ಸತ್ಯಕ್ಕೆ ಮತ್ತೊಂದು ಹೆಸರೇ ‘ದೇವಿಯ ಗಂಟೆ’: ಕೋರ್ಟ್ ಮೆಟ್ಟಿಲೇರದ ವ್ಯಾಜ್ಯಗಳಿಗೆ ನ್ಯಾಯ ತೀರ್ಪು ನೀಡುತ್ತಾಳೆ ದಾವಣಗೆರೆಯ ದುರ್ಗಾಂಬಿಕೆ!

ದಾವಣಗೆರೆಯ ದುರ್ಗಾಂಬಿಕಾ ದೇಗುಲದಲ್ಲಿ ಶತಮಾನಗಳಿಂದ ಒಂದು ವಿಶಿಷ್ಟ ಪದ್ಧತಿ ಇದೆ. ಅದುವೇ ದೇವಿಯ ಗಂಟೆ. ಹಣಕಾಸು, ಭೂಮಿ, ಅಥವಾ ದಾಂಪತ್ಯ ಕಲಹದಂತಹ ಯಾವುದೇ ವ್ಯಾಜ್ಯಗಳಲ್ಲಿ ಸತ್ಯವನ್ನು ಸಾಬೀತುಪಡಿಸಲು ಈ ಗಂಟೆಯನ್ನು ಬಡಿಯಲಾಗುತ್ತದೆ. ಸುಳ್ಳು ಹೇಳಿ ಗಂಟೆ ಬಡಿದರೆ ದೇವಿಯ ಶಾಪ ತಟ್ಟುತ್ತದೆ ಎಂಬ ಬಲವಾದ ನಂಬಿಕೆಯಿದೆ. ಇದು ಸತ್ಯಕ್ಕೆ ಮತ್ತೊಂದು ಹೆಸರು, ವಿವಾದಗಳಿಗೆ ಅಂತ್ಯ ಹಾಡುವ ದೈವಿಕ ವಿಧಾನವಾಗಿದೆ.

ಸತ್ಯಕ್ಕೆ ಮತ್ತೊಂದು ಹೆಸರೇ ‘ದೇವಿಯ ಗಂಟೆ’: ಕೋರ್ಟ್ ಮೆಟ್ಟಿಲೇರದ ವ್ಯಾಜ್ಯಗಳಿಗೆ ನ್ಯಾಯ ತೀರ್ಪು ನೀಡುತ್ತಾಳೆ ದಾವಣಗೆರೆಯ ದುರ್ಗಾಂಬಿಕೆ!
ದಾವಣಗೆರೆಯ ದುರ್ಗಾಂಬಿಕೆ ದೇವಿ
Image Credit source: tv9 kannada
Edited By:

