ಹಳ್ಳಿ, ಇಲಿ ಜ್ವರ ಆಯ್ತು ಈಗ ಹೊಸದಾಗಿ ಒಕ್ಕರಿಸಿದ ‘ಕೊಕ್ಕರೆ ರೋಗ’: ಏನಿದು ಕಾಯಿಲೆ?

ಹಕ್ಕಿ ಜ್ವರ, ಇಲಿ ಜ್ವರ ಕೇಳಿದ್ದೇವೆ. ಆದರೆ ಇದೀಗ ಹೊಸದಾಗಿ ಕೊಕ್ಕರೆ ಕಾಯಿಲೆ ಬಂದಿದೆ. ಈ ಕೊಕ್ಕರೆ ರೋಗ ಕೋಳಿಗಳಿಗೆ ಬರಲಿದ್ದು, ಒಮ್ಮೆ ಒಂದು ಕೋಳಿಗೆ ಬಂದರೆ ಸಾಕು ಕ್ಷಣದಲ್ಲಿ ಇಡೀ ಕೋಳಿ ಫಾರ್ಮ್ ಸರ್ವನಾಶ ಮಾಡುತ್ತೆ. ಅಷ್ಟು ಭಯಾನಕವಾಗಿದೆ ಈ ಕಾಯಿಲೆ. ಹಾಗಾದರೆ ಏನಿದು ಕೊಕ್ಕರೆ ಕಾಯಿಲೆ? ಯಾಕೆ ಬರುತ್ತೆ? ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಳ್ಳಿ, ಇಲಿ ಜ್ವರ ಆಯ್ತು ಈಗ ಹೊಸದಾಗಿ ಒಕ್ಕರಿಸಿದ ‘ಕೊಕ್ಕರೆ ರೋಗ’: ಏನಿದು ಕಾಯಿಲೆ?
ಕೋಳಿ (ಪ್ರಾತಿನಿಧಿಕ ಚಿತ್ರ)
Image Credit source: Getty images
Edited By:

Updated on: Sep 03, 2026 | 9:03 PM

ದಾವಣಗೆರೆ, ಸೆಪ್ಟೆಂಬರ್​ 03: ಜಿಲ್ಲೆಯಲ್ಲಿ ನಾಟಿಕೋಳಿಗಳು ಸಾಲುಸಾಲಾಗಿ ಸಾವನ್ನಪ್ಪುತ್ತಿದ್ದು, ಸಾಕಾಣಿಕೆದಾರರಲ್ಲಿ ತೀವ್ರ ಆತಂಕ ಮೂಡಿಸಿದೆ. ಕಣ್ಣ ಮುಂದೆಯೇ ನೂರಾರು ಕೋಳಿಗಳು ಮಣ್ಣು ಪಾಲಾಗುತ್ತಿರುವುದನ್ನು ಕಂಡು ಅನ್ನದಾತರು ಕಂಗಾಲಾಗಿದ್ದಾರೆ. ಮೇಲ್ನೋಟಕ್ಕೆ ಇದು ಮಾರಣಾಂತಿಕ ‘ಕೊಕ್ಕರೆ ರೋಗ’ (ರಾಣಿಖೇತ್) ಎಂಬ ಸಂಶಯ ವ್ಯಕ್ತವಾಗಿದ್ದು, ರೋಗದ ದಾಳಿಗೆ ಇಡೀ ಫಾರ್ಮ್‌ಗಳೇ ಸರ್ವನಾಶವಾಗುತ್ತಿವೆ. ಇಷ್ಟೆಲ್ಲಾ ಅವಾಂತರ ನಡೆಯುತ್ತಿದ್ದರೂ ಸಕಾಲಕ್ಕೆ ಸ್ಪಂದಿಸದ ಪಶುವೈದ್ಯಾಧಿಕಾರಿಗಳ ವಿರುದ್ಧ ರೈತರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಫಾರ್ಮ್‌ಗಳಲ್ಲಿ ನಿಲ್ಲದ ಕೋಳಿಗಳ ಸಾವು; ಅಧಿಕಾರಿಗಳ ವಿರುದ್ಧ ಆಕ್ರೋಶ

