ದಸರಾ ದರ್ಬಾರ್: ಏಕಾಏಕಿ ಟಿಕೆಟ್ ದರ ಹೆಚ್ಚಿಸಿ ಪ್ರಯಾಣಿಕರಿಗೆ ಶಾಕ್ ನೀಡಿದ ಖಾಸಗಿ ಬಸ್ಗಳು, ಕೆಎಸ್ಆರ್ಟಿಸಿ
Bus Ticket Price Hike; ಹಬ್ಬಗಳ ಸೀಸನ್, ಸಾಲು ರಜೆಗಳು ಬಂದಾಗ ಪ್ರತಿ ಬಾರಿಯೂ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕುವ ಖಾಸಗಿ ಬಸ್ಸುಗಳು ದಸರಾದಲ್ಲಿಯೂ ದರ್ಬಾರ್ ಆರಂಭಿಸಿದೆ. ಇವುಗಳ ಜೊತೆಗೆ ಕೆಎಸ್ಆರ್ಟಿಸಿ ಬಸ್ಸುಗಳು ಕೂಡ ಏಕಾಏಕಿ ಟಿಕೆಟ್ ದರ ಏರಿಕೆ ಮಾಡಿದ್ದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರು, ಸೆಪ್ಟೆಂಬರ್ 30: ಬುಧವಾರ ಆಯುಧಪೂಜೆ, ಗುರುವಾರ ವಿಜಯದಶಮಿ (Vijaya Dashami). ಶುಕ್ರವಾರ ಒಂದು ದಿನ ರಜೆ ಹಾಕಿದರೆ ಮತ್ತೆ ವಾರಾಂತ್ಯ. ಸಾಲು ಸಾಲು ರಜೆ ಬಂದಿದ್ದು, ಜನರೆಲ್ಲ ತಮ್ಮ ಊರುಗಳತ್ತ ತೆರಳುತ್ತಿದ್ದಾರೆ. ಅದರಲ್ಲೂ, ದಸರಾ ಕಣ್ತುಂಬಿಕೊಳ್ಳಲು ಬೆಂಗಳೂರಿನಿಂದ ನಿತ್ಯ ಸಾವಿರಾರು ಜನರು ಪ್ರಯಾಣ ಮಾಡುತ್ತಾರೆ. ಆದರೆ, ಕೆಎಸ್ಆರ್ಟಿಸಿ (KSRTC) ಪ್ರಯಾಣಿಕರಿಗೆ ಬಿಸಿ ಮುಟ್ಟಿಸಿದೆ. ಬೆಂಗಳೂರು-ಮೈಸೂರು ಬಸ್ ಟಿಕೆಟ್ ದರ (Bus Ticket Price) ಹೆಚ್ಚಳವಾಗಿದೆ.
ಬೆಂಗಳೂರು ಮೈಸೂರು ಬಸ್ ಟಿಕೆಟ್ ದರ ಹೆಚ್ಚಳ
ಬೆಂಗಳೂರಿನಿಂದ ಮೈಸೂರಿಗೆ ತೆರಳಲು ಇದ್ದ ಬಸ್ ಟಿಕೆಟ್ ದರದಲ್ಲಿ, 20 ರೂ. ಏರಿಕೆ ಮಾಡಲಾಗಿದೆ. ಕೆಎಸ್ಆರ್ಟಿಸಿ ತಡೆರಹಿತ ಬಸ್ ಟಿಕೆಟ್ ದರ 210 ರೂ. ಇದ್ದದ್ದು ಇದೀಗ 230 ರೂ.ಗೆ ಏರಿಕೆ ಆಗಿದೆ. ಸಾಮಾನ್ಯ ಬಸ್ ಟಿಕೆಟ್ ದರ 161 ರೂ.ಗಳಿಂದ 180 ರೂ.ಗೆ ಏರಿಕೆ ಆಗಿದೆ. ದಸರಾ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ 20 ರೂಪಾಯಿ ದರ ಏರಿಕೆ ಮಾಡಿದೆ.