Updated on: Sep 04, 2026 | 7:20 PM

ದಾವಣಗೆರೆ, ಸೆಪ್ಟೆಂಬರ್​ 04: ವಾಣಿಜ್ಯ ನಗರಿ ದಾವಣಗೆರೆ ಇಂದು ಎಷ್ಟೇ ಬೆಳೆದು ಸ್ಮಾರ್ಟ್ ಸಿಟಿಯಾದರೂ, ಅಲ್ಲಿನ ಜನರ ನಂಬಿಕೆ, ಆಚಾರ-ವಿಚಾರಗಳು ಮಾತ್ರ ಇಂದಿಗೂ ಜೀವಂತ. ನಗರದ ಯಾವುದೇ ಮೂಲೆಯಲ್ಲಿ ಬಿಕ್ಕಟ್ಟು ಶುರುವಾದರೂ, ನ್ಯಾಯಾಲಯ-ಪೊಲೀಸ್ ಠಾಣೆಯ ಮೆಟ್ಟಿಲೇರುವ ಮುನ್ನ ಜನ ನೆನೆಯುವುದು ನಗರದ ಅಧಿದೇವತೆ ಶ್ರೀ ದುರ್ಗಾಂಬಿಕಾ ದೇವಿಯನ್ನು. ಪತಿ-ಪತ್ನಿಯ ಕಲಹವಿರಲಿ, ಆಸ್ತಿ ಹಂಚಿಕೆಯಿರಲಿ, ಅಥವಾ ಹಣಕಾಸಿನ ವಹಿವಾಟು ಇರಲಿ, ಯಾರು ಸತ್ಯ, ಯಾರು ಸುಳ್ಳು ಎಂಬುದನ್ನು ತೀರ್ಮಾನಿಸುವುದು ಇದೇ ದೇವಸ್ಥಾನದ ಮುಂಭಾಗದಲ್ಲಿರುವ ಬೃಹತ್ ಗಂಟೆ. ‘ತಾಕತ್ತಿದ್ದರೆ ಹಸಿಬಟ್ಟೆಯಲ್ಲಿ ಬಂದು ದೇವಿಯ ಗಂಟೆ ಬಡಿ, ನೀನು ಹೇಳಿದ್ದು ಸತ್ಯ ಅಂತ ಒಪ್ಪಿಕೊಳ್ಳುತ್ತೇನೆ’ ಎಂಬ ಸವಾಲು ಇಲ್ಲಿನ ಜನರ ಬಾಯಲ್ಲಿ ಇಂದಿಗೂ ಸಾಮಾನ್ಯವಾಗಿ ಕೇಳಿಬರುವ ಶಪಥ.

ಸತ್ಯಾಸತ್ಯತೆ ಒರೆಗೆ ಹಚ್ಚುವ ನ್ಯಾಯಪೀಠ

ದಾವಣಗೆರೆಯ ದುರ್ಗಾಂಬಿಕಾ ದೇವಿ ದೇವಸ್ಥಾನದ ಪ್ರಾಂಗಣದಲ್ಲಿ ನಿತ್ಯ ಪೂಜೆಯ ವೇಳೆ ಭಕ್ತರು ಭಕ್ತಿಯಿಂದ ಬಡಿಯಲು 18 ಚಿಕ್ಕ ಗಂಟೆಗಳಿವೆ. ಆದರೆ ಮುಖ್ಯ ದ್ವಾರದಲ್ಲಿ ತೂಗುಹಾಕಲಾಗಿರುವ ಬೃಹತ್ ಗಾತ್ರದ ಗಂಟೆ ಕೇವಲ ಪೂಜೆಗೆ ಸೀಮಿತವಾಗಿಲ್ಲ. ಅದು ಸತ್ಯ-ಧರ್ಮದ ಸಂಕೇತ. ಯಾವುದೇ ವ್ಯಾಜ್ಯವಿರಲಿ, ಇಬ್ಬರ ನಡುವೆ ಮಾತು ತಪ್ಪಿದಾಗ ‘ನಾನು ಹೇಳಿದ್ದೇ ಸತ್ಯ ಎಂದು ಕೋರ್ಟ್‌ನಲ್ಲಿ ಪ್ರಮಾಣ ಮಾಡಿದಂತೆ ಮನಸ್ಸಿನಲ್ಲಿ ಸಂಕಲ್ಪ ಮಾಡಿ ಗಂಟೆ ಬಡಿ‘ ಎಂದು ಎದುರಾಳಿಗೆ ಸವಾಲು ಹಾಕಲಾಗುತ್ತದೆ. ಇಲ್ಲಿ ಸುಳ್ಳು ಪ್ರಮಾಣ ಮಾಡಲು ಯಾರೂ ಧೈರ್ಯ ತೋರುವುದಿಲ್ಲ. ಮನಸ್ಸಿನಲ್ಲಿ ಕಪಟವಿಟ್ಟು ಗಂಟೆ ಮುಟ್ಟಿದರೆ ಅನಾಹುತ ಖಂಡಿತ ಎಂಬ ಅಚಲ ನಂಬಿಕೆ ಭಕ್ತರಲ್ಲಿದೆ.

ಇದನ್ನೂ ಓದಿ: ಹಳ್ಳಿ, ಇಲಿ ಜ್ವರ ಆಯ್ತು ಈಗ ಹೊಸದಾಗಿ ಒಕ್ಕರಿಸಿದ ‘ಕೊಕ್ಕರೆ ರೋಗ’: ಏನಿದು ಕಾಯಿಲೆ?

