ದಾವಣಗೆರೆ: ಕ್ಷಯ ರೋಗಿಗಳ ಸೇವೆಯಲ್ಲಿಯೇ ಸ್ವರ್ಗ ಕಂಡ ಗಾಯತ್ರಿದೇವಿಗೆ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ
ಕೊರೊನಾ ಸಂಕಷ್ಟದ ಹಿನ್ನೆಲೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು 15 ರಂದು ವರ್ಚವಲ್ ಮೂಲಕ ಗಾಯಂತ್ರಿದೇವಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.
ದಾವಣಗೆರೆ: ಅಪೂರ್ವ 34 ವರ್ಷಗಳ ಕಾಲ ಆರೋಗ್ಯ ಸಹಾಯಕಿಯಾಗಿ ಸೇವೆ ಸಲ್ಲಿಸಿದ ಗಾಯತ್ರಿದೇವಿ, ಕಾಯಕವೇ ಕೈಲಾಸ ಎಂಬ ಸಂಕಲ್ಪದಿಂದ ಸೇವೆ ಮಾಡುತ್ತಲೇ ಬಂದವರು. ಸಾವಿರಾರು ಹಳ್ಳಿಗಳ ಬಡವರ ಹಾಗೂ ಶೋಷಿತರ ಸೇವೆ ಮಾಡುತ್ತಲೇ ಬಂದ ಇವರಿಗೆ ತುಂಬಾ ಇಷ್ಟವಾಗಿದ್ದು ಕ್ಷಯ ರೋಗಿಗಳ (Tuberculosis) ಸೇವೆ. ಕುಟುಂಬದವರೇ ಹಿಂದೇಟು ಹಾಕುವ ಕ್ಷಯ ರೋಗಿಗಳ ಸೇವೆ ಗಾಯತ್ರಿದೇವಿಗೆ ನಿತ್ಯ ಕಾಯಕ. ದಾವಣಗೆರೆ ಜಿಲ್ಲಾ ಆಸ್ಪತ್ರೆಯ ಕ್ಷಯ ರೋಗ ವಿಭಾಗದಲ್ಲಿ ಹಿರಿಯ ಆರೋಗ್ಯ ಸಹಾಯಕಿ ಆಗಿರುವ ಕೆ.ಗಾಯತ್ರಿದೇವಿಗೆ ಇಂಡಿಯನ್ ನರ್ಸಿಂಗ್ ಕೌನ್ಸಿಲ್ ಇವರ ಸಾಧನೆಯನ್ನು ಗುರುತಿಸಿ 2020ನೇ ಸಾಲಿನ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ನೀಡಿ ಗೌರವಿಸಿದೆ.
ಕೊರೊನಾ ಸಂಕಷ್ಟದ ಹಿನ್ನೆಲೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು 15 ರಂದು ವರ್ಚವಲ್ ಮೂಲಕ ಗಾಯಂತ್ರಿದೇವಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಬಡ ಕುಟುಂಬದ ಹೋರಾಟದ ಬದುಕಿನ ಗಾಯತ್ರಿದೇವಿ ಸೇವೆಗೆ ಸೇರಿದ್ದು 1986ರಲ್ಲಿ. ಆ ಕಾಲದಲ್ಲಿ ಕಾಲರಾ ಭೀತಿ ಹೆಚ್ಚು. ಹಳ್ಳಿ ಹಳ್ಳಿಗೆ ಹೋಗಿ ಕಾಲರಾ ಚುಚ್ಚುಮದ್ದು ಕೊಡುವುದು ಸವಾಲಿನ ಪ್ರಶ್ನೆಯಾಗಿತ್ತು. ಪಕ್ಕದ ಚಿತ್ರದುರ್ಗ ತಳಕು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಗಾಯತ್ರಿದೇವಿ ಸೇವೆ ಆರಂಭಿಸಿದ್ದರು. ಕಾಲರಾದಿಂದ ಶುರುವಾದ ಅವರ ಸೇವೆ ಕೊರೊನಾ ವರೆಗೂ 34 ವರ್ಷಗಳ ನಡೆದುಕೊಂಡು ಬಂದಿದೆ.
