‘ಹಿಜಾಬ್ ಬಗ್ಗೆ ಸರ್ಕಾರ ಉತ್ತರಿಸಬೇಕು, ಧರ್ಮಗುರುಗಳಲ್ಲ; ಧರ್ಮಗುರುಗಳು ಸರ್ವೇ ಜನಾಃ ಸುಖಿನೋ ಭವಂತು ಎನ್ನುತ್ತೇವೆ’

| Updated By: ganapathi bhat

Updated on: Mar 25, 2022 | 3:00 PM

ಹಿಂದೂ ಮಹಿಳೆಯರು ತಲೆ ಮೇಲೆ ಸೆರಗು ಹಾಕಿಕೊಳ್ಳುತ್ತಾರೆ. ಸ್ವಾಮೀಜಿಗಳೂ ಸಹ ತಲೆಯ ಮೇಲೆ ವಸ್ತ್ರ ಹಾಕಿಕೊಳ್ಳುತ್ತಾರೆ. ಇದು ಸಂಪ್ರದಾಯ ಎಂದು ದಾವಣಗೆರೆಯಲ್ಲಿ ಕೇದಾರನಾಥ ಜಗದ್ಗುರು ಪೀಠದ ಭೀಮಾಶಂಕರಲಿಂಗ ಶಿವಾಚಾರ್ಯಶ್ರೀ ಹೇಳಿಕೆ ನೀಡಿದ್ದಾರೆ.

‘ಹಿಜಾಬ್ ಬಗ್ಗೆ ಸರ್ಕಾರ ಉತ್ತರಿಸಬೇಕು, ಧರ್ಮಗುರುಗಳಲ್ಲ; ಧರ್ಮಗುರುಗಳು ಸರ್ವೇ ಜನಾಃ ಸುಖಿನೋ ಭವಂತು ಎನ್ನುತ್ತೇವೆ’
ಭೀಮಾಶಂಕರಲಿಂಗ ಶಿವಾಚಾರ್ಯಶ್ರೀ
Follow us on

ದಾವಣಗೆರೆ: ಹಿಜಾಬ್ ಬಗ್ಗೆ ಉತ್ತರಿಸಬೇಕಾದದ್ದು ಸರ್ಕಾರ, ಧರ್ಮಗುರುಗಳಲ್ಲ. ಧರ್ಮಗುರುಗಳು ಸರ್ವೇ ಜನಾಃ ಸುಖಿನೋ ಭವಂತು ಎನ್ನುತ್ತಾರೆ. ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುತ್ತಾರೆ. ಹಿಂದೂ ಮಹಿಳೆಯರು ತಲೆ ಮೇಲೆ ಸೆರಗು ಹಾಕಿಕೊಳ್ಳುತ್ತಾರೆ. ಸ್ವಾಮೀಜಿಗಳೂ ಸಹ ತಲೆಯ ಮೇಲೆ ವಸ್ತ್ರ ಹಾಕಿಕೊಳ್ಳುತ್ತಾರೆ. ಇದು ಸಂಪ್ರದಾಯ. ಸಂವಿಧಾನ, ಕಾನೂನು ಬೇರೆ, ಧಾರ್ಮಿಕ ಪರಂಪರೆಯೇ ಬೇರೆ ಎಂದು ದಾವಣಗೆರೆಯಲ್ಲಿ ಕೇದಾರನಾಥ ಜಗದ್ಗುರು ಪೀಠದ ಭೀಮಾಶಂಕರಲಿಂಗ ಶಿವಾಚಾರ್ಯಶ್ರೀ ಹೇಳಿಕೆ ನೀಡಿದ್ದಾರೆ.