ಜಗಳೂರು ತಾಲೂಕಿನ ತಮಲೇನಹಳ್ಳಿ ಗ್ರಾಮದ ತಿಮ್ಮೇಶ ಚೌಡಪ್ಪ ಎಂಬುವರ ಫಾರ್ಮ್‌ನಲ್ಲಿ ಕಳೆದ ನಾಲ್ಕು ದಿನಗಳಿಂದ ನಾಟಿಕೋಳಿಗಳು ಒಂದರ ಹಿಂದೆ ಒಂದರಂತೆ ಪ್ರಾಣ ಬಿಡುತ್ತಿವೆ. ಅತ್ತ ದಾವಣಗೆರೆ ತಾಲೂಕಿನ ರಾಮಗೊಂಡನಹಳ್ಳಿಯಲ್ಲಿ ಇತ್ತೀಚೆಗೆ ಒಂದೇ ದಿನ ಬರೋಬ್ಬರಿ 850 ಕೋಳಿಗಳು ಮೃತಪಟ್ಟ ಘಟನೆ ವರದಿಯಾಗಿತ್ತು. ಆದರೂ ಇಲಾಖಾ ಅಧಿಕಾರಿಗಳು ವೈಜ್ಞಾನಿಕ ಪರೀಕ್ಷೆ ನಡೆಸಿ ಸಾವಿಗೆ ನಿಖರ ಕಾರಣ ಬಹಿರಂಗಪಡಿಸಿಲ್ಲ. ಔಷಧಿ ಹಾಗೂ ಮಾರ್ಗದರ್ಶನಕ್ಕಾಗಿ ಕಚೇರಿಗಳಿಗೆ ಅಲೆದಾಡಿದರೂ ಪಶುವೈದ್ಯರು ಸರಿಯಾಗಿ ಸ್ಪಂದಿಸದೆ ಸಕಾಲಕ್ಕೆ ಚಿಕಿತ್ಸೆ ಸಿಗದೆ ಕೋಳಿಗಳು ಬಲಿಯಾಗಿವೆ ಎಂದು ಸಾಕಾಣಿಕೆದಾರರು ಅಳಲು ತೋಡಿಕೊಂಡಿದ್ದಾರೆ.

ಏನಿದು ಕೊಕ್ಕರೆ ರೋಗ?

ಕೊಕ್ಕರೆ ರೋಗವನ್ನು ವೈಜ್ಞಾನಿಕವಾಗಿ ‘ರಾಣಿಖೇತ್’ ಅಥವಾ ‘ನ್ಯೂಕ್ಯಾಸಲ್’ ಕಾಯಿಲೆ ಎಂದು ಕರೆಯಲಾಗುತ್ತದೆ. ‘ಪ್ಯಾರಾಮಿಕ್ಸೋವೈರಸ್’ ಎಂಬ ವೈರಾಣುವಿನಿಂದ ಹರಡುವ ಈ ಸೋಂಕು ಅತ್ಯಂತ ವೇಗವಾಗಿ ವ್ಯಾಪಿಸುವ ಗುಣ ಹೊಂದಿದ್ದು, ಒಂದು ಕೋಳಿಗೆ ಬಂದರೆ ಇಡೀ ಫಾರ್ಮ್​​ ಆವರಿಸಿಕೊಳ್ಳುತ್ತದೆ. 1926ರಲ್ಲಿ ಇಂಡೋನೇಷ್ಯಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಈ ರೋಗವನ್ನು ನ್ಯೂಕ್ಯಾಸಲ್ ಎನ್ನಲಾಯ್ತು. ಬಳಿಕ 1927ರಲ್ಲಿ ಭಾರತದ ಉತ್ತರಾಖಂಡದ ‘ರಾಣಿಖೇತ್’ ಗಿರಿಧಾಮದಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಈ ಹೆಸರಿನಿಂದ ಕರೆಯಲಾಗುತ್ತಿದೆ.

ಕೊಕ್ಕರೆ ರೋಗದ ಮುಖ್ಯ ಲಕ್ಷಣಗಳೇನು?

