪ್ರಾರಂಭವಾಗಲಿದೆ.
ಶಿಕ್ಷಣ ಇಲಾಖೆಯ ಘೋಷಣೆ ಮಾಡಿರುವ ದಸರಾ ರಜೆಯೂ ಕೇವಲ ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳಿಗೆ ಮಾತ್ರ ಅನ್ವಯವಾಗಲಿದೆ. ಉಳಿದಂತೆ ಖಾಸಗಿ ಶಾಲೆಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ರಜೆಯನ್ನು ಈಗಾಗಲೇ ಘೋಷಣೆ ಮಾಡಿವೆ. ಕೆಲ ಶಾಲೆಗಳು ಒಂದು ವಾರ, ಇನ್ನಾ ಕೆಲವು 10 ದಿನ ರಜೆ ನೀಡಿವೆ.
ದಸರಾ ರಜೆಗೂ ಮುನ್ನವೇ ಕೆಲ ಖಾಸಗಿ ಶಾಲೆಗಳಲ್ಲಿ ಈಗಾಗಲೇ ಅರ್ಧವಾರ್ಷಿಕ ಪರೀಕ್ಷೆಗಳು ಆರಂಭವಾಗಿದ್ದರೆ, ಇನ್ನು ಕೆಲ ಶಾಲೆಗಳಲ್ಲಿ ಪರೀಕ್ಷೆಗಳು ಮುಕ್ತಾಯದ ಹಂತದಲ್ಲಿವೆ. ಈ ದಸರಾ ರಜೆ ಪ್ರತಿ ವರ್ಷ ನೀಡಲಾಗುತ್ತದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳೂ ಮುಖ್ಯ. ಯೋಚಿಸಿ ಯೋಜಿಸಿದರೆ ಈ ರಜೆಯನ್ನು ಅರ್ಥಪುರ್ಣವಾಗಿ ಕಳೆಯಬಹುದು.
ಶಾಲಾ ಮಕ್ಕಳಿಗೆ ರಜೆ ಸಿಕ್ಕರೆ ಸಾಕು ಹೆತ್ತವರ ಕೈಗೆ ಸಿಗುವುದಿಲ್ಲ. ಇತರೆ ಮಕ್ಕಳೊಂದಿಗೆ ಆಟದಲ್ಲಿ ನಿರತರಾಗಿರುತ್ತಾರೆ. ಆಟವಾಡಿದರೆ ಪರವಾಗಿಲ್ಲ. ರಜೆ ಸಿಕ್ಕಿದೆಯಲ್ಲಾ ಮಕ್ಕಳು ಮಜಾ ಮಾಡಲಿ ಎಂದು ಅವರನ್ನು ಹಾಗೇ ಬಿಡಬೇಡಿ. ಮಕ್ಕಳ ಬಗ್ಗೆ ನಿರ್ಲಕ್ಷ್ಯ ಸಲ್ಲದು. ಮಕ್ಕಳು ಮನೆಯಿಂದ ಹೊರಗಡೆ ಆಟವಾಡಲು ತೆರಳಿದಲ್ಲಿ ಅವರನ್ನು ವಿಚಾರಿಸುತ್ತಲೇ ಇರಬೇಕಾಗುತ್ತದೆ. ಇತರ ಮಕ್ಕಳೊಂದಿಗೆ ಸೇರಿದಾಗ, ನಾವು ಮಾಡುತ್ತಿರುವುದು ತಪ್ಪು, ಅಪಾಯಕಾರಿ ಎಂಬುದು ಪರಿಜ್ಞಾನವೇ ಮಕ್ಕಳಿಗೆ ಇರುವುದಿಲ್ಲ.
ಆಟವಾಡಲು ತೆರಳಿ ಜೀವಕ್ಕೆ ಅಪಾಯವಾಗದೇ ಇರಲಿ ಎಂಬ ಉದ್ದೇಶಕ್ಕಾಗಿ ರಜೆಯ ಮಜಾದಲ್ಲಿರುವ ಮಕ್ಕಳ ಮೇಲೆ ಹೆತ್ತವರ ಕಣ್ಣಿರಬೇಕಾಗಿದೆ. ಅಪಾಯ ಯಾವುದು ಎಂಬುದು ಮುಗ್ಧ ಮಕ್ಕಳಿಗೆ ಗೊತ್ತಿರುವುದಿಲ್ಲ. ಮಕ್ಕಳಾಟಿಕೆ ಕೆಲವೊಮ್ಮೆ ಜೀವಕ್ಕೆ ಅಪಾಯ ತಂದೊಡ್ಡಿದ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಹೀಗಾಗಿ ರಜಾ ಮಜಾ ದಿನಗಳಲ್ಲಿ ಮಕ್ಕಳ ಮೇಲೆ ಪೋಷಕರು ನಿಗಾ ವಹಿಸುವುದು ಅಗತ್ಯವಾಗಿದೆ.