ವಿಧವಾ ವೇತನದ ಹೆಸರಿನಲ್ಲಿ ಕೋಟಿ ರೂ. ಸಾಲ; ಬ್ಯಾಂಕ್ ಅಧಿಕಾರಿಯೊಬ್ಬಳ ಮೋಸದ ಜಾಲಕ್ಕೆ ರೈತ ಮಹಿಳೆಯರು ಕಂಗಾಲು
ಎಳು ವರ್ಷಗಳ ಹಿಂದೆ ತಮ್ಮನ ಪತ್ನಿ ಶೋಭಾ ಎಂಬುವವರು ವಿಧವಾ ವೇತನ ಮಾಡಿ ಕೊಡುವುದಾಗಿ ದಾಖಲೆ ಪಡೆದಿದ್ದರು. ಈ ಶೋಭಾ ಎಂಬುವವರು ಶಿವಮೊಗ್ಗ ಡಿಸಿಸಿ ಬ್ಯಾಂಕ್ನ ಗಾಂಧಿ ಬಜಾರ್ ಶಾಖೆಯ ಮ್ಯಾನೇಂಜರ್. ಸಾವಿತ್ರಮ್ಮ ಮತ್ತು ಗೀತಮ್ಮ ಅವರ ಹೆಸರಿನಲ್ಲಿ 2014 ರಲ್ಲಿ ಡಿಸಿಸಿ ಬ್ಯಾಂಕ್ನಿಂದ ಸಾಲ ಪಡೆದು ಕೊಂಡಿದ್ದಾಳೆ.
ದಾವಣಗೆರೆ: ಬ್ಯಾಂಕ್ ಅಧಿಕಾರಿ ಸಂಬಂಧಿಯೊಬ್ಬಳು ಮಾಡಿದ ಮೋಸಕ್ಕೆ ರೈತ ಮಹಿಳೆಯರು ಮನೆ ಜಪ್ತಿ ಆತಂಕ ಎದುರಿಸುವಂತಾಗಿದೆ. ದಾವಣಗೆರೆಯ ಇಬ್ಬರು ತಾಯಂದಿರು ತಮ್ಮ ಸ್ವಂತಕ್ಕಾಗಿ ಸಾಲ ಪಡೆಯದೇ ಯಾರೋ ಮಾಡಿದ ತಪ್ಪಿಗೆ ಶಿಕ್ಷೆ ಎದುರಿಸುವಂತಾಗಿದೆ. ಹೌದು ಸಂಬಂಧಿಕರ ದಾಖಲೆ ಪಡೆದು ಬರೋಬ್ಬರಿ 5. 60 ಕೋಟಿ ರೂಪಾಯಿ ಹಣ ಸಾಲ ಪಡೆದ ಬ್ಯಾಂಕ್ ಅಧಿಕಾರಿಯೊಬ್ಬಳು ಪರಾರಿಯಾಗಿದ್ದಾಳೆ. ಈಗ ಈ ಹಣ ಪಡೆಯಲು ಬ್ಯಾಂಕ್ ಅಧಿಕಾರಿಗಳು ಬೇದರಿಕೆ ಹಾಕುತ್ತಿದ್ದಾರೆ. ಹೀಗಾಗಿ ನೊಂದ ಮಹಿಳೆಯರು ನ್ಯಾಯಕ್ಕಾಗಿ ಜಿಲ್ಲಾಧಿಕಾರಿ ಮೊರೆ ಹೋಗಿದ್ದಾರೆ.
ನೀವು ನಮ್ಮನ್ನು ಕಾಪಾಡಬೇಕು. ಇಲ್ಲವಾದರೆ ನಾವು ವಿಷ ಸೇವಿಸಿ ಸಾಯಬೇಕಾಗುತ್ತದೆ ಎಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದಾಗಿನಕಟ್ಟೆ ಗ್ರಾಮದ ಸಾವಿತ್ರಮ್ಮ ಮತ್ತು ಗೀತಮ್ಮ ಎಂಬ ಸಹೋದರಿಯರು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ಕೈಮುಗಿದ ಬೇಡಿಕೆಕೊಂಡಿದ್ದಾರೆ.