  • ಕೋಳಿಗಳ ಕುತ್ತಿಗೆ ಒಂದು ಬದಿಗೆ ತಿರುಚಿಕೊಳ್ಳುವುದು, ರೆಕ್ಕೆ ಅಥವಾ ಕಾಲುಗಳು ಪಾರ್ಶ್ವವಾಯುವಿಗೆ ತುತ್ತಾಗಿ ಸೆಟೆದುಕೊಂಡು ನಡೆಯಲಾಗದೆ ಒದ್ದಾಡುವುದು.
  • ಕೋಳಿಗಳು ಸದಾ ತೂಕಡಿಸುತ್ತಾ, ರೆಕ್ಕೆಗಳನ್ನು ಕೆಳಗೆ ಹಾಕಿ ಒಂದೇ ಕಡೆ ಕುಳಿತುಕೊಳ್ಳುತ್ತವೆ. ಬಾಯಿ ತೆರೆದು ಗೊರಗೊರ ಸದ್ದು ಮಾಡುತ್ತಾ ಕಷ್ಟಪಟ್ಟು ಉಸಿರಾಡುತ್ತವೆ.
  • ನೀರು ಮತ್ತು ಆಹಾರವನ್ನು ಸಂಪೂರ್ಣವಾಗಿ ನಿಲ್ಲಿಸಿ, ತೆಳುವಾದ ಹಸಿರು ಅಥವಾ ಬಿಳಿ ಬಣ್ಣದ ಮಲ ವಿಸರ್ಜನೆ ಮಾಡುತ್ತವೆ. ಮೊಟ್ಟೆ ಇಡುವ ಕೋಳಿಗಳಾಗಿದ್ದರೆ ಮೊಟ್ಟೆ ಉತ್ಪಾದನೆ ಗಣನೀಯವಾಗಿ ಕುಸಿಯುತ್ತದೆ.

ಮುನ್ನೆಚ್ಚರಿಕೆ ಮತ್ತು ಲಸಿಕೆಯೇ ಏಕೈಕ ಮದ್ದು

ಈ ವೈರಾಣು ಸೋಂಕಿಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಲಭ್ಯವಿಲ್ಲದ ಕಾರಣ, ಮುನ್ನೆಚ್ಚರಿಕೆ ಹಾಗೂ ಸಮಯಕ್ಕೆ ಸರಿಯಾಗಿ ಲಸಿಕೆ ನೀಡುವುದೇ ಏಕೈಕ ಪರಿಹಾರವಾಗಿದೆ. ಕೋಳಿ ಮರಿಗಳಿಗೆ ಆರಂಭಿಕ ಹಂತದಲ್ಲೇ ಪಶುವೈದ್ಯರ ಸಲಹೆಯಂತೆ ‘ಎಫ್-1’ ಹಾಗೂ ‘ಲಸೋಟಾ’ ಲಸಿಕೆಗಳನ್ನು ತಪ್ಪದೇ ಹಾಕಿಸಬೇಕು.

ಇದನ್ನೂ ಓದಿ: ಹರಪನಹಳ್ಳಿ: ಒಂದೇ ಫಾರಂನಲ್ಲಿನ ಮೂರು ಸಾವಿರ ಕೋಳಿಗಳ ಸಾವು

ಫಾರ್ಮ್‌ಗಳನ್ನು ಸದಾ ಒಣದಾಗಿ ಹಾಗೂ ಶುಚಿಯಾಗಿಟ್ಟು, ಕ್ರಿಮಿನಾಶಕ ದ್ರಾವಣಗಳನ್ನು ಸಿಂಪಡಿಸಬೇಕು. ರೋಗದ ಲಕ್ಷಣ ಕಂಡ ತಕ್ಷಣ ಅಂತಹ ಕೋಳಿಗಳನ್ನು ಪ್ರತ್ಯೇಕಿಸಬೇಕು. ಮೃತಪಟ್ಟ ಕೋಳಿಗಳನ್ನು ಎಲ್ಲೆಂದರಲ್ಲಿ ಬಿಸಾಡದೆ, ಆಳವಾದ ಗುಂಡಿ ತೋಡಿ ಸುಣ್ಣ ಹಾಕಿ ಮುಚ್ಚಬೇಕು ಅಥವಾ ಸುಟ್ಟು ಹಾಕಬೇಕು. ರೋಗಲಕ್ಷಣಗಳು ಕಂಡುಬಂದ ತಕ್ಷಣ ರೈತರು ಸ್ಥಳೀಯ ಪಶು ಆಸ್ಪತ್ರೆಗಳನ್ನು ಸಂಪರ್ಕಿಸಿ ಮುಂಜಾಗ್ರತೆ ವಹಿಸುವುದು ಒಳ್ಳೆಯದು.

ಕರ್ನಾಟಕ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More
Loading...
Unable to load recommendations.
Follow Us