ಮೆಕ್ಕಾ ಮದೀನಾ ಹಾಗೂ ಕಾಶಿ ಯಾತ್ರೆಯಂತೆ ಇಷ್ಟರಲ್ಲಿ ಕೇದಾರ ಯಾತ್ರೆ ಶುರುವಾಗಲಿದೆ. ಇಷ್ಟರಲ್ಲಿಯೇ ಪ್ರಧಾನಿಗಳೊಂದಿಗೆ ದೆಹಲಿಯಲ್ಲಿ ಮಹತ್ವದ ಸಭೆ ಇದೆ. ಇದಕ್ಕೆ ಉತ್ತರಾಖಂಡ ಮುಖ್ಯಮಂತ್ರಿಗಳು ಬರಲಿದ್ದಾರೆ. ಉತ್ತರಾಖಂಡ ರಾಜ್ಯದಲ್ಲಿ ಇರುವ ಕೇದಾರ ಕ್ಷೇತ್ರದ ಅಭಿವೃದ್ಧಿಗೆ ಸಾವಿರಾರು ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ನಡೆಯುತ್ತಿವೆ ಎಂದು ಕೇದಾರ ಜಗದ್ಗುರು ಪೀಠದ ಭೀಮಾಶಂಕರಲಿಂಗ ಸ್ವಾಮೀಜಿ ತಿಳಿಸಿದ್ದಾರೆ.

ಸಿಎಂ ಹಾಗೂ ಪಿಎಂ ಆಗುವ ಮೊದಲು ಮೋದಿ ಎರಡು ವರ್ಷ ಕೇದಾರದ ಗುಹೆಯಲ್ಲಿ ಅನುಷ್ಠಾನ ಮಾಡಿದ್ದರು. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಕೇದಾರ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿದಾಗ ಹೇಳಿದ್ದರು. ಗುಜರಾತ್ ಸಿಎಂ ಹಾಗೂ ದೇಶದ ಪ್ರಧಾನಿ ಆಗುವ ಮೊದಲು ಎರಡು ವರ್ಷ ಕೇದಾರದ ಗುಹೆಗಳಲ್ಲಿ ಅನುಷ್ಠಾನ ಮಾಡಿದ್ದರು. ಇದೇ ಕಾರಣಕ್ಕೆ ಕೇದಾರನಾಥ ಪುಣ್ಯಕ್ಷೇತ್ರದ ಅಭಿವೃದ್ಧಿಗೆ ಪ್ರಧಾನಿಗಳು ಮುಂದಾಗಿದ್ದಾರೆ. ಜನರಲ್ಲಿ ಭಕ್ತಿ ಹೆಚ್ಚಾಗಿದೆ ಅಥವಾ ಕಡಿಮೆ ಆಗಿದೆ ಎಂದು ಹೇಳುವುದು ಕಷ್ಟ. ಆದ್ರೆ ಮಂದಿರಗಳು ಮಾತ್ರ ಹೆಚ್ಚಾಗುತ್ತಿವೆ. ಈ ಹಿನ್ನೆಲೆ ಧರ್ಮಗುರುಗಳು ಜನರಲ್ಲಿ ಭಕ್ತ ಹೆಚ್ಚಿಸುವ ಕಾರ್ಯ ಮಾಡಬೇಕಿದೆ ಎಂದು ದಾವಣಗೆರೆಯಲ್ಲಿ ಕೇದಾರ ಜಗದ್ಗುರು ಪೀಠದ ಭೀಮಾಶಂಕರಲಿಂಗ ಸ್ವಾಮೀಜಿ ಹೇಳಿದ್ದಾರೆ.