ದುರ್ಗಾಂಬಿಕಾ ದೇವಿಗೆ ನಿತ್ಯ ಎರಡು ಸಲ ಪೂಜೆ ಆಗುತ್ತದೆ. ಈ ವೇಳೆ ಬಹುತೇಕ ಭಕ್ತರು ಬಂದು ಅಲ್ಲಿದ್ದ ಗಂಟೆಗಳನ್ನ ಪೂಜೆ ವೇಳೆ ಬಡಿಯುತ್ತಾರೆ. ವ್ಯಾಜ್ಯ ಇದ್ದವರು, ಸತ್ಯ ಅಸತ್ಯದ ಬಗ್ಗೆ ಖಾತ್ರಿ ಪಡಿಸಿಕೊಳ್ಳುವವರು ದೊಡ್ಡ ಗಂಟೆ ಬಡಿಯಬೇಕು. ಆದರೆ ಹೀಗೆ ಗಂಟೆ ಬಡಿಯುವ ಬಗ್ಗೆ ದೇವಸ್ಥಾನದ ಸಮಿತಿಗೆ ಅಥವಾ ಪೂಜಾರಿಗಳಿಗೆ ಗೊತ್ತಾಗಲ್ಲ. ಯಾರು ಪ್ರಯತ್ನ ಮಾಡುತ್ತಾರೆ ಅವರಿಬ್ಬರಿಗೆ ಮಾತ್ರ ಅದು ಗೊತ್ತಿರುತ್ತದೆ. ಗಂಟೆ ಬಡಿಯಲು ಹಲವಾರು ಅಲಿಖಿತ ನಿಮಯಗಳಿವೆ.

ಗಂಟೆ ತಂಟೆಗೆ ಹೋದರೆ ಅನಾಹುತ ಗ್ಯಾರಂಟಿ

ನನ್ನದೆ ಸತ್ಯ ಅಂತಾ ಇಬ್ಬರು ವಾದ ಮಾಡುತ್ತಿರುತ್ತಾರೆ. ಆದರೆ ಯಾರದ್ದು ಸತ್ಯ ಎಂಬುದು ಗೊಂದಲ. ಇಂತಹ ವೇಳೆ ಇಬ್ಬರ ಪರಸ್ಪರ ಮಾತನಾಡಿಕೊಳ್ಳಬೇಕು. ಉದಾಹರಣೆಗೆ ನಾನು ನಿನಗೆ ಮೂರು ಲಕ್ಷ ರೂ ಕೊಟ್ಟಿದ್ದೆ. ಅದರಲ್ಲಿ ಎರಡು ಲಕ್ಷ ರೂ ಮಾತ್ರ ವಾಪಸ್​​ ಮಾಡಲಾಗಿದೆ. ಆದರೆ ಇನ್ನೊಬ್ಬ ಮೂರು ಲಕ್ಷ ರೂ ಕೊಡಲಾಗಿದೆ ಎನ್ನುತ್ತಾನೆ. ಆಗ ನಾನು ಹೇಳಿದ್ದು ಸತ್ಯ ಅಂತಾ ಆತ ಗಂಟೆ ಬಡಿಯಬೇಕು. ಇನ್ನೊಬ್ಬ ನಾನು ಹೇಳಿದ್ದೂ ಸತ್ಯ ಅಂತಾ ಗಂಟೆ ಬಡಿಯಬೇಕು. ಕೆಲವರು ಸುಮ್ಮನೆ ಗಂಟೆ ಬಡಿದು ಅನಾಹುತ ಸಹ ತಂದುಕೊಂಡಿದ್ದಾರೆ.

ಇದನ್ನೂ ಓದಿ: ಖಾಸಗಿ ಬ್ಯಾಂಕ್ ಕಿರುಕುಳ ಆರೋಪ! ಸಿಬ್ಬಂದಿ ಮಿಸ್ಸಿಂಗ್, ಆತ್ಮಹತ್ಯೆ ಶಂಕೆ!