ಕೆಎಸ್ಆರ್ಟಿಸಿ ಮಾತ್ರವಲ್ಲ, ಖಾಸಗಿ ಬಸ್ಗಳು ಕೂಡ ಹಬ್ಬವನ್ನೇ ನೆಪವಾಗಿ ಇಟ್ಟುಕೊಂಡು ಪ್ರಯಾಣ ದರ ಏರಿಕೆ ಮಾಡಿವೆ.
ಖಾಸಗಿ ಬಸ್ ಬಸ್ ಟಿಕೆಟ್ ದರ ಏರಿಕೆ: ಯಾವ ಊರಿಗೆ ಎಷ್ಟು?
ಬೆಂಗಳೂರಿಂದ ಹುಬ್ಬಳ್ಳಿಗೆ ಸಾಮಾನ್ಯವಾಗಿ ಖಾಸಗಿ ಬಸ್ ಪ್ರಯಾಣದರ 1000 ರೂಪಾಯಿ ಇರುತ್ತಿತ್ತು. ಆದೀಗ, 2039 ರೂಪಾಯಿ ಆಗಿದೆ. ಇನ್ನು, ದಾವಣಗೆರೆಗೆ ತೆರಳಲು 750 ರೂಪಾಯಿ ಟಿಕೆಟ್ ದರ ಇತ್ತು. ಈಗ 1489 ರೂಪಾಯಿಗೆ ಹೆಚ್ಚಳ ಮಾಡಿದ್ದಾರೆ. ಬೆಂಗಳೂರಿಂದ ಬೆಳಗಾವಿಗೆ 1200 ರೂಪಾಯಿ ಇರುತ್ತಿದ್ದ ಬಸ್ ಟಿಕೆಟ್ ದರ ಈಗ 2677 ರೂಪಾಯಿ ತನಕ ಏರಿಕೆ ಆಗಿದೆ. ಬೆಂಗಳೂರಿಂದ ಮಂಗಳೂರಿಗೆ ಸಾಮಾನ್ಯ ದಿನಗಳಲ್ಲಿ 1200 ರೂಪಾಯಿ ಇರುತ್ತಿತ್ತು. ಈಗ, 1800 ರೂಪಾಯಿ ಆಗಿದೆ. ಇನ್ನು, ಬೆಂಗಳೂರಿಂದ ಕಲಬುರಗಿಗೆ 1100 ರೂ. ಇದ್ದ ಬಸ್ ಟಿಕೆಟ್ ದರ ಈಗ 2299 ರೂಪಾಯಿ ಆಗಿದೆ.
ಇದನ್ನೂ ಓದಿ: ಬರೀ 150 ರೂಪಾಯಿನಲ್ಲಿ ಬಸ್ ಪೂಜೆ ಮಾಡಕ್ಕಾಗುತ್ತಾ? ಆಯುಧ ಪೂಜೆಗೆ ಕೆಎಸ್ಆರ್ ಟಿಸಿ ಕಂಜೂಸ್
ಬಸ್ ಪ್ರಯಾಣ ದರ ಏರಿಕೆಗೆ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ವಿಪಕ್ಷ ನಾಯಕ ಆರ್.ಅಶೋಕ್ ಬಸ್ ಟಿಕೆಟ್ ದರ ಏರಿಕೆಗೆ ಧರ್ಮದ ಬಣ್ಣ ಹಚ್ಚಿದ್ದಾರೆ. ಚಾಮುಂಡಿಬೆಟ್ಟ ಹಿಂದೂಗಳದ್ದು ಅಲ್ಲ ಎಂದಿದ್ದರು. ಬೆಲೆ ಏರಿಕೆ ಮಾಡಿ ಮೈಸೂರಿಗೆ ಯಾರೂ ಹೋಗಬಾರದು ಎಂದು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಒಟ್ಟಿನಲ್ಲಿ, ಹಬ್ಬದ ಖುಷಿಯಲ್ಲಿದ್ದವರಿಗೆ ಪ್ರಯಾಣ ದರ ಏರಿಕೆ ಶಾಕ್ ಕೊಟ್ಟಿದೆ.



