ದಾವಣಗೆರೆ: 60 ವರ್ಷಗಳಿಂದ ವಾಸವಾಗಿದ್ದ ನೆಲ ನನ್ನದು ಎಂದು ಖಾಸಗಿ ವ್ಯಕ್ತಿ ವಾದ, ಗ್ರಾಮದ 30 ಕುಟುಂಬಗಳಿಗೆ ಎತ್ತಂಗಡಿ ಭೀತಿ

ಅವರೆಲ್ಲ ಸುಮಾರು 60 ವರ್ಷಗಳಿಂದ ಅಲ್ಲಿ ನೆಲೆಸಿದ್ದಾರೆ. 1947ರಲ್ಲೇ ಆ ಜಮೀನು ಮಂಜೂರಾಗಿದೆ, 1976ರಲ್ಲಿ ಅವರಿಗೆ ಹಕ್ಕುಪತ್ರ ಅದಾದ ನಂತರ ಈ ಸ್ವತ್ತು ನೀಡಲಾಗಿದೆ, ಇಷ್ಟೆಲ್ಲಾ ಆಗಿ ದಶಕಗಳೆ ಕಳೆದ ನಂತರ ಅಲ್ಲಿ ವಾಸವಾಗಿರುವ 30 ಕುಟುಂಬಗಳಿಗೆ ಎತ್ತಂಗಡಿ ಆತಂಕ ಎದುರಾಗಿದೆ.

ದಾವಣಗೆರೆ: 60 ವರ್ಷಗಳಿಂದ ವಾಸವಾಗಿದ್ದ ನೆಲ ನನ್ನದು ಎಂದು ಖಾಸಗಿ ವ್ಯಕ್ತಿ ವಾದ, ಗ್ರಾಮದ 30 ಕುಟುಂಬಗಳಿಗೆ ಎತ್ತಂಗಡಿ ಭೀತಿ
ದಾವಣಗೆರೆ: 60 ವರ್ಷಗಳಿಂದ ವಾಸವಾಗಿದ್ದ ನೆಲ ನನ್ನದು ಎಂದು ಖಾಸಗಿ ವ್ಯಕ್ತಿ ವಾದ, ಗ್ರಾಮದ 30 ಕುಟುಂಬಗಳಿಗೆ ಎತ್ತಂಗಡಿ ಭೀತಿ
Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಆಯೇಷಾ ಬಾನು

Updated on: Aug 29, 2024 | 12:11 PM

ದಾವಣಗೆರೆ, ಆಗಸ್ಟ್​.29: ದಾವಣಗೆರೆ ತಾಲ್ಲೂಕಿನ ತೋಳ ಹುಣಸೆ ಗ್ರಾಮದಲ್ಲಿ ಲಂಬಾಣಿ ಸಮುದಾಯದವರೇ ಹೆಚ್ಚು ವಾಸವಾಗಿದ್ದಾರೆ. ಲಂಬಾಣಿ ಸಮುದಾಯಕ್ಕೆ ಎಂದೇ ಪ್ರತ್ಯೇಕವಾಗಿ 1947ರಲ್ಲಿ ಸರ್ವೇ ನಂಬರ್ 77ರಲ್ಲಿ 9 ಎಕ್ಕರೆ ಜಮೀನು ಮಂಜೂರು ಮಾಡಲಾಗಿದೆ. ಅದರಲ್ಲಿ 6 ಎಕ್ಕರೆ ಜಾಗದಲ್ಲಿ ಸುಮಾರು 30ಕ್ಕು ಅಧಿಕ ಕುಟುಂಬಗಳು ವಾಸವಾಗಿವೆ. ಇವರಿಗೆ 1976ರಲ್ಲಿ ಹಕ್ಕುಪತ್ರ ನೀಡಿದ್ದಾರೆ. ಅದಾದ ನಂತರ ಈ ಸ್ವತ್ತು ಮಾಡಿಕೊಟ್ಟಿದ್ದಾರೆ. 60 ವರ್ಷಗಳಿಂದ ವಾಸವಾಗಿರುವ ಇವರನ್ನು ಅಲ್ಲಿಂದ ಎತ್ತಂಗಡಿ ಮಾಡಲು ಸಂಚು ನಡೆದಿದೆ ಅನ್ನೋ ಆರೋಪ ಕೇಳಿ ಬರ್ತಾ ಇದೆ.