ಮುಸ್ಲಿಂ ವ್ಯಾಪಾರಿಗಳಿಗೆ ವಿರೋಧ ವಿಚಾರ; ಇತರ ಸುದ್ದಿಗಳು

ಕಲಬುರಗಿ: ಇತ್ತ ಅನ್ಯಧರ್ಮೀಯರ ಜತೆ ವ್ಯಾಪಾರ ಮಾಡದಂತೆ ಹಿಂದು ಮಹಿಳೆಯರಿಗೆ ಹಿಂದುಪರ ಕಾರ್ಯಕರ್ತರ ಮನವಿ ಮಾಡಲಾಗಿದೆ. ಕಲಬುರಗಿ ನಗರದ ಶರಣಬಸವೇಶ್ವರ ದೇವಸ್ಥಾನದಲ್ಲಿ ಮನವಿ ಮಾಡಲಾಗಿದೆ. ನಮ್ಮ ಧರ್ಮವನ್ನ ವಿರೋಧಿಸುವವರ ಜತೆ ವ್ಯಾಪಾರ ಬೇಡ. ಅನ್ಯಧರ್ಮೀಯರ ಜತೆ ವ್ಯವಹರಿಸದಂತೆ ಇತರರಿಗೂ ತಿಳಿಸಿ ಎಂದು ಹಿಂದುಪರ ಕಾರ್ಯಕರ್ತರು ಕುಂಕುಮ, ಬಳೆ ಕೊಟ್ಟು ಮನವಿ ಮಾಡಿದ್ದಾರೆ. ಹಿಂದು ಧರ್ಮದ ವ್ಯಾಪಾರಸ್ಥರ ಜತೆ ಮಾತ್ರ ವ್ಯವಹರಿಸಿ ಎಂದು ಮಹಿಳೆಯರಿಗೆ ಹಿಂದುಪರ ಕಾರ್ಯಕರ್ತರು ಮನವಿ ಮಾಡಿದ್ದಾರೆ.

ಶಿವಮೊಗ್ಗ: ಜಾತ್ರೆಯಲ್ಲಿ ಹಾಕಿದ್ದ ಮುಸ್ಲಿಂ ವ್ಯಾಪಾರಿಗಳ ಮಳಿಗೆಗಳನ್ನು ತೆರವು ಮಾಡಿದ ಘಟನೆ ಶಿವಮೊಗ್ಗ ತಾಲೂಕಿನ ಮಲವಗೊಪ್ಪದಲ್ಲಿ ಚನ್ನಬಸವೇಶ್ವರ ಜಾತ್ರೆಯಲ್ಲಿ ನಡೆದಿದೆ. ಜಾತ್ರಾ ಸಮಿತಿಯ ಪ್ರಮುಖರಿಂದ ಮಳಿಗೆಗಳ ತೆರವು ಕಾರ್ಯ ಮಾಡಲಾಗಿದೆ.

ಉಡುಪಿ: ಜಾತ್ರೆಯನ್ನು ನಿರ್ವಿಘ್ನವಾಗಿ ಮಾಡುವುದು ನಮ್ಮ ಉದ್ದೇಶ. ಉತ್ಸವ ಸುಸೂತ್ರವಾಗಿ ಮಾಡುವುದು ನಮ್ಮ ಕರ್ತವ್ಯ. ಅನ್ಯಕೋಮಿನವರಿಗೆ ಅವಕಾಶ ಕೊಡಬಾರದೆಂದು ಹಿಂದೂ ಸಂಘಟನೆ ಮನವಿ ಮಾಡಿತ್ತು. ಹಿಂದೂ ಸಂಘಟನೆಯ ಮನವಿಯನ್ನು ನಾವು ಬೆಂಬಲಿಸಿದ್ದೇವೆ. ಬಂದ ಭಕ್ತರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಯಾವುದೇ ಸಂಘರ್ಷದ ವಾತಾವರಣ ಬೇಡ ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೊಲ್ಲೂರು ದೇವಸ್ಥಾನದ ವಠಾರದಲ್ಲಿ ಹಿಂದೂಗಳಿಗೆ ಮಾತ್ರ ವ್ಯಾಪಾರ ವ್ಯವಸ್ಥೆ ಮಾಡಿದ್ದೇವೆ. ಸಾರ್ವಜನಿಕ ರಸ್ತೆಯಲ್ಲಿ ಪರವಾನಿಗೆ ಕೊಡುವ ಅಧಿಕಾರ ಪಂಚಾಯತಿಗಿದೆ ಎಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಮುಸ್ಲಿಂ ಹೆಸರಿನಲ್ಲಿ ಫೇಸ್​ಬುಕ್ ಖಾತೆ ತೆರೆದು ಹಿಂದೂಗಳ ಬಗ್ಗೆ ದ್ವೇಷದ ಪೋಸ್ಟ್ ಹಾಕುತ್ತಿದ್ದ ಆರೋಪಿ ಅರೆಸ್ಟ್!

ಇದನ್ನೂ ಓದಿ: ದೇವಾಲಯ ವ್ಯಾಪ್ತಿಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಚಾರ: ಸದನದಲ್ಲಿ ಚರ್ಚೆ ಜೋರು; ಏನೇನಾಯ್ತು?