ದಾವಣಗೆರೆ: ಅಡಿಕೆ ಕಳ್ಳತನ ತಡೆಯಲು ಯುವ ರೈತನ ಮಾಸ್ಟರ್ ಪ್ಲಾನ್
ಜಿಲ್ಲೆಯಲ್ಲಿ ಇತ್ತೀಚಿಗೆ ಅಡಿಕೆ ಕಳ್ಳತನ ಹೆಚ್ಚಾಗಿದ್ದು, ತೋಟದ ಮಾಲೀಕರ ನಿದ್ದೆ ಹಾಳಾಗಿತ್ತು.ಇಂತಹ ಪರಿಸ್ಥಿತಿಯಲ್ಲಿ ಯುವ ರೈತನೊಬ್ಬ ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ಯಾರೇ ಕಳ್ಳರು ಅಡಿಕೆ ತೋಟ ಪ್ರವೇಶ ಮಾಡಿದರೆ ಸಾಕು ಮೊಬೈಲ್ಗೆ ಸಂದೇಶ ಬರುತ್ತದೆ.
ದಾವಣಗೆರೆ: ತಾಲೂಕಿನ ಎಲೇಬೇತೂರು ಗ್ರಾಮದ ಜಿ.ಎಂ.ಬಸವರಾಜ್ ಅವರ ಪುತ್ರ ನಂದೀಶ್ ಮೂರೂವರೆ ಎಕರೆ ಅಡಿಕೆ ತೋಟಕ್ಕೆ 30,000 ವೆಚ್ಚದಲ್ಲಿ ನಾಲ್ಕು ಅಲ್ಟ್ರಾ ಎಚ್.ಡಿ. ಸಾಮರ್ಥ್ಯದ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಿದ್ದಾರೆ. ಕಳವು ಪ್ರಯತ್ನಗಳಿಂದ ಎಚ್ಚೆತ್ತುಕೊಂಡಿದ್ದು, ಕ್ಯಾಮೆರಾ ಮೊರೆ ಹೋಗಿದ್ದಾರೆ. ಇಲ್ಲಿ ಅಳವಡಿಸಿರುವ ಕ್ಯಾಮೆರಾಗಳು ಫೋಕಸ್ ಲೈಟ್ ವ್ಯವಸ್ಥೆಯನ್ನೂ ಒಳಗೊಂಡಿವೆ. ರಾತ್ರಿ ವೇಳೆ ಪ್ರಖರತೆ ಇರುವುದರಿಂದ ಕಳ್ಳರು ಹೆದರುತ್ತಾರೆ. ಇತ್ತೀಚೆಗೆ ಪಕ್ಕದ ತೋಟಕ್ಕೆ ಬಂದಿದ್ದ ಕಳ್ಳರು ಲೈಟ್ ನೋಡಿ ನಮ್ಮ ತೋಟಕ್ಕೆ ಬರುವ ಧೈರ್ಯ ಮಾಡಲಿಲ್ಲ. ಕ್ಯಾಮೆರಾ ಲಿಂಕ್ನ್ನು ವೈಫೈ ಮೂಲಕ ಮೊಬೈಲ್ ಫೋನ್‌ಗೆ ಸಂಪರ್ಕಿಸಿ, ಮನೆಯಲ್ಲಿಯೇ ಕುಳಿತುಕೊಂಡು ತೋಟವನ್ನ ವೀಕ್ಷಿಸುತ್ತಾರೆ. ಇನ್ನು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳನ್ನು 30 ದಿನಗಳವರೆಗೆ ಸಂಗ್ರಹಿಸಿಡಬಹುದು ಜೊತೆಗೆ ಮೊಬೈಲ್‌ನಲ್ಲಿ ಒಂದು ದಿನದ ರೆಕಾರ್ಡಿಂಗ್ ಕೂಡ ವೀಕ್ಷಿಸಬಹುದಾಗಿದೆ.
ಜಿಲ್ಲೆಯಾದ್ಯಂತ ಅಡಿಕೆ ಕಳವು ಪ್ರಕರಣಗಳು ಹೆಚ್ಚುತ್ತಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಬೆಳೆಗಾರರು ತೋಟಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಮೊರೆ ಹೋಗುತ್ತಿದ್ದಾರೆ. ಕ್ವಿಂಟಲ್ ಅಡಿಕೆಗೆ ಸದ್ಯ 50,000ರೂ.ವರೆಗೆ ಬೆಲೆ ಇದೆ. ಕಳ್ಳರ ಕಾಟ ಹೆಚ್ಚಾಗಿದ್ದು, ರೈತರಿಗೆ ತೋಟ ಕಾಯುವುದೇ ಸವಾಲಾಗಿದೆ. ಈ ಬಾರಿ ಅಧಿಕ ಮಳೆಯಿಂದ ಕೊಳೆರೋಗ ಕಾಣಿಸಿಕೊಂಡಿದ್ದು, ಅಡಿಕೆ ಉದುರಿ ಇಳುವರಿ ಕಡಿತಗೊಂಡಿದೆ. ಇನ್ನೊಂದೆಡೆ, ಕಳ್ಳರ ಕಾಟ ಹೆಚ್ಚಿರುವುದು ರೈತರನ್ನು ಕಂಗಾಲಾಗಿಸಿದೆ. ಕಿಲಾಡಿ ಕಳ್ಳರು ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಕಳ್ಳತನಕ್ಕೆ ಯತ್ನಿಸಿದ್ದರು. ಅದನ್ನು ತಪ್ಪಿಸಲು ಇದೀಗ ಯುಪಿಎಸ್ ಅಳವಡಿಸಿದ್ದೇವೆ. ನಮ್ಮಂತೆಯೇ ಜಿಲ್ಲೆಯ ವಿವಿಧೆಡೆ ಅನೇಕ ರೈತರು ಫಸಲು ಉಳಿಸಿಕೊಳ್ಳಲು ತೋಟಕ್ಕೆ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಿದ್ದು, ಕಳ್ಳರ ಪತ್ತೆಗೆ ನೆರವಾಗುತ್ತಿವೆ ಎನ್ನುತ್ತಿದ್ದಾರೆ.