ಹೀಗೆ ನಿತ್ಯ ಒಂದಿಲ್ಲೊಂದು ಹರಕೆ ದೇವಿಯ ಅಂಗಳದಲ್ಲಿ ನಡೆಯುತ್ತವೆ. ಮಕ್ಕಳಿಗೆ ಕಾಯಿಲೆ ಬಂದರು ಸಹ ಇಲ್ಲಿ ಹರಕೆ ತಿರಿಸುತ್ತಾರೆ. ಆದರೆ ಗಂಟೆ ಅಂದರೆ ಬೆಂಕಿ ಇದ್ದ ಹಾಗೆ. ಸತ್ಯ ಇದ್ದರೆ ಮಾತ್ರ ಗಂಟೆ ತಂಟೆಗೆ ಹೋಗುತ್ತಾರೆ. ಮನಸ್ಸಿನಲ್ಲಿ ಸುಳ್ಳು ಇದ್ದು ಗಂಟೆಯ ತಂಟೆಗೆ ಹೋದರೆ ಅನಾಹುತ ಗ್ಯಾರಂಟಿ ಎಂಬುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಇಲ್ಲಿ ಮಾತಾಡುವಾಗ, ವ್ಯವಹಾರ ಮಾಡುವಾಗ, ವಾಣಿಜ್ಯ ನಗರಿ ಜನ ಸ್ವಲ್ಪ ಹುಷಾರು ಎಂದರೆ ತಪ್ಪಾಗಲಿಕ್ಕಿಲ್ಲ. ಕಾರಣ ದೇವಿಯ ಗಂಟೆಯ ಭಯ.

ಬರ ನೀಗಿಸಲು ದೇವಿಯ ಅಂಗಳದಲ್ಲಿ ಸಂತೆ

ಇನ್ನೊಂದು ಚಮತ್ಕಾರ ದೇವಿ ಅಂಗಳದಲ್ಲಿ ನಡೆಯುತ್ತದೆ. ಮಳೆಗಾಗಿ ದೇವಿ ಅಂಗಳದಲ್ಲಿ ಸಂತೆ ಮಾಡುವುದು. ಮಳೆಗಾಲ ಬಂದರು ಸಹ ಕೆಲವೊಮ್ಮೆ ಮಳೆ ಬರಲ್ಲ. ಪ್ರತಿ ಭಾನುವಾರ ದಾವಣಗೆರೆ ನಗರದ ಕೆಆರ್ ಪೇಟೆಯಲ್ಲಿ ಸಂತೆ ನಡೆಯುತ್ತದೆ. ಇಂತಹ ಸಂತೆಯನ್ನ ಐದು ಭಾನುವಾರ ದೇವಸ್ಥಾನದ ಆವರಣದಲ್ಲಿ ಸಂತೆ ಮಾಡುತ್ತಾರೆ. ಇದನ್ನ ಸ್ವತಃ ಮಹಾನಗರ ಪಾಲಿಕೆಯೇ ಮಾಡುತ್ತದೆ. ಸಂತೆ ಬಂದವರು ದೇವಿಯ ದರ್ಶನ ಪಡೆದುಕೊಂಡು ಹೋಗುತ್ತಾರೆ. ಆಗ ಮಳೆ ಬಂದ ನಿದರ್ಶನಗಳು ಇವೆ. ಆದರೆ ದೇವಿಯ ಗಂಟೆಯ ಮೇಲೆ ಭಕ್ತರು ಅಪಾರ ನಂಬಿಕೆ ಇಟ್ಟಿಕೊಂಡಿದ್ದು ವಿಶೇಷ.

People Belives in Devi Justice: ಭಕ್ತರ ಪಾಲಿಗೆ ನ್ಯಾಯದೇವತೆಯಾದ ದಾವಣಗೆರೆಯ ದುರ್ಗಾಂಬಿಕಾ ದೇವಿ | #TV9D
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:09 pm, Fri, 4 September 26

Loading...
Unable to load recommendations.
Follow Us