ಸಾಲ ತುಂಬಿ ಇಲ್ಲಾ ನಿಮ್ಮ ಮನೆ ಜಮೀನು ಹರಾಜು ಮಾಡುತ್ತೇವೆ ಎಂದು ಮನೆ ಬಾಗಿಲಿಗೆ ಬಂದು ಬೇದರಿಕೆ ಹಾಕಿ ಬ್ಯಾಂಕ್ ಅಧಿಕಾರಿಗಳು ಹೋಗಿದ್ದಾರೆ. ಆದರೆ ಸಾವಿತ್ರಮ್ಮ ಮತ್ತು ಗೀತಮ್ಮ ದಿನ ಬೆಳಗಾದರೆ ಕೂಲಿ ಕೆಲಸ ಮಾಡಿ ಜೀವನ ನಡೆಸಬೇಕು. ಸ್ವಲ್ಪ ಜಮೀನು ಸಹ ಇದೆ ಅದನ್ನೇ ನಂಬಿಕೊಂಡು ಬದುಕುತ್ತಿದ್ದಾರೆ. ಸಾವಿತ್ರಮ್ಮ ಪತಿ 20 ವರ್ಷದ ಹಿಂದೆ ಗೀತಮ್ಮನ ಪತಿ 15 ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದಾರೆ.
ಸಾಲ ತೆಗೆದಿರುವುದು ಹೇಗೆ? ಎಳು ವರ್ಷಗಳ ಹಿಂದೆ ಇವರ ತಮ್ಮನ ಪತ್ನಿ ಶೋಭಾ ಎಂಬುವವರು ವಿಧವಾ ವೇತನ ಮಾಡಿ ಕೊಡುವುದಾಗಿ ದಾಖಲೆ ಪಡೆದಿದ್ದರು. ಈ ಶೋಭಾ ಎಂಬುವವರು ಶಿವಮೊಗ್ಗ ಡಿಸಿಸಿ ಬ್ಯಾಂಕ್ನ ಗಾಂಧಿ ಬಜಾರ್ ಶಾಖೆಯ ಮ್ಯಾನೇಂಜರ್. ಸಾವಿತ್ರಮ್ಮ ಮತ್ತು ಗೀತಮ್ಮ ಅವರ ಹೆಸರಿನಲ್ಲಿ 2014 ರಲ್ಲಿ ಡಿಸಿಸಿ ಬ್ಯಾಂಕ್ನಿಂದ ಸಾಲ ಪಡೆದು ಕೊಂಡಿದ್ದಾಳೆ. ಈಗ ಆ ಸಾಲದ ಮೊತ್ತ ಬರೋಬರಿ ಐದು ಕೋಟಿ 60 ಲಕ್ಷ ರೂಪಾಯಿ ಆಗಿದೆ. ಈಗ ಬ್ಯಾಂಕ್ ಅಧಿಕಾರಿಗಳು ಗೀತಮ್ಮ ಹಾಗೂ ಸಾವಿತ್ರಮ್ಮ ಅವರ ಮನೆ ಜಪ್ತಿಗೆ ಬಂದಿದ್ದಾರೆ.
ಏನು ತಿಳಿಯದ ಸಾವಿತ್ರಮ್ಮ ಮತ್ತು ಗೀತಮ್ಮ ಕೆಲ ಸಲ ಬ್ಯಾಂಕಿನಿಂದ ಬಂದ ನೋಟಿಸ್ ಅನ್ನು ಕೂಡ ಗಮನಹರಿಸಿಲ್ಲ. ಇದಕ್ಕೆ ಕಾರಣ ಶೋಭಾ. ಅವಳೇ ಗೀತಮ್ಮ ಮತ್ತು ಸಾವಿತ್ರಮ್ಮ ಅವರಿಗೆ ಪೋನ್ ಮಾಡಿ ನಿಮಗೊಂದು ಪತ್ರ ಬರುತ್ತದೆ. ಅದನ್ನು ಒಡೆಯಬೇಡಿ ನನಗೆ ಕಳುಹಿಸಿ ಎಂದು ಹೇಳುತ್ತಿದ್ದಳು.
ಶಿವಮೊಗ್ಗ ಡಿಸಿಸಿ ಬ್ಯಾಂಕಿನಲ್ಲಿ ಹತ್ತಾರು ಕೋಟಿ ರೂಪಾಯಿ ಅವ್ಯವಹಾರ ಆಗಿದೆ. ಸುಮಾರು 68 ಕೋಟಿ ರೂಪಾಯಿ ಅವ್ಯವಹಾರ ಆದ ಬಗ್ಗೆ ಆರೋಪಗಳು ಕೇಳಿ ಬಂದಿವೆ. ಇದರಲ್ಲಿ ಹತ್ತಾರು ಜನರು ಶಾಮೀಲಾಗಿದ್ದಾರೆ. ಆದರೆ ಇಂತಹ ಅಮಾಯಕ ಹೆಣ್ಣು ಮಕ್ಕಳಿಗೂ ವಂಚನೆ ಮಾಡಲಾಗಿದೆ ಎಂಬುವುದೇ ವಿಪರ್ಯಾಸ.