ಚಿಲ್ಲರೆ ಖರೀದಿದಾರರ ಮೇಲೆ ನಿಗಾ
ಅಡಿಕೆ ಕದ್ದವರು ಚಿಲ್ಲರೆ ವ್ಯಾಪಾರಿಗಳಿಗೆ ಮಾರಾಟ ಮಾಡಿರುವ ಮೂರು ಪ್ರಕರಣಗಳು ಪತ್ತೆಯಾಗಿವೆ. ಸೆಪ್ಟಂಬರ್‌ನಲ್ಲಿ ಚನ್ನಗಿರಿ ತಾಲ್ಲೂಕಿನ ಹಿರೇಕೋಗಲೂರು ಬಳಿ ಒಣಗಿಸಲು ಇಟ್ಟಿದ್ದ ಅಡಿಕೆಯನ್ನೇ ಕಳ್ಳರು ಹೊತ್ತೊಯ್ದಿದ್ದರು. ಮಾಯಕೊಂಡ ಸಮೀಪದ ಸುಲ್ತಾನಿಪುರದಲ್ಲಿ ತೋಟದಲ್ಲಿ ಇರಿಸಿದ್ದ 1.50 ಕ್ವಿಂಟಲ್ ಹಸಿ ಅಡಿಕೆಯನ್ನು ಕದಿಯುವಾಗ ರೈತರೇ ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಈ ರೀತಿ ಜಿಲ್ಲೆಯಲ್ಲಿ ಹಲವು ಕಳ್ಳತನ ಪ್ರಕರಣಗಳು ನಡೆದಿವೆ. ಮಾಯಕೊಂಡದಲ್ಲಿ 6 ಪ್ರಕರಣ ಆಗಿದ್ದು, ಎಲ್ಲವೂ ಪತ್ತೆಯಾಗಿವೆ, ಸಂತೇಬೆನ್ನೂರು 4 ಇದರಲ್ಲಿ 3 ಪ್ರಕರಣ ಪತ್ತೆಯಾಗಿವೆ. ದಾವಣಗೆರೆ ಗ್ರಾಮಾಂತರ 8 ಪ್ರಕರಣಗಳಲ್ಲಿ 6 ಪ್ರಕರಣಗಳು ಪತ್ತೆಯಾಗಿವೆ.
ಇದನ್ನೂ ಓದಿ:ರಾತ್ರೋರಾತ್ರಿ ಜಮೀನಿಗೆ ನುಗ್ಗಿದ ಕರಡಿಗಳಿಂದ ಬೆಳೆ ನಾಶ; ಹೊನ್ನಾಳಿ ತಾಲೂಕಿನ ರೈತರಲ್ಲಿ ಕಾಡುತ್ತಿರುವ ಭಯ
ಬಿಕಾಂ ಓದಿರುವ ನಂದೀಶ್ ಇಂತಹ ಹೊಸ ಪ್ರಯೋಗ ಮಾಡಿ ತಮ್ಮ ತೋಟಕ್ಕೆ ಮಾತ್ರವಲ್ಲ ಅಕ್ಕ ಪಕ್ಕದ ತೋಟಗಳಿಗೆ ಅಸರೆ ಆಗಿದ್ದಾನೆ. ಇತ್ತೀಚಿಗೆ ತೋಟಕ್ಕೆ ಕೆಲ ಕಳ್ಳರು ನುಗ್ಗಿದ್ದರು. ಈ ವಿಚಾರ ಗೊತ್ತಾಗಿ ತೋಟದ ಮಾಲೀಕರು ಬರುವಷ್ಟರಲ್ಲಿ ಕಳ್ಳರು ಪರಾರಿಯಾಗಿದ್ದರು. ಆದರೆ ಕಳ್ಳತನ ಆಗಿಲ್ಲ. ನಿಜಕ್ಕೂ 30 ಸಾವಿರ ರೂಪಾಯಿ ವೆಚ್ಚ ಮಾಡಿದ್ದಕ್ಕೆ ಲಕ್ಷಾಂತರ ರೂಪಾಯಿ ಬೆಲೆ ಬಾಳು ಅಡಿಕೆ ಕಳ್ಳರ ಕೈಯಿಂದ ಉಳಿಯುತ್ತಿದೆ.
ವರದಿ: ಬಸವರಾಜ್ ದೊಡ್ಮನಿ ಟಿವಿ9 ದಾವಣಗೆರೆ
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