ಜಗಳೂರಿನಲ್ಲಿ ಭುಗಿಲೆದ್ದ ಕುಡಿಯುವ ನೀರಿನ ಆಕ್ರೋಶ!: ಇಒ, ಪಿಡಿಒ ಅಧಿಕಾರಿಗಳನ್ನು ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿದ ಗ್ರಾಮಸ್ಥರು

ದಾವಣಗೆರೆ ಜಗಳೂರು ತಾಲೂಕಿನ ಮರೇನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಉಂಟಾಗಿದೆ. ಒಂದು ತಿಂಗಳಿನಿಂದ ನೀರಿಲ್ಲದೆ ಪರದಾಡುತ್ತಿರುವ ಗ್ರಾಮಸ್ಥರು, ಇದಕ್ಕೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡಿದ್ದಾರೆ. ಗ್ರಾಮಕ್ಕೆ ಭೇಟಿ ನೀಡಿದ್ದ ಜಗಳೂರು ತಾ.ಪಂ. ಇಒ ಮತ್ತು ಪಿಡಿಒ ಅವರನ್ನು ಕೂಡಿ ಹಾಕಿ ತೀವ್ರ ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಬಿಲ್ ಕಲೆಕ್ಟರ್ ಮೇಲೆ ಹಲ್ಲೆ ನಡೆಸಿದ್ದಾರೆ. ನೀರಿನ ಅನುದಾನ ದುರ್ಬಳಕೆ ಆರೋಪವೂ ಕೇಳಿಬಂದಿದೆ.

ಜಗಳೂರಿನಲ್ಲಿ ಭುಗಿಲೆದ್ದ ಕುಡಿಯುವ ನೀರಿನ ಆಕ್ರೋಶ!: ಇಒ, ಪಿಡಿಒ ಅಧಿಕಾರಿಗಳನ್ನು ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿದ ಗ್ರಾಮಸ್ಥರು
ದಾವಣಗೆರೆ ಕುಡಿಯುವ ನೀರಿನ ಸಮಸ್ಯೆ
Edited By:

Updated on: Jun 08, 2026 | 5:59 PM

ದಾವಣಗೆರೆ ಜೂ.8: ತಾಲೂಕಿನ ಮರೇನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆಯನ್ನು ಬಗೆಹರಿಸದೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ ಹೊರಹಾಕಿದ್ದಾರೆ. ಕುಡಿಯುವ ನೀರಿಗಾಗಿ ಕಳೆದ ಒಂದು ತಿಂಗಳಿನಿಂದ ಪರದಾಡುತ್ತಿದ್ದ ಸಾರ್ವಜನಿಕರು, ಗ್ರಾಮಕ್ಕೆ ಭೇಟಿ ನೀಡಿದ್ದ ಜಗಳೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ (EO) ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು (PDO) ಕೂಡಿ ಹಾಕಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ ಗ್ರಾಮಸ್ಥರು ಬಿಲ್ ಕಲೆಕ್ಟರ್ ಮೇಲೆ ಭೀಕರ ಹಲ್ಲೆ ನಡೆಸಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಜಗಳೂರು ತಾಲೂಕಿನ ಮರೇನಹಳ್ಳಿ ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರಿನ ತೀವ್ರ ಅಭಾವ ಸೃಷ್ಟಿಯಾಗಿದೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಆಕ್ರೋಶಗೊಂಡಿದ್ದ ಗ್ರಾಮಸ್ಥರು, ಇಂದು ಗ್ರಾಮಕ್ಕೆ ಆಗಮಿಸಿದ್ದ ತಾಲೂಕು ಪಂಚಾಯತ್ ಇಒ ಕೆಂಚಪ್ಪ ಹಾಗೂ ಪಿಡಿಒ ಕೊಟ್ರೇಶ್ ಅವರನ್ನು ಹಿಡಿದು ರಸ್ತೆಯ ಕಟ್ಟೆಯ ಮೇಲೆ ಕೂರಿಸಿಕೊಂಡು ತರಾಟೆಗೆ ತೆಗೆದುಕೊಂಡರು. ತದನಂತರ ಅಧಿಕಾರಿಗಳನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿ ತಮ್ಮ ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ: ದಾವಣಗೆರೆಯ ಅನಾಥ ಮಕ್ಕಳಿಗೆ ವಿದೇಶಕ್ಕೆ ಹೋಗುವ ಭಾಗ್ಯ: ಇಟಲಿ ದಂಪತಿ ಮಡಿಲು ಸೇರಿದ 1 ವರ್ಷದ ಕಂದಮ್ಮ; ಕಣ್ಣೀರಿಟ್ಟ ವಿದೇಶಿ ದಂಪತಿ

ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಸರ್ಕಾರ ಮುಂಗಡವಾಗಿ ಇಟ್ಟಿದ್ದ ಅನುದಾನದ ಹಣವನ್ನು ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಹಣ ಲೂಟಿಯಾಗಿದ್ದರಿಂದಲೇ ನಮಗೆ ಒಂದು ತಿಂಗಳಿನಿಂದ ಹನಿ ನೀರು ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಗಂಭೀರವಾಗಿ ಆರೋಪಿಸಿದರು. ಇದೇ ವೇಳೆ ಸ್ಥಳದಲ್ಲಿದ್ದ ಬಿಲ್ ಕಲೆಕ್ಟರ್ ವಿರುದ್ಧ ತಿರುಗಿಬಿದ್ದ ಸಾರ್ವಜನಿಕರು, “ಕುಡಿಯುವ ನೀರು ಕೊಡದೆ ನೀವೇನು ಕೆಲಸ ಮಾಡ್ತೀರಾ?” ಎಂದು ಪ್ರಶ್ನಿಸಿ ಅವರ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ. ಸದ್ಯ ಜಗಳೂರು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ ದೊಡ್ಡಮನಿ ಟಿವಿ9 ಕನ್ನಡ ವರದಿಗಾರರಾಗಿದ್ದು, ವಿಶೇಷವಾಗಿ ದಾವಣಗೆರೆ ಜಿಲ್ಲಾ ಪ್ರಾದೇಶಿಕ ಸುದ್ದಿಗಳ ಮೇಲೆ ಕೇಂದ್ರೀಕರಿಸುತ್ತಾರೆ.

Read More
Follow Us