ಈಗ ಪೋನ್ ಮಾಡಿದರೆ ಮಾತಾಡುತ್ತಿಲ್ಲ. ಜೊತೆಗೆ ಬ್ಯಾಂಕ್ ಅಧಿಕಾರಿಗಳು ಸಹ ಕೇಳುತ್ತಿಲ್ಲ. ನಮಗೆ ಇರುವುದೇ ಈ ಸಣ್ಣ ಮನೆ ಹಾಗೂ ಐದು ಎಕರೆ ಜಮೀನು. ಇದನ್ನೂ ಕೂಡ ಜಪ್ತಿ ಮಾಡುಲು ಮುಂದಾಗಿದ್ದಾರೆ ಎಂದು ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ. ಸದ್ಯ ಇವರ ಕಷ್ಟ ಕೇಳಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧಿಕಾರಿಗಳ ಜತೆ ಚರ್ಚಿಸಿ ಮನೆ ಹರಾಜು ಆಗದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಹತ್ತಾರು ಕಾರಣಕ್ಕೆ ಈ ಕುಟುಂಬ ಸಂಕಷ್ಟದಲ್ಲಿದೆ. ಪತಿ ಮಾಡಿದ ಟ್ರಾಕ್ಟರ್ ಸಾಲಾ ತುಂಬಲು ಮೂರು ಎಕರೆ ಜಮೀನು ಮಾರಾಟ ಮಾಡಿದ್ದಾರೆ. ಮನೆಯಲ್ಲಿ ಮದುವೆಗೆ ಬಂದ ಐದು ಜನ ಹೆಣ್ಣು ಮಕ್ಕಳು ಇದ್ದಾರೆ. ಈ ಬಗ್ಗೆ ಸ್ವಂತ ತಮ್ಮನನ್ನು ಕೇಳಿದರು ಯಾವುದೇ ಉತ್ತರ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಬಡ ಮಹಿಳೆಯರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಅಷ್ಟು ಹಣ ಎಲ್ಲಿಂದ ತರಬೇಕು. ಯಾರಿಗೆ ಹೇಳಬೇಕು ಎಂದು ಮಹಿಳೆಯರು ಕಂಗಾಲಾಗಿದ್ದಾರೆ. ಗ್ರಾಮದ ಕೆಲ ರೈತ ಮುಖಂಡರು ಇವರ ಬೆಂಬಲಕ್ಕೆ ನಿಂತಿದ್ದಾರೆ. ಈಗ ಜಿಲ್ಲಾಧಿಕಾರಿಗಳು ಸಹ ಪರಿಸ್ಥಿತಿ ನೋಡಿ ಸಹಾಯಕ್ಕೆ ಮುಂದಾಗಿದ್ದಾರೆ. ಆದರೆ ಈ ಐದು ಕೋಟಿ ರೂಪಾಯಿ ಸಾಲಾ ಪಡೆದ ಮಹಿಳೆ ಎಲ್ಲಿ ಎಂಬುವುದೇ ಸದ್ಯದ ಪ್ರಶ್ನೆ ಆಗಿದೆ.
ವರದಿ: ಬಸವರಾಜ್ ದೊಡ್ಮನಿ
ಇದನ್ನೂ ಓದಿ: ನಕಲಿ ಚಿನ್ನಾಭರಣ ಅಡವಿಟ್ಟು ಬ್ಯಾಂಕ್‌ಗೆ ವಂಚನೆ? ಸಿನಿಮಾ ನಿರ್ದೇಶಕ ಕರಮಲ ಬಾಲರವೀಂದ್ರನಾಥ್ ಬಂಧನ
ವಸಿಷ್ಠ ಕೋ-ಆಪರೇಟಿವ್ ಬ್ಯಾಂಕ್ ವಂಚನೆ ಪ್ರಕರಣ ಅಧಿಕೃತವಾಗಿ ಸಿಐಡಿಗೆ ಹಸ್ತಾಂತರ