ಖಾಸಗಿ ವ್ಯಕ್ತಿಯೋರ್ವ ಇದು ನಮಗೆ ಸೇರಿದ ಜಮೀನು ಎಂದು ಇವರ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ಅಲ್ಲದೆ ಪಿಡಿಓ ಹೇಳಿದ್ದಾರೆ ಎಂದು ಜೆಸಿಬಿ ಮೂಲಕ ಮನೆ ಕೆಡವಲು ಯತ್ನಿಸಿದ್ದಾರೆ ಅನ್ನೋ ಗಂಭೀರ ಆರೋಪವನ್ನು ಗ್ರಾಮಸ್ಥರು ಮಾಡುತ್ತಿದ್ದಾರೆ. ಹತ್ತಾರು ವರ್ಷಗಳಿಂದ ವಾಸವಾಗಿದ್ದ ನೆಲದಲ್ಲಿ ಇದೀಗ ಖಾಸಗಿ ವಾರಸುದಾರರು ಈ ಜಮೀನು ನಮ್ಮದು ಎಂದು ಬಂದಿದ್ದಾರೆ. 2011 ರಲ್ಲಿ ನಮ್ಮ ಸ್ವಾದೀನಕ್ಕೆ ಬಂದಿದೆ ಎಂದು ಹಕ್ಕುಪತ್ರ ಹಿಡಿದು ಜೆಸಿಬಿ ಸಮೇತ ಮನೆಗಳನ್ನು ನೆಲಸಮ ಮಾಡಲು ಬಂದಿದ್ದಾರೆ.‌ ಇದರಿಂದ ಆಕ್ರೋಶಗೊಂಡ ನಿವಾಸಿಗಳು ಖಾಸಗಿ ಮಾಲೀಕನ ದೌರ್ಜನ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಿಡಿಓ ಸಸ್ಪೆಂಡ್​ಗೆ ಆಗ್ರಹ

ಈಗಾಗಲೇ ಸರ್ಕಾರ 9 ಎಕರೆ ಜಮೀನನ್ನು ನೀಡಿ ಅದರಲ್ಲಿ ವಾಸಿಸುವ ನಿವಾಸಿಗಳಿಗೆ ಹಕ್ಕುಪತ್ರ ಈ ಸ್ವತ್ತನ್ನು ಕೊಟ್ಟಿದೆ. ಆದ್ರೆ ಏಕಾಏಕಿ ಇದು ನಮ್ಮ ಜಾಗ ಎಂದು ಹೇಳುತ್ತಿರುವ ಖಾಸಗಿ ಮಾಲೀಕನ ಹಿಂದೆ ಅಧಿಕಾರಿಗಳು ಶಾಮೀಲಾಗಿದ್ದಾರೆ. ಒಂದೇ ಆಸ್ತಿಗೆ ಎರಡು ಈ ಸ್ವತ್ತು ನೀಡಲಾಗಿದೆ. ಈ ಕುರಿತು ಸಾಕಷ್ಟು ಸಲ ಪಿಡಿಓ ಮತ್ತು ಗ್ರಾಮಪಂಚಾಯತ್ ಅಧ್ಯಕ್ಷರಿಗೆ ಮನವಿ ಮಾಡಿದರು ಅವರಿಂದ ಸರಿಯಾಗಿ ಸ್ಪಂದನೆ ಸಿಕ್ಕಿಲ್ಲ. ಮುಖಕ್ಕೆ ಮುಖ ಕೊಟ್ಟು ಮಾತನಾಡದೆ ಉಡಾಫೆ ಉತ್ತರ ನೀಡುತ್ತಾರೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ತಿಂಗಳಿಗೆ 2ರಿಂದ 8 ಲಕ್ಷ ರೂ ಗಳಿಸುವ ಸುವರ್ಣಾವಕಾಶ; ಫೇಸ್​ಬುಕ್, ಇನ್ಸ್​ಟಾ, ಯೂಟ್ಯೂಬ್​ಗಳಲ್ಲಿ ಸರ್ಕಾರಿ ಯೋಜನೆ ಪ್ರೊಮೋಟ್ ಮಾಡೋದು ಕೆಲಸ

ಇನ್ನೂ ಇಷ್ಟಕ್ಕೆಲ್ಲ ಕಾರಣ ಪಿಡಿಓ ಮಾಡಿರುವ ಎಡವಟ್ಟು, ಇದರಿಂದ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗುತ್ತಿದೆ. ಪಿಡಿಓ ಸಸ್ಪೆಂಡ್ ಮಾಡುವಂತೆ ಈಗಾಗಲೇ ಜಿಲ್ಲಾ ಪಂಚಾಯತ್ ಸಿಇಓಗೆ ಗ್ರಾಮಸ್ಥರು ದೂರು‌ ನೀಡಿದ್ದಾರೆ. ಅಲ್ಲದೆ ಸಿಇಒ ಸುರೇಶ್ ಇಟ್ನಾಳ ಎರಡು ದಿನದಲ್ಲಿ ಸಂಬಂದಪಟ್ಟ ಅಧಿಕಾರಿಗಳ ಜೊತೆ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.

ವರ್ಷಗಳಿಂದ ವಾಸವಾಗಿದ್ದ ಇಲ್ಲಿನ ಜನರಿಗೆ ಎತ್ತಂಗಡಿ ಆತಂಕ ಒಂದು ಕಡೆ ಕಾಡತೊಡಗಿದರೆ, ಇನ್ನೊಂದೆಡೆ ಸೃಷ್ಟಿಯಾದ ದಾಖಲೆಗಳು ಸಾಕಷ್ಟು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಈ ಭೂಮಿ ಮೇಲೆ ಭೂ ಮಾಫಿಯಾ ಕಣ್ಣು ಬಿದ್ದಿದೆಯಾ ಅನ್ನೋ ಅನುಮಾನ ಶುರುವಾಗಿದೆ. ಈ ಪ್ರಕರಣ ಮುಂದೆ ಯಾವ ರೀತಿ ತಿರುವು ಪಡೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