ಮಹಿಳೆ ಮಕ್ಕಳ ರೋಗ್ಯ ಕ್ಷೇತ್ರದಲ್ಲಿ 20 ವರ್ಷ ಸೇವೆ ಸಲ್ಲಿಸಿದ್ದಾರೆ. ಚಿತ್ರದುರ್ಗದ ಚಳ್ಳಕೆರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ 1991 ರಿಂದ 2010 ಸೇವೆ ಸಲ್ಲಿಸಿದ್ದಾರೆ. ಇದೇ ವೇಳೆ ಚಳ್ಳಕೆರೆ ತಿಪ್ಪೇಸ್ವಾಮಿ ಜಾತ್ರೆಯಲ್ಲಿ ಬಿಸಿಲಿನಲ್ಲಿ ಕುಳಿತು ಮಕ್ಕಳಿಗೆ ಲಸಿಕೆ ನೀಡುವುದು ಇವರ ಕಾಯಕವಾಗಿತ್ತು. 2010ಕ್ಕೆ ಗಾಯತ್ರಿದೇವಿ ಅವರು ದಾವಣಗೆರೆ ಜಿಲ್ಲೆಯಲ್ಲಿ ತಮ್ಮ ಸೇವೆ ಆರಂಭಿಸಿದರು. ಇಲ್ಲಿನ ಹತ್ತಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸಿದರು. 2017 ರಿಂದ ಅಂದ್ರೆ ಕಳೆದ ನಾಲ್ಕು ವರ್ಷಗಳಿಂದ ಕ್ಷಯ ರೋಗಿಗಳ ಸೇವೆ ಮಾಡುತ್ತಿದ್ದಾರೆ. ನಿತ್ಯ ಹತ್ತಾರು ಜನ ರೋಗಿಗಳಿಗೆ ಸೇವೆ ಮಾಡುವುದು ಅವರಿಗೆ ಆತ್ಮಸ್ಥೈರ್ಯ ತುಂಬುವುದು. ಅವರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಹಿರಿಯ ವೈದ್ಯರಿಗೆ ಮಾಹಿತಿ ನೀಡಿ ಅವರನ್ನ ಗುಣಮುಖರನ್ನಾಗಿಸುವ ಇವರ ಉದ್ದೇಶ. ಇದರಲ್ಲಿ ಎಷ್ಟೊ ಮಕ್ಕಳು ಸಹ ಕ್ಷಯದಿಂದ ಬಳಲುತ್ತಿದ್ದರು. ಇವರಿಗೆ ಸೂಕ್ತ ಚಿಕಿತ್ಸೆ ನೀಡಿ ಅವರ ಸೇವೆಯಲ್ಲಿಯೇ ಸ್ವರ್ಗ ಕಾಣುವುದು ಗಾಯತ್ರಿದೇವಿಯ ಮನಸ್ಥಿತಿ.
ಪತಿ ಕಂಪಾಲಿ ತಿಪ್ಪೇಸ್ವಾಮಿ ಖ್ಯಾತ ಚಿಂತಕ ಹಾಗೂ ಗಾಯಕ. ಸಾಮಾಜಿಕ ಹೋರಾಟದಲ್ಲಿ ಇಡಿ ಬದುಕು ಸವಿಸಿದ ವ್ಯಕ್ತಿ. ಹೀಗೆ ಪತಿ-ಪತ್ನಿ ಇಬ್ಬರು ಇಡೀ ಜೀವನವನ್ನೆ ಶೋಷಿತರ ಹಾಗೂ ಬಡವರ ಸೇವೆ ಮಾಡುತ್ತಲೇ ಬದುಕು ಸಾಗಿಸುತ್ತಿದ್ದಾರೆ. ಗಾಯತ್ರಿದೇವಿ ಅವರ ಸೇವೆ ಗುರುತಿಸಿ ಈ ಹಿಂದೆ ಬೆಂಗಳೂರಿನ ಪ್ರೇಸ್ ಕೌನ್ಸಿಲ್ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಹಾಗೂ 2020ರಲ್ಲಿ ದಾವಣಗೆರೆ ಜಿಲ್ಲಾಡಳಿತದಿಂದ ಗಣರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ರಾಷ್ಟ್ರೀಯ ನರ್ಸಿಂಗ್ ಕೌನ್ಸಿಲ್ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಮಹತ್ವ- ನರ್ಸಿಂಗ್ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಪ್ರತಿ ವರ್ಷ ರಾಷ್ಟ್ರಾದ್ಯಂತ 50 ಜನರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಈ ಸಲ ಕರ್ನಾಟಕದಿಂದ ಇಬ್ಬರಿಗೆ ಈ ಪ್ರಶಸ್ತಿ ಲಭಿಸಿದೆ. ಬೆಂಗಳೂರಿನ ಓರ್ವ ಆರೋಗ್ಯ ಸಹಾಯಕಿ ಹಾಗೂ ಗಾಯಂತ್ರಿದೇವಿಗೆ ಈ ಪ್ರಶಸ್ತಿ ಲಭಿಸಿದೆ.
ಇದನ್ನೂ ಓದಿ
ಪ್ರತಿಷ್ಠಿತ ಬ್ರ್ಯಾಂಡ್‌ಗಳ ಹೆಸರಲ್ಲಿ ಬ್ಯಾಗ್ ತಯಾರಿಸಿ ಮಾರಾಟ; ನಕಲಿ ಬ್ಯಾಗ್ ಕಂಪನಿಗಳ ಮೇಲೆ ಪೊಲೀಸ್ ದಾಳಿ
(Davangere health worker Gayathri who serving Tuberculosis patients awarded Florence Nightingale)
Published On - 1:08 pm, Sat, 18 September 21